ಸೋಮವಾರ, ಏಪ್ರಿಲ್ 26, 2010

ಕಂಪ್ಯೂಟರ್ ಮತ್ತು ಕನ್ನಡ ಅನುವಾದ ಹಾಗೂ ಅಧ್ವಾನಗಳು

    ಇಂಗ್ಲೀಷ್ ನಮ್ಮ ಭಾಷೆಯಲ್ಲ. ಆದರೂ ಇಂಗ್ಲೀಷ್ ಪದಗಳನ್ನು ನಮ್ಮ ಆಡುಭಾಷೆಯಲ್ಲಿ ಬಳಸುವುದು ತೀರಾ ಸಹಜವಾಗಿದೆ; ಸರ್ವಮಾನ್ಯವೇ ಆಗಿಬಿಟ್ಟಿದೆ. ಅಷ್ಟೇ ಅನಿವಾರ್ಯವಾಗಿ ಹೊಸ ಹೊಸ ಇಂಗ್ಲೀ಼ಷ್ ಪದಗಳು ನಮ್ಮ ಕನ್ನಡಕ್ಕೆ ಸೇರ್ಪಡೆಯಾಗುತ್ತಲೇ ಇರುವುದನ್ನೂ ನಾವು ಕಾಣುತ್ತಿದ್ದೇವೆ; ಅದೇನೂ ಅಸಹಜವಲ್ಲವೆಂಬತೆ ಅವುಗಳನ್ನು ಒಪ್ಪಿಕೊಳ್ಳುತ್ತಿದ್ದೇವೆ.
        ಇನ್ನೂ ಇಂಗ್ಲೀಷ್ ಚೆನ್ನಾಗಿ ಮಾತನಾಡಲು ಬಾರದೇ ಇರುವವರೇ ಕನ್ನಡ ಮಾತನಾಡುವಾಗ ಹೆಚ್ಚು ಇಂಗ್ಲೀಷ್ ಪದಗಳನ್ನು "ಮಿಕ್ಸ್" ಮಾಡುತ್ತಾರೆ. ಕಂಪ್ಯೂಟರ‍್ ಬಂದಮೇಲಂತು ಅದರ ಪರಿಭಾಷೆಯ ಬಹಳಷ್ಟು ತಾಂತ್ರಿಕ ಶಬ್ದಗಳು, ಕಂಪ್ಯೂಟರ‍್ ಕಲಿಯುವ ಕಲಿತಿರುವವರೆಲ್ಲರ ಹಾಗೂ ಕಂಪ್ಯೂಟರ‍್ ಬಗ್ಗೆ ಮಾತನಾಡುವ ಜನಸಾಮಾನ್ಯರ ಬಾಯಲ್ಲಿ ಇನ್ನಿಲ್ಲವೆಂಬಂತೆ ಹೊರಬರತೊಡಗಿವೆ; ಬಳಕೆಯಲ್ಲಿವೆ. ಮೊಬೈಲ್ ಮತ್ತು ಟಿ.ವಿ.ಚಾನೆಲ್ಸ್‌ ಷೋಗಳ ವಿಷಯದಲ್ಲಂತು ಇದು ತೀರಾ ಸರ್ವೇಸಾಮಾನ್ಯವೆನಿಸಿದೆ.
          ಇನ್ನು ಸ್ಪೋಕನ್‌ ಇಂಗ್ಲೀಷ್ ಇಲ್ಲದೇ ತಮ್ಮ ಮಕ್ಕಳು ಈ ಪ್ರಪಂಚದಲ್ಲಿ ಉತ್ತಮ ಸಂಪಾದನೆ ಮಾಡಲು ಸಾಧ್ಯವೇ ಇಲ್ಲವೆಂಬ ಭಾವನೆ ಹೆತ್ತವರಲ್ಲಿ ಮೂಡುತ್ತಿರುವದಂತೂ ಖೇದಕರ ಸಂಗತಿಯೇ ಆಗಿದೆ. ರೂಢಿಯಲ್ಲಿ ಇಂಗ್ಲೀಷ್ ಪದಗಳು ನಮ್ಮ ಮಾತೃಭಾಷೆಯೊಂದಿಗೆ ಬೆರೆಯುವುದು ಅನಿವಾರ್ಯವಾದರೆ ಪರವಾಯಿಲ್ಲ.
         ವಿಜ್ಞಾನ- ತಂತ್ರಜ್ಞಾನದಲ್ಲಿರುವ ಒಂದು ಇಂಗ್ಲೀಷ್ ಪದಕ್ಕೆ ಸಮಾನವಾದ ಅಥವಾ ಸಮಾನ ರೂಪದ ಇನ್ನೊಂದು ಪದ ಸಿಗದೇ ಇದ್ದಾಗ, ಸಿಕ್ಕರೂ ಅದು ಇಂಗ್ಲೀಷ್ ಪದಕೊಡುವಷ್ಟು ತೃಪ್ತಿಕೊಡದಿದ್ದಾಗ, ಆ ಇಂಗ್ಲೀಷ್ ಪದದಮೋಹವೇ ನಮ್ಮನ್ನು ಕಾಡುವುದುಂಟು. ಆಗ ಆ ಪದವನ್ನೇ ಕನ್ನಡದೊಂದಿಗೆ ಬಳಸಿಕೊಳ್ಳುವುದೂ ಅದರ ಅರ್ಥವಿವರಣೆಯನ್ನೂ ಜೊತೆಗೆ ಹೇಳುವುದೂ ಸೂಕ್ತವೆನಿಸುತ್ತದೆ. ಅದೇನೂ ಅಸಹಜವೆನಿಸುವುದಿಲ್ಲ; ಬರವಣಿಗೆಯಲ್ಲಿ ಸೋಪಜ್ಞತೆಗೂ ಬಾಧಕವಾಗುವುದಿಲ್ಲ. ಆದರೆ, ಇಂಗ್ಲೀಷ್ ಪದವೊಂದರ ಮೋಹಕ್ಕಿಂತ ಇಂಗ್ಲೀಷ್ ವ್ಯಾಮೋಹವೇ ಮೇಲುಗೈಯಾದರೆ, ಅದು ಅತಿಯಾಗುತ್ತದೆ; ಅತಿರೇಕದ ಪರಮಾವಧಿಯೂ ಆಗಿಬಿಡುವುದಿದೆ.
            ಈ ಮಾತು ಬಂದಾಗ ಹೀಗೂ ಅನಿಸತ್ತದೆ, ನಮ್ಮ ಕನ್ನಡಿಗರು ಅಭಿಮಾನಶೂನ್ಯರು ಇಂಗ್ಲೀಷ್ ವ್ಯಾಮೋಹವೇ ಅವರಿಗೆ ಇತರ ಭಾಷೆಯವರಿಗಿಂತಲೂ ಅಧಿಕ. ನಗರದ ಕೆಲವು ವಿದ್ಯಾವಂತ ಕುಟುಂಬಗಳಲ್ಲಿ ಅದೆಷ್ಟು ಹುಚ್ಚು ವ್ಯಾಮೋಹವಾಗಿಯೂ ಆವರಿಸಿಕೊಂಡಿದೆಯೆಂದರೆ, ಅವರ ೨-೩ ವರ್ಷದ ಎಳೆಯ ಮಕ್ಕಳನ್ನೂ ತಮ್ಮ ಮನೆಗಳಲ್ಲಿ, ಸಭೆ ಸಮಾರಂಭಗಳಲ್ಲಿ ಅಷ್ಟೇಕೆ ದೇವಸ್ಥಾನಗಳಲ್ಲಿಯೂ ಸಹ ಇಂಗ್ಲೀಷ್ ನ ತುಣಕು ಪದಗಳಿಂದಲೇ ಮಾತನಾಡಿಸುತ್ತಾರೆ. ಹಾಗೆ ಚಿಕ್ಕವರಿರುವಾಗಲೆ ಅವರಿಗೆ ಇಂಗ್ಲೀಷ್ ಕಲಿಸಿದರೇನೆ ಮಾತ್ರ ಅವರ ಬದುಕು ಭವಿಷ್ಯ ಉಜ್ವಲವಾಗುತ್ತದೆಂಬ ಭ್ರಮೆ! ತಮ್ಮ ಮಾತೃಭಾಷೆಯಾದ ಕನ್ನಡ ಓದಲು ಬರೆಯಲೂ ಬಾರದಿದ್ದರೂ ಚಿಂತೆಯಿಲ್ಲ ಒಟ್ಟಿನಲ್ಲಿ ಅವರು ಇಂಗ್ಲೀಷ್ ಪಾರಂಗತರಾಗಬೇಕಷ್ಟೇ ಎಂಬ ಧೋರಣೆ! ಅದರಿಂದ ತಮ್ಮಮಕ್ಕಳು ಮಾತೃಭಾಷೆಯ ಅಮೂಲ್ಯವಾದ ಪರಿಜ್ಞಾನದಿಂದ ವಂಚಿತರಾಗುತ್ತಿದ್ದಾರೆ, ಮಕ್ಕಳಿಗೆ ತಾವು ಎಂತಹ ದ್ರೋಹವೆಸಗುತ್ತಿದ್ದೇವೆಂಬುದನ್ನೂ ಅವರು ಯೋಚಿಸಲಾರರು.
           ಇಷ್ಟೆಲ್ಲ ಹೇಳಿದ ಮೇಲೂ ಒಂದು ಮುಖ್ಯವಾದ ಅಂಶವನ್ನು ನಾವುಗಳು ಅಲ್ಲಗೆಳೆಯುವುದು ಸಾಧ್ಯವಿಲ್ಲ. ಆಯಾ ಭಾಷೆಗೆ ಅದರದೇ ಆದ ಪದಭಾಗ್ಯವೆಂಬುದಿದೆ. ಅಂತಹ ಪದ ಒಂದರ ಉಚ್ಛಾರಣಾ ಸ್ವರದಲ್ಲೇ ಅದೇನೋ ಮೋಡಿಯಿದೆ, ಅದರದೇ ಅರ್ಥವಂತಿಕೆಯ ಜೀವಧ್ವನಿಯಿದೆ. ಆದ್ದರಿಂದ, ಆ ಭಾಷೆಯ ಪದವನ್ನೇ ನಾವು ಹಾಗೆ ನಮ್ಮ ಭಾಷೆಯೊಂದಿಗೇ ಬಳಸಿಕೊಳ್ಳುವುದೂ ಕೆಲವೊಂದು ಸಂದರ್ಭಗಳಲ್ಲಿ ಅನಿವಾರ್ಯವೇ ಆಗಿಬಿಡುತ್ತದೆ;ನಮಗೇ ಅರಿವಿಲ್ಲದೇ. ಅಂತಹ ಪದಗಳು ನಮ್ಮ ನುಡಿಗೆ ಬಂದ ಭಾಗ್ಯವೂ ಆಗಿರುತ್ತದೆ.
         ಅದಕ್ಕೆ ಉದಾಹರಣೆಯಾಗಿ ಇಂಗ್ಲೀಷ್ ನ ಹಲವಾರು ಪದಗಳನ್ನೂ ಉಲ್ಲೇಖಿಸಬಹುದಾಗಿದೆ. ಮೊದಲನೆಯದಾಗಿ "ಕಂಪ್ಯೂಟರ‍್" ಎಂಬ ಪದವನ್ನೇ ತೆಗೆದುಕೊಳ್ಳಿ, ಅದು ಕೊಡುವ ಜೀವಧ್ವನಿ ಮತ್ತು ಅರ್ಥವ್ಯಾಪ್ತಿ ಕನ್ನಡದ ಗಣಕ ಪದ ಕೊಡಲು ಸಾಧ್ಯವಿಲ್ಲ. (ಕಂಪ್ಯೂರ‍್ ಎಂತಹ ಉನ್ನತ ಮಟ್ಟದ ಸಂಸ್ಕರಣೆಯನ್ನೂ ಗಣಿತ ಮತ್ತು ತಾರ್ಕಿಕ ಘಟಕದಲ್ಲೇ ಮಾಡುತ್ತದೆಯಾದರೂ) ನಮ್ಮ ಜನ "ಕಂಪ್ಯೂಟರ‍್" ಎಂದು ಹೇಳಲು ಇಷ್ಟಪಡುತ್ತಾರೆಯೇ ಹೊರತು "ಗಣಕ" ಎಂದು ಹೇಳುವುದಿಲ್ಲ. ಟಿ.ವಿ. ಎನ್ನುತ್ತಾರೆ ದೂರದರ್ಶನ ಎನ್ನುವುದಿಲ್ಲ. ಮೊಬೈಲ್- ಸೆಲ್ ಫೋನ್‌, ಹ್ಯಾಂಡ್ ಸೆಟ್ ಎಂಬ ಪದಗಳು ಇವುಗಳಿಗೆ ಕನ್ನಡದಲ್ಲಿ ಸಮಾನ ಪದವೊಂದಿರುವುದೇ ಎಂದೇನೂ ತಲೆಕೆಡಿಸಿಕೊಳ್ಳುವುದೇ ಇಲ್ಲ.
          ಇದೆಲ್ಲವೂ ನಮ್ಮ ದಿನಬಳಕೆಯ ರೂಢಿಗತ ಅಭ್ಯಾಸವೂ ಹೌದೆನ್ನಬಹುದಾಗಿದೆ. ಯಾಕೆಂದರೆ, ಈಗಾಗಲೇ ರೂಢಿಯಲ್ಲಿರುವ ಆಯಾ ಪದವನ್ನು ಹಾಗೆಯೆ ಬಳಸಿಕೊಳ್ಳವುದು ನಮಗೆ ಅತ್ಯಂತ ಆಪ್ಯಾಯಮಾನವೆನಿಸಿಬಿಟ್ಟಿರುತ್ತದೆ. ಇದು ಒಂದು ರೀತಿ ಆ ಭಾಷೆಗೆ ಅದರದೇ ಸೋಗಡಿರುವಂತ ಪದಮೋಹವಲ್ಲದೇ ಇನ್ನೇನು!
                ಹಾಗೆಯೇ ನಮ್ಮ ಕನ್ನಡವೂ ತನ್ನದೇ ಪದಭಾಗ್ಯವನ್ನು ಹೊಂದಿದೆ. ಅಂತಹ ಪದ-ಸಂಪದಗಳಿಗೆ ಸಮಾನವಾದ ಇಂಗ್ಲೀಷ್ ಪದಗಳು ದೊರೆತರೂ ಕನ್ನಡದ ಆ ಪದಗಳ ಅರ್ಥವಂತಿಕೆಯನ್ನು ಅವುಗಳಿಗೆ ಸಮಾನವೆನಿಸುವ ಇಂಗ್ಲೀಷ್ ಪದಗಳು ಕೊಡಲಾರವೆಂದೇ ಎಷ್ಟೋ ಸಂದರ್ಭಗಳಲ್ಲಿ ಅನ್ನಿಸಿಬಿಡುತ್ತದೆ. ಉದಾಹರಣೆಗೆ ಕನ್ನಡದ ಪರಾಂಬರಿಕೆ, ಪರಿಗ್ರಹಿಸು, ಕ್ರಿಯಾಶೀಲ, ಜೀವಧ್ವನಿ, ವಿದ್ಯುಕ್ತ, ಅಭಿಜ್ಞಾನ, ಅಪೂರ್ವ, ಅನಿರ್ವಚನೀಯ, ಕರ್ಮ, ಅಪರಕರ್ಮ, ಅನುಸಂಧಾನ.... ಇನ್ನೂ ಬಹಳ ಸಿಗುತ್ತವೆ.. ಆದ್ದರಿಂದ, ಭಾಷಾಂತರ ಮಾಡುವಾಗ ಇಂಗ್ಲೀಷ್‌ ಪದಗಳಿಗೆ ಸಮಾನ ಪದಗಳು ತೃಪ್ತಿಕೊಡದಿದ್ದಾಗ ಅವುಗಳಿಗೆ ಸಮಾನರೂಪದ ಕನ್ನಡ ಪದಗಳ ಜೋಡಣೆ ಮಾಡುವುದು ರೂಢಿಯಲ್ಲಿದೆ; ಅದು ಅನಿವಾರ್ಯವೂ ಆಗುತ್ತದೆಯಷ್ಟೇ; ಭಾಷೆಯ ಓಘಕ್ಕೆ ತಡೆಯೊಡ್ಡದ ರೀತಿಯಲ್ಲಿ ಅವಶ್ಯವೂ ಆಗಿಬಿಡುತ್ತದೆ.
           ಇತ್ತೀಚೆಗೆ ವಿಜಯ ಕರ್ನಾಟಕದಲ್ಲಿ "ಪದಭಾಗ್ಯ ಹಾಗೂ ನುಡಿಭಾಗ್ಯ" ಎಂಬ ಲೇಖನ ಬಂದಿದೆ. ವಿದ್ವಾಂಸರಾದ ಕೆ.ವಿ.ತಿರುಮಲೇಶ್ ಅವರು, ಪದಭಾಗ್ಯವೆಂದರೇನು ಮತ್ತು ನುಡಿಭಾಗ್ಯವೆಂದರೇನೆಂದು ಬರೆಯುತ್ತಾರೆ. ಭಾಷೆ-ಭಾಷಾಂತರದಲ್ಲಿ ಒಂದು ಸೂಕ್ತ ಪದ ಸಿಗದಿದ್ದಾಗ, ಸಿಗುವ ಪದಗಳು ಕೊಡುವ ಅರ್ಥ ತೃಪ್ತಿಕೊಡದಿರುವಾಗ ಅದಕ್ಕಾಗಿ ಅವರು ಪಟ್ಟ ಪ್ರಾಮಾಣಿಕ ಪರಿಶ್ರಮವನ್ನೂ ಚೆನ್ನಾಗಿ ವಿವರಿಸಿದ್ದಾರೆ. ಭಾಷಾಂತರಕಾರರೆಲ್ಲರೂ ಓದಲೇ ಬೇಕಾದ ಲೇಖನವಿದು.
          ಹೇಳಬೇಕೆಂದರೆ, ಕನ್ನಡದಲ್ಲಿ ಕಂಪ್ಯೂಟರ‍್ ಕಲಿಕೆಗೆಂದೇ ಬಂದಿರುವ ಒಂದೊಂದೂ ಕನ್ನಡ ಪುಸ್ತಕಗಳೂ ಒಂದೊಂದು ರೀತಿಯಲ್ಲಿ ಕಂಪ್ಯೂಟರ‍್ ಪರಿಭಾಷೆಯ ತಾಂತ್ರಿಕ ಪದಗಳಿಗೆ ಕನ್ನಡ ಅನುವಾದವನ್ನು ಕಂಡುಕೊಂಡಿವೆ. ಅವುಗಳಲ್ಲಿ ಕೆಲವಂತೂ ಕನ್ನಡದಲ್ಲಿ ತಾಂತ್ರಿಕ ಶಬ್ದಗಳಿಗೆ ಸಮಾನ ಅಥವಾ ಸಮಾನ ರೂಪದ ಅರ್ಥಕೊಡುವಂಥ ಪದಗಳೇ ಇಲ್ಲವೆಂಬಂತೆ ಕನ್ನಡವನ್ನೇ ಬಡವಾಗಿಸಿವೆ. ಅಯ್ಯೋ, ಕನ್ನಡದಲ್ಲಿ ಕಂಪ್ಯೂಟರ‍್ ಕಲಿಕೆ ಎಂದರೆ ಹೀಗೇಯೆ ಎಂಬಂತೆ ನಗೆಪಾಟಲಿಗೆಡೆಮಾಡಿಕೊಟ್ಟಿವೆ! ಅದಕ್ಕೇ ಕಂಪ್ಯೂಟರ‍್ ನ್ನು ಕಲಿತರೆ ಇಂಗ್ಲೀಷ್ ನಲ್ಲೇ ಎಂದು ಗೊಣಗುವವರಿಗೆ ಇನ್ನಷ್ಟು ಅವಕಾಶಮಾಡಿಕೊಟ್ಟಿವೆ. ಅವುಗಳಿಗೆ ಇನ್ನೂ ಕೆಲವು ಉದಾಹರಣೆಗಳೆದಂದರೆ,
     "ಪ್ರಾಸೆಸಿಂಗ್" ಗೆ ಸಮಾನ ಪದ "ಪ್ರಕ್ರಿಯೆ" ಎಂದರೆ ಅದ್ಹೇಗೆ ಸರಿ?
-ಕ್ರಿಯೆಗೊಂದು ಪ್ರತಿಕ್ರಿಯೆ, ಅಥವಾ ಕ್ರಿಯೆ ಪ್ರಕ್ರಿಯೆಗಳು ಸೇರಿ ಉಂಟಾಗುವುದಿದೆಯಲ್ಲ ಅದೇ "ಪ್ರಾಸೆಸಿಂಗ್"
ಅಂದರೆ "ಸಂಸ್ಕರಣೆ" ಎಂಬುದೇ ಸರಿಯಾದ ಸೂಕ್ತವಾದ ಕನ್ನಡ ಪದ.
      ಇನ್ ಪುಟ್ ಮತ್ತು ಔಟ್ ಪುಟ್ ಗೆ ಸಮಾನ ಪದ ಆಗಮನ ಮತ್ತು ನಿರ್ಗಮನ ಎಂಬ ಪದಗಳು ಸಮಾನವಾಗುವುದಿಲ್ಲ.
      -ಅದಾನ ಮತ್ತು ಪ್ರದಾನ ವೆಂಬುದೇ ಸರಿಯಾದ ಅರ್ಥ ಕೊಡುತ್ತದೆ. ಯಾಕೆಂದರೆ, "ಆಗಮನ" ಕೊಡುವ ಅರ್ಥವನ್ನು
"ಅದಾನ" ಕೊಡುವ ಅರ್ಥದೊಂದಿಗೆ ತೂಗಿ ನೋಡಿದರೆ ನಮಗೇ ತಿಳಿಯುತ್ತದೆ.
-ಆಗಮನ ಎಂದರೆ ಯಾರೊ ಒಬ್ಬರು ಆಗಮಿಸಿದರು ಎಂಬ ಅರ್ಥ. "ಅದಾನ" ಎಂದರೆ ಯಾರೇ ಆಗಲಿ ತನ್ನೊಳಗೇ ತಾನು ಸ್ವೀಕಾರ ಮಾಡುವುದು. ನಿರ್ಗಮನವೂ ಅಷ್ಟೇ. ಯಾರೋ ಒಬ್ಬರು ಹೋದರು ಎಂಬ ಅರ್ಥ.
ಆದರೆ, ಪ್ರದಾನ ಎಂಬುದು ತಾನು ಸ್ವ ಇಚ್ಚೆಯಿಂದ ಕೊಡುವಂತಹದ್ದು ಎಂದಾಗುತ್ತದೆ.

ಅಪ್ಲಿಕೇಷನ್ ಸಾಫ್ಟ್ ವೇರ‍್ ಅಂದರೆ ಅಳವಡಿಕೆಯ ತಂತ್ರಾಂಶ ಸರಿಯೋ ಅನ್ವಯಿಕ ತಂತ್ರಾಂಶ ಸರಿಯೋ ಎಂಬುದನ್ನು ನೋಡೋಣ.
ಅಪ್ಲಿಕೇಷನ್ ಸಾಫ್ಟ್ ವೇರ‍್ ಎಂದರೆ ಯಾವುದೇ ಒಂದು ಆಪರೇಟಿಂಗ್ ಸಿಸ್ಟಂ ವಿಂಡೋಸ್ ,ಲಿನಕ್ಸ್ ಇದ್ದೀತು ಅದಕ್ಕೆಂದೇ ಪ್ರತ್ಯೇಕವಾಗಿ ಅಭಿವೃದ್ದಿಪಡಿಸಿ, ಆ ಆಪರೇಟಿಂಗ್ ಸಿಸ್ಟಂಗೆ ಅಧೀನವಾಗಿದ್ದುಕೊಂಡು ಕೆಲಸಮಾಡುವಂತೆ ಅಳವಡಿಸುವುದಲ್ಲವೇ? ಆದ್ದರಿಂದಲೇ ಅದು ಅಳವಡಿಕೆಯ ತಂತ್ರಾಂಶ.

ಹಾಗಾದರೆ, ಅನ್ವಯಿಕ ತಂತ್ರಾಂಶ ಏಕೆ ಸರಿಯಲ್ಲ? ಯಾವೊಂದು ತಂತ್ರಾಂಶವನ್ನು ಪ್ರತ್ಯೇಕವಾಗಿ ಒಂದು ವೈಯಕ್ತಿಕ ಉಪಯೋಗಕ್ಕೋ ಅಥವಾ ವ್ಯವಹಾರೀಕವಾಗಿ ಬಳಕೆಗೋ ಅವರವರ ಸ್ವಂತ ಅಗತ್ಯಗಳಿಗೆ ಅಥವಾ ಔದ್ಯೋಗಿಕ ಇಲ್ಲವೇ ವ್ಯವಹಾರಿಕ ವಿಷಯಗಳಿಗೆ "ಅನ್ವಯಿಕ" ವಾಗುವಂತೆ ಒಂದು "ಅಳವಡಿಕೆ"ಯ ತಂತ್ರಾಂಶವನ್ನು ಅಭಿವೃದ್ಧಿಪಡಿಸುವು ದೆಂದಾಗುತ್ತದೆ.

ಯಾಕೆಂದರೆ, ಅಂತಹದೊಂದು ತಂತ್ರಾಂಶವು ಸಿದ್ಧವಾದಾಗ ಅದನ್ನು ಯಾವ ಆಪರೇಟಿಂಗ್ ಸಿಸ್ಟಂಗೆಂದೇ ತಯಾರಿಸಲಾಗಿರುತ್ತದೋ ಆ ಆಪರೇಟಿಂಗ್ ಸಿಸ್ಟಂಗೆ ಅಳವಡಿಸುವುದಾಗತ್ತದೆಯಲ್ಲವೇ? ಆದ್ದರಿಂದಲೇ ಅದನ್ನು ಅಳವಡಿಕೆಯ ತಂತ್ರಾಂಶ ಎನ್ನುವುದೇ ಸರಿ, ಆನಂತರವೇ. ಅದು ಯಾವುದಕ್ಕೆ ಅನ್ವಯವಾಗುವಂತ ಅಳವಡಿಕೆಯ ತಂತ್ರಾಂಶ ಎಂದು ಹೇಳುವುದಲ್ಲವೇ..? ಹೀಗೆ ಅರ್ಥವಂತಿಕೆಗೆ ಒತ್ತುಕೊಡುವುದೇ ಪ್ರಾಮುಖ್ಯವೆನಿಸುತ್ತದೆ.
ಈ ಕೆಳಗಿನ ಕೆಲ ಪದಗಳ ಪಟ್ಟಿ ನೋಡಿ-

Application Software= ಅನ್ವಯ ತಂತ್ರಾಂಶ-. ಅಳವಡಿಕೆಯ ತಂತ್ರಾಂಶ
Operating System= ಕಾರ್ಯಾಚರಣೆ ವ್ಯವಸ್ಥೆ- ಸಮಗ್ರ ಕಾರ್ಯಾಚರಣೆಯ ತಂತ್ರಾಂಶ
RAM=ಯಾದೃಚ್ಛಿಕ ಸ್ಮೃತಿ- ಒಟ್ಟಾರೆ ಪರಿಗ್ರಹಿಸಿ ಸಂಗ್ರಹಿಸುವ ಸ್ಮೃತಿ
ALU=ಅಂಕಗಣಿತೀಯ ತಾರ್ಕಿಕ ಘಟಕ ಗಣಿತ ಮತ್ತು ತಾರ್ಕಿಕ ಘಟಕ
Bit=ದ್ವಿಮಾನಕ. ಒಂದನ್ನು ಎರಡಾಗಿ ಮಾಡುವುದೋ ಎಂಬ ಅರ್ಥಕೊಡುವಂತಿದೆ. ಸಂಗ್ರಾಹ್ಯ ಸಾಧನಗಳ ಮೇಲೆ ಗುರುತಿಸಿ ದಾಖಲಿಸುವಂತ ಅತ್ಯಂತ ಕಿರಿದಾದ ಸ್ಥಾನ. ಅಂದರೆ ಒಂದು ಸ್ಥಾನ digit ಎಂಬ ಪದವನ್ನೇ ಉಳಿಸಿಕೊಳ್ಳವುದು ಲೇಸಲ್ಲವೇ?.
Programing language= ಕ್ರಮ ವಿಧಿ ಭಾಷೆ - ಅನುಕ್ರಮ ಸೂಚನಾ ವಿಧಿ ವಿಧಾನಗಳು ಎಂಬ ಪದಗಳು ಕೊಡುವ ಅರ್ಥವಂತಿಕೆಯನ್ನು ನೋಡಿ.

ಕೆಲವೊಮ್ಮೆ ಒಂದು ತಾಂತ್ರಿಕ ಪದ ಏನೆಲ್ಲ ಅರ್ಥಕೊಡುತ್ತದೋ ಅದನ್ನೆಲ್ಲ ಕನ್ನಡದ ಒಂದೇ ಒಂದು ಪದ ಕೊಡುವುದು ಸಾಧ್ಯವಿಲ್ಲದಿರುವ ಸಂದರ್ಭಗಳೇ ಹೆಚ್ಚು ಇರುತ್ತದೆಯಲ್ಲವೇ..? "ಕಂಪ್ಯೂಟರ್" ಎಂಬ ಪದವನ್ನೇ ತೆಗೆದುಕೊಳ್ಳಿ, ಅದು ಕೊಡುವ ಅರ್ಥವ್ಯಾಪ್ತಿ ಕನ್ನಡದ "ಗಣಕ" ಎಂಬ ಪದಕ್ಕಿಂತ ದೊಡ್ಡದಿದೆ. ನಾವು "ಕಂಪ್ಯೂಟರ್" ಎಂದು ಹೇಳುವಾಗ ಅದು ಧ್ವನಿಸುವ ಜೀವಂತಿಕೆ ಅರ್ಥವಿದೆಯಲ್ಲ ಆ ಅರ್ಥವನ್ನು "ಗಣಕ" ಪದ ಕೊಡಲು ಸಾಧ್ಯವಿಲ್ಲವೆನಿಸುತ್ತದೆ; ಅದನ್ನೀಗ ಬಹುಮಂದಿ ಒಪ್ಪಿಕೊಳ್ಳಲು ತಯಾರಿಲ್ಲವೆಂದರೆ ಉತ್ಪ್ರೇಕ್ಷೇಯೇನಿಲ್ಲ!

ನಮಗೆ ತಿಳಿದಿರುವಂತೆ ಕಂಪ್ಯೂಟರ್ ಎಂಬುದು ಉನ್ನತ ಮಟ್ಟದ ತಂತ್ರಜ್ಞಾನ ಆಗಿರುವುದರಿಂದ ಅದಕ್ಕೆ ಸಂಬಂಧಿಸಿದಂತೆ ಮಾಡುವ ಕನ್ನಡ ಮತ್ತು ಇತರ ಭಾಷೆಯೆ ಅನುವಾದವಿರಲಿ ಇನ್ನೂ ಕ್ಲಿಷ್ಟಕರವಾಗಿಯೆ ಉಳಿದಿದೆ. ಆದ್ದರಿಂದ, ಕಂಪ್ಯೂಟರ್ ಆವಿಷ್ಕಾರದಲ್ಲಿ ಹೊರಬಂದ ಅದರ ಕಂಪ್ಯೂಟರ‍್ ಎಂಬ ಹೆಸರೂ ಸೇರಿದಂತೆ ಅದರ ಪರಿಭಾಷೆಯ ಅನೇಕ ಪದಗಳನ್ನೂ ಇದ್ದಹಾಗೆಯೆ ಕನ್ನಡಕ್ಕೆ ಬರಮಾಡಿಕೊಳ್ಳುವುದೂ ಕಂಡು ಬರುತ್ತಿದೆ. ಪ್ರತಿಯೊಂದು ತಾಂತ್ರಿಕ ಪದ ಪದಗಳಿಗೆ ಸಮಾನವಾದ ಕನ್ನಡಪದಗಳನ್ನು ಸೂಚಿಸುವ ಪ್ರಯತ್ನದಲ್ಲಿ, ಅರ್ಥವ್ಯಾಪ್ತಿಯೆ ಪ್ರಾಮುಖ್ಯವೆನಿಸಿದಾಗ ಸಮಾನ ರೂಪದ ಪದಗಳಿಗೆ ಒತ್ತುಕೊಡಲಾಗುತ್ತದೆ.

RAM=ಯಾದೃಚ್ಛಿಕ - ಇಲ್ಲಿ ಸಂಸೃತ ಪದವನ್ನೂ ಬಳಸಿದ್ದಾರೆ. ನಮ್ಮ ಹೊಸಗನ್ನಡದ ವಿಶಿಷ್ಟ ಪದಗಳೇ ಅರ್ಥವಾಗದ ಹೆಚ್ಚು ಹೆಚ್ಚು ವಿದ್ಯಾರ್ಥಿಗಳಿರುವಾಗ ಇಂತಹ ಪದಗಳಿಂದೇನು ಪ್ರಯೋಜನ? ಇವೆಲ್ಲವೂ ಇನ್ನಷ್ಟು ಗೊಂದಲಕ್ಕೀಡು ಮಾಡುತ್ತವೆಯಷ್ಟೇ.. ಹೀಗೆ ಅನುವಾದದಲ್ಲಿ ಉಂಟಾಗುವ ಅಪಭ್ರಂಶ ಪದಗಳ ಪಟ್ಟಿ ಮಾಡುತ್ತಾ ಹೋದರೆ ಸಾಕಷ್ಟು ಸಿಗುತ್ತವೆ.

ಪಿ.ಯು.ಸಿ.ವಿದ್ಯಾರ್ಥಿಗಳಿಗಾಗಿ ಕರ್ನಾಟಕ ಸರ್ಕಾರ "ಕಂಪ್ಯೂಟರ‍್ ವಿದ್ಯಾ" ಎಂಬ ಪುಸ್ತಕವನ್ನು ನೋಡಬೇಕು. ಅದರ ತುಂಬಾ ತಪ್ಪುಗಳೇ ಸಿಗುತ್ತವೆ. ಕಂಪ್ಯೂಟರ‍್ ತಂತ್ರಜ್ಞಾನ ಅರ್ಥವಾಗುವುದರ ಬದಲು ಗೊಂದಲಗಳೇ ಸೃಷ್ಟಿಯಾಗುತ್ತವೆ!
ಈ ಕೆಳಗಿನ ವಾಕ್ಯವನ್ನೇ ನೋಡಿ-

೧) ನಿಮ್ಮ ಕಂಪ್ಯೂಟರ‍್ "ಆನ್" ಮಾಡಲು, ಸಿಪಿಯು ಹಿಂದಿರುವ "ಪವರ್‌ ಸಪ್ಲೈ" ಸ್ವಿಚ್ ಗೆ ಮೊದಲು ಕೇಬಲ್ ಸಂಪರ್ಕಿಸಬೇಕು, ನಂತರ ವಿದ್ಯುತ್ ಆನ್ ಆಗಿರಬೇಕು.

-ಇದನ್ನೇ ಈ ವಾಕ್ಯವನ್ನೇ ಕೆಳಗಿನಂತೆ ಬರೆದರೆ ಹೇಗೆ ನೀವೇ ನೋಡಿ-
ನಿಮ್ಮ ಕಂಪ್ಯೂಟರ‍್ ನ್ನು ವಿದ್ಯಕ್ತವಾಗಿ ಚಾಲನೆಗೊಳಿಸುವುದಕ್ಕಾಗಿ, ಮೊದಲು ಸಿಪಿಯು ಹಿಂಬದಿಗಿರುವ ಪವರ‍್ ಪೋರ್ಟ್ ಗೆ ಪವರ‍್ ಕೇಬಲ್ ನ್ನು ಸೇರಿಸಿರಬೇಕು. ಆನಂತರ, ವಿದ್ಯುತ್ ಸಂಪರ್ಕವೇರ್ಪಡಿಸಲು ಪವರ‍್ ಸಪ್ಲೈ ಸ್ವಿಚ್ ಆನ್ ಮಾಡಬೇಕು.
ಇಲ್ಲಿ ಭಾಷಾಂತರವಷ್ಟೇ ಅಲ್ಲ ತಾಂತ್ರಿಕ ದೋಷವು ಇದೆ ನೋಡಿ-
ಪವರ ಸಪ್ಲೈ ಸ್ವಿಚ್ ಗೆ ಕೇಬಲ್ ಸಂಪರ್ಕಿಸುವುದೆಂದರೇನರ್ಥ ?! ಸ್ವಿಚ್ ಗೂ ಮತ್ತು ಪೋರ್ಟ ಅಥಾವ ಸಾಕೆಟ್ ಗೂ ಇರುವ ವ್ಯತ್ಯಾಸವೇ ಇವರಿಗೆ ತಿಳಿದಿಲ್ಲವಲ್ಲ!

೨) ಕಂಪ್ಯೂಟರ‍್ ಗಳ ಬಳಕೆಯೊಂದಿಗೆ, ನಾವು ಆಶ್ಚರ್ಯಕರವಾದ ವೇಗದಲ್ಲಿ ನಂಬಲಸಾಧ್ಯವಾದ ಪ್ರಮಾಣದ ಲೆಕ್ಕಾಚಾರಗಳನ್ನು ಮಾಡಬಹುದಾಗಿದೆ. ಇದನ್ನು "ಮಾಹಿತಿ ಶೇಖರಣೆಗೆ ಮತ್ತು ಸಂಸ್ಕರಣೆಗೆ" ಒಂದು ಎಲೆಕ್ಟ್ರಾನಿಕ್ ಸಾಧನವೆಂಬಂತೆ ಕಾಣಬಹುದಾಗಿದೆ. ಇದನ್ನೇ ಕೆಳಗಿನಂತೆ ಬರೆದರೆ ಹೇಗೆ ನೀವೇ ನೋಡಿ-
ಕಂಪ್ಯೂಟರ‍್ ಗಳನ್ನು ಬಳಸಿಕೊಂಡು, ನಾವು ನಮಗೆ ಅಸಾಧ್ಯವೆನಿಸುವಂತ ದೊಡ್ಡ ಪ್ರಮಾಣದ ಲೇಕ್ಕಾಚಾರಗಳನ್ನು ಸಹ ಆಶ್ಚರ್ಯಕರವಾದ ವೇಗದಲ್ಲಿ ಮಾಡಬಹುದಾಗಿದೆ.
ಕಂಪ್ಯೂಟರ‍್ ನ್ನು ದತ್ತಾಂಶ ಸಂಸ್ಕರಣೆಗೆ ಮತ್ತು ಮಾಹಿತಿ ಶೇಖರಣೆಗೆ ಒಂದು ಎಲೆಕ್ಟ್ರಾನಿಕ್ ಉಪಕರಣವಾಗಿ ಪರಿಗಣಿಸಲಾಗಿದೆ.
(ಮಾಹಿತಿ ಶೇಖರಣೆಗೆ ಮತ್ತು ಸಂಸ್ಕರಣೆಗೆ ಎಂದಾಗ, ಮಾಹಿತಿಯನ್ನೇ ಸಂಸ್ಕರಿಸುವುದು ಶೇಖರಿಸುವುದೆಂದಾಗುತ್ತದೆಯಲ್ಲವೇ...? ದತ್ತಾಂಶವನ್ನು ಸಂಸ್ಕರಿಸಿದ ಮೇಲೇ ಅದು ಮಾಹಿತಿಯಾಗಿ ಶೇಖರಿಸಲ್ಪಡುವುದಲ್ಲವೇ... ಸಾಧನಕ್ಕೂ ಉಪಕರಣಕ್ಕೂ ಇರುವ ವ್ಯತ್ಸಾಸವೆ ಅನುವಾದಕರಿಗೆ ತಿಳಿದಿಲ್ಲ.

೩) ಸೆಂಟ್ರಲ್ ಪ್ರಾಸೆಸಿಂಗ್ ಯೂನಿಟ್
ಶೇಖರಣಾ ಯೂನಿಟ್ (ಮೆಮೊರಿ)
ಈ ಬಗ್ಗೆ ಈ ವಾಕ್ಯವನ್ನೇ ನೋಡಿ-
"ಮಾಹಿತಿಯನ್ನು ಮತ್ತು ಸೂಚನೆಗಳನ್ನು ಶಾಶ್ವತವಾಗಿ ಉಳಿಸುವ ಪ್ರಕ್ರಿಯೆಯನ್ನು ಶೇಖರಣೆ ಎನ್ನುತ್ತಾರೆ" ಪ್ರಕ್ರಿಯೆಯು ಆರಂಭವಾಗುವ ಮುನ್ನ ಮಾಹಿತಿಯು ಸಿಸ್ಟಮ್ ನೊಳಗೆ ಹಾಕಲ್ಪಟ್ಟಿರಬೇಕು. ಸೆಂಟ್ರಲ್ ಪ್ರಾಸೆಸಿಂಗ್ ಯೂನಿಟ್ ನ್ನು (ಸಿಪಿಯು) ಪ್ರಕ್ರಿಯೆಗೊಳಿಸುವ ವೇಗವು ತೀರಾ ವೇಗವಾಗಿರುವುದರಿಂದ, ಅದೇ ವೇಗದಲ್ಲಿ ಮಾಹಿತಿಯನ್ನು ಸಿಪಿಯು-ಗೆ ಒದಗಿಸಬೇಕು. ವೇಗವಾದ ಉಪಯೋಗಕ್ಕಾಗಿ ಮತ್ತು ಪ್ರಕ್ರಿಯೆಗಾಗಿ, ಮಾಹಿತಿಯು ಮೊದಲು ಶೇಖರಣಾ ಯೂನಿಟ್ ನಲ್ಲಿ ಶೇಖರಿಸಲ್ಪಡುತ್ತದೆ. ಇದು ಮಾಹಿತಿ ಮತ್ತು ಸೂಚನೆಗಳನ್ನು ಶೇಖರಿಸಲು ಸ್ಥಳವನ್ನು ಒದಗಿಸುತ್ತದೆ.
ಇಲ್ಲಿ ನೋಡಿ, "ಪ್ರಕ್ರಿಯೆ" ಎಂಬ ಪದದ ಅರ್ಥವೇ ಭಾಷಾಂತರಕಾರರಿಗೆ ತಿಳಿದಿಲ್ಲ. "ಮಾಹಿತಿ"ಯನ್ನು ಸಿಸ್ಟಮ್ ನೊಳಗೆ ಹಾಕುವುದೆಂದರೇನು?
ಅವರು ಹೇಳಿದ ಮೇಲಿನ ಪ್ಯಾರಾವನ್ನೇ ಹೀಗೆ ಬರೆದರೆ ನೀವೇ ಓದಿ ನೋಡಿ,
ಸಿಸ್ಟಮ್ ಯೂನಿಟ್ ಗೆ ಫೀಡ್ ಮಾಡಿ ದತ್ತಾಂಶವು ಸಿಪಿಯು ವಿನಿಂದ ಪ್ರಕ್ರಿಯೆಗೊಳಪಡುತ್ತದೆ ಮತ್ತು ಸಂಸ್ಕರಿಸಲ್ಪಟ್ಟು ಮಾಹಿತಿಯಾಗುತ್ತದೆ. ಅದೇ ಮಾಹಿತಿಯು ಪ್ರಧಾನ ಸಂಗ್ರಾಹ್ಯ ಸಾಧನವಾದ ಹಾರ್ಡ ಡಿಸ್ಕ್ ಮೇಲೆ ಶಾಶ್ವತವಾಗಿ ಶೇಖರಿಸಲ್ಪಡುತ್ತದೆ. ನಾವು ನೀಡುವ ಸೂಚನೆ ಮತ್ತು ಆದೇಶಗಳಿಂದ ಈಗಾಗಲೇ ಫೀಡ್ ಮಾಡಿದ ದತ್ತಾಂಶವು ಪ್ರಾಸೆಸಿಂಗ್ ನಲ್ಲಿ ಪ್ರಕ್ರಿಯೆಗೊಳಪಡಲು ಅವುಗಳಿಗೆ ಸಂಬಂಧಿಸಿದ ಪ್ರೋಗ್ರಾಮ್ ಕಂಪ್ಯೂಟರ‍್ ಹಾರ್ಡ ಡಿಸ್ಕ್ ಮೇಲೇ ಅನುಸ್ಥಾಪಿಸಲ್ಪಟ್ಟಿರಬೇಕು..

ಪಟ್ಟಿ ಮಾಡುತ್ತಲೇ ಹೋದರೆ ಹೇರಳವಾದ ತಪ್ಪುಗಳು "ಕಂಪ್ಯೂಟರ‍್ ವಿದ್ಯಾ" ಪುಸ್ತಕದ ಪುಟ ಪುಟಗಳಲ್ಲೂ ಸಿಗುತ್ತವೆ; ಗಾಬರಿ ಹುಟ್ಟಿಸುತ್ತವೆ!

Educomp ನಂತ ಹೆಸರಾಂತ ಪ್ರತಿಷ್ಠಿತ ಸಂಸ್ಥೆಯು "ಕಂಪ್ಯೂಟರ‍್ ವಿದ್ಯಾ" ಎಂಬ ಈ ಪುಸ್ತಕವನ್ನು(ಮ್ಯಾಗಸಿನ್ ಸೈಜ್ ನ 120 ಪುಟಗಳ "ಬಣ್ಣದ ಹೊದಿಕೆಯ ಅಂದವಾದ ಪುಸ್ತಕ") ಪದವಿ ಪೂರ್ವ ಶಿಕ್ಷಣಕ್ಕಾಗಿ ಸಿದ್ಧಪಡಿಸಿದೆಯೆಂದರೆ ಏನು ಹೇಳುಬೇಕೋ...ನಮ್ಮ ಕರ್ನಾಟಕ ಗಣಕ ಪರಿಷತ್ ಕೂಡ ಈ ವಿಷಯದಲ್ಲಿ ಮೌನವಾಗಿರುವುದೇಕೋ ತಿಳಿಯದಂತಾಗಿದೆಯಲ್ಲ..! ದಯವಿಟ್ಟು ಪ್ರಾಜ್ಞರು ಶಿಕ್ಷಣ ತಜ್ಞರೂ ಇತ್ತ ಗಮನ ಹರಿಸಬೇಕು.

ತಂತ್ರಜ್ಞಾನದ ತಿಳುವಳಿಕೆಯೊಂದಿಗೆ ಭಾಷಾ ಪ್ರಯೋಗದಲ್ಲಿರುವ ಅನುಭವದ ಕೊರತೆಯೂ ಇಲ್ಲಿ ಪುಸ್ತಕದ ಉದ್ದಕ್ಕೂ ಎದ್ದು ಕಾಣುತ್ತಾ ಹೋಗುತ್ತದೆ.
ಇದನ್ನು ಪಠ್ಯಪುಸ್ತಕವನ್ನಾಗಿ ಓದುತ್ತಿರುವುದು ನಮ್ಮ ಕನ್ನಡ ವಿದ್ಯಾರ್ಥಿಗಳ ದೌರ್ಭಾಗ್ಯವೇ ಸರಿ. ಅಯ್ಯೋ ದೇವರೇ, ನಮ್ಮ ಕನ್ನಡವನ್ನೂ ನಮ್ಮ ವಿದ್ಯಾರ್ಥಿಗಳನ್ನೂ ನೀನೇ ಕಾಪಾಡಬೇಕು!

ಲೇಖಕನಾದಾತನಿಗೆ ಭಾಷೆಯಾವುದಾದರೇನು? ಪದಸಂಪದ ಮತ್ತು ಪದಭಾಗ್ಯಗಳಿರಬೇಕು. ರೂಢಿಯಲ್ಲಿರುವ ನುಡಿಭಾಗ್ಯಗಳ ಪರಿಜ್ಞಾನವೂ ಬೇಕು. ಬರವಣಿಗೆಯಲ್ಲಿ ಅವುಗಳು ಸಹಜವಾಗಿ ಹಾಸುಹೊಕ್ಕಾಗಿ ಬರುತ್ತಿರಬೇಕು. ಅವುಗಳ ಹೊಂದಾಣಿಕೆಯಲ್ಲಿ ಅರ್ಥವಂತಿಕೆಯೇ ಅವನ ಮೂಲ ಮಂತ್ರವಾಗಬೇಕು,ಸಾಮಾನ್ಯರನ್ನೂ ತಲುಪಲು ಸರಳತೆಯಲ್ಲಿ ಗಹನತೆಗಾಗಿಯೆ ಕಠಿಣ ಪರಿಶ್ರಮವಿರಬೇಕು. ಸುಮ್ಮನೆ ಪದಗಳಿಗೆ ಪದಗಳೆಂದು, ಪದಗಳನ್ನಷ್ಟೇ ಹಿಡಿದು ಜಗ್ಗಾಡುವುದಲ್ಲವಲ್ಲ.

ಕನ್ನಡದಲ್ಲಿ ಕಂಪ್ಯೂಟರ‍್ ಪುಸ್ತಕಗಳನ್ನು ಬರೆದಿರುವ ನನ್ನ ಅನುಭವವೂ ಇದೇ ಆಗಿದೆ. ನನ್ನ ಬರಹಗಳಲ್ಲಿ ಅರ್ಥವ್ಯಾಪ್ತಿ ಅರ್ಥವಂತಿಕೆಗಷ್ಟೇ ಪ್ರಾಧಾನ್ಯತೆ ಕೊಟ್ಟಿದ್ದೇನೆ. ಅವು ಉತ್ಕೃಷ್ಠವಾಗಿವೆ ಎಂದೇನೂ ಹೇಳಲಾರೆ. ಆದರೆ, ಕಂಗ್ಲೀಷ್ ಬಳಸಿರುವೆನಾದರೂ ಅರ್ಥವಂತಿಕೆಯ ವಿಷಯದಲ್ಲಿ ನಾನು ಎಲ್ಲೂ ರಾಜಿಮಾಡಿಕೊಂಡಿಲ್ಲವೆಂದು ಪ್ರಾಮಾಣಿಕವಾಗಿ ಹೇಳುತ್ತೇನೆ. ಅಂತೆಯೆ, ನನ್ನ ಕಂಪ್ಯೂಟರ‍್ ಬೇಸಿಕ್ ಪುಸ್ತಕದ ಲೋಕಾರ್ಪಣೆಯಲ್ಲಿ ಹೀಗೆ ಹೇಳಿದ್ದೇನೆ-
"ನಾಡು ನುಡಿಗೆ ಮೀಸಲಾದ ದೇಶ ಭಾಷೆಗೆ ಮಿಗಿಲಾದ ಜ್ಞಾನದಾಹಿಗಳಿಗೆ-"
ಯಾಕೆಂದರೆ, ನಾವು ನಾಡು ನುಡಿಗೆ ಮೀಸಲಾದವರು. ನಿಜ. ದೇಶ ಯಾವುದಾದರೇನು? ಭಾಷೆ ಯಾವುದಾದರೇನು? ನಮಗೆ ಬೇಕಾಗಿರುವುದೇ ಅದೆಲ್ಲಕ್ಕೂ ಮಿಗಿಲಾದ ಜ್ಞಾನ; ನಾವು ಜ್ಞಾನದಾಹಿಗಳಾಗಬೇಕಷ್ಟೇ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ