ಶುಕ್ರವಾರ, ನವೆಂಬರ್ 26, 2010

ದೇಶದಲ್ಲಿರುವ ನಕಲಿ ಹಣ 1.20 ಲಕ್ಷ ಕೋಟಿ ರು!

 
ನಕಲಿ ಹಣದ ಚಲಾವಣೆಯನ್ನು ತಡೆಯಲು ಸರ್ಕಾರ ಅನೇಕ ಕಠಿಣ ಕ್ರಮಗಳನ್ನು ಕೈಗೊಂಡಿದ್ದರೂ ದೇಶದಲ್ಲಿ ಈಗಲೂ ಸುಮಾರು 1,20,000 ಕೋಟಿ ರೂಪಾಯಿಗಳಷ್ಟು ಮೌಲ್ಯದ ನಕಲಿ ಹಣ ಚಲಾವಣೆಯಲ್ಲಿದೆ ಎಂದು ಅಂದಾಜಿಸಲಾಗಿದೆ.

ಇಂದು ದೇಶದ ನಕಲಿ ಕರೆನ್ಸಿ ಚಲಾವಣೆ ಜಾಲದಲ್ಲಿ ಕಾಶ್ಮೀರದಲ್ಲಿ ಕಾರ್ಯನಿರ್ವಹಿಸುತ್ತಿರುವ ಮುಸ್ಲಿಂ ಭಯೋತ್ಪಾದನಾ ಗುಂಪುಗಳು ಸಕ್ರಿಯವಾಗಿದ್ದು ಇವು ಅಫೀಮು, ಚರಸ್, ಹೆರಾಯಿನ್ ಕಳ್ಳ ಸಾಗಣೆಯಲ್ಲೂ ಗಣನೀಯ ಪಾಲು ಹೊಂದಿವೆ. ಬಹುತೇಕ ಈ ಗುಂಪುಗಳಿಗೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಪೂರ್ಣ ಬೆಂಬಲ ನೀಡುತ್ತಿದೆ. ಇನ್ನುಳಿದಂತೆ ದೇಶದೊಳಗಿರುವ ಕೆಲ ಗುಂಪುಗಳು ನಕಲಿ ನೋಟುಗಳ ದಂಧೆಯಲ್ಲಿ ತೊಡಗಿದ್ದರೂ ಇವುಗಳು ಪಾತ್ರ ನಗಣ್ಯವಾಗಿದೆ. ಈ ಗುಂಪುಗಳು ಬಳಸುವ ಕಾಗದದ ಗುಣಮಟ್ಟ ಸಾಮಾನ್ಯವಾಗಿರುವದರಿಂದ ಪತ್ತೆ ಹಚ್ಚಲು ಬಹಳ ಸುಲಭವಾಗಿದೆ. ಆದರೆ ಭಯೋತ್ಪಾದಕ ಗುಂಪುಗಳು ಚಲಾವಣೆ ಮಾಡುತ್ತಿರುವ ನಕಲಿ ನೋಟುಗಳ ಗುಣಮಟ್ಟ ಉತ್ತಮವಾಗಿದ್ದು ಯಂತ್ರದಲ್ಲಿ ಪರೀಕ್ಷಿಸದೆ ಕಂಡು ಹಿಡಿಯುವದು ಕಷ್ಟ. ಈ ಉತ್ತಮ ಗುಣಮಟ್ಟದ ನಕಲಿ ನೋಟುಗಳ ಚಲಾವಣೆಗೆ ಥೈಲ್ಯಾಂಡ್ ಮೂಲ.

ಥೈಲ್ಯಾಂಡ್ ಕಾರಸ್ಥಾನ : ಸರ್ಕಾರ ಪಾಕಿಸ್ತಾನ ಹಾಗೂ ನೇಪಾಳದಿಂದ ಹರಿದು ಬರುತ್ತಿರುವ ನಕಲಿ ಹಣದ ಹರಿವನ್ನು ತಡೆಗಟ್ಟಲು ಬಹುತೇಕ ಯಶಸ್ವಿಯಾಗಿದ್ದರೂ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಎಸ್‌ಐ ನಕಲಿ ನೋಟುಗಳನ್ನು ಚಲಾವಣೆ ಮಾಡಲು ಥೈಲ್ಯಾಂಡನ್ನು ಕೇಂದ್ರವನ್ನಾಗಿರಿಸಿಕೊಂಡು ದೇಶದ ಅರ್ಥ ವ್ಯವಸ್ಥೆಯನ್ನು ಬುಡಮೇಲು ಮಾಡಲು ಪ್ರಯತ್ನಿಸುತ್ತಿದೆ. ಕುಖ್ಯಾತ ಭಯೋತ್ಪಾದಕ ದಾವೂದ್ ಇಬ್ರಾಹಿಂ ಥೈಲ್ಯಾಂಡಿನಿಂದ ನಕಲಿ ಕರೆನ್ಸಿಯನ್ನು ದೇಶದೊಳಗೆ ಪಂಪ್ ಮಾಡುತ್ತಿದ್ದಾನೆ ಎಂದು ಗುಪ್ತಚರ ಮೂಲಗಳ ವರದಿ ಹೇಳುತ್ತದೆ. ಡಿ ಕಂಪೆನಿಯು ವಿವಿಧ ಸರಕುಗಳ, ಡ್ರಗ್ಸ್ ಗಳ ಕಳ್ಳಸಾಗಣೆ, ಹವಾಲ ದಂಧೆ ಮತ್ತು ಮಾಫಿಯಾದಲ್ಲಿ ಸಕ್ರಿಯವಾಗಿದ್ದು ಇದರ ಪ್ರಮುಖ ಏಜೆಂಟ್ ಆಗಿರುವ ಅರ್ಷದ್ ಭಕ್ತಿ ಎಂಬ ಕಳ್ಳ ವ್ಯವಹಾರಗಳ ಪ್ರಮುಖನಾಗಿದ್ದಾನೆ. ನೇರವಾಗಿ ಐಎಸ್‌ಐನ ಉನ್ನತಾಧಿಕಾರಿಗಳಾದ ಮೇಜರ್ ಅಲಿ ಮತ್ತು ಅರ್ಷದ್ ಅವರಿಗೆ ವರದಿ ಮಾಡುತ್ತಾನೆ. ಥೈಲ್ಯಾಂಡಿನಲ್ಲಿ ದಾವೂದ್ ಗ್ಯಾಂಗ್ ಬಲವಾಗಿ ಬೇರು ಬಿಟ್ಟಿದ್ದು ನಕಲಿ ನೋಟುಗಳು ಹಾಗೂ ಡ್ರಗ್ಸ್ ಗಳು ಬಾಂಗ್ಲಾದೇಶದ ಮೂಲಕ ದೇಶದೊಳಗೆ ಬರುತ್ತಿವೆ.

ಬಾಂಗ್ಲಾ ಮೂಲಕ ದೇಶ ಪ್ರವೇಶ : ಮೊದಲಿನಿಂದ ಪಾಕಿಸ್ತಾನದಲ್ಲಿ ನಕಲಿ ನೋಟುಗಳನ್ನು ಮುದ್ರಿಸಿ ನೇಪಾಳ ಮೂಲಕ ದೇಶದೊಳಗೆ ತಂದು ಚಲಾವಣೆ ಮಾಡಲಾಗುತಿತ್ತು. ಆದರೆ 26/11ರ ದಾಳಿಯ ನಂತರ ಐಎಸ್‌ಐ ತನ್ನ ತಂತ್ರವನ್ನು ಬದಲಾಯಿಸಿತು. ಈಗ ಥೈಲ್ಯಾಂಡಿನಲ್ಲೇ ಮುದ್ರಿಸಿ ಬಾಂಗ್ಲಾ ಮೂಲಕ ದೇಶದೊಳಗೆ ಚಲಾವಣೆ ಮಾಡುತ್ತಿದೆ. ಈ ಮಾಹಿತಿಯನ್ನು ಗುಪ್ತಚರ ಮೂಲಗಳು ಸಿಬಿಐ ಜತೆ ಹಂಚಿಕೊಂಡಿದ್ದು, ಈ ಕುರಿತು ತನಿಖೆ ಮುಂದುವರೆದಿದೆ. ಡಿ ಕಂಪೆನಿ 1993ಕ್ಕೂ ಮೊದಲು ಇದೇ ರೀತಿಯಲ್ಲಿ ದೇಶದೊಳಗೆ ಆಯುಧಗಳು, ಬಾಂಬ್ ಗಳನ್ನು ಸರಬರಾಜು ಮಾಡುತಿತ್ತು. ಇದೀಗ ಡಿ ಕಂಪೆನಿಯ ಕಳ್ಳ ವ್ಯವಹಾರಗಳನ್ನು ಪಾಕಿಸ್ತಾನದಲ್ಲಿ ಮುಂದುವರಿಸಬೇಕಾದರೆ ಮೊದಲಿನಂತೆ ಭಾರತದೊಳಗೆ ಶಸ್ತ್ರಾಸ್ತ್ರಗಳನ್ನೂ ಸರಬರಾಜು ಮಾಡಬೇಕು ಎಂದು ಐಎಸ್‌ಐ ತಾಕೀತು ಮಾಡಿದೆ.

ಸರ್ಕಾರದ ಬಿಗಿ ಕಾನೂನಿನ ನಡುವೆಯೂ ಈ ನಕಲಿ ನೋಟುಗಳು ದೇಶದೊಳಗೆ ಪ್ರವೇಶಿಸಲು ಈ ಕಾನೂನುಗಳು ನೋಟುಗಳಂತೆ ಕಾಗದದಲ್ಲಿರುವದೇ ಕಾರಣ ಎನ್ನಲಾಗಿದೆ. ಮುಂದಿನ ದಿನಗಳಲ್ಲಿ ನಕಲಿ ನೋಟುಗಳನ್ನು ದೇಶದೊಳಗೆ ತರಲು ಬಾಂಗ್ಲಾ ಅಲ್ಲದೆ ದುಬೈ ಸೇರಿದಂತೆ ಇತರ ಮಾರ್ಗಗಳನ್ನೂ ಡಿ ಕಂಪೆನಿ ಬಳಸಿಕೊಳ್ಳುವ ಸಾದ್ಯತೆಗಳಿವೆ. ಸರ್ಕಾರ ದೇಶದ ಕರೆನ್ಸಿಯನ್ನು ಮುದ್ರಿಸಲು ಅವಶ್ಯಕತೆಯ ಶೇ.98ರಷ್ಟು ಉತ್ತಮ ಗುಣಮಟ್ಟದ ಕಾಗದವನ್ನು ಯೂರೋಪ್ ನ ದೇಶಗಳಿಂದ ಆಮದು ಮಾಡಿಕೊಳ್ಳುತಿದ್ದು ಇದಕ್ಕಾಗಿ 11 ಕಂಪೆನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಈ ಕಾಗದಕ್ಕಾಗಿ ಸರ್ಕಾರ ವಿದೇಶೀ ಕಂಪೆನಿಗಳನ್ನೇ ಅವಲಂಬಿಸಿಕೊಂಡಿದೆ.

ಕಾಗದದ ಭದ್ರತೆಯ ಮೇಲೆ ಸರ್ಕಾರಿ ನಿಯಂತ್ರಣವಿಲ್ಲ : ದೇಶದಲ್ಲಿ ರಿಸರ್ವ್ ಬ್ಯಾಂಕು ನೋಟುಗಳನ್ನು ಬಿಗಿ ನಿಯಮದಡಿ, ಕಟ್ಟುನಿಟ್ಟಿನ ಸುರಕ್ಷತಾ ಕ್ರಮಗಳಡಿ ಮುದ್ರಿಸುವುದಾದರೂ ಇದಕ್ಕೆ ಬಳಕೆಯಾಗುವ ಕಾಗದದ ಮೇಲೆ ಸರ್ಕಾರಕ್ಕೆ ನಿಯಂತ್ರಣವಿಲ್ಲ. ಏಕೆಂದರೆ ಈ ಕಾಗದಗಳನ್ನು ಆಮದು ಮಾಡಿಕೊಳ್ಳುವಾಗಲೇ ಭದ್ರತಾ ಚಿಹ್ನೆಗಳಾದ ವಾಟರ್ ಮಾರ್ಕ್, ಅಯಸ್ಕಾಂತೀಯ ನೂಲು ಸಹಿತವೇ ದೇಶಕ್ಕೆ ಬಂದಿರುತ್ತದೆ! ಸರ್ಕಾರ ರಾಷ್ಟ್ರಪಿತನ ಚಿತ್ರ ಹಾಗೂ ಸೂಕ್ಷ್ಮ ಅಕ್ಷರಗಳನ್ನು ಮುದ್ರಿಸಬೇಕಾಗಿರುತ್ತದೆ. ಭಯೋತ್ಪಾದಕ ಗುಂಪುಗಳಿಗೆ ಈ ರೀತಿಯ ಕಾಗದವನ್ನು ಪಡೆಯಲು ಕಷ್ಟವೇನೂ ಇಲ್ಲ. ದೇಶದೊಳಗೆ ಪ್ರವೇಶಿಸುವ ಮಾರ್ಗಗಳಲ್ಲಿ ಬಿಗಿ ಪರಿಶೀಲನೆಯಿಂದ ಶೇ.10ರಷ್ಟು ನಕಲಿ ನೋಟುಗಳ ಹಾವಳಿಯನ್ನಷ್ಟೇ ತಡೆಗಟ್ಟಬಹುದು. ಉಳಿದದ್ದು ಕಳ್ಳ ಮಾರ್ಗಗಳಿಂದಲೇ ಬರುತ್ತಿದೆ.

ಸರ್ಕಾರ ನೋಟುಗಳ ಮುದ್ರಣಕ್ಕೆ ಬಳಸಲಾಗುವ ಕಾಗದಗಳನ್ನು ದೇಶದೊಳಗೇ ತಯಾರಿಸಲು ಮುಂದಾಗಬೇಕಿದೆ ಎಂದು ಆರ್ಥಿಕ ತಜ್ಷರು ಹೇಳುತ್ತಾರೆ. ಇದರಿಂದಾಗಿ ದೇಶದ ಕರೆನ್ಸಿಯ ವಿಶಿಷ್ಟ ವಿನ್ಯಾಸ ಹಾಗೂ ಸುರಕ್ಷತೆಗೆ ಹೆಚ್ಚಿನ ಅನುಕೂಲ ಆಗಲಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ