ಮಂಗಳವಾರ, ಅಕ್ಟೋಬರ್ 5, 2010

ಅತಿಯಾದ ಮೊಬೈಲ್ ಬಳಕೆ: ಆರೋಗ್ಯದಲ್ಲಿ ಆಗುತ್ತದೆ ತೊಂದರೆ

ಕಸ ಗುಡಿಸುವವರಿಂದ ಹಿಡಿದು ಆಫೀಸರ್ಗಳವರೆಗೆ ಮೊಬೈಲ್ ಬಳಕೆ ಅನಿವಾರ್ಯವಾಗಿದೆ. ಸೈಕಲ್ ತುಳಿಯುವವನಿಂದ ಹಿಡಿದು ಮರ್ಸಿಡಿಸ್ ಬೆಂಜ್ ಕಾರಿನಲ್ಲಿ ಓಡಾಡುವವರಿಗೂ ಚಲಿಸುವ ದೂರವಾಣಿ ಬೇಕೇ ಬೇಕು.
ಮೊಬೈಲ್ ಅನ್ನು ನಾವು ಎಷ್ಟು ಅವಲಂಬಿಸಿದ್ದೇವೆಂದರೆ ಹೆಂಡತಿ, ಪ್ರಿಯಕರ , ಸ್ನೇಹಿತ ಬೇಕಾದರೆ ಮನೆಯವರನ್ನು ಬಿಟ್ಟೇವು ಆದರೆ ಹ್ಯಾಂಡ್ ಫೋನ್ ಮಾತ್ರ ಬಿಡಲೊಲ್ಲೇವು ಎನ್ನುವವರೇ ಇಂದು ಹೆಚ್ಚಾಗಿದ್ದಾರೆ. ಅಷ್ಟರ ಮಟ್ಟಿಗೆ ಇದು ಜನಮಾನಸವಾಗಿದೆ. ಸ್ವಲ್ಪ ಹೊತ್ತು ಇದು ಇಲ್ಲದಿದ್ದರೆ ಚಡಪಡಿಸಿಬಿಡುತ್ತೇವೆ. ಏನೋ ಕಳೆದುಕೊಂಡ ಭಾಸ. ಏಕೆಂದರೆ ಇದೇ ನಮ್ಮ ಮನರಂಜನಾ, ಸಂಗಾತಿ, ಫ್ರೆಂಡ್, ಫಿಲಾಸಫರ್, ಗೈಡ್ ಹೀಗೆ ಹತ್ತು ಹಲವು.
ಒಂದು ಸೆಲ್ಫೋನ್ ಎಂಬುದು ಕಂಪ್ಯೂಟರ್, ಇಂಟರ್ನೆಟ್, ಮ್ಯೂಸಿಕ್ಪ್ಲೇಯರ್, ಟಿವಿ ಎಲ್ಲವೂ ಹೌದು. ಸೆಲ್ ಇದೆ ಎಂದೇ ವಾಚ್ ಕಟ್ಟುವುದನ್ನು ಬಿಟ್ಟಿದ್ದೇವೆ, ಕ್ಯಾಲ್ಕ್ಯುಲೇಟರ್ , ಅಲಾರಾಂ ಇಡುವುದನ್ನು ಬಿಟ್ಟಿದ್ದೇವೆ. ಹೀಗಾಗಿ ಸೆಲ್ ಫೋನ್ ಬಳಕೆ ಬಗ್ಗೆ ಯಾರು , ಏನು ಎಷ್ಟು ಎಚ್ಚರಿಕೆ ಹೇಳಿದರೂ ಅದು ಕೇಳಿದಷ್ಟೇ ಹೊತ್ತು ಎನ್ನುವುದು ಗೊತ್ತಿದೆ. ಆದರೂ ಅದರ ರೇಡಿಯೇಷನ್ ಬಗ್ಗೆ ದೀರ್ಘಾವಧಿಯಲ್ಲಿ ಅದರಿಂದಾಗುವ ತೊಂದರೆಗಳ ಬಗ್ಗೆ ಎಚ್ಚರಿಸುವುದು ತಪ್ಪಾಗಲಿಕ್ಕಿಲ್ಲವೇನೋ.
ನಾವು ಮೊಬೈಲ್ಗೆ ಎಷ್ಟು ಅಂಟಿಕೊಂಡಿದ್ದೀವೋ ಅಷ್ಟೇ ತೊಂದರೆಗಳು ಎದುರಿಸಬೇಕಾಗುತ್ತದೆ ಎಂದು ತಜ್ಞರು ಹೇಳಿದರೂ ಯಾರೂ ತಲೆಕೆಡಿಸಿಕೊಂಡಂತಿಲ್ಲ. ಹ್ಯಾಂಡ್ಫೋನ್ ಹೆಚ್ಚು ಬಳಕೆಯಿಂದಾಗುವ ದುಷ್ಪರಿಣಾಮಗಳ ಕುರಿತು ಒಂದು ಕಿರು ಮಾಹಿತಿ ಇಲ್ಲಿದೆ.
* ನಮ್ಮ ದೇಹದ ಉಷ್ಣತೆ ಸೆಲ್ಫೋನ್ನಿಂದ ಹೆಚ್ಚಾಗುತ್ತದೆ. ಅದರಿಂದ ಹೊರಸೂಸುವ ರೇಡಿಯೋ ತರಂಗಗಳನ್ನು ಹೆಚ್ಚು ಹೀರಿಕೊಳ್ಳುವ ದೇಹದ ಭಾಗ ಎಂದರೆ ತಲೆ ಹಾಗೂ ಕತ್ತು. ಅಧಿಕ ಬಳಕೆಯಿಂದ ಜೀವಕೋಶ ಹಾಗೂ ಅಂಗಾಂಶಗಳ ಮೇಲಿನ ಅಪಾಯ ದ್ವಿಗುಣಗೊಳ್ಳುತ್ತದೆ.

* ಗರ್ಭಿಣಿಯರು ಸೆಲ್ಫೋನ್ ಬಳಕೆ ಮಾಡಿದರೆ ಹಾನಿ ಎನ್ನುವುದು ಬಹುತೇಕ ಎಲ್ಲರಿಗೂ ಗೊತ್ತು. ಆದರೆ ಅದು ಕ್ರಮೇಣ ಸಂತಾನೋತ್ಪತ್ತಿಯ ಮೇಲೂ ಪರಿಣಾಮ ಬೀರುತ್ತದೆ. ಗರ್ಭದಲ್ಲಿರುವ ಭ್ರೂಣ ಸರಿಯಾಗಿ ಬೆಳೆಯದಂತೆ ಮಾಡಬಲ್ಲದು. ಇಲ್ಲವಾದಲ್ಲಿ ಏನಾದರೂ ತೊಂದರೆ ಕಂಡುಬರುವುದು.
* ಮಿದುಳಿಗೆ ಹೆಚ್ಚಿನ ಕೆಲಸ ನೀಡಿ ಅಲ್ಲಿನ ಕೋಶಗಳ ಮೇಲೆ ಒತ್ತಡ ಹೆಚ್ಚಿಸಬಹುದು. ನಿದ್ರೆಯಲ್ಲಿ ವ್ಯತ್ಯಾಸ ಕಂಡು ಬಂದರೆ ತಕ್ಷಣವೇ ಎಚ್ಚೆತ್ತುಕೊಳ್ಳುವುದು ಒಳಿತು.
* ಮಕ್ಕಳಲ್ಲಿ ನರಗಳ ಬೆಳವಣಿಗೆ ಆಗುತ್ತಿರುತ್ತದೆ. ನರಮಂಡಲದ ರಚನೆ ಇನ್ನೂ ಬೆಳವಣಿಗೆ ಹಂತದಲ್ಲಿರುವಾಗ ಮೊಬೈಲ್ ಬಳಕೆಯಾದರೆ ಅಲ್ಲಿನ ನರಗಳು ಶಕ್ತಿಹೀನವಾಗುತ್ತವೆ. ಇದು ಮುಂದೆ ಸ್ಮರಣ ನಾಶ. ಕಲಿಕೆಯ ತೊಂದರೆ ಹಾಗೂ ನಡವಳಿಕೆಯ ಸಮಸ್ಯೆಗಳು ತಲೆದೋರಬಹುದು.
*ಸೆಲ್ಫೋನ್ ಹಾಗೂ ಇದರ ಟವರ್ಗಳಿಂದ ಹೊರಬರುವ ವಿಕಿರಣಗಳಿಂದ ಡಿಎನ್ಎ ಕಣಗಳಿಗೆ ತೊಂದರೆಯಾಗುತ್ತದೆ. ಮಿದುಳಿನ ಫ್ರೀ ರ್ಯಾಡಿಕಲ್ಸ್ ಹಾಗೂ ಸ್ಪೈಸ್ ಪ್ರೊಟೀನ್ಸ್ ಮೇಲೆ ಪರಿಣಾಮ ಉಂಟಾಗಿ ವ್ಯವಸ್ಥೆಗೆ ಹಾನಿಯಾಗುತ್ತದೆ. ಇದರಿಂದ ಮರೆವು, ಪಾಶ್ವವಾಯು, ಮಲ್ಪಿಪಲ್ ಸ್ಲೈರೊಸಿಸ್ ಮತ್ತಿತರ ಸಮಸ್ಯೆ ಉಂಟಾಗಬಹುದು.
* ಸುಮಾರು 10 ವರ್ಷಕ್ಕೂ ಹೆಚ್ಚು ಕಾಲ ಮಿತಿ ಮೀರಿ ಸೆಲ್ ಫೋನ್ ಬಳಕೆಯಿಂದ ಕಿವಿಗಳಲ್ಲಿ ಗಡ್ಡೆ ಉಂಟಾಗುವ ಅಪಾಯ ನಾಲ್ಕು ಪಟ್ಟು ಹೆಚ್ಚು ಮೆದುಳು ಕ್ಯಾನ್ಸರ್ನ ಅಪಾಯ ಎರಡು ಪಟ್ಟು ಜಾಸ್ತಿ. ಕಿವಿ ಸಂಪೂರ್ಣವಾಗಿ ತನ್ನ ಶಕ್ತಿ ಕಳೆದುಕೊಳ್ಳಬಹುದು.
ಅದಕ್ಕಾಗಿಯೇ ಈ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನ. ನೋಡಿ ಈಗಲಾದರೂ ಸೆಲ್ ಫೋನ್ ಬಳಕೆ ಪೂರ್ಣ ಬಿಡಿ ಎನ್ನಲಾಗುವುದಿಲ್ಲ. ಸ್ವಲ್ಪ ಮಟ್ಟಿಗಾದರೂ ಕಡಿಮೆ ಮಾಡಿ. ಆರೋಗ್ಯ ಚನ್ನಾಗಿಟ್ಟುಕೊಳ್ಳಿ .

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ