ಗುರುವಾರ, ಏಪ್ರಿಲ್ 15, 2010

ಕಂಪ್ಯೂಟರ್ ಚಾಲೂ ಆಗಲು ಕಾಯಬೇಕಿಲ್ಲ!

ಕೋಣೆಯ ವಿದ್ಯುದ್ದೀಪದ ಸ್ವಿಚ್ ಹಾಕೊದೊಡನೆ ಬೆಳಗುತ್ತದೆ. ಟಿವಿಯ ರಿಮೋಟ್ ಅದುಮಿದ ಕೆಲ ಕ್ಷಣಗಳಲ್ಲೇ, ಟಿವಿ ಶುರು. ಆದರೆ ಕಂಪ್ಯೂಟರ್ ಮಾತ್ರಾ ಆಮೆಗತಿಯಲ್ಲೇ ಚಾಲೂ ಆಗುತ್ತದೆ. ಹೊಸದರಲ್ಲದು ಸ್ವಲ್ಪ ಚುರುಕಾಗಿದ್ದರೂ,ನೀವು ಹೆಚ್ಚು ಹೆಚ್ಚು ತಂತ್ರಾಂಶಗಳನ್ನು ಕಂಪ್ಯೂಟರಿನಲ್ಲಿ ಅನುಸ್ಥಾಪಿಸಿದರೆ,ಅದು ನಿಧಾನವಾಗುತ್ತಾ ಹೋಗುತ್ತದೆ.ಇದಕ್ಕೆ ಪರಿಹಾರವೇನು? ಸ್ಪ್ಲಾಶ್-ಟಾಪ್ ಎಂಬ ಕಂಪೆನಿಯು ಕಂಪ್ಯೂಟರನ್ನು ದಿಡೀರ್ ಆಗಿ ಚಾಲೂ ಆಗಿಸುವ ತಂತ್ರಜ್ಞಾನ ಅಭಿವೃದ್ಧಿ ಪಡಿಸಿದೆ. ಕಂಪ್ಯೂಟರ್ ತಯಾರಕ ಕಂಪೆನಿಗಳಾದ ಏಸರ್,ಲೆನೊವೋ,ಎಚ್‌ಪಿ,ಎಲ್‌ಜಿಇವರುಗಳ ಜತೆ ಸಹಭಾಗಿತ್ವದಲ್ಲಿ ಅವರುಗಳ ನೆಟ್‌ಬುಕ್ ಮತ್ತು ನೋಟ್‌ಬುಕ್ ಕಂಪ್ಯೂಟರುಗಳಲ್ಲಿ ಈ ತಂತ್ರಜ್ಞಾನವನ್ನು ನೀಡಲಾಗುತ್ತಿದೆ.ಸದ್ಯ ದಶಲಕ್ಷ ಕಂಪ್ಯೂಟಿಂಗ್ ಸಾಧನಗಳಲ್ಲಿ ಬಳಕೆದಾರರು ಸ್ಪ್ಲಾಶ್‌ಟಾಪನ್ನು ಬಳಸಿ,ಲಾಭ ಪಡೆಯುತ್ತಿದ್ದಾರೆ.ಏಸರ್ ಮತ್ತು A.S.U.S. ಡೆಸ್ಕ್‌ಟಾಪ್‌ಗಳಲ್ಲೂ ತಕ್ಷಣ ಚಾಲೂ ಸೌಲಭ್ಯ ಸಿಗುತ್ತದೆ.

ಸ್ಪ್ಲಾಶ್‌ಟಾಪ್ ಒಂದು ಕಂಪ್ಯೂಟರ್ ಕಾರ್ಯನಿರ್ವಹಣಾ ತಂತ್ರಾಂಶದಂತೆಯೇ ರೂಪಿಸಲಾದ ತಂತ್ರಾಂಶ.ಈ ತಂತ್ರಾಂಶವನ್ನು ಕಂಪ್ಯೂಟರಿನಲ್ಲಿ ಅನುಸ್ಥಾಪಿಸಿಯೇ ಕೊಟ್ಟಿದ್ದರೆ ಅದನ್ನು ಬಳಸಲು ಬರುತ್ತದೆ.ನಿಗದಿತ ಬಟನ್ ಒತ್ತಿದೊಡನೆ,ಬಯೋಸಿನಿಂದ ಈ ತಂತ್ರಾಂಶ ಲೋಡ್ ಆಗಿ,ತೆರೆಯನ್ನು ತೋರಿಸುತ್ತದೆ.ಸ್ಪ್ಲಾಶ್‌ಟಾಪ್ ಬ್ರೌಸರ್ ತಂತ್ರಾಂಶವು ಒಡನೆಯೇ ಲಭ್ಯವಾಗುವುದರಿಂದ ಅಂತರ್ಜಾಲ ಸಂಪರ್ಕ ತಕ್ಷಣ ಲಭ್ಯವಾಗುತ್ತದೆ.ಹಾಗಿಲ್ಲದೆ ವಿಂಡೋಸ್,ಲಿನಕ್ಸ್ ವ್ಯವಸ್ಥೆ ಬೇಕಿದ್ದರೆ, ಮೊದಲ ಸ್ಕ್ರೀನಿನಲ್ಲಿಯೇ ಅವುಗಳನ್ನು ಆಯ್ದುಕೊಳ್ಳುವ ಆಯ್ಕೆ ಲಭ್ಯವಾಗುತ್ತದೆ.ನಾವು ಅನುಸ್ಥಾಪಿಸುವ ತಂತ್ರಾಂಶಗಳು ವಿಂಡೋಸ್,ಲಿನಕ್ಸ್ ವ್ಯವಸ್ಥೆಯಲ್ಲಿ ಸಿಗುವುದರಿಂದ,ಸ್ಪ್ಲಾಶ್‌ಟಾಪ್ ನಿಧಾನವಾಗುತ್ತಾ ಹೋಗುವುದಿಲ್ಲ.ಇನ್ನು ಮುಂದೆ,ಮೊದಲ ಪುಟದಲ್ಲೇ ಶೋಧಪುಟವನ್ನು ಪ್ರದರ್ಶಿಸಿ,ಬಳಕೆದಾರರು ಜಾಲಾಡಲು ಅನುಕೂಲ ಕಲ್ಪಿಸಲು ಕಂಪೆನಿ ಯೋಜಿಸುತ್ತಿದೆ. ಇದಕಾಗಿ ಯಾಹೂವಿನಂತಹ ಶೋಧ ಸೇವೆಗಳ ಜತೆ ಒಪ್ಪಂದ ಮಾಡಿಕೊಂಡು,ಗ್ರಾಹಕರಿಗೆ ಅನುಕೂಲ ಕಲ್ಪಿಸಲು ಕಂಪೆನಿ ನಿರ್ಧರಿಸಿದೆ. ಈಗೀಗ ಬಳಕೆದಾರರು ಶೋಧ ಪುಟದಲ್ಲಿ ತಮಗೆ ಬೇಕಾದ ಶಬ್ದವನ್ನು ಟೈಪಿಸಿ,ಅಲ್ಲಿ ಬರುವ ಕೊಂಡಿಗಳನ್ನು ಕ್ಲಿಕ್ಕಿಸಿ,ಮುಂದುವರಿಯುವ ಹವ್ಯಾಸವನ್ನು ಹೊಂದಿರುವುದರಿಂದ ಈ ಅನುಕೂಲ ಕಲ್ಪಿಸಲು ಕಂಪೆನಿ ಚಿಂತಿಸಬೇಕಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ