ಶುಕ್ರವಾರ, ಡಿಸೆಂಬರ್ 31, 2010

ನಮ್ಮ ಎಲ್ಲಾ ಓದುಗರಿಗೂ ಹೊಸ ವರ್ಷದ ಶುಭಾಶಯಗಳು

ಹೊಸ ವರುಷವನ್ನು ಪ್ರೀತಿ,ಏಕತಾ ಭಾವದಿಂದ, ದ್ವೇಷ-ರೋಷಗಳನ್ನು ದೂರ ಮಾಡುತ್ತಾ, ಹರುಷದಿಂದಲೇ ಸ್ವಾಗತಿಸೋಣ. ಕಳೆದ ವರ್ಷದಲ್ಲಿ ಆಗಿಹೊದ ಕೆಟ್ಟ ಘಟಣೆಗಳನ್ನು ಮರೆತು ಮನಸ್ಸನ್ನು ಶುಭ್ರಗೊಳಿಸಿ ಆಗದೇ ಇದ್ದ ಕನಸನ್ನು ನನಸಾಗಿಸಿಕೊಳ್ಳಲು ಮತ್ತೊಂದು ವರ್ಷ ಬಂದಿದೆ ಎನ್ನುತ್ತಾ ಮುಂದಡಿಯಿಡೋಣ.
ಆತ್ಮೀಯ ಓದುಗರೆಲ್ಲರಿಗೂ ಹೊಸ ವರುಷವು ಶುಭ ತರಲಿ, ಜೀವನವನ್ನು ಬೆಳಗಲಿ, ಅಂದುಕೊಂಡ ಗುರಿ ಸಾಧನೆಯಾಗಲಿ, ಕನಸು ನನಸಾಗಲಿ, ಅದೇರೀತಿ ನಮ್ಮ-ತಮ್ಮೆಲ್ಲರ ಆರೊಗ್ಯ ಚೆನ್ನಾಗಿರಲಿ,. ಎಲ್ಲರಿಗೊ ಶುಭವಾಗಲಿ.

ಬುಧವಾರ, ಡಿಸೆಂಬರ್ 15, 2010

ಇಂಟರ್ ನೆಟ್ ಬ್ರೌಸಿಂಗ್ ಭಾರತಕ್ಕೆ ನಂ.3 ಸ್ಥಾನ

k 
ಎಲ್ಲಾ ಕ್ಷೇತ್ರಗಳಲ್ಲೂ ಅಂತರ್ಜಾಲ ಬಳಕೆ ಅಗತ್ಯ ಹೆಚ್ಚುತ್ತಿದ್ದು, ಅತಿ ಹೆಚ್ಚು ನೆಟ್ ಬ್ರೌಸ್ ಮಾಡುವ ದೇಶ ಯಾವುದು ಎಂಬುದರ ಬಗ್ಗೆ ಗೂಗಲ್ ಇಂಡಿಯಾ ಇತ್ತೀಚೆಗೆ ಸಮೀಕ್ಷೆ ನಡೆಸಿದೆ. ಇದರ ಪ್ರಕಾರ ವಿಶ್ವದಲ್ಲಿ ಅತ್ಯಧಿಕ ಇಂಟರ್ ನೆಟ್ ಬಳಕೆದಾರರ ಪಟ್ಟಿಯಲ್ಲಿ ಭಾರತ ಮೂರನೆ ಸ್ಥಾನದಲ್ಲಿದೆ. ಭಾರತದಲ್ಲಿ ಒಟ್ಟಾರೆ 100 ಮಿಲಿಯನ್ ಇಂಟರ್ ನೆಟ್ ಬಳಕೆದಾರರಿದ್ದಾರೆ ಎಂದು ಅಂದಾಜಿಸಲಾಗಿದೆ.
300 ಮಿಲಿಯನ್ ನೆಟ್ ಬಳಕೆದಾರರೊಂದಿಗೆ ಚೀನಾ ಅಗ್ರಸ್ಥಾನದಲ್ಲಿದ್ದರೆ, 207 ಮಿಲಿಯನ್ ಗ್ರಾಹಕರೊಂದಿಗೆ ಅಮೆರಿಕ ಎರಡನೇ ಸ್ಥಾನದಲ್ಲಿದೆ ಎಂದು ಗೂಗಲ್ ಇಂಡಿಯಾದ ಉತ್ಪನ್ನ ವಿಭಾಗದ ಮುಖ್ಯಸ್ಥ ವಿನಯ್ ಗೋಯಲ್ ಹೇಳಿದ್ದಾರೆ.

ಸುಮಾರು 40 ಮಿಲಿಯನ್ ಜನ ಮೊಬೈಲ್ ಫೋನ್ ಬಳಸಿ ಇಂಟರ್ ನೆಟ್ ಬ್ರೌಸಿಂಗ್ ಮಾಡುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಲ್ಯಾಪ್ ಟಾಪ್ ಹಾಗೂ ಡೆಸ್ಕ್ ಟಾಪ್ ಬಳಸಿ ಬ್ರೌಸ್ ಮಾಡುವವರಿಗಿಂತ ಮೊಬೈಲ್ ಬಳಕೆ ಮಾಡಿ ಬ್ರೌಸ್ ಮಾಡುವವರ ಸಂಖ್ಯೆ ಅಧಿಕವಾಗಲಿದೆ.
 
2007ರಲ್ಲಿ ಭಾರತದಲ್ಲಿ 2 ಮಿಲಿಯನ್ ನಷ್ಟಿದ್ದ ಮೊಬೈಲ್ ಇಂಟರ್ ನೆಟ್ ಬಳಕೆದಾರರ ಸಂಖ್ಯೆ ದಿನೇ ದಿನೇ ಹೆಚ್ಚಳವಾಗುತ್ತಿದೆ. ಕುತೂಹಲದ ಸಂಗತಿ ಎಂದರೆ ಮೊಬೈಲ್ ನೆಟ್ ಬಳಕೆದಾರರು ಹೆಚ್ಚಾಗಿ ಇತ್ತೀಚಿನ ಹಾಡು ಹಾಗೂ ಸಿನಿಮಾ ಟ್ರೈಲರ್ ಗಳ ಹುಡುಕಾಟದಲ್ಲಿ ತಮ್ಮ ಬ್ರೌಸಿಂಗ್ ಸಮಯ ವ್ಯಯಿಸುತ್ತಿದ್ದಾರೆ ಎಂದು ವಿನಯ್ ಹೇಳಿದರು.

ಭಾರತದಲ್ಲಿ 3ಜಿ ಈಗಷ್ಟೇ ಕಾಲಿಡುತ್ತಿದೆ. ವಿಶ್ವದ ಹಲವೆಡೆ 4ಜಿ ಬಳಕೆಯಲ್ಲಿದೆ. ಇಂಟರ್ ನೆಟ್ ಸೌಲಭ್ಯಕ್ಕೆ ಬೇಕಾದ ಖರ್ಚು ವೆಚ್ಚ, ತಿಳುವಳಿಕೆ ಕಮ್ಮಿ ಇರುವುದರಿಂದ ಭಾರತದಲ್ಲಿ ಇನ್ನೂ ಇಂಟರ್ ನೆಟ್ ವಿಸ್ತರಣೆ ಸುಲಭವಾಗಿ ಆಗುತ್ತಿಲ್ಲ. ಗ್ರಾಮೀಣ ಭಾಗಕ್ಕೆ ಬ್ರಾಡ್ ಬ್ಯಾಂಡ್ ಕೊಂಡೊಯ್ಯಲು ಸರ್ಕಾರ ಹರ ಸಾಹಸ ಪಡುತ್ತಿದೆ. ಆದರೂ, ನಿಧಾನವಾಗಿಯಾದರೂ ಭಾರತ ಆಧುನಿಕ ತಂತ್ರಜ್ಞಾನಕ್ಕೆ ಒಗ್ಗಿಕೊಳ್ಳುತ್ತಿದೆ. ವಿಕಿಪೀಡಿಯಾ ವರದಿಯಂತೆ ಜಾಗತಿಕ ಇಂಟರ್ ನೆಟ್ ಬಳಕೆದಾರರ ಪಟ್ಟಿಯಲ್ಲಿ ಭಾರತ ನಾಲ್ಕನೇ ಸ್ಥಾನದಲ್ಲಿದೆ.

ಭಾನುವಾರ, ಡಿಸೆಂಬರ್ 12, 2010

ಬಿಲ್ ಮೇಡ್ ಐಡಿ ಮೂಲಕ ಅತಿ ಸರಳ ವಿಧಾನದಿಂದ ಪಾವತಿ

ಮಾಹಿತಿ ತಂತ್ರಜ್ಞಾನ ಅಭಿವೃದ್ಧಿ ಲಾಭ ಪಡೆದಿರುವ ಸ್ಥಳೀಯ ಯುವ ಟೆಕ್ಕಿಗಳ ತಂಡ ಬಿಲ್ ಪಾವತಿ ಮಾಡಲು ಜನಸಾಮಾನ್ಯರು ಪಡುವ ಪಾಡನ್ನು ಹೋಗಲಾಡಿಸಲು ’ಬಿಲ್ ಮೇಲ್ ಐಡಿ’ ಎಂಬ ವೆಬ್ ಪೋರ್ಟಲ್ ಗೆ ಡಿ.13ರಂದು ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ. ಬಿಲ್ ಪಾವತಿ ಅಷ್ಟೇ ಅಲ್ಲದೆ, ಇ ವಾಣಿಜ್ಯ ಉದ್ಯಮಿಗಳು, ಮಾರಾಟಗಾರರು ಇತರೆ ಗ್ರಾಹಕರಿಗೂ ಈ ತಾಣ ಅನುಕೂಲವಾಗಲಿದೆ. ಬ್ಯಾಂಕ್ ಹಾಗೂ ಜನಸಮಾನ್ಯರ ನಡುವಿನ ಸಂಪರ್ಕ ಕೊಂಡಿಯಾಗಿರುವ ಈ ತಾಣ ವಿಶ್ವದ ಪ್ರಪ್ರಥಮ ವಾಣಿಜ್ಯ ನೆಟ್ ವರ್ಕಿಂಗ್ ಸಾಧನವಾಗಲಿದೆ.

ಬಿಲ್ ಪಾವತಿ ಅತಿ ಸರಳ: ಬಿಲ್ ಮೇಲ್ ಐಡಿಯನ್ನು ಪ್ರತಿಯೊಬ್ಬ ವ್ಯಕ್ತಿಯೂ ಸರಳವಾದ ರೀತಿಯಲ್ಲಿ ಪಡೆದುಕೊಳ್ಳಬಹುದಾಗಿದೆ. ಬಿಲ್ ಮೇಲ್ ಐಡಿ ಪಡೆದ ಬಳಕೆದಾರ ನೀರು, ವಿದ್ಯುತ್ ಹಾಗೂ ಇನ್ನಿತರ ಸಂಸ್ಥೆಗಳ ಬಿಲ್ ಪಾವತಿಯನ್ನು ಸರಳ ವಿಧಾನದಿಂದ ಮಾಡಬಹುದು. ಮೊಬೈಲ್, ಕಂಪ್ಯೂಟರ್, ಬ್ಯಾಂಕ್ ಕೌಂಟರ್, ಎಟಿಎಂ, ಕಿಯೋಸ್ಕ್, ತೃತೀಯ ಪಕ್ಷದ ಫ್ರಾಂಚೈಸಿ ಮುಂತಾದ ಸ್ಥಳಗಳಲ್ಲಿ ಬಿಲ್ ಮೇಲ್ ಐಡಿ ಮೂಲಕ ಗ್ರಾಹಕರು ಬಿಲ್ ಪಾವತಿಸಬಹುದಾಗಿದೆ.

ಬ್ಯಾಂಕ್‌ಗಳು ಹಾಗೂ ಇತರ ಹಣಕಾಸು ಸಂಸ್ಥೆಗಳೊಂದಿಗೆ ಬಿಲ್ ಮೇಲ್ ಐಡಿ ಹಲವು ಒಪ್ಪಂದಗಳು ಮತ್ತು ಒಡಂಬಡಿಕೆಗಳನ್ನು ಮಾಡಿಕೊಳ್ಳಲಿದ್ದು, ಈ ತಾಣದಲ್ಲಿ ನೋಂದಾಯಿಸಿಕೊಂಡ ಗ್ರಾಹಕರು ವಿವಿಧ ಬಿಲ್ಲಿಂಗ್ ಏಜೆನ್ಸಿಗಳು ಮತ್ತು ಸೇವೆ ನೀಡುವವರಿಗೆ ಬಿಲ್ ಮೇಲ್ ಐಡಿ ಮೂಲಕ ಬಿಲ್‌ಗಳನ್ನು ಪಾವತಿಸಬಹುದು. ಬಿಲ್ ಪಾವತಿದಾರರಿಗೆ ಬಿಲ್‌ಮೇಲ್ ಐಡಿ ಉಚಿತವಾಗಿ ಈ ಸೇವೆ ನೀಡುತ್ತದೆ.

ಇ ವಾಣಿಜ್ಯಕ್ಕೂ ಅನುಕೂಲ: ವ್ಯಾಪಾರಿಗಳು ತಮ್ಮ ಸಂಸ್ಥೆಗೆ ಸಂಬಂಧಿಸಿದ ಬಿಲ್‌ಗಳನ್ನು ತಯಾರಿಸಲು ಬಿಲ್‌ಮೇಲ್ ಐಡಿ ಯನ್ನು ಉಪಯೋಗಿಸಬಹುದಾಗಿದ್ದು, ಇದು ಪ್ರಸಕ್ತ ಲಭ್ಯವಿರುವ ಎಲ್ಲ ಅಕೌಂಟಿಂಗ್ ಸಾಫ್ಟ್‌ವೇರ್‌ಗೂ ಸಂಪರ್ಕಿತವಾಗಿದೆ. ಉಚಿತವಾಗಿ ಡೌನ್‌ಲೋಡ್ ಮಾಡಬಲ್ಲಂತಹ ಬಿಲ್ಲಿಂಗ್ ಸಾಫ್ಟ್‌ವೇರ್ ಆವೃತ್ತಿ ಇದರಲ್ಲಿ ಲಭ್ಯವಿದೆ. ಇದನ್ನು ಆಫ್‌ಲೈನಮ್ ಬಳಕೆಗೆ ಬಳಸಿಕೊಳ್ಳಬಹುದಾಗಿದೆ. ಜಗತ್ತಿನ ಎಲ್ಲರೂ ಬಿಲ್ ಮೇಲ್ ಐಡಿ ಸಮುದಾಯದ ಸದಸ್ಯರಾಗಬಹುದು. ಬಿಲ್‌ಮೇಲ್ ಐಡಿ ಸದಸ್ಯ ಇನ್ನೊಬ್ಬ ಬಿಲ್‌ಮೇಲ್ ಐಡಿ ಸದಸ್ಯನಿಗೆ ಪರ್ಚೆಸ್ ಆರ್ಡರ್, ಬಿಲ್ ನೀಡುವಿಕೆ, ಬಿಲ್ ಹಣಪಾವತಿ, ವಸ್ತುವಿನ ಬಟವಾಡೆ ಮೊದಲಾದ ವಾಣಿಜ್ಯ ಪ್ರಕ್ರಿಯೆಗಳನ್ನು ಸರಳವಾಗಿ ನಡೆಸಬಹುದಾಗಿದೆ .

ಗುರುವಾರ, ಡಿಸೆಂಬರ್ 9, 2010

ಎಚ್ ಡಿಎಫ್ ಸಿಯಿಂದ ಅಂಧರಿಗಾಗಿ ವಿಶೇಷ ಎಟಿಎಂ

ಎಚ್ ಡಿಎಫ್ ಸಿಯಿಂದ ಅಂಧರಿಗಾಗಿ ವಿಶೇಷ ಎಟಿಎಂಗಳನ್ನು ವಿನ್ಯಾಸಗೊಳಿಸಿದೆ. ಯಾರ ಸಹಾಯವಿಲ್ಲದೆ ಅಂಧರು ಹಣವನ್ನು ಪಡೆಯಬಹುದಾದ ವ್ಯವಸ್ಥೆಯನ್ನು ಭಾರತದ ಅತಿದೊಡ್ಡ ಖಾಸಗಿ ಬ್ಯಾಂಕ್ ಎಚ್ ಡಿಎಫ್ ಸಿ ಪ್ರಕಟಿಸಿದೆ. ಬ್ರೈಲ್ ಲಿಪಿ ಸಹಾಯದಿಂದ ಎಟಿಎಂ ಯಂತ್ರ ಬಳಕೆಗೆ ಅನುಕೂಲ ಕಲ್ಪಿಸಲಾಗಿದೆ.

ಮೊದಲ ಹಂತದಲ್ಲಿ ಈ ಡೈಬೋಲ್ಡ್ (D450) ಎಟಿಎಂಗಳನ್ನು ಅಳವಡಿಸಲಾಗುವುದು. ಇದು ಸದ್ಯಕ್ಕೆ ಚಾಲ್ತಿಯಲ್ಲಿರುವ ಎಟಿಎಂಗಳಲ್ಲಿರುವ ಎಲ್ಲಾ ಸೌಲಭ್ಯಗಳನ್ನು ಹೊಂದಿರುತ್ತದೆ. ಗ್ರಾಹಕ ಸ್ನೇಹಿ ವಿನ್ಯಾಸದ ಹೊಂದಿರುವುದರಿಂದ ವಿಕಲ ಚೇತನರು ಕೂಡಾ ಸುಲಭವಾಗಿ ಬ್ಯಾಂಕ್ ನೊಡನೆ ವ್ಯವಹರಿಸಬಹುದಾಗಿದೆ.

15 ಇಂಚಿನ LCD ದರ್ಶಕದ ಜೊತೆಗೆ ಬ್ರೈಲ್ ಲಿಪಿ ಬಳಸಲು ಕೀ ಪ್ಯಾಡ್ ಇರುತ್ತದೆ. ಹೆಡ್ ಫೋನ್ ಜಾಕ್ ಹಾಗೂ ಸ್ಪೀಕರ್ ಗಳನ್ನು ಅಳವಡಿಸಲಾಗಿದ್ದು, ಧ್ವನಿ ಸಹಾಯ ಪಡೆದು ವ್ಯವಹರಿಸಬಹುದಾಗಿದೆ. ಡಿಜಿಟಲ್ ವಿಡಿಯೋ ಮುದ್ರಣ(DVRs) ಹಾಗೂ ಸ್ಕಿಮಿಂಗ್ ತಂತ್ರಜ್ಞಾನ (ASD)ಗಳನ್ನು ಈ ಯಂತ್ರಗಳು ಹೊಂದಿದ್ದು, ಅತ್ಯಂತ ಸುರಕ್ಷಿತವಾಗಿರುತ್ತದೆ.

ಸುಮಾರು ಬ್ರೈಲ್ ಸುಧಾರಿತ 4,500 ಎಟಿಎಂಗಳನ್ನು ಅಳವಡಿಸಲು ಡೈಬೋಲ್ಡ್ ಜೊತೆ ಎಚ್ ಡಿಎಫ್ ಸಿ ಕೈ ಜೋಡಿಸಿದೆ. ಮಾಹಿತಿ ಮುದ್ರಣ, ಸಂಗ್ರಹಣೆ ಹಾಗೂ ಸ್ಥಳೀಯ ದರ್ಶಕ ಸೌಲಭ್ಯಗಳನ್ನು ಸುಮಾರು 700 ಎಚ್ ಡಿಎಫ್ ಸಿ ಬ್ರಾಂಚ್ ಗಳಲ್ಲಿ ಡೈಬೋಲ್ಡ್ ಅಳವಡಿಸಿದೆ.

ಮಂಗಳವಾರ, ಡಿಸೆಂಬರ್ 7, 2010

ವೆಬ್ ಸೈಟಿನಲ್ಲಿ ವೇದಾಂತ ಪಾಠ ಬೇಕೇನು

ಇವತ್ತು ಎಲ್ಲಿ ನೋಡಿದರೂ ಹಿಂಸೆ, ಅಶಾಂತಿ, ಅತೃಪ್ತಿ, ದ್ವೇಷ ಮತ್ತು ಭಯದ ವಾತಾವರಣ. ಭಯ ಹೊರಗೂ ಇದೆ. ಒಳಗೂ ಇದೆ. ಇದನ್ನು ಗೆಲ್ಲುವ ಮಾರ್ಗೋಪಾಯಗಳನ್ನು ವ್ಯಕ್ತಿ ತಾನೇ ಕಂಡುಕೊಳ್ಳಬೇಕಾದ ಆವಶ್ಯಕತೆ ಎಂದಿಗಿಂತ ಇಂದು ಹೆಚ್ಚೇ ಕಂಡುಬಂದಿದೆ. ನೆಮ್ಮದಿ ಪಡೆಯಲು ನಮಗಿರುವ ಸುಲಭವಾದ ಒಂದು ಪರಿಹಾರವೆಂದರೆ "ವೇದಾಂತ ವಿಚಾರ ಚಿಂತನೆ ".

ವಿದ್ಯೆಯನ್ನು, ಜ್ಞಾನವನ್ನು, ಶಾಂತಿ ಸಮಾಧಾನಗಳನ್ನು ಗುರುಕುಲ ಕ್ರಮದಿಂದ ಅಧ್ಯಯನ ಮಾಡುವುದಕ್ಕೆ ಇವತ್ತು ಯಾರಿಗೂ ಪುರುಸೊತ್ತಿಲ್ಲ. ಅಂಥ ವಾತಾವರಣವೂ ಇಲ್ಲ. ಇಂದಿನ ಯುಗ ಕಂಪ್ಯೂಟರ್ ಯುಗ. ಕಳ್ಳಕಾಕರ ಯುಗ. ದೊರೆಯೇ ಧೂರ್ತನಾಗುವ ಯುಗ. ವೈಜ್ಞಾನಿಕ ಯುಗ. ವೇಗದ ಯುಗ. ಆವೇಗದ ಯುಗ. ಉದ್ವೇಗದ ಯುಗ. ಪ್ರಮುಖವಾಗಿ ಈಗಿನ ಯುವಕ ಯುವತಿಯರು, ಮಧ್ಯವಯಸ್ಕರು ಮತ್ತು ಹಿರಿಯ ನಾಗರಿಕರು ಐಹಿಕ ಸುಖಕ್ಕೆ ಮತ್ತು ವಸ್ತು ಭೋಗಕ್ಕೆ ತುತ್ತಾಗಿ ಬಳಲಿದ್ದಾರೆ. ತಮ್ಮನ್ನು ಕಾಡುತ್ತಿರುವ ಕಾಯಿಲೆ ಯಾವುದು ಎನ್ನುವುದು ನರಳುತ್ತಿರುವ ವ್ಯಕ್ತಿಗೇ ತಿಳಿಯದಾಗಿದೆ.

ಇದನ್ನು ಗಮನದಲ್ಲಿ ಇಟ್ಟುಕೊಂಡು "ವೇದಾಂತ ಸತ್ಸಂಗ ಕೇಂದ್ರ"ದ ವತಿಯಿಂದ "ಶಂಕರಹೃದಯಂ" ಎಂಬ ಅಂತರ್ಜಾಲ ತಾಣವನ್ನು ತೆರೆಯಲಾಗುತ್ತಿದೆ. ವೇದಾಂತ ಪಾಠಗಳನ್ನು ಪ್ರಚುರ ಪಡಿಸುವುದು ಈ ವೆಬ್ ಸೈಟಿನ ಉದ್ದೇಶವಾಗಿರುತ್ತದೆ.
ವೆಬ್ ಸೈಟ್ ವಿಳಾಸ : http://www.satchidanandendra.org

ಶಂಕರ ಭಗವತ್ಪಾದರು ತೋರಿದ ಆದರ್ಶಗಳನ್ನು ಮನಸಾ ಮೆಚ್ಚುವವರು ಮತ್ತು ನೆಮ್ಮದಿ ಅರಸುತ್ತಿರುವವರು ಈ ತಾಣದ ಪ್ರಯೋಜನ ಪಡೆಯಬಹುದೆಂದು ವೇದಾಂತ ಸತ್ಸಂಗ ಕೇಂದ್ರದ ಪತ್ರಿಕಾ ಪ್ರಕಟಣೆ ತಿಳಿಸಿದೆ.
ಹೆಚ್ಚಿನ ವಿವರಗಳಿಗೆ : 98860 51222 ದೂರವಾಣಿ ಸಂಖ್ಯೆಯನ್ನು ತಲುಪಿರಿ.
ಇಮೇಲ್ : shankarahridayam@gmail.com