ಬುಧವಾರ, ಡಿಸೆಂಬರ್ 15, 2010

ಇಂಟರ್ ನೆಟ್ ಬ್ರೌಸಿಂಗ್ ಭಾರತಕ್ಕೆ ನಂ.3 ಸ್ಥಾನ

k 
ಎಲ್ಲಾ ಕ್ಷೇತ್ರಗಳಲ್ಲೂ ಅಂತರ್ಜಾಲ ಬಳಕೆ ಅಗತ್ಯ ಹೆಚ್ಚುತ್ತಿದ್ದು, ಅತಿ ಹೆಚ್ಚು ನೆಟ್ ಬ್ರೌಸ್ ಮಾಡುವ ದೇಶ ಯಾವುದು ಎಂಬುದರ ಬಗ್ಗೆ ಗೂಗಲ್ ಇಂಡಿಯಾ ಇತ್ತೀಚೆಗೆ ಸಮೀಕ್ಷೆ ನಡೆಸಿದೆ. ಇದರ ಪ್ರಕಾರ ವಿಶ್ವದಲ್ಲಿ ಅತ್ಯಧಿಕ ಇಂಟರ್ ನೆಟ್ ಬಳಕೆದಾರರ ಪಟ್ಟಿಯಲ್ಲಿ ಭಾರತ ಮೂರನೆ ಸ್ಥಾನದಲ್ಲಿದೆ. ಭಾರತದಲ್ಲಿ ಒಟ್ಟಾರೆ 100 ಮಿಲಿಯನ್ ಇಂಟರ್ ನೆಟ್ ಬಳಕೆದಾರರಿದ್ದಾರೆ ಎಂದು ಅಂದಾಜಿಸಲಾಗಿದೆ.
300 ಮಿಲಿಯನ್ ನೆಟ್ ಬಳಕೆದಾರರೊಂದಿಗೆ ಚೀನಾ ಅಗ್ರಸ್ಥಾನದಲ್ಲಿದ್ದರೆ, 207 ಮಿಲಿಯನ್ ಗ್ರಾಹಕರೊಂದಿಗೆ ಅಮೆರಿಕ ಎರಡನೇ ಸ್ಥಾನದಲ್ಲಿದೆ ಎಂದು ಗೂಗಲ್ ಇಂಡಿಯಾದ ಉತ್ಪನ್ನ ವಿಭಾಗದ ಮುಖ್ಯಸ್ಥ ವಿನಯ್ ಗೋಯಲ್ ಹೇಳಿದ್ದಾರೆ.

ಸುಮಾರು 40 ಮಿಲಿಯನ್ ಜನ ಮೊಬೈಲ್ ಫೋನ್ ಬಳಸಿ ಇಂಟರ್ ನೆಟ್ ಬ್ರೌಸಿಂಗ್ ಮಾಡುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಲ್ಯಾಪ್ ಟಾಪ್ ಹಾಗೂ ಡೆಸ್ಕ್ ಟಾಪ್ ಬಳಸಿ ಬ್ರೌಸ್ ಮಾಡುವವರಿಗಿಂತ ಮೊಬೈಲ್ ಬಳಕೆ ಮಾಡಿ ಬ್ರೌಸ್ ಮಾಡುವವರ ಸಂಖ್ಯೆ ಅಧಿಕವಾಗಲಿದೆ.
 
2007ರಲ್ಲಿ ಭಾರತದಲ್ಲಿ 2 ಮಿಲಿಯನ್ ನಷ್ಟಿದ್ದ ಮೊಬೈಲ್ ಇಂಟರ್ ನೆಟ್ ಬಳಕೆದಾರರ ಸಂಖ್ಯೆ ದಿನೇ ದಿನೇ ಹೆಚ್ಚಳವಾಗುತ್ತಿದೆ. ಕುತೂಹಲದ ಸಂಗತಿ ಎಂದರೆ ಮೊಬೈಲ್ ನೆಟ್ ಬಳಕೆದಾರರು ಹೆಚ್ಚಾಗಿ ಇತ್ತೀಚಿನ ಹಾಡು ಹಾಗೂ ಸಿನಿಮಾ ಟ್ರೈಲರ್ ಗಳ ಹುಡುಕಾಟದಲ್ಲಿ ತಮ್ಮ ಬ್ರೌಸಿಂಗ್ ಸಮಯ ವ್ಯಯಿಸುತ್ತಿದ್ದಾರೆ ಎಂದು ವಿನಯ್ ಹೇಳಿದರು.

ಭಾರತದಲ್ಲಿ 3ಜಿ ಈಗಷ್ಟೇ ಕಾಲಿಡುತ್ತಿದೆ. ವಿಶ್ವದ ಹಲವೆಡೆ 4ಜಿ ಬಳಕೆಯಲ್ಲಿದೆ. ಇಂಟರ್ ನೆಟ್ ಸೌಲಭ್ಯಕ್ಕೆ ಬೇಕಾದ ಖರ್ಚು ವೆಚ್ಚ, ತಿಳುವಳಿಕೆ ಕಮ್ಮಿ ಇರುವುದರಿಂದ ಭಾರತದಲ್ಲಿ ಇನ್ನೂ ಇಂಟರ್ ನೆಟ್ ವಿಸ್ತರಣೆ ಸುಲಭವಾಗಿ ಆಗುತ್ತಿಲ್ಲ. ಗ್ರಾಮೀಣ ಭಾಗಕ್ಕೆ ಬ್ರಾಡ್ ಬ್ಯಾಂಡ್ ಕೊಂಡೊಯ್ಯಲು ಸರ್ಕಾರ ಹರ ಸಾಹಸ ಪಡುತ್ತಿದೆ. ಆದರೂ, ನಿಧಾನವಾಗಿಯಾದರೂ ಭಾರತ ಆಧುನಿಕ ತಂತ್ರಜ್ಞಾನಕ್ಕೆ ಒಗ್ಗಿಕೊಳ್ಳುತ್ತಿದೆ. ವಿಕಿಪೀಡಿಯಾ ವರದಿಯಂತೆ ಜಾಗತಿಕ ಇಂಟರ್ ನೆಟ್ ಬಳಕೆದಾರರ ಪಟ್ಟಿಯಲ್ಲಿ ಭಾರತ ನಾಲ್ಕನೇ ಸ್ಥಾನದಲ್ಲಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ