ಪುಟಗಳು

ಗುರುವಾರ, ಜುಲೈ 22, 2010

ಮೆಟ್ರೊ ರೈಲು – ಕನ್ನಡವಿಲ್ಲದೇ ಫೇಲು !

ಗೆಳೆಯರೇ,

ಬೆಂಗಳೂರಿನ ಹಲವಾರು ಪ್ರಮುಖ ರಸ್ತೆಗಳಲ್ಲಿ ಮೆಟ್ರೋ ರೈಲು ಕಾಮಗಾರಿ ನಡೀತಿದೆ. ಎಲ್ಲ ಕಡೆ “ನಮ್ಮ ಮೆಟ್ರೋ” ಅಂತ ನಾಮ ಫಲಕಗಳನ್ನು ನೋಡಿ ಹೆಮ್ಮೆ ಪಡುತ್ತಿದ್ದೆ. ಆದರೆ ಮೊನ್ನೆ ಮಹಾತ್ಮಾ ಗಾಂಧಿ ರಸ್ತೆಯಲ್ಲಿ ನಮ್ ಬೆಂಗಳೂರಿಗೆ ಬರಲಿರುವ ಮೆಟ್ರೋ ಭೋಗಿಯ ನಮೂನೆಯನ್ನು ವೀಕ್ಷಣೆಗೆ ಇಟ್ಟಿದ್ದರು. ಅದನ್ನ ಕಂಡು ನನಗೆ ಅಚ್ಚರಿಯಾಯಿತು. ಅದರ ಒಳಗಿರುವ ನಾಮಫಲಕಗಳು, ಸೂಚನೆ ಫಲಕಗಳು ಎಲ್ಲವೂ ಸಂಪೂರ್ಣ ಹಿಂದಿ ಹಾಗು ಇಂಗ್ಲಿಷ್ ಮಯ !! ಒಂದು ಕ್ಷಣ ಇದೇನು ದೆಹಲಿ ಮೆಟ್ರೋದ ಬೋಗಿಯೊಂದನ್ನು ಕದ್ದು ತಂದು ಇಲ್ಲಿ ಪ್ರದರ್ಶನಕ್ಕೆ ಇಟ್ಟಿದ್ದಾರಾ ಅನ್ನೋ ಹಾಗಾಯ್ತು ! ಯಾಕೆಂದ್ರೆ ದೆಹಲಿಯಲ್ಲಿರೋ ಹಾಗೇ ಹಿಂದಿ, ಇಂಗ್ಲಿಷ್ ಅಲ್ಲಿ ಎಲ್ಲ ಸೂಚನೆಗಳು, ಬೋರ್ಡ್ ಗಳು ಇದ್ದವು. ದೆಹಲಿಯಲ್ಲೆನೋ ಹಿಂದಿ ಹಾಕೋದು ಸರಿಯಾದ ನಡೆ, ಆದ್ರೆ ಅಲ್ಲಿಂದ 2000 ಕಿ.ಮೀ ದೂರ ಇರೋ ಕನ್ನಡಿಗರ ಊರಾದ ಬೆಂಗಳೂರಲ್ಲಿ ಕನ್ನಡ ಬಿಟ್ಟು ಹಿಂದಿ ಹಾಕಿರೋದ್ಯಾಕೆ? ಯಾವುದೇ ಊರಿನಲ್ಲದರೂ ಸರಿ, ಸಾರ್ವಜನಿಕ ಸಂಚಾರ ವ್ಯವಸ್ಥೆ ಅಲ್ಲಿನ ಸ್ಥಳೀಯ ಬಹುಸಂಖ್ಯಾತರಿಗೆ ಬಳಸಲು ಅನುಕೂಲವಾಗುವಂತೆ ಆಯಾ ನಾಡಿನ ಸ್ಥಳೀಯ ಭಾಷೆಯಲ್ಲಿರಬೇಕು. ಬಿ.ಎಂ.ಟಿ.ಸಿ, ಟ್ಯಾಕ್ಸಿ ಗಳು, ಆಟೋಗಳು ಅಚ್ಚುಕಟ್ಟಾಗಿ ಕನ್ನಡ ಬಳಸ್ತಾ ಇರೋದನ್ನ ನೋಡಾದ್ರೂ ಇವರು ಕಲಿಬಾರದಾ?
ಯಾರ ಅನುಕೂಲಕ್ಕಾಗಿ ಈ ಸಂಚಾರಿ ವ್ಯವಸ್ತೆಯನ್ನು ನಿರ್ಮಿಸುತ್ತಿದ್ದಾರೋ, ಆ ಜನರ ಭಾಷೆಯಲ್ಲೇ ಸೂಚನೆಗಳು, ನಾಮಫಲಕಗಳು ಇರದಿದ್ದರೆ, ಕೋಟ್ಯಾಂತರ ರೂಪಾಯಿಗಳು ಖರ್ಚು ಮಾಡಿದ್ದೆಲ್ಲ ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದಂತೆ ಆಗಲ್ವಾ? ಅದು ಅಲ್ಲದೇ, ಇದರಲ್ಲಿ ನಮ್ ರಾಜ್ಯ ಸರ್ಕಾರದ ದುಡ್ಡು ಸಾಕಷ್ಟು ಖರ್ಚು ಮಾಡಿದ್ದಾರೆ, ಹಾಗಿದ್ದ ಮೇಲೆ ರಾಜ್ಯ ಸರ್ಕಾರದ ಕಾನೂನಿನಂತೆ ಇಲ್ಲೆಲ್ಲ ಕನ್ನಡ ಬಳಕೆ ಸರಿಯಾಗಿ ಆಗಬೇಕಲ್ವ?
ಬರೋ ಡಿಸೆಂಬರ್ ಹೊತ್ತಿಗೆ ಮೆಟ್ರೊ ರೈಲು ಬೆಂಗಳೂರಿನಲ್ಲಿ ಚುಕುಬುಕು ಶುರು ಮಾಡಲಿದೆ. ಬಿ.ಎಂ.ಆರ್.ಸಿ.ಎಲ್ ಗೆ ಈಗಲೇ ಮಿಂಚೆ ಬರೆದು ಕನ್ನಡದಲ್ಲಿ ಎಲ್ಲ ರೀತಿಯ ಸೂಚನೆ, ಫಲಕ ಹಾಕಲು ಒತ್ತಾಯಿಸೋಣ. ನೆನಪಿರಲಿ, ಇದನ್ನ ಈಗಲೇ ಮಾಡದಿದ್ದರೆ, ನಮ್ಮ ಭಾಷೆಗೆ ಅರ್ಹವಾಗಿ ಅಲ್ಲಿ ಸಿಗಬೇಕಾದ ಸ್ಥಾನ ಎಂದಿಗೂ ಸಿಗದು !
ಅವರಿಗೆ ಮಿಂಚೆ ಬರೆಯಬೇಕಾದ ವಿಳಾಸ – bmrcl@dataone.in , vasanthrao@bmrc.co.in , sivasailam@bmrc.co.in , sudhirchandra@bmrc.co.in
ಹೆಚ್ಚಿನ ವಿವರಗಳು ಈ ಕೊಂಡಿಯಲ್ಲಿದೆ – http://www.bmrc.co.in/contact.html
Filed under: ಅಂಕಣಗಳು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ