ಮಂಗಳವಾರ, ಜುಲೈ 13, 2010

ಲ್ಯಾಪ್ ‌ಟಾಪ್‌ನೊಳಗೊಬ್ಬ ಖಾಸಗಿ ಗೂಢಚಾರ!

ದುಬಾರಿ ಬೆಲೆ ತೆತ್ತು ತಂದ ಲ್ಯಾಪ್‌ಟಾಪ್ ಕಳ್ಳತನವಾದರೆ? ನಿನ್ನೆ ಕೊಂಡಸ್ಮಾರ್ಟ್‌ಫೋನ್ ಕಳೆದುಕೊಂಡರೆ. ಮನೆಯಲ್ಲಿ, ಕಾರ್‌ನಲ್ಲಿ ಇಟ್ಟಿದ್ದ ಟ್ಯಾಬ್ಲೆಟ್,ನೆಟ್‌ಬುಕ್, ಮೊಬೈಲ್‌ಗಳು ಹಾಡಹಗಲೇ ಕಳುವಾದರೆ ಏನು ಮಾಡುವುದು? ಚಿಂತಿಸಲೇ ಬೇಕಾಗಿಲ್ಲ.ನಿಮ್ಮ ಲ್ಯಾಪ್‌ಟಾಪ್‌ನೊಳಗೊಂದು ಖಾಸಗಿ ಗೂಢಚಾರನನ್ನು ನೇಮಿಸಿ, ನಿಶ್ಚಿಂತೆಯಾಗಿರಿ...
ಇಸ್ತ್ರೇಲಿನ ಬರುಚ್ ಸಿಯನ್ನಾ ಎಂಬ ಉದ್ಯಮಿಯೊಬ್ಬ ತನ್ನ ಮಗನ ಹುಟ್ಟುಹಬ್ಬಕ್ಕೆಲ್ಯಾಪ್‌ಟಾಪ್ ಒಂದನ್ನು ಉಡುಗೊರೆಯಾಗಿ ನೀಡಿದ. ಪಾರ್ಟಿಯೊಂದರಲ್ಲಿ ಭಾಗವಹಿಸಿದಸಂದರ್ಭದಲ್ಲಿ ಆತ ಈ ದುಬಾರಿ ಬೆಲೆಯ ಮ್ಯಾಕ್‌ಬುಕ್ ಅನ್ನು ಕಳೆದುಕೊಂಡ.
ಮುಂದೇನು ಮಾಡುವುದು? ಸಿಯನ್ನಾ ಸ್ಥಳೀಯ ಪೊಲೀಸರ ಮೊರೆ ಹೋದ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಎಲ್ಲರಿಗೂ ಹೇಳುವಂತೆ ಈತನಿಗೂ ಹುಡುಕಿ ಕೊಡುತ್ತೇವೆ ಎಂದು ಹೇಳಿ ಕಳುಹಿಸಿದರು.ಸಿಯನ್ನಾ ಒಂದು ತಿಂಗಳು ಕಾದ, ಮತ್ತೆರಡು ತಿಂಗಳು ಪೊಲೀಸ್ ಠಾಣೆ ಸುತ್ತಿದ.

ಲ್ಯಾಪ್ ಟಾಪ್ ಮಾತ್ರ ಎಲ್ಲಿಯೂ ಪತ್ತೆಯಾಗಲಿಲ್ಲ. ಮತ್ತೆ ಪೊಲೀಸರನ್ನು ಕೇಳಿದ್ದಕ್ಕೆ,ಅವರು, ‘ಇಂತಹ ಸಾವಿರಾರು ಲ್ಯಾಪ್‌ಟಾಪ್‌ಗಳು ಕಳೆದುಹೋಗಿರುತ್ತವೆ, ನಿಮ್ಮ ಲ್ಯಾಪ್‌ಟಾಪ್ ಎಲ್ಲಿಯಂತ ಹುಡುಕಿ ಕೊಡೋಣ, ಸಿಕ್ಕಿದರೆ ಕೊಡುತ್ತೇವೆ, ಸದ್ಯಕ್ಕೆ ನೀವದನ್ನು ಮರೆತುಬಿಡುವುದೇ ಒಳ್ಳೆಯದು’ ಎಂದು ಹೇಳಿದರು.

ಆದರೆ ಸಿಯನ್ನಾನ ಮಗ ಜಾಣ. ಲ್ಯಾಪ್‌ಟಾಪ್ ಕೈಗೆ ಬಂದಿದ್ದೇ ಆತ ತಂದೆಯ ಗಮನಕ್ಕೆ ಬರದೆಅದರಲ್ಲಿ ಖಾಸಗಿ ಗೂಢಾಚಾರ ತಂತ್ರಾಂಶ ಒಂದನ್ನು ಅಳವಡಿಸಿದ್ದ. (antitheft program)ಗಣಕಯಂತ್ರದ ಅಸಲಿ ಬಳಕೆದಾರನ ಹೆಸರನ್ನು ಬಿಟ್ಟು ಬೇರೆ ಯಾರಾದರೂ ಹೊಸದಾಗಿ ಲಾಗಿನ್ ಆದರೆ ಈ ಗೂಢಾಚಾರ ತಂತ್ರಾಂಶಕ್ಕೆ ಗೊತ್ತಾಗುತ್ತದೆ.

ಗಣಕಯಂತ್ರದಲ್ಲಿ ಅಂತರ್ಜಾಲ ಪುಟ ತೆರೆದುಕೊಳ್ಳುತ್ತಿದ್ದಂತೆ ಈ ತಂತ್ರಾಂಶ ಆ ವೆಬ್‌ಪುಟಗಳ ಸ್ಕ್ರೀನ್‌ಶಾಟ್ ತೆಗೆದು ಅಸಲಿ ಬಳಕೆದಾರನ ಖಾತೆಗೆ ರವಾನಿಸಲು ತೊಡಗುತ್ತದೆ.

ಅಷ್ಟೇ ಅಲ್ಲ, ಇದರಲ್ಲಿ ಗುಪ್ತವಾಗಿ ಅಳವಡಿಸಲಾಗಿರುವ ವೆಬ್‌ಕ್ಯಾಮ್ (built-incamera)ಲ್ಯಾಪ್‌ಟಾಪ್ ಪರದೆಯ ಮುಂದಿರುವ ವ್ಯಕ್ತಿಯ ಚಿತ್ರ ತೆಗೆಯುತ್ತದೆ. ಜೊತೆಗೆ ಸದ್ಯ ಲ್ಯಾಪ್‌ಟಾಪ್ ಯಾವ ಪ್ರದೇಶದಲ್ಲಿದೆ ಎನ್ನುವ ವಿವರವನ್ನೂ ಈ ತಂತ್ರಾಂಶ ರವಾನಿಸುತ್ತದೆ.

ದೂರದಿಂದಲೇ ಈ ತಂತ್ರಾಂಶವನ್ನು ಚಾಲನೆಗೊಳಿಸಬಹುದು. ಲ್ಯಾಪ್‌ಟಾಪ್ ಕಳುವಾಗುತ್ತಿದ್ದಂತೆಸಿಯನ್ನಾನ ಮಗ ಇದನ್ನು ಚಾಲನೆಗೊಳಿಸಿದ್ದ, ಇದು ನೀಡಿದ ವಿವರಗಳನ್ನು ಆಧರಿಸಿ ಸ್ಥಳೀಯ ಪೊಲೀಸರ ನೆರವಿನೊಂದಿಗೆ ಲ್ಯಾಪ್‌ಟಾಪ್ ಕಳ್ಳನನ್ನು ಕೊನೆಗೂ ಪತ್ತೆ ಹಚ್ಚಿದರು. ಹೀಗೆ ಎಂಟು ತಿಂಗಳ ನಂತರ ಮ್ಯಾಕ್‌ಬುಕ್ ಮರಳಿ ಅವರ ಕೈಗೆ ಬಂತು.
ಅನೇಕ ಸಂದರ್ಭಗಳಲ್ಲಿ ಲ್ಯಾಪ್‌ಟಾಪ್ ಅನ್ನು ಕೈಯಲ್ಲಿ ಹಿಡಿದುಕೊಂಡು ಹೋಗಬೇಕಾಗುತ್ತದೆ.ಐಪಾಡ್‌ಗಳು, ಇ-ಬುಕ್ ರೀಡರ್, ಸ್ಮಾರ್ಟ್‌ಪೋನ್ ಇತ್ಯಾದಿ ಉಪಕರಣಗೆಳಲ್ಲ ತೀರಾ ಹಗುರ ಹಾಗೂ ಆರಾಮವಾಗಿ ಕೈಯಲ್ಲಿ ಹಿಡಿದುಕೊಳ್ಳಬಹುದಾದ ಸರಕುಗಳಾಗಿರುವುದರಿಂದ ಯಾವಾಗಲೂಜೊತೆಯಲ್ಲಿಯೇ ಇರುತ್ತದೆ. ಹೀಗಾಗಿ ಇವುಗಳ ಕಳ್ಳತನ ಹೆಚ್ಚು.

2009ರ ಗಣಕಯಂತ್ರ ಅಪರಾಧ ಮತ್ತು ಭದ್ರತೆ ಸಮೀಕ್ಷೆಯ ಪ್ರಕಾರ 42% ರಷ್ಟು ಜನರು ಕಳೆದವರ್ಷ ತಮ್ಮ ಲ್ಯಾಪ್‌ಟಾಪ್‌ಗಳನ್ನು ಕಳೆದುಕೊಂಡಿದ್ದಾರೆ. ಅಮೆರಿಕದ ವಿಮಾನನಿಲ್ದಾಣಗಳಲ್ಲಿ ಪ್ರತಿವಾರ 12 ಸಾವಿರ ಕ್ಕೂ ಹೆಚ್ಚು ಲ್ಯಾಪ್‌ಟಾಪ್‌ಗಳು ಕಳುವಾಗುತ್ತದೆ. ಆದರೆ ಇದರಲ್ಲಿ ಬಹುತೇಕ ಜನರು ಪೊಲೀಸ್ ಕಂಪ್ಲೇಂಟ್ ಕೊಡಲು ಹೋಗುವುದಿಲ್ಲ, ತಮ್ಮ ಅದೃಷ್ಟ ಹಳಿದುಕೊಂಡು ಸುಮ್ಮನಾಗುತ್ತಾರೆ.
ದುಬಾರಿ ಬೆಲೆ ತೆತ್ತು ತಂದ ಲ್ಯಾಪ್‌ಟಾಪ್ ಕಳ್ಳತನವಾದರೆ? ನಿನ್ನೆ ಕೊಂಡ ಸ್ಮಾರ್ಟ್‌ಫೋನ್ ಕಳೆದುಕೊಂಡರೆ. ಮನೆಯಲ್ಲಿ, ಗಾಡಿಯಲ್ಲಿಟ್ಟಿದ್ದ ಟ್ಯಾಬ್ಲೆಟ್, ನೆಟ್‌ಬುಕ್, ಮೊಬೈಲ್‌ಗಳು ಹಾಡುಹಗಲೇ ಕಳುವಾದರೆ ಏನು ಮಾಡುವುದು? ಯಾವಾಗಲೂ ಅದರ ಮೇಲೊಂದು ಕಣ್ಣಿಟ್ಟಿರಲು ಸಾಧ್ಯವಿಲ್ಲ. ಹಾಗಂತ ಈಗ ಚಿಂತಿಸಬೇಕಾಗಿಲ್ಲ. ನಿಮ್ಮಲ್ಯಾಪ್‌ಟಾಪ್‌ನೊಳಗೊಂದು ಖಾಸಗಿ ಗೂಢಚಾರನನ್ನು ನೇಮಿಸಿ, ನಿಶ್ಚಿಂತೆಯಾಗಿರಿ.
ಏನು? ಲ್ಯಾಪ್‌ಟಾಪ್‌ನೊಳಗೆ ಗೂಢಾಚಾರನೇ? ಹೌದು. ಈಗಂತೂ ಇಂತಹ ಹಲವು (antitheft program) ಪ್ರೊಗ್ರಾಂಗಳು ಲಭ್ಯವಿದೆ. ಲ್ಯಾಪ್‌ಟಾಪ್ ಮಾತ್ರವಲ್ಲ, ಐಫೋನ್, ಐಪಾಡ್,ಮೊಬೈಲ್ ಮತ್ತು ಟ್ಯಾಬ್ಲೆಟ್‌ಗಳಲ್ಲೂ ಇದನ್ನು ಅಳವಡಿಸಬಹುದು. ಈ ಉಪಕರಣಗಳು ಅಂತರ್ಜಾಲಸಂಪರ್ಕಕ್ಕೆ ಬಂದೊಡನೆ ಇದರೊಳಗಿರುವ ತಂತ್ರಾಂಶ ಕಾರ್ಯನಿರ್ವಹಿಸಲು ಆರಂಭಿಸುತ್ತದೆ.

‘ಇದು ಕದ್ದ ಲ್ಯಾಪ್‌ಟಾಪ್, ಇದನ್ನು ಇದರ ಅಸಲಿ ಮಾಲೀಕನಿಗೆ ಹಿಂತುರುಗಿಸಿ’ ಎಂಬ ಸಂದೇಶ ಪರದೆಯ ಮೇಲೆ ಮೂಡಿಸುತ್ತದೆ. ಇಂತಹ ತಂತ್ರಾಂಶಗಳಿಗೆ ಹಣ ತೆತ್ತಬೇಕು. ಕೆಲವು ಉಚಿತವಾಗಿಯೂ ದೊರೆಯುತ್ತದೆ. ಐದು ಅತ್ಯುತ್ತಮ ತಂತ್ರಾಂಶಗಳ ಮಾಹಿತಿ ಇಲ್ಲಿದೆ.

ಅಡೆಯೊನ (Adeona)

ಇದೊಂದು ಉತ್ತಮ ತಂತ್ರಾಂಶ. ವಾಷಿಂಗ್ಟನ್ ವಿಶ್ವವಿದ್ಯಾಲಯದ ಸಿಬ್ಬಂಧಿಗಳು ಮತ್ತು ವಿದ್ಯಾರ್ಥಿಗಳು ಜಂಟಿಯಾಗಿ ಇದನ್ನು ಅಭಿವೃದ್ಧಿಪಡಿಸಿದ್ದಾರೆ. ಅಡೆಯೊನವನ್ನು ಗಣಕಕ್ಕೆ ಅನುಸ್ಥಾಪಿಸಿದರೆ ಅದು ಕಳ್ಳತನವಾದಂತ ಸಂದರ್ಭದಲ್ಲಿ ನಕಲಿ ಬಳಕೆದಾರ ಲಾಗಿನ್ ಆಗುವ ವೆಬ್‌ಸೈಟ್ ವಿಳಾಸಗಳನ್ನು ತಿಳಿಸುತ್ತದೆ. ಹಾಗೂ ನಕಲಿ ಬಳಕೆದಾರನ ಚಿತ್ರ ತೆಗೆದು ರವಾನಿಸುತ್ತದೆ. ಲ್ಯಾಪ್ ಇರುವ ಸ್ಥಳದ ಮಾಹಿತಿ ನೀಡುತ್ತದೆ.
ಸದ್ಯಕ್ಕಿದು ಮ್ಯಾಕ್ ಆವೃತ್ತಿಯ ಲ್ಯಾಪ್‌ಟಾಪ್‌ಗಳಲ್ಲಿ ಮಾತ್ರ ಉಪಯೋಗಿಸಬಹುದು. ಇದೊಂದು ಓಪನ್-ಸೋರ್ಸ್ ತಂತ್ರಾಂಶವಾದರೂ ಲೀನಕ್ಸ್, ಮ್ಯಾಕ್ ಮತ್ತು ವಿಂಡೋಸ್ ಬಳಕೆದಾರರು ಮಾತ್ರ ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ಮಾಹಿತಿಗೆ (
http://adeona.cs.washington.edu/)

ಗ್ಯಾಡ್ಜೆಟ್ ಟ್ರಾಕ್ (GadgetTrak )


ಮ್ಯಾಕ್ ಮತ್ತು ವಿಂಡೋಸ್ ಪಿಸಿಗಳಿಗೆ ಇದನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಬ್ಲಾಕ್ಬೆರಿ, ಐಫೋನ್ ಮತ್ತು ವಿಂಡೋಸ್ ಮೊಬೈಲ್ ಆವೃತ್ತಿಗಳು ಲಭ್ಯವಿದೆ. ಎಲ್ಲ ಆವೃತ್ತಿಯೂ ಸೇರಿ ಒಂದು ವರ್ಷದ ಬಳಕೆಗೆ 24.95 ಡಾಲರ್ ದರ ವಿಧಿಸಲಾಗುತ್ತದೆ. ಕಳುವಾದಂತ ಸಂದರ್ಭದಲ್ಲಿ ಇದು ಪ್ರತಿ 30 ನಿಮಿಷಕ್ಕೆ ನಕಲಿ ಬಳಕೆದಾರನ ಚಿತ್ರ ತೆಗೆದು ರವಾನಿಸುತ್ತದೆ.
ಸದ್ಯ ಲ್ಯಾಪ್‌ಟಾಪ್ ಇರುವ ಜಾಗದ ಸೆಲ್‌ಫೋನ್ ಟವರ್ ಲೊಕೇಶನ್ ಮತ್ತು ಜಿಪಿಎಸ್ ಡೇಟವನ್ನು ಬಳಕೆದಾರನ ಫ್ಲಿಕ್ಕರ್ ಖಾತೆಗೆ ರವಾನಿಸುತ್ತದೆ. ಈ ಮಾಹಿತಿ ಆಧರಿತ ಬಳಕೆದಾರ ಲ್ಯಾಪ್‌ಟಾಪ್ ಇರುವ ಸ್ಥಳದ ನಕಾಶೆ ರಚಿಸಿಕೊಳ್ಳಬಹುದು. ಇದು ಕೊಡುವ ಸ್ಥಳ ಮಾಹಿತಿ ಎಷ್ಟು ನಿಖರ ಎಂದರೆ ಸೂಚಿಸಿದ ಸ್ಥಳದ 300 ಅಡಿ ಒಳಗೆ ಕಳುವಾದ ವಸ್ತು ಸಿಗುತ್ತದೆ. ಮಾಹಿತಿಗೆ -
http://www.gadgettrak.com/

ಲ್ಯಾಪ್‌ಟಾಪ್ ಕಾಪ್ (Laptop Cop )


ಈ ತಂತ್ರಾಂಶ ಪ್ರತಿಯೊಂದು ದೃಶ್ಯ, ಧ್ವನಿಯನ್ನು ರೆಕಾರ್ಡ್ ಮಾಡಿಕೊಳ್ಳುತ್ತದೆ  ಎನ್ನುತ್ತಾರೆ ಈ ತಂತ್ರಾಂಶದ ಜನಕ ಅವೇರ್‌ನೆಸ್ ಟೆಕ್ನೋಲಜಿಯ ಮುಖ್ಯ ಸ್ಥ ಟಾಮ್  ಬಿಲ್ಯು.ಇದು ಪ್ರತಿಯೊಂದು ಕಿಸ್ಟ್ರೋಕ್, ಯೂಸರ್‌ನೇಮ್, ಪಾಸ್‌ವರ್ಡ್, ಹಾಗೂ ವೆಬ್‌ಸೈಟ್  ವಿಳಾಸವನ್ನು ನಕಲಿಸಿ ಅಸಲಿ ಬಳಕೆದಾರನ ಖಾತೆಗೆ ರವಾನಿಸುತ್ತದೆ.
ಲ್ಯಾಪ್‌ಟಾಪ್ ಕಾಪ್ ತಂತ್ರಾಂಶವನ್ನು 49.95 ಡಾಲರ್ ತೆತ್ತು ಒಂದು ವರ್ಷಕ್ಕೆ ಕೊಳ್ಳಬಹುದು. 99.95 ಡಾಲರ್ ಕೊಟ್ಟರೆ ಮೂರು ವರ್ಷದ ಬಳಕೆಗೆ ಲಭ್ಯ. ಸದ್ಯ ಇದನ್ನು ವಿಂಡೋಸ್ ಆವೃತ್ತಿಯಲ್ಲಿ ಮಾತ್ರ ಬಳಸಲಾಗುತ್ತಿದೆ.

ಲ್ಯಾಪ್‌ಟಾಪ್ ಕಳುವಾದ ಸಂದರ್ಭದಲ್ಲಿ ಸ್ಕ್ರೀನ್ ಮೇಲೆ ‘ಇದು ನೀನು ಕದ್ದಿರುವ ಲ್ಯಾಪ್‌ಟಾಪ್, ಇದನ್ನು ವಾಪಸ್ಸು ಕೊಟ್ಟು ಬಿಡು, ಇಲ್ಲದಿದ್ದರೆ ಜೈಲಿಗೆ ಹೋಗ್ತೀಯಾ’ಇತ್ಯಾದಿ ಸಂದೇಶಗಳನ್ನು ಮೊದಲೇ ಬರೆದು ಅಳವಡಿಸಬಹುದು.

ಮಾಹಿತಿಗೆ -
http://www.laptopcopsoftware.com/ ಲೊ-ಜಾಕ್ ಫಾರ್ ಲ್ಯಾಪ್‌ಟಾಪ್ (LoJack for Laptops )ಸದ್ಯ ಹೆಚ್ಚು ಖರ್ಚಾಗುತ್ತಿರುವ ತಂತ್ರಾಂಶವಿದು. 1.2 ಶತಕೋಟಿ ಲ್ಯಾಪ್‌ಟಾಪ್ ಬಳಕೆದಾರರು 51 ದೇಶಗಳಲ್ಲಿ ಇದನ್ನು ಬಳಸುತ್ತಿದ್ದಾರೆ.
ಈ ತಂತ್ರಾಂಶದ ಲ್ಯಾಪ್‌ಟಾಪ್ ಆವೃತ್ತಿ 39.99 ಡಾಲರ್‌ಗೆ, ಪಿಸಿ, ಸ್ಮಾರ್ಟ್‌ಫೋನ್ ಹಾಗೂ ಮ್ಯಾಕ್ ಆವೃತ್ತಿ 59.99 ಡಾಲರ್‌ಗೆ ಲಭ್ಯವಿದೆ. ಹಲವು ಕಾರ್ಪೋರೇಟ್ ಕಂಪನಿಗಳು ತಮ್ಮ ಲ್ಯಾಪ್‌ಟಾಪ್‌ಗಳಲ್ಲಿ ಈ ತಂತ್ರಾಂಶವನ್ನು ಅಳವಡಿಸಿಕೊಂಡಿದೆ. ಒಂದು ವರ್ಷದ ಬಳಕೆಗೆ 40 ಡಾಲರ್ ಕೊಡಬೇಕು. ಮಾಹಿತಿಗೆ-
http://www.absolute.com/en/lojackforlaptops/home.aspx

ಅಂಡರ್‌ಕವರ್ (Undercover )

ಈ ತಂತ್ರಾಂಶವನ್ನು ಮ್ಯಾಕ್ ಮತ್ತು ಐಫೋನ್‌ಗಳಲ್ಲಿ ಅನುಸ್ಥಾಪಿಸಬಹುದು. ಇದು ಪ್ರತಿಬಾರಿ ಲಾಗಿನ್ ಆದಾಗಲೂ ನಕಲಿ ಬಳಕೆದಾರನ ಚಿತ್ರ ತೆಗೆದು ಅಸಲಿ ಬಳಕೆದಾರನ ಖಾತೆಗೆ ರವಾನಿಸುತ್ತದೆ. ಅಷ್ಟೇ ಅಲ್ಲ ಲ್ಯಾಪ್‌ಟಾಪ್‌ನಲ್ಲಿ ಅಂತರ್ಜಾಲ ಸಂಪರ್ಕ ತೆರೆದುಕೊಂಡರೆ ಆರು ನಿಮಿಷಗಳ ಒಳಗಾಗಿ ತಾನಾಗಿಯೇ ಚಿತ್ರ ತೆಗೆದು, ಈ ಚಿತ್ರಗಳನ್ನು ಬಳಕೆದಾರನ ಖಾತೆಗೆ
ಅಪ್‌ಲೋಡ್ ಮಾಡುತ್ತದೆ.
ಇದರಲ್ಲಿ ಅಳವಡಿಸಿರುವ ಸ್ಕೈಹುಕ್ ತಂತ್ರಜ್ಞಾನದ ಮೂಲಕ ಲ್ಯಾಪ್‌ಟಾಪ್ ಇರುವ ಸ್ಥಳದ ಮಾಹಿತಿಲಭಿಸುತ್ತದೆ. ಇದು ನಕಲಿ ಬಳಕೆದಾರನ ಇಮೇಲ್ ಮತ್ತು ಆತ ಭೇಟಿಕೊಟ್ಟ ಎಲ್ಲ ವೆಬ್‌ಸೈಟ್ ಪುಟಗಳ ಸ್ಕ್ರೀನ್‌ಶಾಟ್ ತೆಗೆದು ರವಾನಿಸುತ್ತದೆ. 59 ಡಾಲರ್ ತೆತ್ತು ಈ ತಂತ್ರಾಂಶ ಖರೀದಿಸಿದರೆ ಇದನ್ನು ಐದು ಗಣಕಯಂತ್ರದಲ್ಲಿ ಅಳವಡಿಸಬಹುದು.
ಆದರೆ ಇದು ಸ್ಮಾರ್ಟ್‌ಫೋನ್‌ಗಳಲ್ಲಿ ಕೆಲಸ ಮಾಡುವುದಿಲ್ಲ. ಓರ್‌ಬಿಕಲ್ಸ್ (Orbicule’s) ಎನ್ನುವುದು ಅಗ್ಗದ ತಂತ್ರಾಂಶ. ಐಪಾಡ್ ಮತ್ತು ಐಫೋನ್‌ಗಳಲ್ಲಿ ಬಳಸಬಹುದು. ಸೀಮಿತ ಸೌಲಭ್ಯಗಳಿರುವ ಈ ತಂತ್ರಾಂಶದ ಬೆಲೆ 4.99 ಡಾಲರ್‌ಗಳು. ಇದರ ಐಫೋನ್ ಆವೃತ್ತಿ ಉಚಿತ.ಮಾಹಿತಿಗೆ-
http://www.orbicule.com /undercover /
ಅಂತರ್ಜಾಲದಲ್ಲಿ ಇಂತಹ ನೂರಾರು (antitheft program) ತಂತ್ರಾಂಶಗಳು ಲಭ್ಯವಿದೆ. ಉಚಿತ ಎಂದುಕೊಂಡು ಸಿಕ್ಕವುಗಳನ್ನು ಡೌನ್‌ಲೋಡ್ ಮಾಡಿ ಅನುಸ್ಥಾಪಿಸಿಕೊಳ್ಳಬೇಡಿ. ದುಡ್ಡು ಕೊಡದೆ ಈ ತಂತ್ರಾಂಶವನ್ನು ಹಾಕಿಕೊಂಡರೆ ಅದು ಯಾವ ಮಾಹಿತಿಯನ್ನೂ ನೀಡುವುದಿಲ್ಲ.
ಅಷ್ಟೇ ಅಲ್ಲ, ನೀವು ಉಚಿತ ಆವೃತ್ತಿ ಬಳಸುತ್ತಿದ್ದರೆ, ನಿಮ್ಮ ವೈಯಕ್ತಿಕ ವಿವರ, ಪಾಸ್‌ವರ್ಡ್, ಗಣಕಯಂತ್ರದ ಮಾಹಿತಿ ಜೊತೆಗೆ ನೀವಿರುವ ಸ್ಥಳದ ನಕ್ಷೆಯೊಂದಿಗೆ ಸೀದಾ ಇದನ್ನು ನಿರ್ಮಿಸಿದ ತಂತ್ರಾಂಶ ಕಂಪನಿಗಳಿಗೇ ವರದಿ ಒಪ್ಪಿಸುತ್ತದೆ. ಸುಮ್ಮನೆ ರಿಸ್ಕ್ ಯಾಕೆ? ದುಡ್ಡು ಕೊಟ್ಟು ಲ್ಯಾಪ್‌ಟಾಪ್‌ನೊಳಗೊಂದು ಖಾಸಗಿ ಗೂಢಚಾರನನ್ನು ನೇಮಿಸಿ, ನಿಶ್ಚಿಂತೆಯಾಗಿರಿ.....
Posted by ಬಿ.ಅ.ಮ.(ಬಾಳಾಯ)ತಿಂಗಳಾಡಿ 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ