ಗುರುವಾರ, ಏಪ್ರಿಲ್ 15, 2010

ಅಂತರ್ಜಾಲಕ್ಕೆ ನಲುವತ್ತು

ಅಂತರ್ಜಾಲಕ್ಕೆ ನಲುವತ್ತು: ಈಗದು ಕೆಲವರಿಗೆ ವ್ಯಸನ
1969ರ ಸೆಪ್ಟೆಂಬರ್ ಎರಡರಂದು ಎರಡು ಕಂಪ್ಯೂಟರುಗಳ ನಡುವೆ ಸಂಪರ್ಕ ಸಾಧಿಸುವ ಮೂಲಕ ಮೊದಲ ಕಂಪ್ಯೂಟರ್ ಜಾಲ ಏರ್ಪಟ್ಟಿತು. ಆ ಘಟನೆಯೇ ಅಂತರ್ಜಾಲವೆಂಬ ಮಹಾಜಾಲದ ನಿರ್ಮಾಣಕ್ಕೆ ಹೇತುವಾಯಿತು ಎನ್ನುವುದನ್ನು ನಂಬುವುದು ಕಷ್ಟ.ಆರಂಭದಲ್ಲಿ ಅಂತರ್ಜಾಲ ಲಿಪಿಮಯವಾಗಿತ್ತು.ಬರುಬರುತ್ತಾ ಅದು ಚಿತ್ರಮಯವಾಗುತ್ತಿದೆ. ಮುಂದಿನ ದಿನಗಳಲ್ಲಿ ಅಂತರ್ಜಾಲದಲ್ಲಿ ಮೂರು ಆಯಾಮಗಳ ಅನುಭವ ಸಿಗಬೇಕು ಎನ್ನುವುದು ಸಂಶೋಧಕರ ಹಂಬಲ.ಅಲ್ಲದೆ ಜಗತ್ತಿನ ಪ್ರತಿ ಸಾಧನವನ್ನೂ ಬೇಕೆಂದಲ್ಲಿ ಅಂತರ್ಜಾಲಕ್ಕೆ ಸಂಪರ್ಕ ಕಲ್ಪಿಸಿ,ಅವುಗಳನ್ನು ನಿಯಂತ್ರಿಸಲು ಸಾಧ್ಯವಾಗಬೇಕೆನ್ನುವುದು ಅವರ ಆಸೆ.ಅದು ಸಾಧ್ಯವಾಗಲು ಅಂತರ್ಜಾಲವನ್ನು ಸದ್ಯದ ಐಪಿ4ರಿಂದ ಐಪಿ6 ಶಿಷ್ಟಾಚಾರಕ್ಕೇರಿಸುವ ಅಗತ್ಯ ಇದೆ.
ಅಂತರ್ಜಾಲಕ್ಕೆ ನಲುವತ್ತು ವರ್ಷವಾಗಿರುವ ಈ ಸಂದರ್ಭದಲ್ಲಿ ಅದು ಜನರಿಗೆ ಒಳಿತು ಹಾಗೂ ಕೆಡುಕು ಎರಡನ್ನೂ ಧಾರಾಳವಾಗಿ ನೀಡಿದೆ.ಇಡೀ ದಿನ ಅಂತರ್ಜಾಲದಲ್ಲೇ ಮುಳುಗಿ,ಮಿಥ್ಯಾಪ್ರಪಂಚದ ಭ್ರಮೆಯಲ್ಲೇ ತೇಲುವ ಅದೆಷ್ಟೋ ಜನರಿಗೆ ಅಂತರ್ಜಾಲವೇ ವ್ಯಸನವಾಗಿರುವುದು ಸುಳ್ಳಲ್ಲ.ಇಂತಹ ವ್ಯಸನಕ್ಕೆ ಪರಿಹಾರವನ್ನೂ ಅಂತರ್ಜಾಲದಲ್ಲೇ ಲಭ್ಯವಾಗಿಸಲಾಗುತ್ತಿರುವುದು ವಿಚಿತ್ರವಾದರೂ ನಿಜ.ಅಂತರ್ಜಾಲ ವ್ಯಸನದಿಂದ ಹೊರಬರಲು ಮಾರ್ಗದರ್ಶನವೂ ಅಂತರ್ಜಾಲದಲ್ಲೇ ಲಭ್ಯವಿದೆ! ಏಪಲ್ ಕಂಪ್ಯೂಟರುಗಳಲ್ಲಿ, ಅಂತರ್ಜಾಲ ಸಂಪರ್ಕವನ್ನು ಕಡಿದು, ವ್ಯಸನಿಗಳನ್ನು ಎಚ್ಚರಿಸುವ ಫ್ರೀಡಮ್ ಎನ್ನುವ ತಂತ್ರಾಂಶವನ್ನು ಅನುಸ್ಥಾಪಿಸಬಹುದು.ಮಿಂಚಂಚೆ ಕಳುಹಿಸುವುದು,ಮಾರುತ್ತರ ಬಂದಿದೆಯೇ ಎಂದು ಪದೇ ಪದೇ ಪರಿಶೀಲಿಸುವುದು ಇವನ್ನು ತಪ್ಪಿಸಲು ಸಂದೇಶಗಳನ್ನು ಕಳುಹಿಸದೆ ತಡೆ ಹಿಡಿಯುವ ಸೌಕರ್ಯ ಜಿಮೇಲ್ ಮಿಂಚಂಚೆ ಸೇವೆ ಒದಗಿಸುತ್ತದೆ.
---------------------------------------------------------------
ಬಿಂಗ್ ಮತ್ತು ಪಿಂಗ್
ಬಿಂಗ್ ಎನ್ನುವುದು ಮೈಕ್ರೋಸಾಫ್ಟ್ ಕಂಪೆನಿಯ ಹೊಸ ಶೋಧ ಸೇವೆ. ಯಾವುದೇ ಪದವನ್ನು ನೀಡಿ ಶೋಧ ನಡೆಸಿದಾಗ ಸಿಗುವ ಫಲಿತಾಂಶವನ್ನು ಟ್ವಿಟರ್ ಅಥವಾ ಫೇಸ್‌ಬುಕ್ ಅಂತಹ ತಮ್ಮ ಖಾತೆಗಳಲ್ಲಿ ನೀಡಿ,ತಮ್ಮ ಗೆಳೆಯರಿಗೆ ತಮ್ಮ ಶೋಧದ ಫಲಿತಾಂಶವನ್ನು ಸುಲಭವಾಗಿ ಒದಗಿಸುವುದಲ್ಲದೆ,ತಮ್ಮ ಇಷ್ಟಾನಿಷ್ಟಗಳ ಬಗೆಗೆ ಅವರಿಗೆ ತಿಳಿಸುವುದನ್ನು ಸಾಧ್ಯವಾಗಿಸುವುದು "ಬಿಂಗ್ ಮತ್ತು ಪಿಂಗ್" ಸೇವೆಯ ವೈಖರಿ. ಈಗಿನ್ನೂ ಪರೀಕ್ಷಾರ್ಥ ಹಂತದಲ್ಲಿರುವ ಸೇವೆಯು ತಡವಿಲ್ಲದೆ ಜನರಿಗೆ ಸಿಗಲಿದೆ ಎಂದು ಕಂಪೆನಿಯ ಮೂಲಗಳು ಪ್ರಕಟಿಸಿವೆ.
-------------------------------------------------------------
ಮೊಬೈಲ್ ಮೂಲಕವೇ ಅಟೋ ಹೀಡಿಯಿರಿ!
ಅಟೋಗಳಿಗೆ ಕೈಯಡ್ಡ ಹಿಡಿದು, ತಮಗೆ ಹೋಗ ಬೇಕಾಗಿರುವೆಡೆ ಬರಲಾತ ನಿರಾಕರಿಸುವ ಅನುಭವ ನಗರಗಳಲ್ಲಿ ಎಲ್ಲರಿಗೂ ಆಗಿಯೇ ಇರುತ್ತದೆ. ಇದನ್ನು ತಡೆಯಲು ಸಾಧ್ಯವಾಗುವ ತಂತ್ರಜ್ಞಾನ ಜರ್ಮನಿಯಲ್ಲಿ ಪ್ರಯೋಗವಾಗುತ್ತಿದೆ. ಅಲ್ಲಿ ಅದು ಟ್ಯಾಕ್ಸಿಗಳಲ್ಲಿ ಪ್ರಯೋಗವಾಗುತ್ತಿದೆ.ಖಾಲಿ ಟ್ಯಾಕ್ಸಿ ಚಲಾಯಿಸುತ್ತಿರುವ ಚಾಲಕ,ತಾನು ಹೋಗುತ್ತಿರುವ ಸ್ಥಳವನ್ನು ಕಂಪ್ಯೂಟರ್ ಕೇಂದ್ರಕ್ಕೆ ಎಸೆಮ್ಮೆಸ್ ಮಾಡಿ ತಿಳಿಸುತ್ತಾನೆ. ಗ್ರಾಹಕರೂ ತಾವು ಹೋಗಬೇಕಿರುವ ಸ್ಥಳವನ್ನು ಇಲ್ಲಿ ದಾಖಲಿಸುತ್ತಾರೆ.ಇದಕ್ಕೆ ಮೊಬೈಲ್ ಬಳಕೆಯಾಗುತ್ತದೆ ಎಂದು ಬೇರೆ ಹೇಳಬೇಕಿಲ್ಲವಷ್ಟೇ. ಅಂತಹ ಗ್ರಾಹಕರ ಮೊಬೈಲ್ ಕರೆಯ ಮೂಲಕ ಅವರ ಸ್ಥಾನ ತಿಳಿದು,ಅಂತಹ ಸ್ಥಳಕ್ಕೆ ಸಮೀಪವಿರುವ ಟ್ಯಾಕ್ಸಿ ಚಾಲಕನಿಗೆ ಸಂದೇಶ ರವಾನೆಯಾಗುತ್ತದೆ. ಚಾಲಕ ಬಯಸಿದಲ್ಲಿ ಗ್ರಾಹಕನನ್ನು ಹತ್ತಿಸಿಕೊಳ್ಳಬಹುದು. ಬೇಡದಿದ್ದರೆ,ನಿಲ್ಲಿಸುವ ಅಗತ್ಯವೇ ಇಲ್ಲ.ಈ ಸೇವೆಗೆ ಓಪನ್ ರೈಡ್ ಎಂದು ಹೆಸರಿಸಲಾಗಿದೆ.
---------------------------------------------------
ಪ್ರಜಾವಾಣಿ ಅಂತರ್ಜಾಲ ತಾಣ ಈಗ ಯುನಿಕೋಡಿನಲ್ಲಿ
ಇದುವರೆಗೆ ತನ್ನದೇ ಆದ ಪ್ರತ್ಯೇಕ ಅಕ್ಷರ ವಿನ್ಯಾಸ ಹೊಂದಿ ಅಂತರ್ಜಾಲ ತಾಣದಲ್ಲಿ ಲಭ್ಯವಿದ್ದ "ಪ್ರಜಾವಾಣಿ" ಪತ್ರಿಕೆಯಿದೀಗ ತನ್ನ ತಾಣವನ್ನು ಯುನಿಕೋಡಿನಲ್ಲಿ ನೀಡಲಾರಂಭಿಸಿದೆ. ಇದರಿಂದ ಯುನಿಕೋಡ್ ಬೆಂಬಲವಿರುವ ಆಧುನಿಕ ಕಾರ್ಯಾಚರಣೆ ವ್ಯವಸ್ಥೆಗಳಿದ್ದಲ್ಲಿ ತಾಣವು ಸಮಸ್ಯೆಯಿಲ್ಲದೆ ಸ್ಪಷ್ಟವಾಗಿ ಕನ್ನಡ ಅಕ್ಷರಗಳು ಗೋಚರಿಸುತ್ತವೆ. "ಉದಯವಾಣಿ"ಯ ಸಹಿತ ಹೆಚ್ಚಿನ ಪತ್ರಿಕೆಗಳು ತಮ್ಮ ಇ-ಪೇಪರನ್ನು ಒದಗಿಸಿ, ಈ ಫಾಂಟ್ ಸಮಸ್ಯೆಗೆ ಪರಿಹಾರ ಒದಗಿಸಲು ಪ್ರಯತ್ನಿಸುತ್ತಿವೆ. ಆದರೆ ಹಾಗೆ ಮಾಡಿದರೆ,ಪತ್ರಿಕೆಯ ಬರಹಗಳನ್ನು ಶೋಧಿಸಲು ಸಾಧ್ಯವಾಗದು. ಆದರೆ ಯುನಿಕೋಡಿನಲ್ಲಿ ಲಭ್ಯವಿರುವ ಬರಹ,ಸುದ್ದಿಗಳನ್ನು ಗೂಗಲ್ ಅಂತಹ ಸೇವೆಗಳನ್ನು ಬಳಸಿ ಶೋಧಿಸುವುದು ಸಾಧ್ಯವೆನ್ನುವುದು ಧನಾತ್ಮಕ ಅಂಶ. ಪ್ರಜಾವಾಣಿಯ ಪುಟ ನೋಡಲು www.prajaavaani.net ವಿಳಾಸ ಬಳಸಿ.
---------------------------------------------------------
ಇ-ರೀಡರಿನಲ್ಲಿ ಪತ್ರಿಕೆಗಳು
ಹಾರ್ಸ್ಟ್ ಎನ್ನುವುದು ಪತ್ರಿಕೆಗಳ ಸಮೂಹ ಸಂಸ್ಥೆ.ಈ ಸಂಸ್ಥೆಯು ಹದಿನಾರು ದೈನಿಕಗಳನ್ನು ಮತ್ತು ನಲುವತ್ತೊಂಭತ್ತು ವಾರಪತ್ರಿಕೆಗಳನ್ನು ನಡೆಸುತ್ತಿದೆ. ಈಗ ಅದು ತನ್ನ ಪತ್ರಿಕೆಗಳನ್ನು ಓದಲು ಇ-ರೀಡರನ್ನು ಹೊರತರಲು ಯೋಚಿಸಿದೆ. ಇ-ರೀಡರ್ ಪತ್ರಿಕೆಗಳನ್ನು ಓದುವ ಸಾಧನ. ಈ ಸಾಧನವು ಪತ್ರಿಕೆಯ ಆಕಾರವನ್ನು ಹೋಲುತ್ತದೆ. ಮಡಚಲು ಸಾಧ್ಯವಾಗುವಂತೆ ಅದನ್ನು ಪ್ಲಾಸ್ಟಿಕ್ ತರದ ಉತ್ಪನ್ನದಿಂದ ತಯಾರಿಸಲಾಗಿದೆ.ಸದ್ಯ ಕಪ್ಪು-ಬಿಳುಪಿನಲ್ಲಿ ಲಭ್ಯವಿದ್ದರೂ ಮುಂದೆ ವರ್ಣದಲ್ಲೂ ಲಭ್ಯವಾಗಲಿದೆ.ಅಂತರ್ಜಾಲದಿಂದ ಪತ್ರಿಕೆಗಳನ್ನು ಇದಕ್ಕೆ ಡೌನ್‌ಲೋಡ್ ಮಾಡಿಕೊಂಡು ಓದಬಹುದು.ಮುದ್ರಿತ ಪ್ರತಿಗಳನ್ನು ಮೂಲೆಗುಂಪಾಗಿಸುವ ಇ-ರೀಡರ್‌ಗಳ ಬಳಕೆ ಪತ್ರಿಕೆಗಳ ಹೊಸ ತಂತ್ರವಾಗುವ ಲಕ್ಷಣಗಳಿವೆ.
ಟ್ವಿಟರಿನಲ್ಲಿ ಮಹಾಭಾರತ

ಪ್ರೇಮ್ ಪಣಿಕ್ಕರ್ ಅವರ "ಭೀಮಸೇನ್",ಭೀಮಸೇನನ ದೃಷ್ಟಿಕೋನದಿಂದ ಕಂಡ ಮಹಾಭಾರತದ ಒಂದು ಬ್ಲಾಗ್. ಈ ಬ್ಲಾಗನ್ನೇ ಆಧಾರವಾಗಿಟ್ಟುಕೊಂಡು,ಮೈಕ್ರೋಬ್ಲಾಗಿಂಗ್ ತಾಣವಾದ ಟ್ವಿಟರಿನಲ್ಲಿ http://twitter.com/epicretold ವಿಳಾಸದಲ್ಲಿ ಮಹಾಭಾರತದ ಕತೆ ಮೂಡಿಬರುತ್ತಿದೆ.ಹಸ್ತಿನಾಪುರಕ್ಕೆ ಪಾಂಡವರು ಮೊದಲಬಾರಿಗೆ ಬಂದಾಗ,ಗಾಂಧಾರಿಯನ್ನು ನೋಡಿದ ಭೀಮನ ಮನಸ್ಸಿನಲ್ಲಿ ಮೂಡಿದ ಭಾವನೆಗಳ ಅಭಿವ್ಯಕ್ತಿಯೊಂದಿಗೆ ಟ್ವಿಟರ್ ಕತೆ ಪ್ರಾರಂಭವಾಗುತ್ತದೆ.ಈ ಬರಹಗಳನ್ನು ನಿಯತವಾಗಿ ಪ್ರಕಟಿಸುತ್ತಿರುವುದು ಚಿಂದು ಶ್ರೀಧರನ್ ಎಂಬ ಪತ್ರಿಕೋದ್ಯಮಿ.ಸದ್ಯ ಇವರು ಇಂಗ್ಲೆಂಡಿನಲ್ಲಿ ನೆಲೆಸಿದ್ದಾರೆ. ಅಂದಹಾಗೆ ಟ್ವಿಟರ್ ಮೈಕ್ರೋಬ್ಲಾಗಿಂಗ್ ತಾಣದ ಮೇಲೆ ಗುರುವಾರ ಸೇವೆಯನ್ನು ನಿರಾಕರಿಸುವ ದಾಳಿ ನಡೆಯಿತು. ಇದರಿಂದ ಅದರ ಸೇವೆಯು ಎರಡು ಗಂಟೆ ಕಾಲ ಬಾಧಿತವಾಯಿತು. ಜತೆಗೇ ಫೇಸ್‌ಬುಕ್‌ನಂತಹ ಸಾಮಾಜಿಕ ನೆಟ್ವರ್ಕಿಂಗ್ ತಾಣಗಳೂ ಬಾಧಿತವಾದುವು. ಈ ದಾಳಿಯನ್ನು ಆಯೋಜಿಸಿದವರು ಯಾರೆನ್ನುವುದು ಸ್ಪಷ್ಟವಾಗಿಲ್ಲ. ಪ್ರಸಿದ್ಧ ತಾಣಗಳಿಗೆ ಹುಸಿ ಬಳಕೆದಾರ ಕೇಳಿಕೆಗಳ ಪ್ರವಾಹ ಹರಿಸಿ,ನೈಜ ಬಳಕೆದಾರರಿಗೆ ಸೇವೆ ನಿರಾಕರಿಸುವ ದಾಳಿಗಳು ಅಂತರ್ಜಾಲದಲ್ಲಿ ಸಾಮಾನ್ಯವಾಗಿ ಬಿಟ್ಟಿವೆ.ಜೂನ್ ಒಂದೇ ತಿಂಗಳಲ್ಲಿ ಟ್ವಿಟರ್ ಸೇರಿದ ಹೊಸ ಬಳಕೆದಾರರ ಸಂಖ್ಯೆ ನಾಲ್ಕು ಕೋಟಿಗೂ ಹೆಚ್ಚು. ಇಷ್ಟು ಜನಪ್ರಿಯ ತಾಣವಾದ ಟ್ವಿಟರ್ ಕೈಕೊಟ್ಟಾಗ, ಅಂತರ್ಜಾಲ ಬಳಕೆದಾರರು ಕಂಗಾಲಾಗಿಬಿಟ್ಟರು. ನಂತರ ಸೇವೆ ಆರಂಭವಾದಾಗ, ಟ್ವಿಟರ್ ಇಲ್ಲದಾಗ ಏನು ಮಾಡಿದೆ ಎನ್ನುವ ಕುರಿತೇ ಬಳಕೆದಾರರು ಹೆಚ್ಚು ಸಂದೇಶ ಬರೆದರು.ಇತರ ತಾಣಗಳು ಕೈಕೊಟ್ಟಾಗ,ಅದರ ಕುರಿತು ಟ್ವಿಟರಿನಲ್ಲಿ ದೂರುವ ಜನರು, ಟ್ವಿಟರ್ ಸ್ವತ: ಕೈಕೊಟ್ಟಾಗ ಬರೆಯುವುದೆಲ್ಲಿ ಎಂದು ಅಣಕವಾಡಿದ್ದೂ ಇದೆ.
-----------------------------------------------------------------------
ಸರಕಾರಿ ಕನ್ನಡ "ವಿಕಿಪೀಡಿಯಾ"

ಕರ್ನಾಟಕ ಸರಕಾರವು ಈ ಸಲದ ಬಜೆಟಿನಲ್ಲಿ ಕನ್ನಡ ವಿಶ್ವಕೋಶವನ್ನು ಅಂತರ್ಜಾಲದಲ್ಲಿ ಪ್ರಕಟಿಸುವ ಉದ್ದೇಶದಿಂದ ಎರಡುಕೋಟಿ ರುಪಾಯಿಗಳನ್ನು ತೆಗೆದಿರಿಸುವ ನಿರ್ಧಾರ ಮಾಡಿತ್ತು.ಕನ್ನಡ ಜ್ಞಾನ ಆಯೋಗ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ,ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಐಐಐಟಿ-ಬೆಂಗಳೂರು ಅವರುಗಳು ಕನ್ನಡ ವಿಶ್ವಕೋಶವನ್ನು ಅಂತರ್ಜಾಲದಲ್ಲಿ ಲಭ್ಯವಾಗಿಸುವ ನಿಟ್ಟಿನಲ್ಲಿ ಹೆಜ್ಜೆ ಇಡಲಿದ್ದಾರೆ.ರಾಜ್ಯೋತ್ಸವದ ವೇಳೆಗೆ ಇದು ಕಾರ್ಯಾರಂಭ ಮಾಡಲಿದೆ.ಈ ತಾಣಕ್ಕೆ ಕನ್ನಡ ಜ್ಞಾನಭಂಡಾರ,ಕನ್ನಡ ಮಾಹಿತಿ ಭಂಡಾರ,ಕನ್ನಡ ಖಜಾನೆ,ಕನ್ನಡ ಸೇತುವೆ ಮುಂತಾದ ಹೆಸರುಗಳು ಪರಿಶೀಲನೆಯಲ್ಲಿವೆ.ಜನರ ಸಹಭಾಗಿತ್ವದಲ್ಲಿ ಕನ್ನಡ ವಿಶ್ವಕೋಶ ವಿಕಿಪೀಡಿಯಾವು ಈಗಾಗಲೇ http://kn.wikipedia.org/ನಲ್ಲಿ ಲಭ್ಯವಿದ್ದು ಇದರಲ್ಲಿ ಸುಮಾರು ಏಳುಸಾವಿರ ಬರಹಗಳೀಗಾಗಲೆ ಸಂಗ್ರಹವಾಗಿದೆ.ಸರಕಾರಿ ವಿಶ್ವಕೋಶ ಇದಕ್ಕಿಂತ ಹೇಗೆ ಭಿನ್ನವಾಗಿರುತ್ತದೆ,ಇರುವ ವಿಶ್ವಕೋಶವನ್ನು ಬಲಪಡಿಸುವುದನ್ನು ಬಿಟ್ಟು ಹೊಸತನ್ನು ಸರಕಾರಿ ಖರ್ಚಿನಲ್ಲಿ ಮಾಡುವ ಅಗತ್ಯ ಏನಿದೆ ಎಂಬ ವಿಚಾರಗಳ ಬಗ್ಗೆ ಅಂತರ್ಜಾಲದಲ್ಲೀಗ ಚರ್ಚೆ ನಡೆದಿದೆ.ಕನ್ನಡದ ಹೆಸರಿನಲ್ಲಿ ಸರಕಾರದ ನಿಧಿಯನ್ನು ಮುಕ್ಕಲು ವಿಶ್ವಕೋಶ ಒಂದು ನೆಪವಾಗದಿರಲಿ ಎನ್ನುವುದು ಕನ್ನಡಿಗರ ಹಾರೈಕೆ.
----------------------------------------------------------
ಅಂತರ್ಜಾಲದ ಕಡತ ಖಜಾನೆ
ಅಂತರ್ಜಾಲದಲ್ಲಿ ವಿವಿಧ ನಮೂನೆಯ ಕಡತಗಳನ್ನು ಪೇರಿಸಿಡಲು ಅವಕಾಶ ನೀಡುವ ತಾಣಗಳು ಹಲವಿವೆ.ಅವುಗಳಲ್ಲಿ ಇತ್ತೀಚೆಗೆ ಜನಪ್ರಿಯವಾಗಿರುವ ತಾಣವೆಂದರೆ www.scribd.com. ಇಲ್ಲಿ ಜನರು ತಮ್ಮ ಕಡತಗಳನ್ನು ಇತರರೊಂದಿಗೆ ಹಂಚಿಕೊಳ್ಳುವ ಅವಕಾಶವೂ ಇರುವುದರಿಂದ ವಿವಿಧ ಬಗೆಯ ಮಾಹಿತಿಗಳನ್ನು ಹೊತ್ತ ಕಡತಗಳನ್ನು ಇಲ್ಲಿಂದ ಇಳಿಸಿಕೊಳ್ಳಲೂ ಸಾಧ್ಯ.ಪುಸ್ತಕಗಳ ಇ-ಪ್ರತಿಗಳು,ವಿವಿಧ ವಿಷಯಗಳ ಬಗ್ಗೆ ಪವರ್ ಪಾಯಿಂಟ್ ಸ್ಲೈಡುಗಳು ಇಲ್ಲಿ ಸಿಗುತ್ತವೆ.ಹೆಚ್ಚು ಜನರು ಡೌನ್‌ಲೋಡ್ ಮಾಡಿಕೊಳ್ಳುತ್ತಿರುವ ಕಡತಗಳ ಪಟ್ಟಿ ಇಲ್ಲಿ ಲಭ್ಯವಿರುವುದರಿಂದ,ಉತ್ತಮ ಕಡತಗಳನ್ನು ಆಯ್ದುಕೊಳ್ಳುವುದಿಲ್ಲಿ ಸುಲಭ.ಹಣ ಪಾವತಿ ಮಾಡಿ ಉಪಯೋಗಿಸಬಹುದಾದ ಕಡತಗಳೂ ಇಲ್ಲಿವೆ.
--------------------------------------------
ಬರಲಿದೆ ವಯರ್ಲೆಸ್ ಎನ್ ನಿಸ್ತಂತು ಮಾನಕ
ಆರುನೂರು ಮೆಗಾಬಿಟ್ ವೇಗದ ನಿಸ್ತಂತು ಜಾಲವನ್ನು ನಿಜವಾಗಿಸುವ ಮಾನಕ 802.11n ಮಾನಕ ಸೆಪ್ಟೆಂಬರ್ ಅಂತ್ಯದ ವೇಳೆಗೆ ಸಿದ್ಧವಾಗಲಿದೆ. ವರ್ಷಗಳ ಕಾಲ ಅದರ ಕರಡು ಪ್ರತಿ ಲಭ್ಯವಿದ್ದು, ಯಂತ್ರಾಂಶ ತಯಾರಕರು ಅದರ ಪ್ರಕಾರ ಯಂತ್ರಾಂಶಗಳನ್ನು ತಯಾರಿಸುವಲ್ಲಿ ತೊಡಗಿದ್ದಾರೆ.ಕ್ವಾಲಕೋಮ್ ಎನ್ನುವ ಕಂಪೆನಿ ವಯರ್ಲೆಸ್ ಎನ್ ಮಾನಕದ ಪ್ರಕಾರ ಚಿಪ್ ಅನ್ನು ಸಿದ್ಧ ಪಡಿಸಿದ್ದು, ಒಂದೇ ಸಲಕ್ಕೆ ಧ್ವನಿ,ವಿಡಿಯೋ ಮತ್ತು ದತ್ತಾಂಶಗಳ ಪ್ರವಾಹವನ್ನು ಸಂಭಾಳಿಸಲು ಸಾಧ್ಯವಾಗುವಷ್ಟು ವೇಗ ನಿಸ್ತಂತು ಜಾಲಕ್ಕೆ ಲಭ್ಯವಾಗುತ್ತದೆ. ಹಲವು ಚಾನೆಲ್‌ಗಳಲ್ಲಿ ಸೇವೆ ಒದಗಿಸಲು ಅವಕಾಶ ಸಿಗುವುದು ಮಾನಕದ ವೈಶಿಷ್ಟ್ಯ.ಸದ್ಯ ಚಾಲ್ತಿಯಲ್ಲಿರುವ 802.11g ಪ್ರಕಾರ ಸುಮಾರು ಐವತ್ತು ಮೆಗಾಬಿಟ್ ವೇಗದ ನಿಸ್ತಂತು ಜಾಲ ಸೇವೆ ಮಾತ್ರಾ ಸಿಗುತ್ತದೆ. ಅದರ ಹತ್ತು ಪಟ್ಟು ವೇಗವನ್ನು ಸಾಧ್ಯವಾಗಿಸುವ ವಯರ್ಲೆಸ್ ಎನ್ ಮಾನಕ,ಅತ್ಯಂತ ಸ್ಪಷ್ಟ ವಿಡಿಯೋ ಪ್ರದರ್ಶಿಸುವ ಹೈಡೆಫಿನಿಶನ್ ಟಿವಿಯಂತಹ ಸೇವೆಯನ್ನು ಒದಗಿಸಲು ಬಳಕೆಯಾಗಬಹುದು.
---------------------------------------
ಬಿಂಗ್ v/s ಗೂಗಲ್
ಮೈಕ್ರೋಸಾಫ್ಟ್ ಕಂಪೆನಿಯ ಬಿಂಗ್ ಮತ್ತು ಗೂಗಲ್ ಕಂಪೆನಿಯ ಶೋಧ ಸೇವೆಯನ್ನು ಹೋಲಿಸಬೇಕೇ? ಇದನ್ನು ಮಾಡಲು ಬಹಳ ಸುಲಭವಾಗಿಸಲು http://bingandgoogle.com ತಾಣವನ್ನು ಬಳಸಬಹುದು. ಒಂದೇ ಪದವನ್ನು ಎರಡು ತಾಣದಲ್ಲೂ ನೀಡಿ,ಎರಡರ ಫಲಿತಾಂಶಗಳನ್ನು ಜತೆಗೆ ಪ್ರದರ್ಶಿಸುವ ಸೌಕರ್ಯವನ್ನೀ ತಾಣ ನೀಡಿದೆ."ಉಡುಪಿ" ಪದವನ್ನು ಹುಡುಕಲು ನೋಡಿ,ಗೂಗಲ್ ಮೇಲುಗೈ ನಿಚ್ಚಳವಾಗುತ್ತದೆ. ಯಾಕೆಂದು ತಟ್ ಅಂತ ಹೇಳಿ!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ