ಸೋಮವಾರ, ಜುಲೈ 5, 2010

ಮಳೆಗಾಲ!

ಅಬ್ಬಾ! ಈ ಕಾಲ ಆರಂಭ ವಾಯಿತೆಂದರೆ
ಮೈ ಮನಗಳ ಸುಳಿಯಲ್ಲಿ
ಹುದುಗಿರುವ ಶಾಶ್ವತ ನೆನಪುಗಳ ಜಲಧಾರೆ!

ಮಳೆ ಬರುವ ಚೆಂದವ ತೋರಿ
ಬಾಯಿಗೆ ಅನ್ನ ತುರುಕುತಿದ್ದ ಅಮ್ಮನ ತಾಳ್ಮೆ ನೆನಪಿದೆ
ಮುಂಗಾರು ಮಳೆಯಲಿ ನೆನೆದ ಹಸಿ ಕೆನ್ನೆಗೆ
ಬಿಸಿ ಮುತ್ತು ಕೊಟ್ಟ ನಲ್ಲೆಯ ಪ್ರೀತಿಯ ಜಾಣ್ಮೆ ನೆನಪಿದೆ
ತನ್ನ ಮೊಮ್ಮಗು ಎಲ್ಲಿ ನೆನೆವುದೋ ಎಂಬ ಆತಂಕದೊಂದಿಗೆ
ಅಜ್ಜಿ ಕೊಡೆ ಹಿಡಿದು ಶಾಲೆಗೆ ನುಗ್ಗಿದ ದಿನಗಳು ಎಷ್ಟಿಲ್ಲ!


ಮುಂಗಾರು ಮಳೆ ಜೊತೆ ಜೊತೆಗೇ ಪಟ ಪಟನೆ
ಬೀಳುತಿದ್ದ ಆಲಿಕಲ್ಲುಗಳ ನೆನಪಿದೆಯೇ?
ಆ ಕಲ್ಲುಗಳ ಆಯ್ದು ಕೊಂಡು ನುಂಗಿದ ನೆನಪು ಮಾಸಿಲ್ಲ ತಾನೇ?
ಅಡಿಯಿಂದ ಮು ಡಿ ವರೆಗೂ ಮಳೆಯಲ್ಲಿ ನೆನೆದ ತಪ್ಪಿಗೆ
ಶಿಕ್ಷೆಯಂತೆ ಬರುತಿದ್ದ ನೆಗಡಿಗಳಿಗೆ ಬರವಿತ್ತೇ?!



ಬಸವಳಿದ ಧರೆ ಬಿಸಿಲ ತಾಪ ತಾಳದೇ ಬಿರುಕು ಬಿಟ್ಟ ಕಾಲದಲ್ಲಿ
ಧೋ ಎಂದು ಸುರಿವ ಮಳೆಗೆ ಭೂತಾಯಿಯ ತಂಪು ಮಾಡುವ ಕೆಲಸವಾದರೆ
ಹುರುಪುಗೊಂಡ ಗಾಳಿಗೆ ಮಣ್ಣಿನ ವಾಸನೆ ಊರ ತುಂಬಾ ಪಸರಿಸುವ ಕೆಲಸ
ಆಗಾಗ ಕಾರ್ಮೋಡ ಗಳ ಮಧ್ಯೆ ಬಿಸಿಲ ಸಂಚಾರ
ಫಲವಾಗಿ ಮೂಡುತಿತ್ತು ಕಾಮನಬಿಲ್ಲಿನ ಚಿತ್ತಾರ!


ಮಳೆ ಬಿದ್ದ ಮಾರನೆಯ ಬೆಳಿಗ್ಗೆಯ ಅನುಭವವೇ ಬೇರೆ
ಮನೆಯಂಗಳದ ಗುಲಾಬಿ ಗಿಡದ ಮೇಲೆ
ರಾಶಿ ರಾಶಿ ಇಬ್ಬನಿ ಹನಿಗಳ ಮಾಲೆ
ಜೋಕಾಲಿ ಹಾಡುತ ಆಗಲೋ ಈಗಲೋ ಉದುರಿಬಿಡುವ
ಇಬ್ಬನಿ ಹನಿಗಳ ಸೊಗಸೇ ಸೊಗಸು
ಕೆಂಪು ಗುಲಾಬಿಯಮೇಲೆ ಕೆಂಪು
ಹನಿಯಂತಾಗುವ ಭಾಗ್ಯ ಇಬ್ಬನಿಯದು
ಅಲ್ಪ ಕಾಲವಾದರೂ ತನ್ನ ಸೌಂದರ್ಯವ ಹೆಚ್ಚಿಸಿದ
ಮಳೆರಾಯನಿಗೆ ಗುಲಾಬಿ ವಂದನೆ ಹೇಳಿದಂತೆ ತಲೆ ಬಾಗಿಹುದು

ಇಂಥ ಅನೇಕ ಪವಾಡ ಮಾಡುವ ಮಳೆಗಾಲದು ಎಂಥ ಮರ್ಮ?
ಅದಕ್ಕೆ ಉಳಿದೆಲ್ಲ ಕಾಲಕ್ಕಿಂತ ಈ ಕಾಲ ಚೆನ್ನ ಎನಿಸುವುದು ಅತಿಶಯೋಕ್ತಿ ಅಲ್ಲ
ಕಾಲ ಉರುಳಿ ಕಾಲ ಮರಳಿ ಬರುವುದು ಪ್ರಕೃತಿ ಧರ್ಮ
ಮಳೆ ಬಂದು ಹೋಗುವ ಈ ಪರಿಯ ಕಂಡು ಮನಸು ಹೂವಂತಾಗಿರುವುದು ಸುಳ್ಳಲ್ಲ!
ಬಿ.ಅಬ್ದುಲ್ ಮಜೀದ್ (ಬಾಳಾಯ)ತಿಂಗಳಾಡಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ