ಭಾನುವಾರ, ಡಿಸೆಂಬರ್ 25, 2011

ಎರಡನೆ ವರ್ಷದ ಸಂಭ್ರಮದಲ್ಲಿ


ಈ ಡಿಸೆಂಬರ್ 16-12-2011ರ [ಎರಡು ವರ್ಷ] ದ ಹೊತ್ತಿಗೆ ಸರಿಯಾಗಿ ನನ್ನ ಕರ್ನಾಟಕಪರಂಪರೆ  ಬ್ಲಾಗ್ ವಿಶ್ವದಾದ್ಯಂತ "23000+" ಬಾರಿ ತೆರೆದುಕೊಂಡಿದೆ.
ಕರ್ನಾಟಕಪರಂಪರೆ ಬ್ಲಾಗ್‍ನಿಂದಾಗಿ ವಿಶ್ವದಾದ್ಯಂತ ಗೆಳೆಯರು ಸಿಕ್ಕಿದ್ದಾರೆ. ಸಾವಿರಾರು ಮೈಲುಗಳಷ್ಟು ದೂರದಲ್ಲಿರುವ ಗೆಳೆಯರು ಕೈಬೆರಳುಗಳ ತುದಿಗಳು ಕೀಬೋರ್ಡ್ ಒತ್ತುತ್ತಿದ್ದಂತೆ ಸಿಕ್ಕಿಬಿಡುತ್ತಾರೆ. ಜೊತೆಗೆ .................
ಲೈಫು ಇಷ್ಟೇನೆ.. ಅಂತ ಸುಸ್ತಾಗಿ ನಮ್ಮ ಗೂಡಲ್ಲಿ ಅಡಗಿಕೊಳ್ಳಲು ತಯಾರಾಗುವಾಗ ಅದರಿಂದ ಹೊರಗೆ ಎಳೆಯಲು ಎಷ್ಟೊಂದು ಕಾರ್ಯಕ್ರಮಗಳು. ಕೆಲಸ ಕಾರ್ಯಗಳು ಜೊತೆಗೆ ಸಮಾಜ ಸೇವೆ, ರಾಜಕೀಯ, ಪರಿಸರ ಮತ್ತು ವನ್ಯಜೀವಿಗಳ ಬಗ್ಗೆ ಆಸಕ್ತಿ,  ಆರ್ಟ್ ಎಗ್ಸಿಬಿಶನ್, ತಿಳದಿದ್ದು, ತಿಳಿಯದಿದ್ದು, ಗೊತ್ತಿಲ್ಲದೆ ಇರುವಂತದ್ದು ಇಂತಹದರ ಜೊತೆ ಸಿಕ್ಕಾ ಪಟ್ಟೆ ಮಾತು, ಜೊತೆಗೆ ಒಂದಿಷ್ಟು ಗಾಢ ಮೌನ, ನಾಟಕದ ಷೋ  ಅಂದ್ರೆ ಹರಟೆ ಹೊಡೆಯಲು ಸಾಕಷ್ಟು ಗೆಳೆಯರು.........
ಏನೆಲ್ಲಾ…
ಹುಟ್ಟಿದ್ದು ಗಡಿನಾಡ ಹಳ್ಳಿಯಲ್ಲಿ, ಓದಿದ್ದು ಅಲ್ಪ ಆದರೆ ತೀಳದುಕೊಂಡಿದ್ದು ಸಿಕ್ಕಾಪಟ್ಟೆ ಯಾವುದೋ ಕೆಲಸ ಮಾಡಲು ಹೋಗಿ ಮತ್ಯಾವುದೋ ಕೆಲಸ ಮಾಡಿ ವೃತ್ತಿ ಜೀವನವೆಂಬ ಯಾಂತ್ರಿಕ ಜೀವನದಲ್ಲಿ ಮುಳುಗಿ, ತೇಲಿ ಕಡೆಯದೇನೋ ಎಂಬಂತೆ ಮಲ್ಟಿಮೀಡಿಯಾ ಎಂಬ ನಾಮದೇಯ, ಗೊತ್ತು ಗುರಿ ಇಲ್ಲದ ವೃತ್ತಿ ಜೀವನ ಆರಂಭ. ಜೀವನದಲ್ಲಿ ಎಸ್ಟೊಂದು ಕೆಲಸಗಳು ಅಬ್ಬಾ ನೆನೆದರೆ ಅದ್ಬುತವೇನೂ ಎಂಬ ಜೀವನ ಹೇಳುತ್ತಿದ್ದರೆ ಮುಗಿಯದ ಕಥೆ..............................
ಹಾಗಾಗಿ ‘ಕರ್ನಾಟಕಪರಂಪರೆ  ಬ್ಲಾಗ್’ ಏನೇನಾಗುತ್ತೆ? ಇಲ್ಲಿ ಏನು ಸಿಗುತ್ತೆ  ಅನ್ನೋ ಲಿಸ್ಟ್ ಇಲ್ಲಿ ಸಿಗುತ್ತೆ, ಬೇರೆ ವೃತ್ತಿಗಳ ವಿಚಾರಗಳ ಬಗ್ಗೆ ಮಾಹಿತಿ ಹಾಗೂ ಆಹ್ವಾನಗಳೂ ಇಲ್ಲಿರುತ್ತೆ. ಅಷ್ಟೇ ಅಲ್ಲ, ಬೇಕಾದ, ಬೇಡದ ವಿಚಾರಗೂ ಇಲ್ಲಿರುತ್ತೆ.
ಹಾಗಾಗಿ ,
ದಯವಿಟ್ಟು ತಪ್ಪದೇ ಬನ್ನಿ. 

ವೆಬ್ ಲೋಕದಲ್ಲಿ ಇಷ್ಟಪಟ್ಟು ಬರೆದುದನ್ನು ಅಷ್ಟೇ ಖುಷಿಯಿಂದ ಓದಿ ಪ್ರೋತ್ಸಾಹಿಸುವ ನಿಮ್ಮಂಥ ಬ್ಲಾಗ್ ಗೆಳೆಯರು.
 ಅದಕ್ಕೆ ನನ್ನ ದೊಡ್ಡ ನಮನಗಳು.

ಶನಿವಾರ, ಮೇ 28, 2011

ಕರ್ನಾಟಕದಲ್ಲಿ ಎಷ್ಟು ಜಿಲ್ಲೆ ಇದೆ

ಇದೇನೂ ದೊಡ್ಡ ಸಂಗತಿ, ನಮ್ ಕರ್ನಾಟಕದಲ್ಲಿ ಎಷ್ಟು ಜಿಲ್ಲೆಗಳಿವೆ ಅಂತ ನಮಗೆ ಗೊತ್ತಿಲ್ವ ಅಂತ ಗುರಾಯಿಸಬೇಡಿ. ನಿಮ್ಮ ಪಕ್ಕದಲ್ಲಿರುವರನ್ನು ಒಂದಿಬ್ಬರನ್ನು ಕೇಳಿ ನೋಡಿ. ಖಂಡಿತಾ ಒಬ್ಬರೊಬ್ಬರದ್ದು ಒಂದೊಂದು ಉತ್ತರ. ಕೆಲವರು ಇಪ್ಪತ್ತಾರರಿಂದ ಸುರು ಮಾಡುತ್ತಾರೆ.

ಹೆಚ್ಚಿನವರಿಗೆ ನಮ್ಮ ಕರ್ನಾಟಕದಲ್ಲಿ 30 ಜಿಲ್ಲೆಗಳಿವೆ ಎಂದು ಗೊತ್ತಿಲ್ಲ. ಯಾವೆಲ್ಲ ಜಿಲ್ಲೆಗಳಿವೆ ಅಂತ ಕೇಳಿದರೆ ಗೋವಿಂದ. ತನ್ನ ಊರಿನ ಆಸುಪಾಸು ಮತ್ತು ಕೆಲಸ ಮಾಡುವ ಪ್ರದೇಶದ ಆಸುಪಾಸಿನ ಜಿಲ್ಲೆಗಳನ್ನು ಹೇಳುತ್ತಾರೆ. ಹೀಗೆ ಹೇಳುತ್ತ ಹೋದಂತೆ ಸಂಖ್ಯೆ 20 ದಾಟಿಸಲು ಕಷ್ಟಪಡುತ್ತಾರೆ. ಕೆಲವು ಹೆಸರುಗಳು ಗಂಟಲಿನಲ್ಲಿಯೇ ಸಿಕ್ಕಿ ಹಾಕಿಕೊಳ್ಳುತ್ತವೆ.

ಗೊತ್ತಿಲ್ಲದವರು, ಅರ್ಧ ಗೊತ್ತಿರುವರು ದಯವಿಟ್ಟು ಮುಂದೆ ಓದಿಕೊಳ್ಳಿ. ಯಾರಾದ್ರೂ, ಯಾವತ್ತಾದ್ರೂ ಕೇಳಿದ್ರೆ ಪಟಪಟನೆ ಹೇಳುತ್ತ ಹೋಗಿರಿ. ಕರ್ನಾಟಕದ ಆಡಳಿತ ಸುಲಭಗೊಳಿಸಲು ಒಟ್ಟು ನಾಲ್ಕು ವಿಭಾಗಗಳಾಗಿ 30 ಜಿಲ್ಲೆಗಳನ್ನು ವಿಂಗಡಿಸಲಾಗಿದೆ.

ಬೆಂಗಳೂರು ವಿಭಾಗ: ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಶಿವಮೊಗ್ಗ, ತುಮಕೂರು, ಚಿಕ್ಕಬಳ್ಳಾಪುರ, ರಾಮನಗರ.

ಬೆಳಗಾವಿ ವಿಭಾಗ: ಬಾಗಲಕೋಟೆ, ಬೆಳಗಾವಿ, ಬಿಜಾಪುರ, ಧಾರವಾಡ, ಗದಗ, ಹಾವೇರಿ, ಉತ್ತರ ಕನ್ನಡ

ಗುಲ್ಬರ್ಗ ವಿಭಾಗ: ಬಳ್ಳಾರಿ, ಬೀದರ್, ಗುಲ್ಬರ್ಗ, ಕೊಪ್ಪಳ, ರಾಯಚೂರು, ಯಾದಗಿರಿ

ಮೈಸೂರು ವಿಭಾಗ: ಚಾಮರಾಜನಗರ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ, ಹಾಸನ, ಕೊಡಗು, ಮಂಡ್ಯ, ಮೈಸೂರು

ಛೀ ನಮ್ ಕರ್ನಾಟಕದಲ್ಲಿ ಎಷ್ಟು ಜಿಲ್ಲೆಗಳಿವೆ, ಯಾವೆಲ್ಲ ಜಿಲ್ಲೆಗಳಿವೆ ಅಂತ ಕನ್ನಡಿಗಾರದ ನಮಗೆ ಗೊತ್ತಿಲ್ಲದಿದ್ದರೆ ನಾಚಿಕೆಗೇಡು ಅಲ್ವೆ. ಯಾವೆಲ್ಲ ಜಿಲ್ಲೆಗಳಿವೆ ಅಂತ ಮರೆತು ಹೋದ್ರೆ ಮತ್ತೆ ಓದಿಕೊಳ್ಳಿ. ಜೈ ಕರ್ನಾಟಕ.
krupe:http://thatskannada.oneindia.in

ಭಾನುವಾರ, ಏಪ್ರಿಲ್ 17, 2011

ನಮ್ಮ ಕರ್ನಾಟಕ

ಕರ್ನಾಟಕ ಭಾರತದ ನಾಲ್ಕು ಪ್ರಮುಖ ದಾಕ್ಷಿಣಾತ್ಯ ರಾಜ್ಯಗಳಲ್ಲಿ ಒಂದು. ೧೯೭೩ ಕ್ಕೆ ಮೊದಲು ಕರ್ನಾಟಕದ ಹೆಸರು "ಮೈಸೂರು ರಾಜ್ಯ" ಎಂದಿದ್ದಿತು. ಇದಕ್ಕೆ ಕಾರಣ ಕರ್ನಾಟಕದ ಮೊದಲ ಸೃಷ್ಟಿ ಮೈಸೂರು ಸಂಸ್ಥಾನವನ್ನು ಆಧರಿಸಿದ್ದು (೧೯೫೦ ರಲ್ಲಿ). ೧೯೫೬ ರಲ್ಲಿ ಸುತ್ತಮುತ್ತಲ ರಾಜ್ಯಗಳ ಕನ್ನಡ ಪ್ರಧಾನ ಪ್ರದೇಶಗಳನ್ನು ಸೇರಿಸಲಾಯಿತು."ಕರ್ನಾಟಕ" ಎಂಬ ಹೆಸರಿಗೆ ಅನೇಕ ವ್ಯುತ್ಪತ್ತಿಗಳು ಪ್ರತಿಪಾದಿಸಲ್ಪಟ್ಟಿವೆ. ಎಲ್ಲಕ್ಕಿಂತ ಹೆಚ್ಚಾಗಿ ಒಪ್ಪಲ್ಪಟ್ಟಿರುವ ವ್ಯುತ್ಪತ್ತಿ ಎಂದರೆ ಕರ್ನಾಟಕ ಎಂಬುದು "ಕರು+ನಾಡು" ಎಂಬುದರಿಂದ ವ್ಯುತ್ಪತ್ತಿಯನ್ನು ಪಡೆದಿದೆ. ಕರು ನಾಡು ಎಂದರೆ "ಎತ್ತರದ ಪ್ರದೇಶ" ಎಂದು ಅರ್ಥ. ಕರ್ನಾಟಕ ರಾಜ್ಯದ ಸಮುದ್ರ ಮಟ್ಟದಿಂದ ಸರಾಸರಿ ಎತ್ತರ ೧೫೦೦ ಅಡಿ ಇದ್ದು ಇದು ಭಾರತದಲ್ಲಿ ಅತಿ ಹೆಚ್ಚಿನ ಸರಾಸರಿ ಎತ್ತರವುಳ್ಳ ರಾಜ್ಯಗಳಲ್ಲಿ ಒಂದು.ಕರ್ನಾಟಕದ ಪಶ್ಚಿಮಕ್ಕೆ ಅರಬ್ಬೀ ಸಮುದ್ರ, ವಾಯವ್ಯಕ್ಕೆ ಗೋವ ರಾಜ್ಯ, ಉತ್ತರಕ್ಕೆ ಮಹಾರಾಷ್ಟ್ರ, ಪೂರ್ವಕ್ಕೆ ಆಂಧ್ರ ಪ್ರದೇಶ ಆಗ್ನೇಯಕ್ಕೆ ತಮಿಳುನಾಡು ಮತ್ತು ನೈರುತ್ಯಕ್ಕೆ ಕೇರಳ ರಾಜ್ಯಗಳಿವೆ.ರಾಜ್ಯದಲ್ಲಿ ಮೂರು ಮುಖ್ಯ ಭೌಗೋಳಿಕ ಪ್ರದೇಶಗಳಿವೆ:ಕರಾವಳಿ ಪ್ರದೇಶ - ಪಶ್ಚಿಮ ಘಟ್ಟಗಳು ಮತ್ತು ಅರಬ್ಬೀ ಸಮುದ್ರದ ನಡುವೆ ಇರುವ ತಗ್ಗಿನ ಪ್ರದೇಶ, ಸಾಕಷ್ಟು ಮಳೆ ಪಡೆಯುತ್ತದೆ.ಪಶ್ಚಿಮ ಘಟ್ಟಗಳು - ಅರಬ್ಬೀ ಸಮುದ್ರದ ತೀರದೊಂದಿಗೆ ಸಾಗುವ ಪರ್ವತ ಸರಣಿ, ಸರಾಸರಿ ಸಮುದ್ರ ಮಟ್ಟದಿಂದ ೯೦೦ ಮೀ ಎತ್ತರದಲ್ಲಿದೆ. ಇಲ್ಲೂ ಸಹ ಸಾಕಷ್ಟು ಮಳೆ ಆಗುತ್ತದೆ.ಬಯಲು ಸೀಮೆ - ದಖನ್ ಪ್ರಸ್ಥಭೂಮಿ, ರಾಜ್ಯದ ಒಳನಾಡು, ಮಳೆ ಕಡಿಮೆ ಇರುವ ಪ್ರದೇಶ ೨೦೦೧ ರ ಜನಗಣತಿಯಂತೆ, ೫ ಕೋಟಿಗೂ ಹೆಚ್ಚು ಜನಸಂಖ್ಯೆ ಇರುವ ಹತ್ತು ಭಾರತೀಯ ರಾಜ್ಯಗಳಲ್ಲಿ ಕರ್ನಾಟಕವೂ ಒಂದು. ಕರ್ನಾಟಕ ರಾಜ್ಯದಲ್ಲಿ ರಾಜಧಾನಿಯಾದ ಬೆಂಗಳೂರು ಮಾತ್ರ ೧೦ ಲಕ್ಷಕ್ಕಿಂತ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿದ ನಗರ. ಇತರ ಪ್ರಮುಖ ನಗರಗಳೆಂದರೆ ಮೈಸೂರು,ಹುಬ್ಬಳ್ಳಿ-ಧಾರವಾಡ, ಮಂಗಳೂರು, ದಾವಣಗೆರೆ, ಬಳ್ಳಾರಿ, ಮತ್ತು ಬೆಳಗಾವಿ.ಭಾರತದ ಚಿನ್ನದ ಉತ್ಪಾದನೆಯ ಶೇ. ೯೦ ಕ್ಕೂ ಹೆಚ್ಚು ಕರ್ನಾಟಕದಲ್ಲಿ ನಡೆಯುತ್ತದೆ.
ಕರ್ನಾಟಕದ ಜನಸಂಖ್ಯೆ ಈ ಒಂದು ದಶಕದಲ್ಲಿ (2001ರ ಜನಗಣತಿಯಿಂದೀಚೆಗೆ) 83 ಲಕ್ಷ ಹೆಚ್ಚಳ ಕಂಡು, 6.11 ಕೋಟಿಗೆ ತಲುಪಿದೆ. ಇದರೊಂದಿಗೆ ಅತೀ ಹೆಚ್ಚು ಜನಸಂಖ್ಯೆಯುಳ್ಳ ರಾಜ್ಯಗಳಲ್ಲಿ ಕರ್ನಾಟಕವು 9ನೇ ಸ್ಥಾನ ಪಡೆದಿದೆ.

2001ರ ಜನಗಣತಿಯಲ್ಲಿ ರಾಜ್ಯದ ಜನ ಸಂಖ್ಯೆಯು 5.28 ಲಕ್ಷ ಇತ್ತು. ಈ ಹತ್ತು ದಶಗಳಲ್ಲಿ ಜನಸಂಖ್ಯೆಯ ವೃದ್ಧಿಯ ದರವು ಕೂಡ ಶೇ.2ರಷ್ಟು ಕುಸಿತ ಕಂಡಿದೆಯಾದರೂ, ಲಿಂಗಾನುಪಾತದ ಪ್ರಮಾಣ ಏರಿಕೆಯಾಗಿದೆ. ಅಂದರೆ ಸಾವಿರ ಪುರುಷರಿಗೆ ಅನುಗುಣವಾಗಿ 968 ಮಹಿಳೆಯರ ಸಂಖ್ಯೆಯಿದೆ.

ಸಾಕ್ಷರತಾ ಪ್ರಮಾಣವು ಕೂಡ ಶೇ.66ರಿಂದ ಶೇ.75ಕ್ಕೆ ಏರಿಕೆಯಾಗಿದ್ದು ವಿಶೇಷ. ಅವರಲ್ಲಿಯೂ ಶೇ. 82ರಷ್ಟು ಪುರುಷರು ಸಾಕ್ಷರರಾಗಿದ್ದರೆ, ಶೇ.68ರಷ್ಟು ಮಹಿಳೆಯರು ಅಕ್ಷರಸ್ಥರಾಗಿದ್ದಾರೆ. ಇಲ್ಲೂ ಲಿಂಗ ತಾರತಮ್ಯ ಇನ್ನೂ ಎದ್ದು ಕಾಣುತ್ತಿದೆ.

ಬುಧವಾರ, ಜನವರಿ 5, 2011

(ಕ್ಷಮಿಸಿ) ವಿಶ್ವೇಶ್ವರ ಭಟ್ ಬ್ಲಾಗಿಗೆ ದಾರಿ

ಕನ್ನಡ ಪತ್ರಕರ್ತ, ಲೇಖಕ ಮತ್ತು ಲೋಕ ಪ್ರಸಿದ್ಧ ವಿಜಯ ಕರ್ನಾಟಕದ ವಿಶ್ವ ಪ್ರಸಿದ್ಧ ವಿಶ್ವೇಶ್ವರ ಭಟ್ ಅವರು ಅಂತರಜಾಲ ಕಕ್ಷೆಗೆ ತಮ್ಮನ್ನು ತಾವು ಉಡಾಯಿಸಿಕೊಂಡಿದ್ದಾರೆ. ಅವರದೇ ನಾಮಾಂಕಿತ, "ವಿಶ್ವೇಶ್ವರ ಭಟ್" ವೆಬ್ ಸೈಟು ಆರಂಭವಾಗಿದ್ದು ಕಳೆದ ಮೂರು ದಿನಗಳಿಂದ ಸೈಟು ಸೈಬರ್ ಗಲ್ಲಿಗಳಲ್ಲಿ ಗಿರಗಿರಗಿರ ತಿರುಗಲಾರಂಭಿಸಿದೆ.

ಅನೇಕ ಪತ್ರಕರ್ತರು ತಮ್ಮದೇ ಆದ ವೆಬ್ ಸೈಟು ಇಟ್ಟುಕೊಂಡಿದ್ದಾರೆ. ಆದರೆ, ಭಟ್ಟರ ವೆಬ್ ಸೈಟು ತೆರೆದಿರುವುದು ಸುದ್ದಿ ಆಗುತ್ತಿರುವುದು ಏಕೆ ಎಂದು ತಾವು ಕೇಳುವ ಮುನ್ನ, ವೆಬ್ ಸೈಟಿನಲ್ಲಿ ಭಟ್ಟರು ಅವರ ಬಗ್ಗೆ ಅವರೇ ಬರೆದುಕೊಂಡಿರುವ ಅವರ ಪರಿಚಯವನ್ನು ಮೊದಲು ಓದಿಕೊಳ್ಳಿ. ಅದು ಹೀಗಿದೆ.
ವಿಶ್ವೇಶ್ವರ ಭಟ್ ಉತ್ತರ ಕನ್ನಡದ ಕುಮುಟಾದ ಮೂರೂರಿನವರು. ಓದಿದ್ದು ಎಂ.ಎಸ್.ಸಿ ಹಾಗು ಎಮ್.ಎ. ನಾಲ್ಕು ಚಿನ್ನದ ಪದಕದ ವಿಜೇತ. ಇಂಗ್ಲೆಂಡಿನಲ್ಲಿ ಪತ್ರಿಕೋದ್ಯಮದಲ್ಲಿ ಉನ್ನತ ವ್ಯಾಸಂಗ. ಸಂಯುಕ್ತ ಕರ್ನಾಟಕ, ಕನ್ನಡಪ್ರಭದಲ್ಲಿ ಉಪಸಂಪಾದಕ. ಏಷ್ಯನ್ ಕಾಲೇಜ್ ಆಫ್ ಜರ್ನಲಿಸಮ್ ನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್. ಕೇಂದ್ರ ಪ್ರವಾಸೋದ್ಯಮ ಹಾಗೂ ಸಂಸ್ಕೃತಿ ಖಾತೆ ಸಚಿವರಿಗೆ ವಿಶೇಷ ಕರ್ತವ್ಯ ಅಧಿಕಾರಿ. 48 ಪುಸ್ತಕಗಳ ಲೇಖಕ.

ಕನ್ನಡದ ಜನಪ್ರಿಯ ದೈನಿಕ ‘ವಿಜಯ ಕರ್ನಾಟಕ’ದ ಮಾಜಿ ಪ್ರಧಾನ ಸಂಪಾದಕ. ಸೃಜನಶೀಲ ಬರಹಗಾರ, ಅಂಕಣಕಾರ. ‘ನೂರೆಂಟು ಮಾತು, ಜನಗಳ ಮನ ಹಾಗೂ ಸುದ್ದಿಮನೆ ಕತೆ’ ಜನಪ್ರಿಯ ಅಂಕಣಗಳು. ಇಪ್ಪತ್ತೈದಕ್ಕೂ ಅಧಿಕ ದೇಶ ಸುತ್ತಿದ ಅನುಭವ. 2005 ಸುವರ್ಣ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳಿಗೆ ಪಾತ್ರ. ರಾಷ್ಟ್ರಪತಿ ಡಾ. ಅಬ್ದುಲ್ ಕಲಾಂ ಜೊತೆ ಹದಿನೈದು ದಿನ ನಾಲ್ಕು ದೇಶಗಳಲ್ಲಿ ಪಯಣ.
ಈ ಮಾರ್ಗವಾಗಿ ನೀವು ವಿಶ್ವೇಶ್ವರಭಟ್ಟರ ವಿಭಟ್ ಡಾಟ್ ಇನ್ ವೆಬ್ ಸೈಟಿಗೆ ಪ್ರವಾಸ ಕೈಗೊಳ್ಳಬಹುದು.
 
(ಕ್ಷಮಿಸಿ) ಏಕೆಂದರೆ ನಾನು ನನ್ನ ಬ್ಲಾಗನ್ನು ಮುಂದುವರೆಸಬಾರದೆಂಬ ಷರತ್ತನ್ನು ಮೀರಿ. ನನ್ನ ನೆಚ್ಚಿನ  ಕನ್ನಡದ ಜನಪ್ರಿಯ ದೈನಿಕ ‘ವಿಜಯ ಕರ್ನಾಟಕ’ದ ಮಾಜಿ ಪ್ರಧಾನ ಸಂಪಾದಕರಾದ ವಿಶ್ವೇಶ್ವರ ಭಟ್ ರವರು ವೆಬ್ ಸೈಟನ್ನು ಆರಂಭಿಸಿರುವುದು ತಿಳಿದು ತುಂಬಾ ಖುಷಿಯಾಯಿತು ಹಾಗೂ ಕಳೆದುಹೋದ ವಸ್ತುವೊಂದು ನಿಧಿ ರೂಪದಂತೆ ಸಿಕ್ಕ ಸಂತೋಷವನ್ನು ನನ್ನ ಬ್ಗಾಗಿನ ಓದುಗರಾದ  ತಮ್ಮೆಲ್ಲರಿಗೂ ತಿಳಿಸಲೇಬೇಕೆಂದು ನನ್ನ ಬ್ಲಾಗಿನಲ್ಲಿ ಪೋಸ್ಷ್ ಮಾಡಿದ್ದೇನೆ. ದಯವಿಟ್ಟು ಭೇಟಿ ಕೊಡಿ.

ಶುಕ್ರವಾರ, ಡಿಸೆಂಬರ್ 31, 2010

ನಮ್ಮ ಎಲ್ಲಾ ಓದುಗರಿಗೂ ಹೊಸ ವರ್ಷದ ಶುಭಾಶಯಗಳು

ಹೊಸ ವರುಷವನ್ನು ಪ್ರೀತಿ,ಏಕತಾ ಭಾವದಿಂದ, ದ್ವೇಷ-ರೋಷಗಳನ್ನು ದೂರ ಮಾಡುತ್ತಾ, ಹರುಷದಿಂದಲೇ ಸ್ವಾಗತಿಸೋಣ. ಕಳೆದ ವರ್ಷದಲ್ಲಿ ಆಗಿಹೊದ ಕೆಟ್ಟ ಘಟಣೆಗಳನ್ನು ಮರೆತು ಮನಸ್ಸನ್ನು ಶುಭ್ರಗೊಳಿಸಿ ಆಗದೇ ಇದ್ದ ಕನಸನ್ನು ನನಸಾಗಿಸಿಕೊಳ್ಳಲು ಮತ್ತೊಂದು ವರ್ಷ ಬಂದಿದೆ ಎನ್ನುತ್ತಾ ಮುಂದಡಿಯಿಡೋಣ.
ಆತ್ಮೀಯ ಓದುಗರೆಲ್ಲರಿಗೂ ಹೊಸ ವರುಷವು ಶುಭ ತರಲಿ, ಜೀವನವನ್ನು ಬೆಳಗಲಿ, ಅಂದುಕೊಂಡ ಗುರಿ ಸಾಧನೆಯಾಗಲಿ, ಕನಸು ನನಸಾಗಲಿ, ಅದೇರೀತಿ ನಮ್ಮ-ತಮ್ಮೆಲ್ಲರ ಆರೊಗ್ಯ ಚೆನ್ನಾಗಿರಲಿ,. ಎಲ್ಲರಿಗೊ ಶುಭವಾಗಲಿ.

ಬುಧವಾರ, ಡಿಸೆಂಬರ್ 15, 2010

ಇಂಟರ್ ನೆಟ್ ಬ್ರೌಸಿಂಗ್ ಭಾರತಕ್ಕೆ ನಂ.3 ಸ್ಥಾನ

k 
ಎಲ್ಲಾ ಕ್ಷೇತ್ರಗಳಲ್ಲೂ ಅಂತರ್ಜಾಲ ಬಳಕೆ ಅಗತ್ಯ ಹೆಚ್ಚುತ್ತಿದ್ದು, ಅತಿ ಹೆಚ್ಚು ನೆಟ್ ಬ್ರೌಸ್ ಮಾಡುವ ದೇಶ ಯಾವುದು ಎಂಬುದರ ಬಗ್ಗೆ ಗೂಗಲ್ ಇಂಡಿಯಾ ಇತ್ತೀಚೆಗೆ ಸಮೀಕ್ಷೆ ನಡೆಸಿದೆ. ಇದರ ಪ್ರಕಾರ ವಿಶ್ವದಲ್ಲಿ ಅತ್ಯಧಿಕ ಇಂಟರ್ ನೆಟ್ ಬಳಕೆದಾರರ ಪಟ್ಟಿಯಲ್ಲಿ ಭಾರತ ಮೂರನೆ ಸ್ಥಾನದಲ್ಲಿದೆ. ಭಾರತದಲ್ಲಿ ಒಟ್ಟಾರೆ 100 ಮಿಲಿಯನ್ ಇಂಟರ್ ನೆಟ್ ಬಳಕೆದಾರರಿದ್ದಾರೆ ಎಂದು ಅಂದಾಜಿಸಲಾಗಿದೆ.
300 ಮಿಲಿಯನ್ ನೆಟ್ ಬಳಕೆದಾರರೊಂದಿಗೆ ಚೀನಾ ಅಗ್ರಸ್ಥಾನದಲ್ಲಿದ್ದರೆ, 207 ಮಿಲಿಯನ್ ಗ್ರಾಹಕರೊಂದಿಗೆ ಅಮೆರಿಕ ಎರಡನೇ ಸ್ಥಾನದಲ್ಲಿದೆ ಎಂದು ಗೂಗಲ್ ಇಂಡಿಯಾದ ಉತ್ಪನ್ನ ವಿಭಾಗದ ಮುಖ್ಯಸ್ಥ ವಿನಯ್ ಗೋಯಲ್ ಹೇಳಿದ್ದಾರೆ.

ಸುಮಾರು 40 ಮಿಲಿಯನ್ ಜನ ಮೊಬೈಲ್ ಫೋನ್ ಬಳಸಿ ಇಂಟರ್ ನೆಟ್ ಬ್ರೌಸಿಂಗ್ ಮಾಡುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಲ್ಯಾಪ್ ಟಾಪ್ ಹಾಗೂ ಡೆಸ್ಕ್ ಟಾಪ್ ಬಳಸಿ ಬ್ರೌಸ್ ಮಾಡುವವರಿಗಿಂತ ಮೊಬೈಲ್ ಬಳಕೆ ಮಾಡಿ ಬ್ರೌಸ್ ಮಾಡುವವರ ಸಂಖ್ಯೆ ಅಧಿಕವಾಗಲಿದೆ.
 
2007ರಲ್ಲಿ ಭಾರತದಲ್ಲಿ 2 ಮಿಲಿಯನ್ ನಷ್ಟಿದ್ದ ಮೊಬೈಲ್ ಇಂಟರ್ ನೆಟ್ ಬಳಕೆದಾರರ ಸಂಖ್ಯೆ ದಿನೇ ದಿನೇ ಹೆಚ್ಚಳವಾಗುತ್ತಿದೆ. ಕುತೂಹಲದ ಸಂಗತಿ ಎಂದರೆ ಮೊಬೈಲ್ ನೆಟ್ ಬಳಕೆದಾರರು ಹೆಚ್ಚಾಗಿ ಇತ್ತೀಚಿನ ಹಾಡು ಹಾಗೂ ಸಿನಿಮಾ ಟ್ರೈಲರ್ ಗಳ ಹುಡುಕಾಟದಲ್ಲಿ ತಮ್ಮ ಬ್ರೌಸಿಂಗ್ ಸಮಯ ವ್ಯಯಿಸುತ್ತಿದ್ದಾರೆ ಎಂದು ವಿನಯ್ ಹೇಳಿದರು.

ಭಾರತದಲ್ಲಿ 3ಜಿ ಈಗಷ್ಟೇ ಕಾಲಿಡುತ್ತಿದೆ. ವಿಶ್ವದ ಹಲವೆಡೆ 4ಜಿ ಬಳಕೆಯಲ್ಲಿದೆ. ಇಂಟರ್ ನೆಟ್ ಸೌಲಭ್ಯಕ್ಕೆ ಬೇಕಾದ ಖರ್ಚು ವೆಚ್ಚ, ತಿಳುವಳಿಕೆ ಕಮ್ಮಿ ಇರುವುದರಿಂದ ಭಾರತದಲ್ಲಿ ಇನ್ನೂ ಇಂಟರ್ ನೆಟ್ ವಿಸ್ತರಣೆ ಸುಲಭವಾಗಿ ಆಗುತ್ತಿಲ್ಲ. ಗ್ರಾಮೀಣ ಭಾಗಕ್ಕೆ ಬ್ರಾಡ್ ಬ್ಯಾಂಡ್ ಕೊಂಡೊಯ್ಯಲು ಸರ್ಕಾರ ಹರ ಸಾಹಸ ಪಡುತ್ತಿದೆ. ಆದರೂ, ನಿಧಾನವಾಗಿಯಾದರೂ ಭಾರತ ಆಧುನಿಕ ತಂತ್ರಜ್ಞಾನಕ್ಕೆ ಒಗ್ಗಿಕೊಳ್ಳುತ್ತಿದೆ. ವಿಕಿಪೀಡಿಯಾ ವರದಿಯಂತೆ ಜಾಗತಿಕ ಇಂಟರ್ ನೆಟ್ ಬಳಕೆದಾರರ ಪಟ್ಟಿಯಲ್ಲಿ ಭಾರತ ನಾಲ್ಕನೇ ಸ್ಥಾನದಲ್ಲಿದೆ.

ಭಾನುವಾರ, ಡಿಸೆಂಬರ್ 12, 2010

ಬಿಲ್ ಮೇಡ್ ಐಡಿ ಮೂಲಕ ಅತಿ ಸರಳ ವಿಧಾನದಿಂದ ಪಾವತಿ

ಮಾಹಿತಿ ತಂತ್ರಜ್ಞಾನ ಅಭಿವೃದ್ಧಿ ಲಾಭ ಪಡೆದಿರುವ ಸ್ಥಳೀಯ ಯುವ ಟೆಕ್ಕಿಗಳ ತಂಡ ಬಿಲ್ ಪಾವತಿ ಮಾಡಲು ಜನಸಾಮಾನ್ಯರು ಪಡುವ ಪಾಡನ್ನು ಹೋಗಲಾಡಿಸಲು ’ಬಿಲ್ ಮೇಲ್ ಐಡಿ’ ಎಂಬ ವೆಬ್ ಪೋರ್ಟಲ್ ಗೆ ಡಿ.13ರಂದು ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ. ಬಿಲ್ ಪಾವತಿ ಅಷ್ಟೇ ಅಲ್ಲದೆ, ಇ ವಾಣಿಜ್ಯ ಉದ್ಯಮಿಗಳು, ಮಾರಾಟಗಾರರು ಇತರೆ ಗ್ರಾಹಕರಿಗೂ ಈ ತಾಣ ಅನುಕೂಲವಾಗಲಿದೆ. ಬ್ಯಾಂಕ್ ಹಾಗೂ ಜನಸಮಾನ್ಯರ ನಡುವಿನ ಸಂಪರ್ಕ ಕೊಂಡಿಯಾಗಿರುವ ಈ ತಾಣ ವಿಶ್ವದ ಪ್ರಪ್ರಥಮ ವಾಣಿಜ್ಯ ನೆಟ್ ವರ್ಕಿಂಗ್ ಸಾಧನವಾಗಲಿದೆ.

ಬಿಲ್ ಪಾವತಿ ಅತಿ ಸರಳ: ಬಿಲ್ ಮೇಲ್ ಐಡಿಯನ್ನು ಪ್ರತಿಯೊಬ್ಬ ವ್ಯಕ್ತಿಯೂ ಸರಳವಾದ ರೀತಿಯಲ್ಲಿ ಪಡೆದುಕೊಳ್ಳಬಹುದಾಗಿದೆ. ಬಿಲ್ ಮೇಲ್ ಐಡಿ ಪಡೆದ ಬಳಕೆದಾರ ನೀರು, ವಿದ್ಯುತ್ ಹಾಗೂ ಇನ್ನಿತರ ಸಂಸ್ಥೆಗಳ ಬಿಲ್ ಪಾವತಿಯನ್ನು ಸರಳ ವಿಧಾನದಿಂದ ಮಾಡಬಹುದು. ಮೊಬೈಲ್, ಕಂಪ್ಯೂಟರ್, ಬ್ಯಾಂಕ್ ಕೌಂಟರ್, ಎಟಿಎಂ, ಕಿಯೋಸ್ಕ್, ತೃತೀಯ ಪಕ್ಷದ ಫ್ರಾಂಚೈಸಿ ಮುಂತಾದ ಸ್ಥಳಗಳಲ್ಲಿ ಬಿಲ್ ಮೇಲ್ ಐಡಿ ಮೂಲಕ ಗ್ರಾಹಕರು ಬಿಲ್ ಪಾವತಿಸಬಹುದಾಗಿದೆ.

ಬ್ಯಾಂಕ್‌ಗಳು ಹಾಗೂ ಇತರ ಹಣಕಾಸು ಸಂಸ್ಥೆಗಳೊಂದಿಗೆ ಬಿಲ್ ಮೇಲ್ ಐಡಿ ಹಲವು ಒಪ್ಪಂದಗಳು ಮತ್ತು ಒಡಂಬಡಿಕೆಗಳನ್ನು ಮಾಡಿಕೊಳ್ಳಲಿದ್ದು, ಈ ತಾಣದಲ್ಲಿ ನೋಂದಾಯಿಸಿಕೊಂಡ ಗ್ರಾಹಕರು ವಿವಿಧ ಬಿಲ್ಲಿಂಗ್ ಏಜೆನ್ಸಿಗಳು ಮತ್ತು ಸೇವೆ ನೀಡುವವರಿಗೆ ಬಿಲ್ ಮೇಲ್ ಐಡಿ ಮೂಲಕ ಬಿಲ್‌ಗಳನ್ನು ಪಾವತಿಸಬಹುದು. ಬಿಲ್ ಪಾವತಿದಾರರಿಗೆ ಬಿಲ್‌ಮೇಲ್ ಐಡಿ ಉಚಿತವಾಗಿ ಈ ಸೇವೆ ನೀಡುತ್ತದೆ.

ಇ ವಾಣಿಜ್ಯಕ್ಕೂ ಅನುಕೂಲ: ವ್ಯಾಪಾರಿಗಳು ತಮ್ಮ ಸಂಸ್ಥೆಗೆ ಸಂಬಂಧಿಸಿದ ಬಿಲ್‌ಗಳನ್ನು ತಯಾರಿಸಲು ಬಿಲ್‌ಮೇಲ್ ಐಡಿ ಯನ್ನು ಉಪಯೋಗಿಸಬಹುದಾಗಿದ್ದು, ಇದು ಪ್ರಸಕ್ತ ಲಭ್ಯವಿರುವ ಎಲ್ಲ ಅಕೌಂಟಿಂಗ್ ಸಾಫ್ಟ್‌ವೇರ್‌ಗೂ ಸಂಪರ್ಕಿತವಾಗಿದೆ. ಉಚಿತವಾಗಿ ಡೌನ್‌ಲೋಡ್ ಮಾಡಬಲ್ಲಂತಹ ಬಿಲ್ಲಿಂಗ್ ಸಾಫ್ಟ್‌ವೇರ್ ಆವೃತ್ತಿ ಇದರಲ್ಲಿ ಲಭ್ಯವಿದೆ. ಇದನ್ನು ಆಫ್‌ಲೈನಮ್ ಬಳಕೆಗೆ ಬಳಸಿಕೊಳ್ಳಬಹುದಾಗಿದೆ. ಜಗತ್ತಿನ ಎಲ್ಲರೂ ಬಿಲ್ ಮೇಲ್ ಐಡಿ ಸಮುದಾಯದ ಸದಸ್ಯರಾಗಬಹುದು. ಬಿಲ್‌ಮೇಲ್ ಐಡಿ ಸದಸ್ಯ ಇನ್ನೊಬ್ಬ ಬಿಲ್‌ಮೇಲ್ ಐಡಿ ಸದಸ್ಯನಿಗೆ ಪರ್ಚೆಸ್ ಆರ್ಡರ್, ಬಿಲ್ ನೀಡುವಿಕೆ, ಬಿಲ್ ಹಣಪಾವತಿ, ವಸ್ತುವಿನ ಬಟವಾಡೆ ಮೊದಲಾದ ವಾಣಿಜ್ಯ ಪ್ರಕ್ರಿಯೆಗಳನ್ನು ಸರಳವಾಗಿ ನಡೆಸಬಹುದಾಗಿದೆ .

ಗುರುವಾರ, ಡಿಸೆಂಬರ್ 9, 2010

ಎಚ್ ಡಿಎಫ್ ಸಿಯಿಂದ ಅಂಧರಿಗಾಗಿ ವಿಶೇಷ ಎಟಿಎಂ

ಎಚ್ ಡಿಎಫ್ ಸಿಯಿಂದ ಅಂಧರಿಗಾಗಿ ವಿಶೇಷ ಎಟಿಎಂಗಳನ್ನು ವಿನ್ಯಾಸಗೊಳಿಸಿದೆ. ಯಾರ ಸಹಾಯವಿಲ್ಲದೆ ಅಂಧರು ಹಣವನ್ನು ಪಡೆಯಬಹುದಾದ ವ್ಯವಸ್ಥೆಯನ್ನು ಭಾರತದ ಅತಿದೊಡ್ಡ ಖಾಸಗಿ ಬ್ಯಾಂಕ್ ಎಚ್ ಡಿಎಫ್ ಸಿ ಪ್ರಕಟಿಸಿದೆ. ಬ್ರೈಲ್ ಲಿಪಿ ಸಹಾಯದಿಂದ ಎಟಿಎಂ ಯಂತ್ರ ಬಳಕೆಗೆ ಅನುಕೂಲ ಕಲ್ಪಿಸಲಾಗಿದೆ.

ಮೊದಲ ಹಂತದಲ್ಲಿ ಈ ಡೈಬೋಲ್ಡ್ (D450) ಎಟಿಎಂಗಳನ್ನು ಅಳವಡಿಸಲಾಗುವುದು. ಇದು ಸದ್ಯಕ್ಕೆ ಚಾಲ್ತಿಯಲ್ಲಿರುವ ಎಟಿಎಂಗಳಲ್ಲಿರುವ ಎಲ್ಲಾ ಸೌಲಭ್ಯಗಳನ್ನು ಹೊಂದಿರುತ್ತದೆ. ಗ್ರಾಹಕ ಸ್ನೇಹಿ ವಿನ್ಯಾಸದ ಹೊಂದಿರುವುದರಿಂದ ವಿಕಲ ಚೇತನರು ಕೂಡಾ ಸುಲಭವಾಗಿ ಬ್ಯಾಂಕ್ ನೊಡನೆ ವ್ಯವಹರಿಸಬಹುದಾಗಿದೆ.

15 ಇಂಚಿನ LCD ದರ್ಶಕದ ಜೊತೆಗೆ ಬ್ರೈಲ್ ಲಿಪಿ ಬಳಸಲು ಕೀ ಪ್ಯಾಡ್ ಇರುತ್ತದೆ. ಹೆಡ್ ಫೋನ್ ಜಾಕ್ ಹಾಗೂ ಸ್ಪೀಕರ್ ಗಳನ್ನು ಅಳವಡಿಸಲಾಗಿದ್ದು, ಧ್ವನಿ ಸಹಾಯ ಪಡೆದು ವ್ಯವಹರಿಸಬಹುದಾಗಿದೆ. ಡಿಜಿಟಲ್ ವಿಡಿಯೋ ಮುದ್ರಣ(DVRs) ಹಾಗೂ ಸ್ಕಿಮಿಂಗ್ ತಂತ್ರಜ್ಞಾನ (ASD)ಗಳನ್ನು ಈ ಯಂತ್ರಗಳು ಹೊಂದಿದ್ದು, ಅತ್ಯಂತ ಸುರಕ್ಷಿತವಾಗಿರುತ್ತದೆ.

ಸುಮಾರು ಬ್ರೈಲ್ ಸುಧಾರಿತ 4,500 ಎಟಿಎಂಗಳನ್ನು ಅಳವಡಿಸಲು ಡೈಬೋಲ್ಡ್ ಜೊತೆ ಎಚ್ ಡಿಎಫ್ ಸಿ ಕೈ ಜೋಡಿಸಿದೆ. ಮಾಹಿತಿ ಮುದ್ರಣ, ಸಂಗ್ರಹಣೆ ಹಾಗೂ ಸ್ಥಳೀಯ ದರ್ಶಕ ಸೌಲಭ್ಯಗಳನ್ನು ಸುಮಾರು 700 ಎಚ್ ಡಿಎಫ್ ಸಿ ಬ್ರಾಂಚ್ ಗಳಲ್ಲಿ ಡೈಬೋಲ್ಡ್ ಅಳವಡಿಸಿದೆ.

ಮಂಗಳವಾರ, ಡಿಸೆಂಬರ್ 7, 2010

ವೆಬ್ ಸೈಟಿನಲ್ಲಿ ವೇದಾಂತ ಪಾಠ ಬೇಕೇನು

ಇವತ್ತು ಎಲ್ಲಿ ನೋಡಿದರೂ ಹಿಂಸೆ, ಅಶಾಂತಿ, ಅತೃಪ್ತಿ, ದ್ವೇಷ ಮತ್ತು ಭಯದ ವಾತಾವರಣ. ಭಯ ಹೊರಗೂ ಇದೆ. ಒಳಗೂ ಇದೆ. ಇದನ್ನು ಗೆಲ್ಲುವ ಮಾರ್ಗೋಪಾಯಗಳನ್ನು ವ್ಯಕ್ತಿ ತಾನೇ ಕಂಡುಕೊಳ್ಳಬೇಕಾದ ಆವಶ್ಯಕತೆ ಎಂದಿಗಿಂತ ಇಂದು ಹೆಚ್ಚೇ ಕಂಡುಬಂದಿದೆ. ನೆಮ್ಮದಿ ಪಡೆಯಲು ನಮಗಿರುವ ಸುಲಭವಾದ ಒಂದು ಪರಿಹಾರವೆಂದರೆ "ವೇದಾಂತ ವಿಚಾರ ಚಿಂತನೆ ".

ವಿದ್ಯೆಯನ್ನು, ಜ್ಞಾನವನ್ನು, ಶಾಂತಿ ಸಮಾಧಾನಗಳನ್ನು ಗುರುಕುಲ ಕ್ರಮದಿಂದ ಅಧ್ಯಯನ ಮಾಡುವುದಕ್ಕೆ ಇವತ್ತು ಯಾರಿಗೂ ಪುರುಸೊತ್ತಿಲ್ಲ. ಅಂಥ ವಾತಾವರಣವೂ ಇಲ್ಲ. ಇಂದಿನ ಯುಗ ಕಂಪ್ಯೂಟರ್ ಯುಗ. ಕಳ್ಳಕಾಕರ ಯುಗ. ದೊರೆಯೇ ಧೂರ್ತನಾಗುವ ಯುಗ. ವೈಜ್ಞಾನಿಕ ಯುಗ. ವೇಗದ ಯುಗ. ಆವೇಗದ ಯುಗ. ಉದ್ವೇಗದ ಯುಗ. ಪ್ರಮುಖವಾಗಿ ಈಗಿನ ಯುವಕ ಯುವತಿಯರು, ಮಧ್ಯವಯಸ್ಕರು ಮತ್ತು ಹಿರಿಯ ನಾಗರಿಕರು ಐಹಿಕ ಸುಖಕ್ಕೆ ಮತ್ತು ವಸ್ತು ಭೋಗಕ್ಕೆ ತುತ್ತಾಗಿ ಬಳಲಿದ್ದಾರೆ. ತಮ್ಮನ್ನು ಕಾಡುತ್ತಿರುವ ಕಾಯಿಲೆ ಯಾವುದು ಎನ್ನುವುದು ನರಳುತ್ತಿರುವ ವ್ಯಕ್ತಿಗೇ ತಿಳಿಯದಾಗಿದೆ.

ಇದನ್ನು ಗಮನದಲ್ಲಿ ಇಟ್ಟುಕೊಂಡು "ವೇದಾಂತ ಸತ್ಸಂಗ ಕೇಂದ್ರ"ದ ವತಿಯಿಂದ "ಶಂಕರಹೃದಯಂ" ಎಂಬ ಅಂತರ್ಜಾಲ ತಾಣವನ್ನು ತೆರೆಯಲಾಗುತ್ತಿದೆ. ವೇದಾಂತ ಪಾಠಗಳನ್ನು ಪ್ರಚುರ ಪಡಿಸುವುದು ಈ ವೆಬ್ ಸೈಟಿನ ಉದ್ದೇಶವಾಗಿರುತ್ತದೆ.
ವೆಬ್ ಸೈಟ್ ವಿಳಾಸ : http://www.satchidanandendra.org

ಶಂಕರ ಭಗವತ್ಪಾದರು ತೋರಿದ ಆದರ್ಶಗಳನ್ನು ಮನಸಾ ಮೆಚ್ಚುವವರು ಮತ್ತು ನೆಮ್ಮದಿ ಅರಸುತ್ತಿರುವವರು ಈ ತಾಣದ ಪ್ರಯೋಜನ ಪಡೆಯಬಹುದೆಂದು ವೇದಾಂತ ಸತ್ಸಂಗ ಕೇಂದ್ರದ ಪತ್ರಿಕಾ ಪ್ರಕಟಣೆ ತಿಳಿಸಿದೆ.
ಹೆಚ್ಚಿನ ವಿವರಗಳಿಗೆ : 98860 51222 ದೂರವಾಣಿ ಸಂಖ್ಯೆಯನ್ನು ತಲುಪಿರಿ.
ಇಮೇಲ್ : shankarahridayam@gmail.com

ಮಂಗಳವಾರ, ನವೆಂಬರ್ 30, 2010

ಮುತ್ಯಾಲಮಡುವು

ಬೆಂಗಳೂರು ಜಿಲ್ಲೆಯ ಆನೇಕಲ್ ತಾಲ್ಲೂಕಿನಲ್ಲಿರುವ ಮುತ್ಯಾಲಮಡುವು, ಆನೇಕಲ್ ನಿಂದ ೫ ಕಿ.ಮೀ ಹಾಗು ಬೆಂಗಳೂರಿನಿಂದ ೪೦ ಕಿ.ಮೀ. ದೂರದಲ್ಲಿರುವ ಮುತ್ಯಾಲಮಡುವಿನಲ್ಲಿ ಸುಂದರ ಜಲಪಾತವಿದೆ ಹಾಗು ಇದು ಒಂದು ಪ್ರಸಿದ್ದ ಪ್ರವಾಸಿ ತಾಣವಾಗಿದೆ.
ಮುತ್ಯಾಲಮಡುವಿನ ಹೆಸರು, ತೆಲುಗು ಭಾಷೆಯ ಮುತ್ಯಾಲ - ಮುತ್ತುಗಳು (Pearl) ಹಾಗು ಮಡುವು - ಮಡು (Valley) ಪದಗಳಿಂದ ಉಗಮ ವಾಗಿದೆ. ಇಲ್ಲಿಯ ಜಲಪಾತದಲ್ಲಿ ನೀರು ಮುತ್ತಿನ ಹನಿಗಳಂತೆ, ಮಡುವಿನೊಳಗೆ ಧುಮುಕುವುದರಿಂದ, ಈ ಹೆಸರು ಬಂದಿದೆ.
ಬೆಂಗಳೂರಿನಿಂದ ೪೫ ಕಿ.ಮೀ ಇರುವ ಇಲ್ಲಿ ನೀರಿನ ಝರಿ ಸುಮಾರು 90 ಮೀ ಎತ್ತರದಿಂದ ಬೀಳುವಾಗ ಮುತ್ತಿನ ಹನಿಗಳಂತೆ ಕಾಣುತ್ತವೆ. ಆದ್ದರಿಂದ ಹೆಸರು 'ಮುತ್ಯಾಲ ಮಡುವು' (pearl valley).
ಬೆಂಗಳೂರಿನ ಯಾಂತ್ರಿಕ ಜೀವನದಿಂದ ಬೇಸರವಾದಾಗ 'ಒಮ್ಮೆ' ಹೋಗಿ ಬರಬಹುದಾದಂತಹ ಸುಂದರ ಸ್ಥಳ. ವಾರಾಂತ್ಯಗಳಲ್ಲಿ ಹೋಗಬಯಸಿದರೆ ಬೆಳಿಗ್ಗೆ 8, 9 ಗಂಟೆ ಸುಮಾರಿಗೆ ಅಲ್ಲಿದ್ದರೆ ನೀವು ಝರಿಯ ನಾದ, ಹಕ್ಕಿಗಳ ಕಲರವ ಕೇಳಿ ಪ್ರಕೃತಿಯ ಶಾಂತತೆ ಸವಿಯಬಹುದು. ಮಳೆಗಾಲವಾದರೆ ಸೂಕ್ತ. ಇಲ್ಲವಾದಲ್ಲಿ ಮತ್ತೆ ಅದೇ ಜನರ ಗಲಾಟೆ ಗೌಜು!.
 
ಹಾಗೆ ಊಟ ವಸತಿಗೆ ಮಯೂರ ನಿಸರ್ಗ ಹೋಟೆಲ್ ( ಕರ್ನಾಟಕ ಪ್ರವಾಸೋದ್ಯಮ ಇಲಾಖೆ) ಯ ಸೌಲಭ್ಯವಿದೆ.
ಬೆಂಗಳೂರಿನಿಂದ ಬಿ.ಎಂ.ಟಿ.ಸಿ ಬಸ್ ಸೌಕರ್ಯ ಆನೇಕಲ್ ಮಾತ್ರ ಲಭ್ಯವಿದೆ. ಇಲ್ಲಿಂದ ಆಟೋ ಮುಖಾಂತರ ಸುಮಾರು 5 ಕಿ.ಮೀ ಗಳ ಪ್ರಯಾಣ.

ಬೆಂಗಳೂರಿನಿಂದ ಮಾರ್ಗ.
ಬನ್ನೇರುಘಟ್ಟ ರಸ್ತೆ ----> ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ----> ಆನೇಕಲ್ ----> ಮುತ್ಯಾಲ ಮಡುವು.
ಅಥವಾ
ಹೊಸೂರು ರಸ್ತೆ---------> ಚಂದಾಪುರ ----> ಆನೇಕಲ್ ----> ಮುತ್ಯಾಲ ಮಡುವು .

ಬೋಲ್ಟ್ ಮೊಬೈಲ್ ಬ್ರೌಸರ್ ನಲ್ಲಿ ಭಾರತೀಯ ಭಾಷೆ ವೀಕ್ಷಿಸಿ

ಮೊಬೈಲ್ ನಲ್ಲಿ ಭಾರತೀಯ ಭಾಷೆ ಬಳಕೆ ಹೆಚ್ಚುತ್ತಿದ್ದಂತೆ ಹೊಸ ಹೊಸ ಸೌಲಭ್ಯಗಳು, ಅನ್ವಯ ತಂತ್ರಾಂಶಗಳನ್ನು ರೂಪಿಸಲಾಗುತ್ತಿದೆ. ಬಿಟ್ ಸ್ಟ್ರೀಮ್ ಕಂಪೆನಿ ಹೊಸ ಬೋಲ್ಟ್ ಮೊಬೈಲ್ ಬ್ರೌಸರ್ ಅನ್ನು ಪರಿಚಯಿಸಿದ್ದು ಇದು ಭಾರತೀಯ ಭಾಷೆಗಳನ್ನು ವೀಕ್ಷಿಸಲು ಅನುಕೂಲವಾಗಿದೆ. ಇಂಡಿಕ್ ಟೆಕ್ಸ್ ಬಳಕೆ ಹಾಗೂ ಬ್ರೌಸರ್ ಮೂಲಕ ಸ್ಪಷ್ಟವಾಗಿ ಭಾರತೀಯ ಭಾಷೆ ವೆಬ್ ತಾಣಗಳನ್ನು ವೀಕ್ಷಿಸಬಹುದಾಗಿದೆ.

ಇಂಗ್ಲೀಷ್ ಅಲ್ಲದೆ, ಬೆಂಗಾಳಿ, ಗುಜರಾತಿ, ಗುರುಮುಖಿ, ಹಿಂದಿ, ಕನ್ನಡ, ಮಲೆಯಾಳಂ, ಒರಿಯಾ, ತಮಿಳು, ತೆಲುಗು ಭಾಷೆಯ ತಾಣಗಳನ್ನು ಸುಲಭವಾಗಿ ವೀಕ್ಷಿಸಬಹುದು ಎಂದು ಕಂಪೆನಿ ಹೇಳಿದೆ. ಮುಂಬರುವ ದಿನಗಳಲ್ಲಿ ಮೊಬೈಲ್ ಇಂಟರ್ ನೆಟ್ ಕ್ಷೇತ್ರಕ್ಕೂ ಬಿಟ್ ಸ್ಟ್ರೀಮ್ ಕಾಲಿಡಲಿದೆ ಎಂದು ಕಂಪೆನಿಯ ಸಿಇಒ ಅನ್ನಾ ಮಗ್ಲಿಒಕೊ ಛಾಕ್ನೊನ್ ಹೇಳುತ್ತಾರೆ. 
ಬ್ಲಾಕ್ ಬೆರ್ರಿ ಹಾಗೂ ಸಮಾನಾಂತರ ಮೊಬೈಲ್ ಸಾಧನಗಳಲ್ಲಿ ಮಾತ್ರವಲ್ಲದೆ, J2ME ಸೌಲಭ್ಯವಿರುವ Palm ಸಾಧನ, ವಿಂಡೋಸ್ ಆಧಾರಿತ ಎಚ್ ಟಿಸಿ ಟಚ್, ಮೋಟೊ ಕ್ಯೂ, ಮೊಟೊ ಕ್ಯೂ 9ಸಿ ಸರಣಿ ಮೊಬೈಲ್ ಗಳನ್ನು ಬೋಲ್ಟ್ ಬ್ರೌಸರ್ ಬಳಸಬಹುದು. ನಿಮ್ಮ ಜಾವಾ ಆಧಾರಿತವಾದ ಮೊಬೈಲ್ ನಲ್ಲಿ Java MIDP 2 ಹಾಗೂ CLDC 1.0 ಇದ್ದರೆ ಸುಲಭವಾಗಿ ಬೋಲ್ಟ್ ಕಾರ್ಯ ನಿರ್ವಹಿಸುತ್ತದೆ.

ಡೌನ್ ಲೋಡ್ ಹೇಗೆ :
ಪ್ರಮಾಣಿಕೃತ ಹಾಗೂ ಪ್ರಮಾಣ ಪತ್ರವಿಲ್ಲದ ಎರಡು ಆವೃತ್ತಿಯಲ್ಲಿ ಲಭ್ಯವಿದ್ದು, ಇನ್ನೊಂದು ಲೈಟ್ ಆವೃತ್ತಿ(lower end mobiles) ಕೂಡಾ ಗ್ರಾಹಕರಿಗೆ ಸಿಗಲಿದೆ. VeriSign and Thawte ನ ಪ್ರಮಾಣ ಪತ್ರವುಳ್ಳ ಆವೃತ್ತಿ ಸರಿಯಾಗಿ ಕಾರ್ಯ ನಿರ್ವಹಿಸಸಿದ್ದರೆ, ಬೋಲ್ಟ್ ಲೈಟ್ ಆವೃತ್ತಿ ಡೌನ್ ಲೋಡ್ ಮಾಡಿಕೊಳ್ಳಬಹುದು ಬ್ಲಾಕ್ ಬೆರ್ರಿ ಗ್ರಾಹಕರಿಗೆ ಪ್ರತ್ಯೇಕ ಡೌನ್ ಲೋಡ್ ಕೊಂಡಿ ನೀಡಲಾಗಿದೆ.

Wi-Fi, GPRS, 3G, ActiveSync or EDGE ಉಳ್ಳ ಯಾವುದೇ ಮೊಬೈಲ್ ಮೂಲಕ ಬೋಲ್ಟ್ ಬ್ರೌಸರ್ ಬಳಸಿ ಇಂಟರ್ ನೆಟ್ ನಲ್ಲಿ ಸರ್ಫ್ ಮಾಡಬಹುದು. HTML 5, ಫ್ಲಾಷ್, ವಿಡಿಯೋ ಹಾಗೂ ಸಮಾಜಿಕ ಜಾಲ ತಾಣಗಳಲ್ಲಿ ವಿಹರಿಸಲು ಬೋಲ್ಟ್ ಅನುಕೂಲಕರವಾಗಿದ್ದು, ಸುರಕ್ಷಿತವಾಗಿದೆ.

ಶನಿವಾರ, ನವೆಂಬರ್ 27, 2010

ಭಾರತೀಯ ಭಾಷೆ ಕಲಿಯಲು ಆಪಲ್ ಅಪ್ಲಿಕೇಷನ್

ಭಾರತೀಯ ಭಾಷೆಗಳು ಕಲಿತವರಿಗೆ ಎಷ್ಟು ಸರಳವೋ, ಅದು ಕಲಿಯದವರಿಗೆ ಅನ್ಯಗ್ರಹ ಜೀವಿಗಳ ಸಂಭಾಷಣೆಯಂತೆ ತೋರುವುದು ಸಹಜ.

ವಿಶ್ವದೆಲ್ಲೆಡೆ ಹರಡಿರುವ ಭಾರತೀಯ ಜನರು ಫೋನ್ ಮೂಲಕ ಮಾತನಾಡುವಾಗ ಅಥವಾ ಸಂದೇಶ ಕಳಿಸುವಾಗ ಹೆಚ್ಚಾಗಿ ತಮ್ತಮ್ಮ ಭಾಷೆಯನ್ನೇ ಸಹಜವಾಗಿ ಬಳಸುತ್ತಾರೆ. ಆದರೆ, ಮೊಬೈಲ್ ಫೋನ್ ಗಳಲ್ಲಿ ಭಾಷೆ ಕಳಿಸಬಲ್ಲ ಸಾಧನ ತೀರಾ ವಿರಳ. ಅಮೆರಿಕದಲ್ಲಿ ಅತ್ಯಧಿಕವಾಗಿ ಜಾಲ ಹೊಂದಿರುವ ಐಫೋನ್ ಉತ್ಪನ್ನಗಳ ಮೂಲಕ ಭಾರತೀಯ ಭಾಷೆಗಳನ್ನು ಸುಲಭವಾಗಿ ಕಲಿಯಬಲ್ಲ ಸಾಧನವನ್ನು ಏಮ್ ಕಾರ ಎಂಬ ಸಂಸ್ಥೆ ವಿನ್ಯಾಸಗೊಳಿಸಿದೆ.

ಜಾಗತಿಕವಾಗಿ ಎಲ್ಲೆಡೆ ಭಾರತೀಯರು ಹರಡಿರುವುದರಿಂದ, ನಮ್ಮ ಸ್ಥಳೀಯ ಭಾಷೆಗಳು ಕೂಡಾ ವಲಸೆ ಹೋಗಿ ವಿಶ್ವದ ಇತರೆ ಜನರಿಗೆ ರುಚಿ ಹತ್ತಿಸಿದೆ. ಎಲೆಕ್ಟ್ರಾನಿಕ್ ಉಪಕರಣಗಳಲ್ಲಿ ಅದರಲ್ಲೂ ಮೊಬೈಲ್ ಫೋನ್ ನಲ್ಲಿ ಭಾರತೀಯ ಭಾಷೆ ಲಭ್ಯವಿಲ್ಲದಿರುವುದನ್ನು ಮನಗಂಡ ಏಮ್ ಕಾರ ಸಂಸ್ಥೆ, ಆಪಲ್ ಉತ್ಪನ್ನಗಳಾದ ಐಫೋನ್, ಐಪೊಡ್, ಐಪ್ಯಾಡ್ ಮೂಲಕ ಭಾಷೆ ಕಲಿಸುವ ಅಪ್ಲಿಕೇಷನ್ ಅನ್ನು ಆಪ್ ಸ್ಟೋರ್ ನಲ್ಲಿ ಪರಿಚಯಿಸಿದೆ.
ಮೊಬೈಲ್ ಮೂಲಕ ಭಾರತೀಯ ಭಾಷೆಯನ್ನು ಸರಳ ಹಾಗೂ ಸುಲಭವಾಗಿ ಕಲಿಯಬಹುದಾಗಿದೆ. ಮಕ್ಕಳಿನಿಂದ ಹಿಡಿದು ಮುದುಕರವರೆಗೂ ಎಲ್ಲರೂ ಶಬ್ದ ಹಾಗೂ ವ್ಯಾಕರಣಬದ್ಧವಾದ ಭಾಷೆಯನ್ನು ಕಲಿಯಲು ಅನುಕೂಲ ಕಲ್ಪಿಸಲಾಗಿದೆ.

ಆಡಿಯೋ ವಿಷ್ಯುಯಲ್ ಸೌಲಭ್ಯವನ್ನು ಒದಗಿಸಲಾಗಿರುವುದರಿಂದ ಅಪ್ಲಿಕೇಷನ್ ಇನ್ನಷ್ಟು ಆಕರ್ಷಣೆಯುಕ್ತವಾಗಿದೆ. ಆಪ್ ಸ್ಟೋರ್ ನಲ್ಲಿ ಎಮ್ ಕಾರಾ ಭಾಷೆ ಅಪ್ಲಿಕೇಷನ್ ಆವೃತ್ತಿ 1.0 ಡೌನ್ ಲೋಡ್ ಲಭ್ಯವಿದೆ. ಮುಂದಿನ ದಿನಗಳಲ್ಲಿ ತಾಂತ್ರಿಕವಾಗಿ ಇನ್ನಷ್ಟು ಹೆಚ್ಚಿನ ಸೌಲಭ್ಯಗಳನ್ನು ನೀಡಿ ಮಕ್ಕಳಿಗೆ ಅನುಕೂಲವಾಗುವ ರೀತಿಯಲ್ಲಿ ಪೂರ್ತಿ ಶೈಕ್ಷಣಿಕ ಪಠ್ಯವನ್ನು ಸೇರಿಸಲಾಗುವುದು. ಇನ್ಮುಂದೆ ಗ್ರಾಹಕರು ಯಾವುದೇ ಭಾಷೆಯನ್ನು ಓದಿ, ಬರೆದು ಸುಲಲಿತವಾಗಿ ಮಾತನಾಡಬಲ್ಲರು ಎಂದು ಏಮ್ ಕಾರ ಸಂಸ್ಥೆ ಹೇಳಿದೆ.

ಶುಕ್ರವಾರ, ನವೆಂಬರ್ 26, 2010

ದೇಶದಲ್ಲಿರುವ ನಕಲಿ ಹಣ 1.20 ಲಕ್ಷ ಕೋಟಿ ರು!

 
ನಕಲಿ ಹಣದ ಚಲಾವಣೆಯನ್ನು ತಡೆಯಲು ಸರ್ಕಾರ ಅನೇಕ ಕಠಿಣ ಕ್ರಮಗಳನ್ನು ಕೈಗೊಂಡಿದ್ದರೂ ದೇಶದಲ್ಲಿ ಈಗಲೂ ಸುಮಾರು 1,20,000 ಕೋಟಿ ರೂಪಾಯಿಗಳಷ್ಟು ಮೌಲ್ಯದ ನಕಲಿ ಹಣ ಚಲಾವಣೆಯಲ್ಲಿದೆ ಎಂದು ಅಂದಾಜಿಸಲಾಗಿದೆ.

ಇಂದು ದೇಶದ ನಕಲಿ ಕರೆನ್ಸಿ ಚಲಾವಣೆ ಜಾಲದಲ್ಲಿ ಕಾಶ್ಮೀರದಲ್ಲಿ ಕಾರ್ಯನಿರ್ವಹಿಸುತ್ತಿರುವ ಮುಸ್ಲಿಂ ಭಯೋತ್ಪಾದನಾ ಗುಂಪುಗಳು ಸಕ್ರಿಯವಾಗಿದ್ದು ಇವು ಅಫೀಮು, ಚರಸ್, ಹೆರಾಯಿನ್ ಕಳ್ಳ ಸಾಗಣೆಯಲ್ಲೂ ಗಣನೀಯ ಪಾಲು ಹೊಂದಿವೆ. ಬಹುತೇಕ ಈ ಗುಂಪುಗಳಿಗೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಪೂರ್ಣ ಬೆಂಬಲ ನೀಡುತ್ತಿದೆ. ಇನ್ನುಳಿದಂತೆ ದೇಶದೊಳಗಿರುವ ಕೆಲ ಗುಂಪುಗಳು ನಕಲಿ ನೋಟುಗಳ ದಂಧೆಯಲ್ಲಿ ತೊಡಗಿದ್ದರೂ ಇವುಗಳು ಪಾತ್ರ ನಗಣ್ಯವಾಗಿದೆ. ಈ ಗುಂಪುಗಳು ಬಳಸುವ ಕಾಗದದ ಗುಣಮಟ್ಟ ಸಾಮಾನ್ಯವಾಗಿರುವದರಿಂದ ಪತ್ತೆ ಹಚ್ಚಲು ಬಹಳ ಸುಲಭವಾಗಿದೆ. ಆದರೆ ಭಯೋತ್ಪಾದಕ ಗುಂಪುಗಳು ಚಲಾವಣೆ ಮಾಡುತ್ತಿರುವ ನಕಲಿ ನೋಟುಗಳ ಗುಣಮಟ್ಟ ಉತ್ತಮವಾಗಿದ್ದು ಯಂತ್ರದಲ್ಲಿ ಪರೀಕ್ಷಿಸದೆ ಕಂಡು ಹಿಡಿಯುವದು ಕಷ್ಟ. ಈ ಉತ್ತಮ ಗುಣಮಟ್ಟದ ನಕಲಿ ನೋಟುಗಳ ಚಲಾವಣೆಗೆ ಥೈಲ್ಯಾಂಡ್ ಮೂಲ.

ಥೈಲ್ಯಾಂಡ್ ಕಾರಸ್ಥಾನ : ಸರ್ಕಾರ ಪಾಕಿಸ್ತಾನ ಹಾಗೂ ನೇಪಾಳದಿಂದ ಹರಿದು ಬರುತ್ತಿರುವ ನಕಲಿ ಹಣದ ಹರಿವನ್ನು ತಡೆಗಟ್ಟಲು ಬಹುತೇಕ ಯಶಸ್ವಿಯಾಗಿದ್ದರೂ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಎಸ್‌ಐ ನಕಲಿ ನೋಟುಗಳನ್ನು ಚಲಾವಣೆ ಮಾಡಲು ಥೈಲ್ಯಾಂಡನ್ನು ಕೇಂದ್ರವನ್ನಾಗಿರಿಸಿಕೊಂಡು ದೇಶದ ಅರ್ಥ ವ್ಯವಸ್ಥೆಯನ್ನು ಬುಡಮೇಲು ಮಾಡಲು ಪ್ರಯತ್ನಿಸುತ್ತಿದೆ. ಕುಖ್ಯಾತ ಭಯೋತ್ಪಾದಕ ದಾವೂದ್ ಇಬ್ರಾಹಿಂ ಥೈಲ್ಯಾಂಡಿನಿಂದ ನಕಲಿ ಕರೆನ್ಸಿಯನ್ನು ದೇಶದೊಳಗೆ ಪಂಪ್ ಮಾಡುತ್ತಿದ್ದಾನೆ ಎಂದು ಗುಪ್ತಚರ ಮೂಲಗಳ ವರದಿ ಹೇಳುತ್ತದೆ. ಡಿ ಕಂಪೆನಿಯು ವಿವಿಧ ಸರಕುಗಳ, ಡ್ರಗ್ಸ್ ಗಳ ಕಳ್ಳಸಾಗಣೆ, ಹವಾಲ ದಂಧೆ ಮತ್ತು ಮಾಫಿಯಾದಲ್ಲಿ ಸಕ್ರಿಯವಾಗಿದ್ದು ಇದರ ಪ್ರಮುಖ ಏಜೆಂಟ್ ಆಗಿರುವ ಅರ್ಷದ್ ಭಕ್ತಿ ಎಂಬ ಕಳ್ಳ ವ್ಯವಹಾರಗಳ ಪ್ರಮುಖನಾಗಿದ್ದಾನೆ. ನೇರವಾಗಿ ಐಎಸ್‌ಐನ ಉನ್ನತಾಧಿಕಾರಿಗಳಾದ ಮೇಜರ್ ಅಲಿ ಮತ್ತು ಅರ್ಷದ್ ಅವರಿಗೆ ವರದಿ ಮಾಡುತ್ತಾನೆ. ಥೈಲ್ಯಾಂಡಿನಲ್ಲಿ ದಾವೂದ್ ಗ್ಯಾಂಗ್ ಬಲವಾಗಿ ಬೇರು ಬಿಟ್ಟಿದ್ದು ನಕಲಿ ನೋಟುಗಳು ಹಾಗೂ ಡ್ರಗ್ಸ್ ಗಳು ಬಾಂಗ್ಲಾದೇಶದ ಮೂಲಕ ದೇಶದೊಳಗೆ ಬರುತ್ತಿವೆ.

ಬಾಂಗ್ಲಾ ಮೂಲಕ ದೇಶ ಪ್ರವೇಶ : ಮೊದಲಿನಿಂದ ಪಾಕಿಸ್ತಾನದಲ್ಲಿ ನಕಲಿ ನೋಟುಗಳನ್ನು ಮುದ್ರಿಸಿ ನೇಪಾಳ ಮೂಲಕ ದೇಶದೊಳಗೆ ತಂದು ಚಲಾವಣೆ ಮಾಡಲಾಗುತಿತ್ತು. ಆದರೆ 26/11ರ ದಾಳಿಯ ನಂತರ ಐಎಸ್‌ಐ ತನ್ನ ತಂತ್ರವನ್ನು ಬದಲಾಯಿಸಿತು. ಈಗ ಥೈಲ್ಯಾಂಡಿನಲ್ಲೇ ಮುದ್ರಿಸಿ ಬಾಂಗ್ಲಾ ಮೂಲಕ ದೇಶದೊಳಗೆ ಚಲಾವಣೆ ಮಾಡುತ್ತಿದೆ. ಈ ಮಾಹಿತಿಯನ್ನು ಗುಪ್ತಚರ ಮೂಲಗಳು ಸಿಬಿಐ ಜತೆ ಹಂಚಿಕೊಂಡಿದ್ದು, ಈ ಕುರಿತು ತನಿಖೆ ಮುಂದುವರೆದಿದೆ. ಡಿ ಕಂಪೆನಿ 1993ಕ್ಕೂ ಮೊದಲು ಇದೇ ರೀತಿಯಲ್ಲಿ ದೇಶದೊಳಗೆ ಆಯುಧಗಳು, ಬಾಂಬ್ ಗಳನ್ನು ಸರಬರಾಜು ಮಾಡುತಿತ್ತು. ಇದೀಗ ಡಿ ಕಂಪೆನಿಯ ಕಳ್ಳ ವ್ಯವಹಾರಗಳನ್ನು ಪಾಕಿಸ್ತಾನದಲ್ಲಿ ಮುಂದುವರಿಸಬೇಕಾದರೆ ಮೊದಲಿನಂತೆ ಭಾರತದೊಳಗೆ ಶಸ್ತ್ರಾಸ್ತ್ರಗಳನ್ನೂ ಸರಬರಾಜು ಮಾಡಬೇಕು ಎಂದು ಐಎಸ್‌ಐ ತಾಕೀತು ಮಾಡಿದೆ.

ಸರ್ಕಾರದ ಬಿಗಿ ಕಾನೂನಿನ ನಡುವೆಯೂ ಈ ನಕಲಿ ನೋಟುಗಳು ದೇಶದೊಳಗೆ ಪ್ರವೇಶಿಸಲು ಈ ಕಾನೂನುಗಳು ನೋಟುಗಳಂತೆ ಕಾಗದದಲ್ಲಿರುವದೇ ಕಾರಣ ಎನ್ನಲಾಗಿದೆ. ಮುಂದಿನ ದಿನಗಳಲ್ಲಿ ನಕಲಿ ನೋಟುಗಳನ್ನು ದೇಶದೊಳಗೆ ತರಲು ಬಾಂಗ್ಲಾ ಅಲ್ಲದೆ ದುಬೈ ಸೇರಿದಂತೆ ಇತರ ಮಾರ್ಗಗಳನ್ನೂ ಡಿ ಕಂಪೆನಿ ಬಳಸಿಕೊಳ್ಳುವ ಸಾದ್ಯತೆಗಳಿವೆ. ಸರ್ಕಾರ ದೇಶದ ಕರೆನ್ಸಿಯನ್ನು ಮುದ್ರಿಸಲು ಅವಶ್ಯಕತೆಯ ಶೇ.98ರಷ್ಟು ಉತ್ತಮ ಗುಣಮಟ್ಟದ ಕಾಗದವನ್ನು ಯೂರೋಪ್ ನ ದೇಶಗಳಿಂದ ಆಮದು ಮಾಡಿಕೊಳ್ಳುತಿದ್ದು ಇದಕ್ಕಾಗಿ 11 ಕಂಪೆನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಈ ಕಾಗದಕ್ಕಾಗಿ ಸರ್ಕಾರ ವಿದೇಶೀ ಕಂಪೆನಿಗಳನ್ನೇ ಅವಲಂಬಿಸಿಕೊಂಡಿದೆ.

ಕಾಗದದ ಭದ್ರತೆಯ ಮೇಲೆ ಸರ್ಕಾರಿ ನಿಯಂತ್ರಣವಿಲ್ಲ : ದೇಶದಲ್ಲಿ ರಿಸರ್ವ್ ಬ್ಯಾಂಕು ನೋಟುಗಳನ್ನು ಬಿಗಿ ನಿಯಮದಡಿ, ಕಟ್ಟುನಿಟ್ಟಿನ ಸುರಕ್ಷತಾ ಕ್ರಮಗಳಡಿ ಮುದ್ರಿಸುವುದಾದರೂ ಇದಕ್ಕೆ ಬಳಕೆಯಾಗುವ ಕಾಗದದ ಮೇಲೆ ಸರ್ಕಾರಕ್ಕೆ ನಿಯಂತ್ರಣವಿಲ್ಲ. ಏಕೆಂದರೆ ಈ ಕಾಗದಗಳನ್ನು ಆಮದು ಮಾಡಿಕೊಳ್ಳುವಾಗಲೇ ಭದ್ರತಾ ಚಿಹ್ನೆಗಳಾದ ವಾಟರ್ ಮಾರ್ಕ್, ಅಯಸ್ಕಾಂತೀಯ ನೂಲು ಸಹಿತವೇ ದೇಶಕ್ಕೆ ಬಂದಿರುತ್ತದೆ! ಸರ್ಕಾರ ರಾಷ್ಟ್ರಪಿತನ ಚಿತ್ರ ಹಾಗೂ ಸೂಕ್ಷ್ಮ ಅಕ್ಷರಗಳನ್ನು ಮುದ್ರಿಸಬೇಕಾಗಿರುತ್ತದೆ. ಭಯೋತ್ಪಾದಕ ಗುಂಪುಗಳಿಗೆ ಈ ರೀತಿಯ ಕಾಗದವನ್ನು ಪಡೆಯಲು ಕಷ್ಟವೇನೂ ಇಲ್ಲ. ದೇಶದೊಳಗೆ ಪ್ರವೇಶಿಸುವ ಮಾರ್ಗಗಳಲ್ಲಿ ಬಿಗಿ ಪರಿಶೀಲನೆಯಿಂದ ಶೇ.10ರಷ್ಟು ನಕಲಿ ನೋಟುಗಳ ಹಾವಳಿಯನ್ನಷ್ಟೇ ತಡೆಗಟ್ಟಬಹುದು. ಉಳಿದದ್ದು ಕಳ್ಳ ಮಾರ್ಗಗಳಿಂದಲೇ ಬರುತ್ತಿದೆ.

ಸರ್ಕಾರ ನೋಟುಗಳ ಮುದ್ರಣಕ್ಕೆ ಬಳಸಲಾಗುವ ಕಾಗದಗಳನ್ನು ದೇಶದೊಳಗೇ ತಯಾರಿಸಲು ಮುಂದಾಗಬೇಕಿದೆ ಎಂದು ಆರ್ಥಿಕ ತಜ್ಷರು ಹೇಳುತ್ತಾರೆ. ಇದರಿಂದಾಗಿ ದೇಶದ ಕರೆನ್ಸಿಯ ವಿಶಿಷ್ಟ ವಿನ್ಯಾಸ ಹಾಗೂ ಸುರಕ್ಷತೆಗೆ ಹೆಚ್ಚಿನ ಅನುಕೂಲ ಆಗಲಿದೆ.

ಮಂಗಳವಾರ, ನವೆಂಬರ್ 16, 2010

ಕಿಂದರಜೋಗಿ

ಕಿಂದರಜೋಗಿ ಬಗ್ಗೆ

ಕಿಂದರಜೋಗಿ, ಮಕ್ಕಳಿಗಾಗಿ ತೆರೆದಿರುವ ಮುಕ್ತ ತಾಣ. ದಿನನಿತ್ಯದ ಕಲಿಕೆಯಿಂದ ಹಿಡಿದು, ತಾವೇ ತಾವಾಗಿ ಹೊಸತನ್ನೇನಾದರೂ ಮಾಡಬಲ್ಲೆವು ಎಂಬ ಶಕ್ತಿಯನ್ನು ಮಕ್ಕಳಲ್ಲಿ ತುಂಬುವ ಒಂದು ಸಣ್ಣ ಪ್ರಯತ್ನ. ಯಾವುದೇ ತಂಡ ರಚನೆಯಿಲ್ಲದೆ, ಮಕ್ಕಳೊಡನೆ ತನ್ನಲ್ಲಿರುವ ಕಲೆ, ಕಲಿಕೆ, ಜ್ಞಾನ ಇತ್ಯಾದಿಗಳನ್ನು ಹಂಚಿಕೊಳ್ಳುವ ಎಲ್ಲರಿಗೂ ಇದು ವೇದಿಕೆ. ನೀವೂ ನಮ್ಮೊಂದಿಗೆ ಕೈಜೋಡಿಸ್ತೀರಲ್ಲವೇ? http://kindarajogi.com/

ಭಾನುವಾರ, ನವೆಂಬರ್ 14, 2010

ಕಂಪ್ಯೂಟರ್ ನಲ್ಲಿ ಕೆಲಸ ಮಾಡುವವರಿಗೆ ಕೆಲವೊಂದು ಸಲಹೆಗಳು…


ಹಿಂದೆ ಮುಖದಲ್ಲಿ ಕನ್ನಡಕ ಬಂತು ಎಂದರೆ ವಯಸ್ಸಾಗಿದೆ ಎಂದೇ ಅರ್ಥ. ವಯಸ್ಸಾದರೂ ಹಲವರು ಕನ್ನಡಕ ಧರಿಸುತ್ತಿರಲಿಲ್ಲ. ಅಷ್ಟರ ಮಟ್ಟಿಗೆ ಆರೋಗ್ಯವಂತರಾಗಿರುತ್ತಿದ್ದರು. ಆದರೆ ಕಾಲ ಬದಲಾದಂತೆ, ನಮ್ಮ ಜೀವನ ಶೈಲಿ ಚೇಂಜ್ ಆದಂತೆ ಇಂದು ಐದನೇ ಕ್ಲಾಸಿನ ಹುಡುಗನಿಂದ ಹಿಡಿದು ಪಡ್ಡೆ ಹೈಕಳ ಮುಖದಲ್ಲೂ ಕನ್ನಡಕ ರಾರಾಜಿಸುತ್ತಿರುತ್ತದೆ.
ಬಹಳ ಹೊತ್ತು ಕಂಪ್ಯೂಟರ್, ಟಿವಿ ಮುಂದೆ ಕುಳಿತುಕೊಳ್ಳುತ್ತಿರುವುದರಿಂದ ದೂರದೃಷ್ಟಿ, ಸಮೀಪದೃಷ್ಟಿ, ತಲೆನೋವು ಮುಂತಾದ ನೇತ್ರ ಸಂಬಂಧಿ ಬೇನೆಗಳು ಹಿರಿಯರು ಕಿರಿಯರೆನ್ನದೆ ಎಲ್ಲರನ್ನು ಕಾಡತೊಡಗಿದೆ. ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುವ ಐದು ಮಂದಿಯಲ್ಲಿ ಇಬ್ಬರು ತಲೆನೋವಿನಿಂದ ಬಳಲುತ್ತಿದ್ದರೆ ಉಳಿದೆರಡು ಜನರಿಗೆ ಕಣ್ಣು ನೋವು, ಮತ್ತೊಬ್ಬರಿಗೆ ದೃಷ್ಟಿದೋಷ ಇದಕ್ಕೆಲ್ಲ ಕಾರಣ.
ಎಲ್ಲಾ ವಯಸ್ಸಿನವರು ಶೇ. 64 ರಷ್ಟು ಜನ ಏನಿಲ್ಲವೆಂದರೂ ಒಂದರಿಂದ ಒಂದೂವರೆ ಗಂಟೆ ಕಂಪ್ಯೂಟರ್ ಪರದೆಯ ಮುಂದೆ ಕಳೆಯುತ್ತಿದ್ದಾರೆ. ಪರದೆಯನ್ನು ಎವೆ ಇಕ್ಕದೆ ನೋಡುತ್ತಿರುವುದು ಅನೇಕ ನೇತ್ರ ಸಂಬಂಧಿ ಬೇನೆಗಳು ಬರಲು ಕಾರಣವಾಗಿದೆ. ಕಣ್ಣಿಗೆ ಸುಸ್ತಾಗುವುದರಿಂದ ತಲೆನೋವು, ಮಂದ ದೃಷ್ಟಿ ಸಮೀಪ ಹಾಗೂ ದೂರದೃಷ್ಟಿ ಸಮಸ್ಯೆ ಉಂಟಾಗುತ್ತವೆ. ನಾವು ಮಾಡುವ ಕೆಲಸದ ಮೇಲೂ ದುಷ್ಪರಿಣಾಮವಾಗುತ್ತದೆ. ನೀವು ಕಂಪ್ಯೂಟರ್ ಮುಂದೆ ಕುಳಿತು ಗಂಟೆಗಟ್ಟಲೆ ಕೆಲಸ ಮಾಡುವವರಾದರೆ ಕಾಲಕಾಲಕ್ಕು ಸ್ವಲ್ಪ ವಿರಾಮ ತೆಗೆದುಕೊಳ್ಳುವುದರೀಂದ ಕಣ್ಣಿಗಾಗುವ ಅಪಾಯವನ್ನು ತಪ್ಪಿಸಬಹುದು.
ಸತತ ಕಂಪ್ಯೂಟರ್ ನೋಡುವವರಿಗೆ ಇಲ್ಲಿಗೆ ಕೆಲವು ಸಲಹೆಗಳು…
* ಪರದೆಯನ್ನು ನೋಡುವಾಗ ಮಂಜಾಗಿ ಕಾಣಿಸುತ್ತಿದ್ದರೆ ತಕ್ಷಣ ನೇತ್ರ ವೈದ್ಯರನ್ನು ಕಾಣಿ.
* ಕಣ್ಣನ್ನು ಆಗಾಗ ಮಿಟುಕಿಸುತ್ತಿರಿ. ಇದರಿಂದ ಕಣ್ಣೀರಿನ ಉತ್ಪಾದನೆ ಹೆಚ್ಚಾಗಿ, ದೃಷ್ಟಿಪಟಲವನ್ನು ತೇವವಾಗಿಟ್ಟುಕೊಂಡು ಕಾಪಾಡುತ್ತದೆ.
* ಪ್ರತಿ 20 ನಿಮಿಷಕ್ಕೊಮ್ಮೆ ಕಣ್ಣನ್ನು ಇತರೆಡೆ ಹಾಯಿಸಿ. ಇದರಿಂದ ಕಣ್ಣಿನ ಸ್ನಾಯುಗಳಿಗೆ ವಿರಾಮ ಸಿಗುತ್ತದೆ.
* ನಿಮ್ಮ ಕಣ್ಣು ಹಾಗೂ ಪರದೆಗೆ 16 ರಿಂದ 30 ಇಂಚುಗಳಷ್ಟು ಅಂತರವಿರಲಿ. ಕೆಲವರಿಗೆ 20ರಿಂದ 26 ಇಂಚು ಸೂಕ್ತವೆಂದು ಹೇಳಲಾಗುತ್ತದೆ.
* ಕಂಪ್ಯೂಟರ್ ಪರದೆಯ ಮೇಲ್ಬಾಗ ನಿಮ್ಮ ಕಣ್ಣಿನ ನೇರಕ್ಕೆ ಅಥವಾ ಸಮಾನಾಂತರವಾಗಿರಲಿ.
* ಕಂಪ್ಯೂಟರ್ ಮಾನಿಟರ್ 10 ರಿಂದ 20 ಡಿಗ್ರಿ ಕೋನದಲ್ಲಿ ಬಗ್ಗಿರಲಿ, ಇದರಿಂದ ನಿಮಗೆ ಅನುಕೂಲವಾದ ದೃಷ್ಟಿಕೋನ ಲಭಿಸುತ್ತದೆ.
* ಬಹಳ ಹೊತ್ತು ಡೇಟಾ ಎಂಟ್ರಿ ಕೆಲಸ ಮಾಡುವವರಾಗಿದ್ದರೆ ಮಾನಿಟರ್ ಪಕ್ಕದಲ್ಲಿ ನೀವು ಟೈಪ್ ಮಾಡುತ್ತಿರುವ ಪುಸ್ತಕವನ್ನೋ ದಾಖಲೆಯನ್ನೋ ಇಟ್ಟುಕೊಳ್ಳಲು ಸ್ಟ್ಯಾಂಡ್ ಬಳಸಿ, ಇದರಿಂದ ಓದುವ ಪಠ್ಯ ಹಾಗೂ ಕಂಪ್ಯೂಟರ್ ಪರದೆ ಒಂದೇ ದೂರ, ಎತ್ತರದಲ್ಲಿರುವುದರಿಂದ ಕಣ್ಣಿಗೆ ಸುಸ್ತಾಗುವುದಿಲ್ಲ.
* ರಿವಾಲ್ವಿಂಗ್ ಕುರ್ಚಿಯಲ್ಲಿ ಕುಳಿತು ಕೆಲಸ ಮಾಡಿ. ಇದರಿಂದ ಕಂಪ್ಯೂಟರ್ ಪರದೆಯ ನೇರಕ್ಕೆ ಹಾಗೂ ಸರಿಯಾದ ದೂರಕ್ಕೆ ಅಡ್ಜಸ್ಟ್ ಮಾಡಿಕೊಂಡು ಕಂಫರ್ಟ್ಬಲ್ ಆಗಿ ಕುಳಿತುಕೊಳ್ಳಬಹುದು.
* ಪರದೆಯ ಮೇಲೆ ನಿಮ್ಮ ಕಣ್ಣಿಗೆ ಸ್ಪಷ್ಟವಾಗಿ ಕಾಣುವಂತಹ ಅಕ್ಷರ ಹಾಗೂ ಗಾತ್ರ ಆರಿಸಿಕೊಳ್ಳಿ.ಇದರಿಂದ ಕಣ್ಣಿಗೆ ಆಯಾಸವಾಗುವುದಿಲ್ಲ.
* ಪರದೆಯ ಬಣ್ಣ ಆದಷ್ಟು ತಿಳಿಯಾಗಿರಲಿ. ಡಾರ್ಕ್ ಕಲರ್ ಇದ್ದರೆ ತಲೆನೋವು ಬರುತ್ತದೆ. ಹಿಂಬದಿ ಬಣ್ಣ ಆದಷ್ಟು ತಿಳಿಯಾಗಿರಲಿ .