ಮಂಗಳವಾರ, ಅಕ್ಟೋಬರ್ 12, 2010

ಅಂತರ್ಜಾಲ

ಅಂತರ ಜಾಲ ಎಂಬುದು ಸಹಸ್ರಾರು ಗಣಕಯಂತ್ರಗಳ ಜಾಲಗಳ ನಡುವೆ ಸಂಪರ್ಕವನ್ನು ಏರ್ಪಡಿಸಿ ನಿರ್ಮಿಸಲಾದ ಬೃಹತ್ ಜಾಲ. ಇದು ಸಾರ್ವಜನಿಕವಾಗಿ ಲಭ್ಯವಾಗಿದ್ದು ಇಂಟರ್ನೆಟ್ ಪ್ರೋಟೋಕೋಲ್ ಮೊದಲಾದ ವ್ಯವಸ್ಥೆಗಳ ಮುಖಾಂತರ ಮಾಹಿತಿ ಸಂವಹನ ನಡೆಸುತ್ತದೆ.
ಸರ್ಕಾರಿ, ಶೈಕ್ಷಣಿಕ ಮತ್ತು ವಾಣಿಜ್ಯ ಸಂಸ್ಥೆಗಳ ಅನೇಕ ಜಾಲಗಳಿದ್ದು ಅವನ್ನು ಒಂದಕ್ಕೊಂದು ಕೂಡಿಸಿ ಸೃಷ್ಟಿಸಿದ ಬೃಹತ್ ಜಾಲವೇ ಅಂತರ ಜಾಲ ಅಥವಾ ಇಂಟರ್ನೆಟ್. ಅನೇಕ ರೀತಿಯ ಮಾಹಿತಿಯನ್ನು ಸಾಗಿಸುವ ಈ ಜಾಲ, ವಿ-ಅಂಚೆ, ಅಂತರ ಜಾಲ ಹರಟೆ (ಚ್ಯಾಟಿಂಗ್), ಅಂತರ ಜಾಲ ತಾಣಗಳು ಮೊದಲಾದ ಸೇವೆಗಳನ್ನು ಒದಗಿಸುತ್ತದೆ.

1. ಅಂತರ ಜಾಲದ (ಅಂತರ್ಜಾಲದ) ಉಗಮ

೧೯೬೯ ರಲ್ಲಿ ಅಮೆರಿಕ ಸರ್ಕಾರದ ರಕ್ಷಣಾ ವಿಭಾಗ ತನ್ನ ಕೆಲಸಗಳಿಗಾಗಿ ಗಣಕಯಂತ್ರಗಳ ಒಂದು ಜಾಲವನ್ನು ನಿರ್ಮಿಸಿತು. ಇದಕ್ಕೆ ಅರ್ಪಾನೆಟ್ (ARPANET) ಎಂದು ಹೆಸರಿಡಲಾಗಿತ್ತು. ವಿಕೇಂದ್ರೀಕೃತ ಜಾಲಗಳು ಮತ್ತು ಮಾಹಿತಿ ಸಂವಹನ ವ್ಯವಸ್ಥೆಗಳ ಮೇಲಿನ ಸಂಶೋಧನೆಯ ಫಲಿತಾಂಶ ಈ ಜಾಲ. ಜನವರಿ ೧, ೧೯೮೩ ರಂದು ಅರ್ಪಾನೆಟ್ ನ ಕೆಲವು ಮೂಲಭೂತ ವ್ಯವಸ್ಥೆಗಳನ್ನು ಅಧುನಿಕೀಕರಣಗೊಳಿಸಲಾಯಿತು. ಇಂದಿನ ಅಂತರ ಜಾಲದ ಹಿರಿಯಜ್ಜ ಈ ಆಧುನಿಕೀಕೃತವಾದ ಅರ್ಪಾನೆಟ್.

ಅಂತರ ಜಾಲದ ಒಂದು ಭಾಗಶಃ ರೇಖಾಚಿತ್ರ
ಅಂತರ ಜಾಲದ ಅಭಿವೃದ್ಧಿಯಲ್ಲಿ ಇನ್ನೊಂದು ಮುಖ್ಯ ಹೆಜ್ಜೆ ಅಮೆರಿಕದ ರಾಷ್ಟ್ರೀಯ ವಿಜ್ಞಾನ ಸಂಸ್ಥೆ (National Science Foundation) ೧೯೮೬ ರಲ್ಲಿ ನಿರ್ಮಿಸಿದ ಇನ್ನೊಂದು ಕಂಪ್ಯೂಟರ್ ಜಾಲ - ಇದಕ್ಕೆ ಎನ್ಎಸ್ಎಫ್ನೆಟ್ (NSFNet) ಎಂದು ಹೆಸರಿಡಲಾಗಿತ್ತು. ನಂತರದ ವರ್ಷಗಳಲ್ಲಿ ಇನ್ನೂ ಅನೇಕ ಜಾಲಗಳು ಚಿಗುರಿಕೊಂಡವು. ಆದರೆ ಆಗ ಇನ್ನೂ ಈ ಜಾಲಗಳು ಬಿಡಿಬಿಡಿಯಾಗಿ ಹಂಚಿಹೋಗಿದ್ದವೇ ಹೊರತು ಒಂದಕ್ಕೊಂದು ಸಂಪರ್ಕವನ್ನು ಹೊಂದಿರಲಿಲ್ಲ.
೯೦ ರ ದಶಕದಲ್ಲಿ ಈ ವಿವಿಧ ಜಾಲಗಳ ನಡುವೆ ಸಂಪರ್ಕ ಏರ್ಪಡಿಸಿ ಅವುಗಳನ್ನು ಒಗ್ಗೂಡಿಸಲಾಯಿತು. ಇತರ ದೇಶಗಳಲ್ಲಿ ಜನ್ಮ ತಾಳಿದ್ದ ಕಂಪ್ಯೂಟರ್ ಜಾಲಗಳೂ ಈ ಪ್ರಯತ್ನದಲ್ಲಿ ಸೇರಿಕೊಂಡು ಅನೇಕ ಸಣ್ಣ ಸಣ್ಣ ಕಂಪ್ಯೂಟರ್ ಜಾಲಗಳನ್ನು ಒಳಗೊಂಡ ಬೃಹತ್ ಜಾಲ ರೂಪುಗೊಳ್ಳಲಾರಂಭಿಸಿತು. ಇದೇ ಈಗಿನ ಅಂತರ ಜಾಲ.

2. ಇಂದಿನ ಅಂತರ ಜಾಲ


ಅಂತರ ಜಾಲದಲ್ಲಿ ಕೆಲಸ ಮಾಡುತ್ತಿರುವ ವಿವಿಧ ಸೌಲಭ್ಯಗಳು - ಬ್ರೌಸರ್, ಎಫ್‍ಟಿಪಿ ಇತ್ಯಾದಿ
ಅಂತರ ಜಾಲದಲ್ಲಿ ಎಲ್ಲ ಗಣಕಯಂತ್ರಗಳನ್ನು ಸಂಪರ್ಕಿಸಲು ಅತಿ ಸಂಕೀರ್ಣವಾದ ಸಂಪರ್ಕ ಸಾಧನಗಳು ಮತ್ತು ಮಾಧ್ಯಮಗಳು ಉಪಯೋಗವಾಗಿವೆ. ಇದಲ್ಲದೆ, ಮಾಹಿತಿ ಸಂವಹನವನ್ನು ಹೇಗೆ ನಡೆಸಬೇಕು ಎಂಬುದರ ಬಗ್ಗೆ ಚರ್ಚೆ ನಡೆಸಿ ಮಾಡಿಕೊಂಡಿರುವ ಅನೇಕ ಒಪ್ಪಂದಗಳುಂಟು - ಇವುಗಳಿಗೆ ಪ್ರೋಟೋಕೋಲ್ ಗಳೆಂದು ಹೆಸರು. ಈ ಪ್ರೋಟೋಕೋಲ್ ಗಳು ಮಾಹಿತಿಯನ್ನು ಸರಿಯಾಗಿ ಯಾವ ರೀತಿಯಲ್ಲಿ ಕಳುಹಿಸಬೇಕೆಂಬುದನ್ನು ನಿರ್ದೇಶಿಸುತ್ತವೆ.
ಹಾಗೆಯೇ ಮಾಹಿತಿಯನ್ನು ಸಂಚಯಿಸುವ ಮಾಧ್ಯಮ ಯಾವುದು ಬೇಕಾದರೂ ಆಗಿರಬಹುದು - ತಾಮ್ರದ ತಂತಿ, ಕೋ-ಆಕ್ಸಲ್ ಕೇಬಲ್, ಯಾವ ಕೇಬಲ್ ಗಳೂ ಇಲ್ಲದೆ ವಯರ್ಲೆಸ್ ಜಾಲ - ಹೀಗೆ ವಿವಿಧ ರೀತಿಗಳಲ್ಲಿ ಮಾಹಿತಿ ಅಂತರ ಜಾಲದ ಮೂಲಕ ಸಾಗುತ್ತದೆ.
ಅಂತರ ಜಾಲದ ಪ್ರೋಟೋಕೋಲ್ ಗಳನ್ನು ಪ್ರತಿಪಾದಿಸುವ ಸಂಸ್ಥೆ ಅಂತರ ಜಾಲ ಎಂಜಿನಿಯರಿಂಗ್ ಟಾಸ್ಕ್ ಫೋರ್ಸ್ (IETF), ಮತ್ತು ಅದರ ಸಂಬಂಧಿ ಕಾರ್ಯ ನಡೆಸುವ ಗುಂಪುಗಳ ಸಮಿತಿ. ಈ ಪ್ರತಿಪಾದನೆಗಳು ಸಾರ್ವಜನಿಕವಾಗಿ ಲಭ್ಯವಿದ್ದು ಸಾರ್ವಜನಿಕರು ಇವುಗಳ ಬಗೆಗಿನ ಚರ್ಚೆಗಳಲ್ಲಿ ಪಾಲ್ಗೊಳ್ಳಬಹುದು. ಈ ಸಮಿತಿ ಪ್ರತಿಪಾದನೆಗಳನ್ನು Request for Comments (RFCs) ಎಂಬ ಹೆಸರಿನಲ್ಲಿ ಪ್ರಕಟಿಸುತ್ತದೆ. ಯಾವ ಪ್ರತಿಪಾದನೆಗಳನ್ನು ಪಾಸು ಮಾಡಿ ಅಂತರ ಜಾಲದಲ್ಲಿ ಅಳವಡಿಸಿಕೊಳ್ಳಬಹುದೆಂಬುದನ್ನು Internet Architecture Board (IAB) ಸೂಚಿಸುತ್ತದೆ.
ಅಂತರ ಜಾಲದಲ್ಲಿ ಬಹಳವಾಗಿ ಉಪಯೋಗದಲ್ಲಿರುವ ಪ್ರೋಟೋಕೋಲ್ ಗಳೆಂದರೆ (ಕೆಳಗೆ ಇಂಗ್ಲಿಷ್ ಲೇಖನಗಳಿಗೆ ಸಂಪರ್ಕ ಕಲ್ಪಿಸಲಾಗಿದೆ):
IP, TCP, UDP, DNS, PPP, SLIP, en:ICMP, POP3, IMAP, SMTP, HTTP, HTTPS, SSH, Telnet, FTP, LDAP, ಮತ್ತು SSL.
ಅಂತರ ಜಾಲದಲ್ಲಿ ಉಪಯೋಗದಲ್ಲಿರುವ ಅತಿ ಜನಪ್ರಿಯ ಸೌಲಭ್ಯಗಳಲ್ಲಿ ವಿ-ಅಂಚೆ, ಅಂತರ ಜಾಲ ತಾಣಗಳು, ಹರಟೆ ಮೊದಲಾದವುಗಳು ಸೇರಿವೆ. ವಿ-ಅಂಚೆ ಮತ್ತು ಅಂತರ ಜಾಲ ತಾಣಗಳು ಅತಿ ಹೆಚ್ಚು ಉಪಯೋಗ ಕಂಡಿವೆ. ಇವನ್ನು ಆಧರಿಸಿ ಕೆಲಸ ಮಾಡುವ ವಿ-ಗುಂಪುಗಳು, ಬ್ಲಾಗ್ ಗಳು ಮೊದಲಾದ ಸೌಲಭ್ಯಗಳು ಸಹ ಜನಪ್ರಿಯವಾಗಿವೆ. ಹಾಗೆಯೇ ಅಂತರ ಜಾಲ ರೇಡಿಯೊ, ವೆಬ್‍ಕಾಸ್ಟ್ ಮೊದಲಾದವು ಸಹ ಬೆಳಕಿಗೆ ಬಂದಿವೆ.

3. ಅಂತರ ಜಾಲ ಸಂಸ್ಕೃತಿ

ಅಂತರ ಜಾಲ ಜನರು ಕೆಲಸ ನಡೆಸುವ ರೀತಿ, ಮಾಹಿತಿ ಶೋಧನೆ ಮತ್ತು ಅಭಿಪ್ರಾಯಗಳ ಮೇಲೆ ಗಾಢವಾದ ಪ್ರಭಾವವನ್ನು ಬೀರುತ್ತಿದೆ.

3. 1. ಮಾಹಿತಿ ಸಂಗ್ರಹಣೆ

ಗೂಗ್ಲ್ ನಂತಹ ಶೋಧ ಯಂತ್ರಗಳ ಉಪಯೋಗದಿಂದ ಯಾವ ವಿಷಯದ ಬಗ್ಗೆಯೇ ಆಗಲಿ, ಕ್ಷಣಮಾತ್ರದಲ್ಲಿ ಮಾಹಿತಿಯನ್ನು ಹುಡುಕಬಹುದಾಗಿದೆ. ಹಿಂದಿನ ಕಾಲದ ಮುದ್ರಿತ ವಿಶ್ವಕೋಶಗಳು ಅಥವಾ ಗ್ರಂಥಾಲಯಗಲಿಗೆ ಹೋಲಿಸಿದರೆ ಮಾಹಿತಿ ಮತ್ತು ಜ್ಞಾನದ ತೀವ್ರ ವಿಕೇಂದ್ರೀಕರಣಕ್ಕೆ ಇದು ದಾರಿ ಮಾಡಿಕೊಟ್ಟಿದೆ.

3. 2. ದೂರ ಸಂಪರ್ಕ

ಅಂತರ ಜಾಲದ ಮುಖಾಂತರ ಒಂದು ಕಂಪ್ಯೂಟರ್ ನ ಬಳಕೆದಾರರು ಪ್ರಪಂಚದ ಇನ್ನಾವುದೇ ಭಾಗದಲ್ಲಿರುವ ಇನ್ನಾವುದೇ ಕಂಪ್ಯೂಟರ್ ಗೆ ಸಂಪರ್ಕ ಏರ್ಪಡಿಸಿಕೊಳ್ಳಬಹುದಾಗಿದೆ. ಕೆಲವು ಕಂಪ್ಯೂಟರ್ ಗಳಿಗೆ ಸಂಪರ್ಕ ಕೊಡುವ ಮೊದಲು ಸುರಕ್ಷತೆ ಮತ್ತು ಸರಿಯಾದ ಪ್ರವೇಶಪದಗಳನ್ನು ಏರ್ಪಡಿಸಿಕೊಳ್ಳುವುದು ಸಾಮಾನ್ಯ.
ಇದರಿಂದಾಗಿ ನೀವು ಪ್ರಯಾಣ ಮಾಡುತ್ತಿರುವಾಗಲೂ ನಿಮ್ಮ ಕಛೇರಿಯಲ್ಲಿರುವ ಕಂಪ್ಯೂಟರ್ ಗೆ ಸಂಪರ್ಕವನ್ನೇರ್ಪಡಿಸಿಕೊಂಡು ನಿಮ್ಮ ಕೆಲಸವನ್ನು ಮುಂದುವರಿಸಬಹುದಾಗಿದೆ. ಮನೆಯಿಂದಲೇ ಕೆಲಸ ಮಾಡಬಯಸುವವರಿಗೆ ಹೊಸ ಹೊಸ ದಾರಿಗಳು ಸೃಷ್ಟಿಯಾಗಿವೆ. ಉದಾಹರಣೆಗೆ, ಅಕೌಂಟೆಂಟ್ ಒಬ್ಬರು ಮನೆಯಲ್ಲಿ ಕುಳಿತು ಬೇರಾವುದೋ ದೇಶದಲ್ಲಿರುವ ಕಂಪೆನಿಯ ಲೆಕ್ಕಪತ್ರಗಳ ಆಡಿಟ್ ಕೆಲಸವನ್ನು ಮಾಡಬಹುದಾಗಿದೆ.ಬಹಲ ಅನುಕುಲ ವಾಗಿದೆ.

3. 3. ಸಹಕಾರ

ಸುಲಭವಾಗಿ ಯೋಚನೆಗಳು, ಜ್ಞಾನ, ಮಾಹಿತಿ ಮೊದಲಾದವು ಒಂದು ಕಡೆಯಿಂದ ಇನ್ನೊಂದು ಕಡೆಗೆ ಹರಿಯುವಂತೆ ಅಂತರ ಜಾಲ ಅನುಕೂಲ ಮಾಡಿಕೊಟ್ಟಿದೆ. ಇದರಿಂದಾಗಿ ಅನೇಕ ಜನರು ಒಟ್ಟಾಗಿ ಮಾಡುವ ಸಹಕಾರಿ ಕೆಲಸಗಳನ್ನು ನಡೆಸಲು ಬಹಳ ಸುಲಭವಾಗಿದೆ. ಉದಾಹರಣೆಗೆ ವಿಕಿಪೀಡಿಯ ವಿಶ್ವಕೋಶ - ಹತ್ತಾರು ದೇಶಗಳಲ್ಲಿನ ಜನರು ಸಹಕರಿಸಿ ಉಂಟಾದ ವಿಶ್ವಕೋಶ ಇದು.
ಸಹಕಾರಿ ವ್ಯವಸ್ಥೆಯಲ್ಲಿ ವೃದ್ಧಿಪಡಿಸಿದ ತಂತ್ರಾಂಶಗಳಲ್ಲಿ ಅತಿ ಪ್ರಸಿದ್ಧ ತಂತ್ರಾಂಶಗಳಲ್ಲಿ ಒಂದು ಲಿನಕ್ಸ್ ಕಾರ್ಯಾಚರಣ ವ್ಯವಸ್ಥೆ. ಹಾಗೆಯೇ ವಿ-ಆರೋಗ್ಯ ಮೊದಲಾದ ಯೋಚನೆಗಳು ಸೃಷ್ಟಿಯಾಗಿವೆ - ಒಂದು ಆಸ್ಪತ್ರೆಯಲ್ಲಿ ಇರುವ ರೋಗಿಯೊಬ್ಬರಿಗೆ ಸ್ಕ್ಯಾನಿಂಗ್ ನಡೆಸುತ್ತಿದ್ದರೆ ಆ ಚಿತ್ರಗಳನ್ನು ತತ್-ಕ್ಷಣ ಅದನ್ನು ಬೇರೊಂದು ದೇಶದ ವೈದ್ಯರಿಗೆ ಕಳಿಸಿ ಅವರ ಅಭಿಪ್ರಾಯ ಪಡೆಯುವುದು ಕ್ಷಣಮಾತ್ರದ ಕೆಲಸ.

3. 4. ಫೈಲ್ ಶೇರಿಂಗ್

ಗಣಕಯಂತ್ರದಲ್ಲಿ ಇಡುವ ಫೈಲ್ ಗಳನ್ನು ಹಂಚಿಕೊಳ್ಳಲು ಅಂತರ ಜಾಲ ಅನೇಕ ವಿಧಾನಗಳನ್ನು ಕಲ್ಪಿಸಿಕೊಟ್ಟಿದೆ. ವಿ-ಅಂಚೆ, ಅಂತರ ಜಾಲ ತಾಣಗಲಲ್ಲಿ ಅಪ್ಲೋಡ್ ಮತ್ತು ಡೌನ್‍ಲೋಡ್, ಫೈಲ್ ಸರ್ವರ್ ಗಳ ಉಪಯೋಗ ಇತ್ಯಾದಿ ವಿಧಾನಗಳು. ಈ ಎಲ್ಲ ವಿಧಾನಗಳಲ್ಲಿಯೂ ಯಾರು ನಿಮ್ಮ ಫೈಲ್ ಗಳನ್ನು ನೋಡಬಹುದು/ಬಾರದು ಇತ್ಯಾದಿ ವಿಷಯಗಳ ಬಗ್ಗೆ ನಿಯಂತ್ರಣವನ್ನು ಏರ್ಪಡಿಸಬಹುದಾಗಿದೆ. ಕೆಲವೊಮ್ಮೆ ಈ ಅನುಕೂಲಕ್ಕಾಗಿ ಹಣದ ಪಾವತಿ ಅಗತ್ಯವಿದ್ದಲ್ಲಿ ಅದನ್ನು ಸಹ ಅಂತರ ಜಾಲದ ಮೂಲಕವೇ ಮಾಡಬಹುದು.
ಈ ರೀತಿಯ ಅನುಕೂಲಗಳು ಜನಜೀವನವನ್ನು ಆಳವಾಗಿ ಪ್ರಭಾವಿಸಿವೆ. ಯಾವುದೇ ಸಂಸ್ಥೆಯ ಉತ್ಪನ್ನಗಳ ಅಭಿವೃದ್ಧಿ, ಅವುಗಳ ಮಾರಾಟ/ಕೊಳ್ಳುವಿಕೆ, ಹಂಚುವಿಕೆ/ವಿತರಣೆ ಇತ್ಯಾದಿ ಎಲ್ಲ ಕ್ಷೇತ್ರಗಳಲ್ಲಿಯೂ ಅಂತರ ಜಾಲದ ಅಚ್ಚನ್ನು ಕಾಣಬಹುದಾಗಿದೆ.

3. 5. ಭಾಷೆ

ಅಂತರ ಜಾಲದಲ್ಲಿ ಎಲ್ಲಕ್ಕಿಂತ ಹೆಚ್ಚಾಗಿ ಬಳಸಲ್ಪಟ್ಟಿರುವ ಭಾಷೆ ಇಂಗ್ಲಿಷ್. ಅಂತರ ಜಾಲ ಇಂಗ್ಲಿಷ್ ಮಾತನಾಡಲ್ಪಡುವ ರಾಷ್ಟ್ರಗಳಲ್ಲಿ ಮೊದಲು ಉಗಮವಾದ್ದರಿಂದ ಮತ್ತು ಅಂತಾರಾಷ್ಟ್ರೀಯ ಸಂಪರ್ಕಗಳಲ್ಲಿ ಇಂಗ್ಲಿಷ್ ಭಾಷೆಗೆ ಪ್ರಾಧಾನ್ಯ ಇರುವುದರಿಂದ ಸ್ವಾಭಾವಿಕವಾಗಿ ಅಂತರ ಜಾಲದಲ್ಲಿ ಇಂಗ್ಲಿಷಿನ ಅಸ್ತಿತ್ವ ಹೆಚ್ಚು. ಇನ್ನೊಂದು ಕಾರಣವೆಂದರೆ ಸ್ವಲ್ಪ ವರ್ಷಗಳ ಹಿಂದೆ ಕಂಪ್ಯೂಟರ್ ಗಳು ಇಂಗ್ಲಿಷ್ ನ ಅಕ್ಷರಗಳನ್ನು ಮಾತ್ರ ಪ್ರತಿನಿಧಿಸಬಲ್ಲವಾಗಿದ್ದವು.
ಇತ್ತೀಚಿನ ವರ್ಷಗಳಲ್ಲಿ, ಅಂತರ ಜಾಲದ ಜನಪ್ರಿಯತೆ ಮತ್ತು ಉಪಯುಕ್ತತೆ ಹೆಚ್ಚಾದಂತೆ ಹಾಗೂ ಇತರ ಭಾಷೆಗಳಲ್ಲಿ ಕಂಪ್ಯೂಟರ್ ಗಳನ್ನು ಉಪಯೋಗಿಸುವ ಸೌಲಭ್ಯ ಬೆಳೆದಂತೆ ಅನೇಕ ಭಾಷೆಗಳು ಅಂತರ ಜಾಲದಲ್ಲಿ ಬೆಳೆಯುತ್ತಿವೆ.

4. ಪ್ರಸಕ್ತ ಮತ್ತು ಭವಿಷ್ಯದ ತೊಂದರೆಗಳು

ಅಂತರ ಜಾಲದಲ್ಲಿ ಹೀಗೆ ಅನೇಕ ಅನುಕೂಲಗಳಿದ್ದರೂ ನಕಾರಾತ್ಮಕವಾದ ಕೆಲವು ಗುಣಗಳು ಬೆಳಕಿಗೆ ಬಂದಿರುವುದೂ ಉಂಟು.

4. 1. ಮಕ್ಕಳ ಶೋಷಣೆ

ಮಕ್ಕಳ ಹಿತರಕ್ಷಣೆಗಾಗಿ ಇರುವ ಅನೇಕ ಸಂಸ್ಥೆಗಳ ಹೇಳಿಕೆಯಂತೆ, ಅಂತರ ಜಾಲ ಸಾರ್ವಜನಿಕರ ಉಪಯೋಗಕ್ಕೆ ಬಂದ ನಂತರ ಮಕ್ಕಳ ನಗ್ನಚಿತ್ರಗಳ ಹರಡಿಕೆ ಹತ್ತರಷ್ಟಾದರೂ ಹೆಚ್ಚಾಗಿದೆ. ಹಾಗೆಯೇ ಅಂತರ ಜಾಲ ಹರಟೆ ಮೊದಲಾದ ಸೌಲಭ್ಯಗಳು ಇರುವಲ್ಲಿ ಅನೇಕರು ಮಕ್ಕಳೊಂದಿಗೆ ಅಂತರ ಜಾಲದಲ್ಲಿ ಹರಟುತ್ತಾ ಅವರನ್ನು ನಂಬಿಸಿ ಭೇಟಿಗಾಗಿ ಏರ್ಪಾಟು ಮಾಡಿ ಆ ಮಕ್ಕಳನ್ನು ಲೈಂಗಿಕವಾಗಿ ಶೋಷಿಸಿದವರೂ ಇದ್ದಾರೆ.

4. 2. ಕೃತಿಸ್ವಾಮ್ಯ

ಫೈಲ್ ಗಳ ಹಂಚಿಕೆಗಾಗಿ ಅನೇಕ ತಂತ್ರಾಂಶಗಳು ಸೃಷ್ಟಿಯಾಗಿವೆ. ಇವುಗಳನ್ನು ಉಪಯೋಗಿಸಿ ತಮ್ಮ ಬಳಿ ಕೃತಿಸ್ವಾಮ್ಯತೆಯ ಹಕ್ಕುಗಳಿಲ್ಲದಿದ್ದರೂ ತಮ್ಮಲ್ಲಿರುವ ಫೈಲ್ ಗಳನ್ನು ಇತರರಿಗೆ ಹಂಚುವ ಹಾವಳಿ ಉಂಟಾಗಿದೆ. ಇದು ಆ ಫೈಲ್ ಗಳ ಕೃತಿಸ್ವಾಮ್ಯಗಳ ಬಾಧ್ಯತೆಗಳನ್ನು ಮೀರುತ್ತದೆ. ಕಾನೂನಿನ ಪ್ರಕಾರ ಇದು ಅಪರಾಧವಾಗಿದ್ದರೂ ಇದನ್ನು ಪತ್ತೆಹಚ್ಚುವುದು ಕಷ್ಟವಾಗಿರುವುದರಿಂದ ಈ ಹಾವಳಿ ಮುಂದೆ ಸಾಗುತ್ತಿದೆ.

4. 3. ವೈರಸ್

ಅಂತರ ಜಾಲದಲ್ಲಿ ಸಹಸ್ರಾರು ಗಣಕಗಳು ಒಂದಕ್ಕೊಂದು ಸಂಪರ್ಕ ಹೊಂದಿರುವುದರಿಂದ ಒಂದು ಕಂಪ್ಯೂಟರ್ ನಲ್ಲಿರುವ ವೈರಸ್ ಇತರ ಕಂಪ್ಯೂಟರ್ ಗಳಿಗೆ ಹರಡುವುದು ಅತಿ ಸುಲಭ. ಇದರಿಂದ ಕೆಲವೊಮ್ಮೆ ಅನೇಕ ಕಂಪ್ಯೂಟರ್ ಗಳಿಗೆ ಏಕಕಾಲದಲ್ಲಿ ತೊಂದರೆಯಾಗುವುದುಂಟು.

4. 4. ಮಾಹಿತಿ ಸುರಕ್ಷತೆ

ಅಂತರ ಜಾಲಕ್ಕೆ ಸಂಪರ್ಕಿತವಾಗಿರುವ ಕಂಪ್ಯೂಟರ್ ನಲ್ಲಿರುವ ಮಾಹಿತಿಯನ್ನು ಕದಿಯುವುದು ಸಹ ನಡೆಯುತ್ತದೆ. ಕೆಲವೊಮ್ಮೆ ಕ್ರೆಡಿಟ್ ಕಾರ್ಡ್ ಸಂಖ್ಯೆಗಳು ಮೊದಲಾದ ಅತಿ ಮುಖ್ಯ ಮಾಹಿತಿಯನ್ನು ಇತರರು ಕದಿಯುವ ಅಪಾಯ ಉಂಟಾಗಿದೆ. ಕಂಪ್ಯೂಟರ್ ನಲ್ಲಿರುವ ಮಾಹಿತಿಯನ್ನು ಸುರಕ್ಷಿತವಾಗಿರಿಸಲು ಅನೇಕ ತಂತ್ರಾಂಶಗಳಿದ್ದಾಗ್ಯೂ ಅವುಗಳು ಅನುಸ್ಥಾಪಿತವಾಗಿಲ್ಲದ ಕಂಪ್ಯೂಟರ್ ಗಳಲ್ಲಿನ ಮಾಹಿತಿಯ ಚೌರ್ಯ ಸುಲಭವಾಗಿ ನಡೆಸಬಹುದು.

4. 5. ಸಾಂಸ್ಕೃತಿಕ ತೊಂದರೆಗಳು

ಅಂತರ ಜಾಲದಲ್ಲಿ ಮಾಹಿತಿಯ ಹರಡುವಿಕೆ ಸುಲಭವಾದ್ದರಿಂದ ಸಮಾಜಕ್ಕೆ ಹಾನಿಕಾರಕ ಎಂದು ಪರಿಗಣಿತವಾಗಬಹುದಾದ ಸಂಸ್ಕಾರಗಳು ಸಹ ಸುಲಭವಾಗಿ ಹರಡಬಲ್ಲವು. ವಾಕ್-ಸ್ವಾತಂತ್ರ್ಯದ ದೃಷ್ಟಿಯಿಂದ ಇದನ್ನು ಸಮರ್ಥಿಸಬಹುದಾದರೂ ಕೆಲವೊಮ್ಮೆ ಹಿಂಸಾಚಾರದ, ಇನ್ನೂ ಅಪಾಯಕಾರಿಯಾದ ಆತ್ಮಹತ್ಯಾ ಮನೋಭಾವದ ಜನರು ಸಹ ಒಬ್ಬರನ್ನೊಬ್ಬರು ಸಂಪರ್ಕಿಸಿ, ಪ್ರೋತ್ಸಾಹಿಸಿ ಈ ಮನೋಭಾವಗಳು ಇನ್ನೂ ವೇಗವಾಗಿ ಹರಡುವುದೂ ಸಾಧ್ಯ (ಉದಾಹರಣೆಯಾಗಿ ಅನೇಕ ಭಯೋತ್ಪಾದಕ ಅಂತರ ಜಾಲ ತಾಣಗಳು).2 ಕಾಮೆಂಟ್‌ಗಳು: