ಸೋಮವಾರ, ಅಕ್ಟೋಬರ್ 4, 2010

ಭೂಮಿಯಾಚೆ ಬದುಕು ಇಲ್ಲವಾ ?

                                                        alien image,
ಹೃತಿಕ್ ರೋಷನ್ ‘ಕೋಯಿ ಮಿಲ್ ಗಯಾ’ ನೋಡಿದ ಪ್ರತಿಯೊಬ್ಬರಿಗೂ, ‘ಛೇ, ನಮಗೂ ಅಂಥದ್ದೊಂದು ಅನ್ಯಗ್ರಹ ಜೀವಿಯ ಭೇಟಿಯಾಗಬಾರದೆ!’ ಅಂತನ್ನಿಸಿದ್ದರೆ ಆಶ್ಚರ್ಯವಿಲ್ಲ. ಆದರೆ, ಸದ್ಯಕ್ಕಂತೂ ಅದು ಸಾಧ್ಯವಿಲ್ಲದ ಮಾತು. ಅನ್ಯಗ್ರಹ ಜೀವಿ ಅನ್ನೋದು ಫ್ಯಾಂಟಸಿಯ ಪುಟಗಳಲ್ಲಷ್ಟೇ ಇರುವ ಸೃಷ್ಟಿ.
ವಿಜ್ಞಾನಿಗಳ ಪ್ರಕಾರ, ಭೂಮಿಯಿಂದಾಚೆ ಜೀವ ಸಂಕುಲ ಇರೋದು ದುಸ್ಸಾಧ್ಯ. ಆದರೆ ಹಾಗಂತ ಅವರು ಖಡಾ ಖಂಡಿತವಾಗಿ ‘never’ ಎಂದು ಹೇಳಲಾರರು. ಖಗೋಳಶಾಸ್ತ್ರದ ಮಜಾ ಇರೋದೇ ಹೀಗೆ, ನಮಗೆ ಗೊತ್ತು ಅಂದುಕೊಂಡ ವಿಷಯವನ್ನೂ ಕೂಡ ದೃಢವಾಗಿ `I know it’ ಅಂತ ಹೇಳಲಾಗದಿರೋ ಅನಿಶ್ಚಿತತೆಯಲ್ಲಿ !
ಬ್ರಿಟಿಷ್ ಖಗೋಳ ವಿಜ್ಞಾನಿ ಫ್ರೆಡ್ಹಾಯ್ಲ್ 1950ರಲ್ಲೇ ಹೇಳಿದ್ದ; ಭೂಮಿಯಾಚೆ ಲೈಫ್ ಇರೋದು ಅನುಮಾನ ಅಂತ. ಬದುಕಿನ ಸೃಷ್ಟಿಗೆ ಬೇಕಾದಂತಹ ವಸ್ತುಗಳೆಲ್ಲವೂ ಭೂಮಿಯಲ್ಲಿ ಅತ್ಯಂತ ನಿಖರವಾದ ಪ್ರಮಾಣದಲ್ಲಿ ಇರೋದ್ರಿಂದಲೇ ಇಲ್ಲಿ ನಾವೆಲ್ಲಾ ಹುಟ್ಟಿದ್ದೇವೆ; ಕಾರ್ಬನ್ ಮತ್ತು ಆಕ್ಸಿಜನ್ ಅಳತೆಯಲ್ಲಿ ಸ್ವಲ್ಪ ಏರುಪೇರಾಗಿದ್ದಿದ್ದರೂ, ಇವತ್ತು ಅನ್ಯಗ್ರಹ ಜೀವಿಗಳ ಬಗ್ಗೆ ಮಾತಾಡೋದಿಕ್ಕೆ ನಾವು ಇರುತ್ತಿರಲಿಲ್ಲ ಅಂತವನು ಹೇಳಿದ್ದ. ಭೂಮಿ ಹೀಗೆ ಸೃಷ್ಟಿಯಾಗಿರೋದೇ ವಿಶ್ವದ ಹುಟ್ಟಿನ ಅದ್ಭುತಗಳಲ್ಲೊಂದು
ಹೊರಗಿನ ವಿಶ್ವವನ್ನು ಬಿಡಿ, ನಮ್ಮ ಸೌರಮಂಡಲದಲ್ಲೇ ಬೇರೆಲ್ಲಾದರೂ ನಮ್ಮಂತಹ ಅಥವಾ ನಮ್ಮ ಹುಟ್ಟಿಗೆ ಕಾರಣವಾದಂತಹ ಜೀವಿಗಳು ಇವೆಯೇ ಅನ್ನೋದನ್ನು ಹುಡುಕೋದಿಕ್ಕೆ 1960ರ ದಶಕದಲ್ಲೇ ನೌಕೆಗಳು ಗಗನಕ್ಕೆ ಹಾರಿದ್ದವು. 1976ರಲ್ಲಿ ವೈಕಿಂಗ್-1 ಹಾಗೂ ವೈಕಿಂಗ್-2 ನೌಕೆಗಳು ಮಂಗಳನ ಮಣ್ಣನ್ನು ಜಾಲಾಡಿದ್ದವು. ಉಹುಂ, ಒಂದೇ ಒಂದು ಬ್ಯಾಕ್ಟೀರಿಯಾದ ಸುಳಿವೂ ಕಂಡಿರಲಿಲ್ಲ. ಮೊನ್ನೆ ಮಾರ್ಸ್ನ ಮೇಲಿಳಿದ ಇನ್ನೊಂದು ನೌಕೆಯೂ ಆ ಗ್ರಹದ ಮೇಲೆ ಓಡಾಡಿತ್ತು. ಈಚೆಗೆ ಮಂಗಳ ನಮ್ಮ ಹಿತ್ತಲಿಗೇ ಬಂದಿದ್ದಾಗಲೂ, ಜಗತ್ತಿನ ಟೆಲಿಸ್ಕೋಪುಗಳೆಲ್ಲವೂ ಅದರ ಮೈಸವರಿದ್ದವು. ಎಲ್ಲಿಯೂ ಜೀವಿಗಳ ಗುರುತು ಕಂಡಿರಲಿಲ್ಲ.
ಆದರೆ ಅಷ್ಟಕ್ಕೇ ಮಂಗಳ ಬಂಜೆ ಅಂತ ಹೇಳಲಾಗುವುದಿಲ್ಲ ! ಯಾಕೆಂದರೆ, ಮಂಗಳ ಗ್ರಹದ ಮೇಲೆ ನಮ್ಮಲ್ಲಿರುವ ಹಾಗೇ ಭಿನ್ನಾತಿಭಿನ್ನ ವಾತಾವರಣದ ಪ್ರದೇಶಗಳಿವೆ. ಅಲ್ಲೆಲ್ಲಾದರೂ, ಒಂದು ಕಡೆಯಾದರೂ, ನಮ್ಮ ಬ್ಯಾಕ್ಟೀರಿಯಾಗಳನ್ನು ಹೋಲುವಂಥ ಜೀವಿಗಳಿರಬಹುದು ಅನ್ನೋದು ಎಲ್ಲರ ಭಯಮಿಶ್ರಿತ ನಿರೀಕ್ಷೆ ! ಮಂಗಳ ಬಿಟ್ಟರೆ, ನಮ್ಮ ಸೌರಮಂಡಲದಲ್ಲಿ ಬದುಕನ್ನು ಬೆಂಬಲಿಸಬಲ್ಲಂಥ ಗುಣಗಳಿರೋದು ಗುರುಗ್ರಹದ ಉಪಗ್ರಹ ಯೂರೋಪಾ ಮತ್ತು ಶನಿಯ ದೈತ್ಯ ಚಂದ್ರ, ಟೈಟನ್ಗೆ ಮಾತ್ರ. ಯೂರೋಪಾ ಮೇಲ್ಪದರದಡಿಯಲ್ಲಿ ಅಗಾಧ ಪ್ರಮಾಣದ ದ್ರವವಿದೆಯಂತೆ. ಅದು ನೀರೇ ಇರಬಹುದು ಅನ್ನೋದು ಒಂದು ಅನುಮಾನ. ಅಲ್ಲಿ ಆಕ್ಸಿಜನ್ ಇಲ್ಲ, ಸೂರ್ಯನ ಬೆಳಕೂ ವಿಪರೀತ ಮಂದ. ಆದರೆ ನಮ್ಮಲ್ಲೇ ಆಮ್ಲಜನಕ ಹಾಗೂ ಬೆಳಕು ದುರ್ಲಭವಾದಂಥ ಸಾಗರ ತಳಗಳಲ್ಲಿ ಕೆಲವು ಸೂಕ್ಷ್ಮ ಜೀವಿಗಳು ಬದುಕಿಲ್ಲವೆ? ಅಂಥವೇ ಯೂರೋಪಾದ ಅಂತರ್ಜಲದಲ್ಲೂ ಯಾಕಿರಬಾರದು?
ಇನ್ನು ಟೈಟನ್ನ ವಾತಾವರಣದಲ್ಲಿರೋದು ಬರೀ ನೈಟ್ರೋಜನ್ ಹಾಗೂ ಮೀಥೇನ್ ಗ್ಯಾಸುಗಳಾದರೂ, ಆ ಗ್ರಹದ ಮೇಲ್ಮೈ ನಮ್ಮ ಭೂಮಿಯ ಹಾಗೇ ಇದೆ; ವಿಶಾಲವಾದ ಭೂಪ್ರದೇಶ, ನಡುನಡುವೆ ಅಳತೆಗೆ ಸಿಗದಷ್ಟು ವಿಸ್ತಾರವಾದ ಸಾಗರಗಳು! ಆದರೆ, ಈ ಸಾಗರಗಳು ನೀರಿನವಲ್ಲ; ಪೆಟ್ರೋಲಿಯಂದು ! ಈ ಸಾಗರಗಳಲ್ಲಿ ಸೂಕ್ಷ್ಮಾತಿಸೂಕ್ಷ್ಮ ಜೀವಿಗಳು ಬದುಕಲಾರವು ಅನ್ನೋದನ್ನು ಒಪ್ಪಿಕೊಳ್ಳೋದಿಕ್ಕೆ ವಿಜ್ಞಾನಿಗಳು ಸಿದ್ಧರಿಲ್ಲ.
ಹುಡುಕಾಟ ನಡೆದೇ ಇದೆ. 1992ರಲ್ಲಿ, ನೂರು ಮಿಲಿಯನ್ ಡಾಲರ್ ವೆಚ್ಚದಲ್ಲಿ, ನಾಸಾ ಶುರು ಮಾಡಿದ್ದ ಹತ್ತು ವರ್ಷಗಳ  SETI [search for extra-terrestial intelligence] ಅನ್ನೋ ಯೋಜನೆ, ಈಗ ಸುಮಾರು ಒಂದು ಸಾವಿರ ಸೌರ ಮಂಡಲಗಳಿಂದ ಅಕ್ಷರಶಃ ಹುಚ್ಚು ಹಿಡಿಯುವಷ್ಟು ಮಾಹಿತಿಗಳನ್ನು ಸೆಳೆದು, ಕ್ರೋಢೀಕರಿಸಿಕೊಡಿದೆ. ನಿಖರವಾದ ಉತ್ತರ ಮಾತ್ರ ಇನ್ನೂ ಸಿಕ್ಕಿಲ್ಲ. ಮಂಗಳ, ಯೂರೋಪಾ ಹಾಗೂ ಟೈಟನ್ ಹೊರತು ಪಡಿಸಿದಂತೆ, ನಮ್ಮ ಸೌರವ್ಯೂಹದ ಉಳಿದ ಯಾವ ಗ್ರಹಗಳಲ್ಲೂ ಜೀವಿಗಳಿರಲಾರವು ಅನ್ನೋ ತೀಮರ್ಾನಕ್ಕಂತೂ ಸದ್ಯಕ್ಕೆ ರಲಾಗಿದೆ. ಯಾಕೆಂದರೆ, ಸೂರ್ಯನಿಗೆ ವಿಪರೀತ ಹತ್ತಿರವಿರುವ ಬುಧ ಹಾಗೂ ಶುಕ್ರಗಳಲ್ಲಿ ಹಿಂದೆಂದಾದರೂ ಜೀವ ಇದ್ದಿದ್ದರೂ ಅದೀಗ ಭಸ್ಮವಾಗಿ ಹೋಗಿರೋದು ಗ್ಯಾರಂಟಿ. ಇನ್ನು, ಮಂಗಳನಾಚೆ ಇರುವ ಗ್ರಹಗಳೆಲ್ಲವೂ ಬರೀ ಗ್ಯಾಸಿನ ಗೋಳಗಳು! ಪ್ಲೂಟೋ ಹೊರತುಪಡಿಸಿದಂತೆ ಇವುಗಳನ್ನೆಲ್ಲಾ ಕರೆಯೋದೇ ಗ್ಯಾಸ್ ಬಕಾಸುರರು ಅಂತ.
ಮಂಗಳನವರೆಗಿನ ನಾಲ್ಕು ಗ್ರಹಗಳು ಕಲ್ಲು-ಮಣ್ಣಿನಿಂದಾಗಿರುವ ಪುಟ್ಟ ಗೋಳಗಳಾದರೆ, ಅಲ್ಲಿಂದಾಚೆಗಿನ ಗೋಳಗಳಲ್ಲಿ ತುಂಬಿರೋದು ಬರೀ ಹೈಡ್ರೋಜನ್ ಹಾಗೂ ಹೀಲಿಯಂ. ಅವು ಯಾಕೆ ಹಾಗೆ ಉಳಿದಿವೆ ಅನ್ನೋದಿಕ್ಕೆ ಕಾರಣವಿದೆ! ಸೌರಮಂಡಲ ಹುಟ್ಟಿದ್ದೇ ಒಂದು ಭಯಂಕರ ಗ್ಯಾಸು ಹಾಗೂ ಧೂಳಿನ ಮನೆಯಾಗಿ. ಹುಟ್ಟಿದ ಕ್ಷಣಗಳಲ್ಲಿ ಭೂಮಿಯೂ ಸೇರಿದಂತೆ ಎಲ್ಲವೂ ಗ್ಯಾಸುಮಯವಾಗಿದ್ದವು. ಆದರೆ ದಿನಗಳೆದಂತೆ ಸೂರ್ಯನ ಬಿಸಿಗೆ ಹತ್ತಿರವಾದ ಗ್ರಹಗಳೆಲ್ಲವೂ ತಮ್ಮ ಹೈಡ್ರೋಜನ್ ಹಾಗೂ ಹೀಲಿಯಂ ಅಂಶಗಳನ್ನು ಕಳೆದುಕೊಂಡು ಕಲ್ಲಾಗಿ ಉಳಿದರೆ, ಅವನ ತಾಪ ತಟ್ಟದಂಥವು ಗ್ಯಾಸುಗಳಾಗೇ ಉಳಿದುಬಿಟ್ಟವು. ವೈತುಂಬಾ ಗ್ಯಾಸೇ ಇರೋದ್ರಿಂದ ಅವುಗಳು ಸೈಜೂ ದೊಡ್ಡದು. ಉದಾಹರಣೆಗೆ, ಗುರುವಿನ ವ್ಯಾಸ ಭೂಮಿಗಿಂತ ಹನ್ನೊಂದು ಪಟ್ಟು ಹೆಚ್ಚು!
ಈ ಗುಂಪಿನಲ್ಲಿ ತೀರಾ ಹೊರಗಿನವನ ಹಾಗೆ ಉಳಿಯೋದು ಪ್ಲೂಟೋ ಅನ್ನೋ ಗೋಲಿ ಮಾತ್ರ. ಹಿಂದೊಮ್ಮೆ ಅದು ನೆಪ್ಚೂನ್ನ ಉಪಗ್ರಹವಾಗಿದ್ದಿರ ಬೇಕು ಅನ್ನೋ ಅನುಮಾನವಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ