ಶುಕ್ರವಾರ, ಅಕ್ಟೋಬರ್ 8, 2010

ನೀಟಾಗಿರಲಿ ಬಯೋಡೇಟಾ

ಉದ್ಯೋಗ ಅರಸ ಹೊರಟವರ ಕೈಲಿ ಇರಬೇಕಾದ ಮೊದಲ ಆಯುಧವೇ ಸ್ವ-ವಿವರ ಅಥವಾ ಬಯೋಡೇಟಾ. ತನ್ನ ವೈಯಕ್ತಿಕ ಸಾಧನೆಗಳ ವಿವರ, ಶೈಕ್ಷಣಿಕ ಅರ್ಹತೆ, ಕೌಶಲ, ಅನುಭವ ಇತ್ಯಾದಿಗಳ ಕುರಿತು ಉದ್ಯೋಗಾಕಾಂಕ್ಷಿ ನೀಡುವ ಸಂಕ್ಷಿಪ್ತ ಪಟ್ಟಿ ಇದು. ತಮ್ಮಲ್ಲಿ ಖಾಲಿ ಇರುವ ಹುದ್ದೆ ತುಂಬುವಾಗ ಉದ್ಯೋಗದಾತರು ಮೊದಲು ನೋಡುವುದು ಇದೇ ಸ್ವ ವಿವರವನ್ನು. ಅದು ಯೋಗ್ಯ ಎನಿಸಿದರೆ ಮಾತ್ರ ಅಭ್ಯರ್ಥಿಗೆ ಭೇಟಿಯಾಗುವ ಅವಕಾಶ. ಹಾಗಾಗಿ ಸ್ವ-ವಿವರ ಎನ್ನುವುದು ಅಷ್ಟು ಪ್ರಭಾವಿಯಾಗಿರುವುದು ಅಗತ್ಯ. ಹಾಗಾಗಿ ಇದನ್ನು ತಯಾರಿಸುವಾಗ ಅಭ್ಯರ್ಥಿಯು ಬಹಳ ಕಾಳಜಿ ವಹಿಸಬೇಕು. ಹುದ್ದೆಯ ಅವಶ್ಯಕ್ಕೆ ಪೂರಕವಾಗಿ ತನ್ನಲ್ಲಿರುವ ಅರ್ಹತೆಗಳನ್ನು ಮಾತ್ರ ತಿಳಿಸಬೇಕು. ಅಂಥ ಪ್ರಭಾವಿ ಸ್ವ-ವಿವರ ತಯಾರಿಸುವುದೂ ಒಂದು ಕಲೆ.

ಚಿಕ್ಕ ಹಾಗೂ ಚೊಕ್ಕದಾಗಿರಲಿ

ಉನ್ನತ ಹುದ್ದೆಯಲ್ಲಿರುವವರಿಗೆ ಸಮಯ ಅತ್ಯಮೂಲ್ಯ. ಉದ್ದನೆ ಸ್ವ-ವಿವರ ನೋಡಲೂ ಅವರಿಗೆ ಸಮಯ ಇರಲಿಕ್ಕಿಲ್ಲ. ಹಾಗಾಗಿ ಅದು ಆದಷ್ಟು ಚಿಕ್ಕದು ಹಾಗೂ ಚೊಕ್ಕದಾಗಿರಬೇಕು. ಸೂಕ್ತ ಶಬ್ದ ಬಳಸಿ, ಎಲ್ಲಾ ಅವಶ್ಯ ಮಾಹಿತಿಗಳನ್ನೂ ನೀಡಬೇಕು. ಕೆಲವು ಉದ್ಯೋಗಗಳಿಗೆ ಅವುಗಳದ್ದೇ ಆದ ಅರ್ಹತೆ, ಕೌಶಲಗಳು ಮುಖ್ಯ. ಅಭ್ಯಥರ್ಿಗಳು ಅದನ್ನು ಗಮನಿಸಿ ಸ್ವ-ವಿವರ ತಯಾರಿಸಬೇಕು.

ವಿಷಯ ಏನಿರಬೇಕು?

ಸ್ವವಿವರವು ನಿಮ್ಮ ಸಾಧನೆಗಳ ಪಟ್ಟಿ ಮಾತ್ರ ಆಗಿರಬೇಕು. ಯಾವುದೇ ತಪ್ಪು ಮಾಹಿತಿ ಕೊಡಬಾರದು. ಮೊದಲ ಸಲ ಉದ್ಯೋಗಕ್ಕೆ ಅರ್ಜಿ ಸಲ್ಲಿಸುವಾಗ ತಮ್ಮ ಸ್ವ-ವಿವರದಲ್ಲಿ ಹೆಸರು, ವಿದ್ಯಾರ್ಹತೆ, ಭಾಷೆಗಳ ಜ್ಞಾನ, ಪಠ್ಯೇತರ ಚಟುವಟಿಕೆ, ವಿಶೇಷ ಜ್ಞಾನ, ವಯಸ್ಸು, ಸಮಾಜ ಸೇವೆ, ಎನ್ಎಸ್ಎಸ್, ಎನ್ಸಿಸಿ, ಕ್ರೀಡೆ ಇತ್ಯಾದಿಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಪಡೆದುಕೊಂಡಿರುವುದರ ಬಗ್ಗೆ ಬರೆದಿರಬೇಕು. ಸಂಪರ್ಕಿಸಬೇಕಾದ ಕಾಯಂ ವಿಳಾಸ ಇರಬೇಕು. ಅನುಭವಿ ಕೆಲಸಗಾರರು ಎರಡನೆ ಹಂತದ ಉದ್ಯೋಗಕ್ಕೆ ಸೇರಬಯಸುವವರು ಮೇಲ್ಕಂಡ ವಿಷಯಗಳ ಜತೆ ತಮ್ಮ ಈಗಿನ ಹುದ್ದೆ ಹಾಗೂ ಸಂಸ್ಥೆಯ ಹೆಸರು ತಿಳಿಸಬೇಕು. ಆ ಉದ್ಯೋಗದಲ್ಲಿ ಮಾಡಿರುವ ಸಾಧನೆಗಳ ಬಗ್ಗೆಯೂ ತಿಳಿಸಬಹುದು.

ಶೈಕ್ಷಣಿಕ ಅರ್ಹತೆಗಳು

ಅತಿ ಹೆಚ್ಚಿನ ಅರ್ಹತೆಯನ್ನು ಮೊದಲು ಬರೆದು ನಂತರ ಇಳಿಕೆ ಕ್ರಮದಲ್ಲಿ ಉಳಿದವುಗಳನ್ನು ಬರೆಯಬೇಕು. ಉದಾ: ಎಂಎ ಮಾಡಿಕೊಂಡಿರುವುದನ್ನು ಮೊದಲು ಬರೆದು, ನಂತರ ಡಿಪ್ಲೊಮಾ ಹಾಗೂ ಸರ್ಟಿಫಿಕೇಟ್ ಕೋರ್ಸ್ ಬಗ್ಗೆ ಬರೆಯಬೇಕು. ಯಾವ ಸಂಸ್ಥೆಯಲ್ಲಿ ಶಿಕ್ಷಣ ಪೂರೈಸಿದ್ದೀರಿ ಎಂಬುದರ ಜತೆಗೆ ಆ ಸಂಸ್ಥೆಯ ಸಾಮಾಜಿಕ ಮನ್ನಣೆ ಬಗ್ಗೆಯೂ ಬರೆಯಬಹುದು. ಪಡೆದ ಅಂಕಗಳು, ಗ್ರೇಡ್, ಶೇಕಡಾವಾರು, ಐಚ್ಛಿಕವಾಗಿ ಆಯ್ಕೆ ಮಾಡಿಕೊಂಡ ವಿಷಯದ ಬಗೆಗೂ ತಿಳಿಸಬೇಕು.

ಪಠ್ಯೇತರ ಚಟುವಟಿಕೆಗಳು

ನೀವು ಕೇವಲ ಶೈಕ್ಷಣಿಕ ಅರ್ಹತೆ ಹಾಗೂ ಅನುಭವ ಪಡೆದುಕೊಂಡಿದ್ದರೆ ಸಾಲದು. ಇತರೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿದ್ದರ ಬಗ್ಗೆ ಬರೆದರೆ ನಿಮ್ಮ ವ್ಯಕ್ತಿತ್ವದ ಬಗ್ಗೆ ತಿಳಿದುಕೊಳ್ಳಲು ಉದ್ಯೋಗದಾತರಿಗೆ ಸಾಧ್ಯವಾಗುವುದು. ನೀವು ಸಾಮಾಜಿಕ ಜೀವಿ ಹಾಗೂ ಹೊಂದಾಣಿಕೆ ಸ್ವಭಾವದವರೆಂದು ತಿಳಿದುಕೊಳ್ಳಲು ಇದರಿಂದ ಸಾಧ್ಯ.

ಅನುಭವವೇ ಆಧಾರ

ಅನುಭವಿಗಳನ್ನು ಆಯ್ಕೆ ಮಾಡಿಕೊಳ್ಳುವುದರಿಂದ ತರಬೇತಿ ಸಮಯ ಹಾಗೂ ವೆಚ್ಚ ಉಳಿತಾಯವಾಗುತ್ತದೆ. ಹಾಗಾಗಿಯೇ ಅನುಭವಸ್ಥರಿಗೆ ಪ್ರಾಶಸ್ತ್ಯ ನೀಡಲಾಗುತ್ತದೆ. ನೀವೂ ಕೂಡ ಅನುಭವದ ಅವಧಿ, ಪಡೆದಿರುವ ಕೌಶಲ, ಸಾಧನೆಗಳ ಪಟ್ಟಿ ಇತ್ಯಾದಿಗಳನ್ನು ವಿವರವಾಗಿ ನೀಡಬೇಕು.

ಸಂಪೂರ್ಣ ವಿಳಾಸ ಇರಲಿ

ಇಂದು ಅಂತರ್ಜಾಲದ ಮೂಲಕ ಶೀಘ್ರವಾಗಿ ಮಾಹಿತಿ ರವಾನಿಸುವ ಕಾಲ. ಹಾಗಾಗಿ ನಿಮ್ಮ ವಿಳಾಸವು ಇ-ಮೇಲ್, ಮೊಬೈಲ್ ಸಂಖ್ಯೆ ಹೊಂದಿರಲಿ. ಸದ್ಯದ ವಿಳಾಸ ಹಾಗೂ ಕಾಯಂ ವಿಳಾಸವನ್ನೂ ತಿಳಿಸುವುದು ಅಗತ್ಯ.

ಇತರೆ ವಿಷಯಗಳು

ಹೆಚ್ಚು ಭಾಷೆಗಳ ಜ್ಞಾನ ಹೊಂದಿದ್ದರೆ ಒಳಿತು. ಆ ಬಗ್ಗೆ ನಿಮ್ಮ ಸ್ವ ವಿವರದಲ್ಲಿ ತಿಳಿಸಿ. ನಿಮ್ಮ ವಯಸ್ಸು, ಮುಂದಿನ ಗುರಿ, ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿರುವುದು, ಸದಸ್ಯತ್ವ ಪಡೆದುಕೊಂಡಿರುವುದು, ಇಬ್ಬರು ಪರಿಚಯಸ್ಥರು ಹಾಗೂ ಅವರ ಹುದ್ದೆ, ವಿಳಾಸ ತಿಳಿಸಬೇಕು.

ಅರ್ಜಿಯೂ ಇರಲಿ

ಯಾವುದೇ ಉದ್ಯೋಗಕ್ಕೆ ನೇರವಾಗಿ ಸ್ವ-ವಿವರ ನೀಡಬೇಡಿ. ಅದರ ಜತೆಗೆ ಒಂದು ಅರ್ಜಿ ಇರಲಿ. ಯಾವ ಹುದ್ದೆ ಬಯಸುತ್ತಿದ್ದೀರಿ ಎಂಬುದನ್ನು ಅದರಲ್ಲಿ ಸ್ಪಷ್ಟವಾಗಿ ತಿಳಿಸಿ. ಅರ್ಜಿಯು ಚಿಕ್ಕ ಹಾಗೂ ಚೊಕ್ಕದಾಗಿದ್ದು, ನಿಮ್ಮ ಶೈಕ್ಷಣಿಕ ಅರ್ಹತೆ ಹಾಗೂ ಅನುಭವದ ಪ್ರಮುಖವಾದ ಒಂದು ವಾಕ್ಯ ಅದರಲ್ಲಿರಲಿ. ಅರ್ಜಿಯ ಕೊನೆಯಲ್ಲಿ ತಾವು ಅವಕಾಶ ಮಾಡಿ ಕೊಟ್ಟಲ್ಲಿ ಸಂದರ್ಶನಕ್ಕೆ ಹಾಜರಾಗಲು ಸಿದ್ಧನಿರುವುದಾಗಿ ತಿಳಿಸಬೇಕು.
ಅರ್ಜಿ ಲಕೋಟೆ ಮೇಲೆ ಯಾವ ಹುದ್ದೆಗೆ ಅರ್ಜಿ ಸಲ್ಲಿಸುತ್ತೀರೆಂದು ದಪ್ಪಕ್ಷರದಲ್ಲಿ ಬರೆಯಬೇಕು. ಪ್ರತಿ ಹುದ್ದೆಗೂ ವಿಶೇಷವಾಗಿ ಸ್ವ-ವಿವರ ತಯಾರಿಸುವುದು ಸೂಕ್ತ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ