ಭಾನುವಾರ, ನವೆಂಬರ್ 14, 2010

ಕಂಪ್ಯೂಟರ್ ನಲ್ಲಿ ಕೆಲಸ ಮಾಡುವವರಿಗೆ ಕೆಲವೊಂದು ಸಲಹೆಗಳು…


ಹಿಂದೆ ಮುಖದಲ್ಲಿ ಕನ್ನಡಕ ಬಂತು ಎಂದರೆ ವಯಸ್ಸಾಗಿದೆ ಎಂದೇ ಅರ್ಥ. ವಯಸ್ಸಾದರೂ ಹಲವರು ಕನ್ನಡಕ ಧರಿಸುತ್ತಿರಲಿಲ್ಲ. ಅಷ್ಟರ ಮಟ್ಟಿಗೆ ಆರೋಗ್ಯವಂತರಾಗಿರುತ್ತಿದ್ದರು. ಆದರೆ ಕಾಲ ಬದಲಾದಂತೆ, ನಮ್ಮ ಜೀವನ ಶೈಲಿ ಚೇಂಜ್ ಆದಂತೆ ಇಂದು ಐದನೇ ಕ್ಲಾಸಿನ ಹುಡುಗನಿಂದ ಹಿಡಿದು ಪಡ್ಡೆ ಹೈಕಳ ಮುಖದಲ್ಲೂ ಕನ್ನಡಕ ರಾರಾಜಿಸುತ್ತಿರುತ್ತದೆ.
ಬಹಳ ಹೊತ್ತು ಕಂಪ್ಯೂಟರ್, ಟಿವಿ ಮುಂದೆ ಕುಳಿತುಕೊಳ್ಳುತ್ತಿರುವುದರಿಂದ ದೂರದೃಷ್ಟಿ, ಸಮೀಪದೃಷ್ಟಿ, ತಲೆನೋವು ಮುಂತಾದ ನೇತ್ರ ಸಂಬಂಧಿ ಬೇನೆಗಳು ಹಿರಿಯರು ಕಿರಿಯರೆನ್ನದೆ ಎಲ್ಲರನ್ನು ಕಾಡತೊಡಗಿದೆ. ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುವ ಐದು ಮಂದಿಯಲ್ಲಿ ಇಬ್ಬರು ತಲೆನೋವಿನಿಂದ ಬಳಲುತ್ತಿದ್ದರೆ ಉಳಿದೆರಡು ಜನರಿಗೆ ಕಣ್ಣು ನೋವು, ಮತ್ತೊಬ್ಬರಿಗೆ ದೃಷ್ಟಿದೋಷ ಇದಕ್ಕೆಲ್ಲ ಕಾರಣ.
ಎಲ್ಲಾ ವಯಸ್ಸಿನವರು ಶೇ. 64 ರಷ್ಟು ಜನ ಏನಿಲ್ಲವೆಂದರೂ ಒಂದರಿಂದ ಒಂದೂವರೆ ಗಂಟೆ ಕಂಪ್ಯೂಟರ್ ಪರದೆಯ ಮುಂದೆ ಕಳೆಯುತ್ತಿದ್ದಾರೆ. ಪರದೆಯನ್ನು ಎವೆ ಇಕ್ಕದೆ ನೋಡುತ್ತಿರುವುದು ಅನೇಕ ನೇತ್ರ ಸಂಬಂಧಿ ಬೇನೆಗಳು ಬರಲು ಕಾರಣವಾಗಿದೆ. ಕಣ್ಣಿಗೆ ಸುಸ್ತಾಗುವುದರಿಂದ ತಲೆನೋವು, ಮಂದ ದೃಷ್ಟಿ ಸಮೀಪ ಹಾಗೂ ದೂರದೃಷ್ಟಿ ಸಮಸ್ಯೆ ಉಂಟಾಗುತ್ತವೆ. ನಾವು ಮಾಡುವ ಕೆಲಸದ ಮೇಲೂ ದುಷ್ಪರಿಣಾಮವಾಗುತ್ತದೆ. ನೀವು ಕಂಪ್ಯೂಟರ್ ಮುಂದೆ ಕುಳಿತು ಗಂಟೆಗಟ್ಟಲೆ ಕೆಲಸ ಮಾಡುವವರಾದರೆ ಕಾಲಕಾಲಕ್ಕು ಸ್ವಲ್ಪ ವಿರಾಮ ತೆಗೆದುಕೊಳ್ಳುವುದರೀಂದ ಕಣ್ಣಿಗಾಗುವ ಅಪಾಯವನ್ನು ತಪ್ಪಿಸಬಹುದು.
ಸತತ ಕಂಪ್ಯೂಟರ್ ನೋಡುವವರಿಗೆ ಇಲ್ಲಿಗೆ ಕೆಲವು ಸಲಹೆಗಳು…
* ಪರದೆಯನ್ನು ನೋಡುವಾಗ ಮಂಜಾಗಿ ಕಾಣಿಸುತ್ತಿದ್ದರೆ ತಕ್ಷಣ ನೇತ್ರ ವೈದ್ಯರನ್ನು ಕಾಣಿ.
* ಕಣ್ಣನ್ನು ಆಗಾಗ ಮಿಟುಕಿಸುತ್ತಿರಿ. ಇದರಿಂದ ಕಣ್ಣೀರಿನ ಉತ್ಪಾದನೆ ಹೆಚ್ಚಾಗಿ, ದೃಷ್ಟಿಪಟಲವನ್ನು ತೇವವಾಗಿಟ್ಟುಕೊಂಡು ಕಾಪಾಡುತ್ತದೆ.
* ಪ್ರತಿ 20 ನಿಮಿಷಕ್ಕೊಮ್ಮೆ ಕಣ್ಣನ್ನು ಇತರೆಡೆ ಹಾಯಿಸಿ. ಇದರಿಂದ ಕಣ್ಣಿನ ಸ್ನಾಯುಗಳಿಗೆ ವಿರಾಮ ಸಿಗುತ್ತದೆ.
* ನಿಮ್ಮ ಕಣ್ಣು ಹಾಗೂ ಪರದೆಗೆ 16 ರಿಂದ 30 ಇಂಚುಗಳಷ್ಟು ಅಂತರವಿರಲಿ. ಕೆಲವರಿಗೆ 20ರಿಂದ 26 ಇಂಚು ಸೂಕ್ತವೆಂದು ಹೇಳಲಾಗುತ್ತದೆ.
* ಕಂಪ್ಯೂಟರ್ ಪರದೆಯ ಮೇಲ್ಬಾಗ ನಿಮ್ಮ ಕಣ್ಣಿನ ನೇರಕ್ಕೆ ಅಥವಾ ಸಮಾನಾಂತರವಾಗಿರಲಿ.
* ಕಂಪ್ಯೂಟರ್ ಮಾನಿಟರ್ 10 ರಿಂದ 20 ಡಿಗ್ರಿ ಕೋನದಲ್ಲಿ ಬಗ್ಗಿರಲಿ, ಇದರಿಂದ ನಿಮಗೆ ಅನುಕೂಲವಾದ ದೃಷ್ಟಿಕೋನ ಲಭಿಸುತ್ತದೆ.
* ಬಹಳ ಹೊತ್ತು ಡೇಟಾ ಎಂಟ್ರಿ ಕೆಲಸ ಮಾಡುವವರಾಗಿದ್ದರೆ ಮಾನಿಟರ್ ಪಕ್ಕದಲ್ಲಿ ನೀವು ಟೈಪ್ ಮಾಡುತ್ತಿರುವ ಪುಸ್ತಕವನ್ನೋ ದಾಖಲೆಯನ್ನೋ ಇಟ್ಟುಕೊಳ್ಳಲು ಸ್ಟ್ಯಾಂಡ್ ಬಳಸಿ, ಇದರಿಂದ ಓದುವ ಪಠ್ಯ ಹಾಗೂ ಕಂಪ್ಯೂಟರ್ ಪರದೆ ಒಂದೇ ದೂರ, ಎತ್ತರದಲ್ಲಿರುವುದರಿಂದ ಕಣ್ಣಿಗೆ ಸುಸ್ತಾಗುವುದಿಲ್ಲ.
* ರಿವಾಲ್ವಿಂಗ್ ಕುರ್ಚಿಯಲ್ಲಿ ಕುಳಿತು ಕೆಲಸ ಮಾಡಿ. ಇದರಿಂದ ಕಂಪ್ಯೂಟರ್ ಪರದೆಯ ನೇರಕ್ಕೆ ಹಾಗೂ ಸರಿಯಾದ ದೂರಕ್ಕೆ ಅಡ್ಜಸ್ಟ್ ಮಾಡಿಕೊಂಡು ಕಂಫರ್ಟ್ಬಲ್ ಆಗಿ ಕುಳಿತುಕೊಳ್ಳಬಹುದು.
* ಪರದೆಯ ಮೇಲೆ ನಿಮ್ಮ ಕಣ್ಣಿಗೆ ಸ್ಪಷ್ಟವಾಗಿ ಕಾಣುವಂತಹ ಅಕ್ಷರ ಹಾಗೂ ಗಾತ್ರ ಆರಿಸಿಕೊಳ್ಳಿ.ಇದರಿಂದ ಕಣ್ಣಿಗೆ ಆಯಾಸವಾಗುವುದಿಲ್ಲ.
* ಪರದೆಯ ಬಣ್ಣ ಆದಷ್ಟು ತಿಳಿಯಾಗಿರಲಿ. ಡಾರ್ಕ್ ಕಲರ್ ಇದ್ದರೆ ತಲೆನೋವು ಬರುತ್ತದೆ. ಹಿಂಬದಿ ಬಣ್ಣ ಆದಷ್ಟು ತಿಳಿಯಾಗಿರಲಿ .

1 ಕಾಮೆಂಟ್‌: