ಬುಧವಾರ, ಜುಲೈ 28, 2010

ವರ್ಷಗಟ್ಟಲೆ ಊಟವನ್ನೇ ಮಾಡದ ‘ಬುದ್ಧ’ ಮತ್ತೆ ಬಂದಿದ್ದಾನೆ!

ಆತನಿಗೆ ಈಗಷ್ಟೇ 20 ತುಂಬಿದೆ. ವರ್ಷಗಟ್ಟಲೆ ತಿಂಡಿ-ತೀರ್ಥಗಳಿಲ್ಲದೆ ಬದುಕುವ ಸಾಮರ್ಥ್ಯವನ್ನು ಮೈಗೂಡಿಸಿಕೊಂಡಾತ. ಅನುಯಾಯಿಗಳ ಪ್ರಕಾರ ಜ್ಞಾನೋದಯವೂ ಆಗಿದೆ. ಎಲ್ಲರೂ ಬಾಲ ಬುದ್ಧನೆಂದು ಕರೆದು ದೈವತ್ವಕ್ಕೇರಿಸಿದ್ದಾರೆ. ಹೆಸರು ರಾಮ್ ಬಹದ್ದೂರ್ ಬೋಂಜನ್. ಹತ್ತುಹಲವು ಕೌತುಕಗಳನ್ನು ಒಡಲಲ್ಲಿ ತುಂಬಿಕೊಂಡು ಕಾಣೆಯಾಗಿದ್ದವ ಈಗ ಮತ್ತೆ ಹೊರಜಗತ್ತಿಗೆ ಮರಳಿದ್ದಾನೆ.

ಗಿನ್ನಿಸ್ ದಾಖಲೆಗಳ ಪ್ರಕಾರ ಇದುವರೆಗೆ ನೀರಿಲ್ಲದೆ ವ್ಯಕ್ತಿಯೊಬ್ಬ ಬದುಕಿದ ಗರಿಷ್ಠ ದಿನ 18. ಆದರೆ ನೇಪಾಳದ ಈ ‘ಬಾಲ ಬುದ್ಧ’ ಅದನ್ನೆಲ್ಲ ಮೀರಿಸಿದ್ದಾನೆ. ತಿಂಗಳುಗಟ್ಟಲೆ, ವರ್ಷಗಟ್ಟಲೆ ಏನನ್ನೂ ಸೇವಿಸದೆ ಧ್ಯಾನಾಸಕ್ತನಾಗಿರುತ್ತಾನೆ ಎನ್ನುತ್ತಾರೆ ಆತನ ಅನುಯಾಯಿಗಳು.
ಈತನಿಗೆ ಪ್ರಾಣಿಗಳೆಂದರೆ ಅಪಾರ ಪ್ರೀತಿ, ಕಾಡಿಗೆ ಹೋಗಿ ವರ್ಷಗಟ್ಟಲೆ ಧ್ಯಾನದಲ್ಲೇ ನಿರತನಾಗಬಲ್ಲ ಶಕ್ತಿಯನ್ನೂ ಹೊಂದಿದ್ದಾನೆ. ಜನ ಈತನನ್ನು ಬುದ್ಧನ ಪುನರಾವತಾರ, ನಮ್ಮ ಪಾಪವನ್ನು ತೊಳೆಯಲು ಬುದ್ಧ ಮತ್ತೆ ಬಂದಿದ್ದಾನೆ ಎಂದೇ ನಂಬಿದ್ದಾರೆ.
ಇದಕ್ಕೆ ಪುಷ್ಠಿ ನೀಡುವಂತೆ ಬಿಬಿಸಿ, ಡಿಸ್ಕವರಿ ಸೇರಿದಂತೆ ಹಲವು ಟಿವಿ ಚಾನೆಲ್‌ಗಳು ಈತನನ್ನು ಸತ್ವ ಪರೀಕ್ಷೆಗೊಡ್ಡಿವೆ. ವಾರಗಟ್ಟಲೆ ನೇರ ಚಿತ್ರೀಕರಣ ನಡೆಸುವ ಮೂಲಕ ಬಹದ್ದೂರ್ ನಡತೆಯನ್ನು ಪರಿಶೀಲನೆ ನಡೆಸಿ ಸೋತೆವೆಂದು ಶಸ್ತ್ರಾಸ್ತ್ರ ತ್ಯಾಗ ಮಾಡಿವೆ.
ಹಲವು ವಿದೇಶಿ ವಿಜ್ಞಾನಿಗಳು ಕೂಡ ಈತನನ್ನು ಕಂಡು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಕೂತಲ್ಲೇ ಭಂಗಿಯನ್ನೂ ಬದಲಾಯಿಸದೆ ವಾರಗಟ್ಟಲೆ ಕುಳಿತುಕೊಳ್ಳುವ ಆತನ ಶಕ್ತಿಯ ಬಗ್ಗೆ ಅವರಿಂದ ಯಾವುದೇ ಉತ್ತರ ನೀಡಲು ಸಾಧ್ಯವಾಗಿಲ್ಲ. ತಪಸ್ಸು ಮಾಡುತ್ತಿದ್ದಾತ ಇದ್ದಕ್ಕಿದ್ದಂತೆ ಮರದ ಪೊಟರೆಯೊಳಗೆ ನಾಪತ್ತೆಯಾಗುವುದೂ ನಿಗೂಢವಾಗಿಯೇ ಉಳಿದಿದೆ.

ಹುಟ್ಟುವ ಮೊದಲೇ ಅತ್ತಿದ್ದ…

ವಿಶ್ವದ ಏಕೈಕ ಹಿಂದೂ ರಾಷ್ಟ್ರವಾಗಿದ್ದ ನೇಪಾಳದ ಬಾರಾ ಜಿಲ್ಲೆಯ ರತ್ನಪುರಿ ಗ್ರಾಮದಲ್ಲಿ 1990ರ ಏಪ್ರಿಲ್ 9ರಂದು ಮಾಯಾದೇವಿ ತಮಂಗ್ ಮತ್ತು ಬೀರ್ ಬಹದ್ದೂರ್ ಬಾಂಜನ್ ದಂಪತಿಗೆ ಹುಟ್ಟಿದ್ದ.

ವಿಶೇಷವೆಂದರೆ ಈತ ಹುಟ್ಟುವ ಮೊದಲೇ ಅಳಲು ಶುರು ಮಾಡಿದ್ದ ಎಂದು ನೆರೆ ಮನೆಯವರು ಹೇಳುತ್ತಿದ್ದಾರೆ. ಸಾಧಾರಣವಾಗಿ ಮಗುವೊಂದು ಗರ್ಭದಿಂದ ಸಂಪೂರ್ಣವಾಗಿ ಹೊರಬಿದ್ದ ನಂತರವಷ್ಟೇ ಅಳುತ್ತದೆ. ಆದರೆ ಈತ ಊರಿಡೀ ಕೇಳಿಸುವಂತೆ ಭೂಮಿಗೆ ಬರುವ ಮೊದಲೇ ಅತ್ತಿದ್ದ ಎಂದು ಆತನನ್ನು ಜಗದೋದ್ಧಾರಕ ಎಂದೇ ಕರೆಯುತ್ತಿರುವ ಜನ ಹೇಳುತ್ತಿದ್ದಾರೆ.
ಆತನ ಬಾಲ್ಯವೂ ಎಲ್ಲಾ ಮಕ್ಕಳಂತೆ ಇರಲಿಲ್ಲ. ಗುಂಪಿನೊಂದಿಗಿರದೆ ತಾನೊಂದು ಪ್ರತ್ಯೇಕ ಜೀವಿಯೆಂಬಂತೆ ಸದಾ ಚಿಂತನೆಯಲ್ಲೇ ಮುಳುಗಿರುತ್ತಿದ್ದ. ನಂತರ ವಯಸ್ಸಿಗೆ ಬರುತ್ತಿದ್ದಂತೆ ಹೆಚ್ಚೆಚ್ಚು ಆಧ್ಯಾತ್ಮದತ್ತ ವಾಲತೊಡಗಿದ್ದ. ಆಗಲೇ ಆತನಲ್ಲೊಂದು ದಿವ್ಯಶಕ್ತಿಯಿರುವುದು ಮನೆಯವರ ಗಮನಕ್ಕೂ ಬಂದಿತ್ತು.
ಸಾಮಾನ್ಯ ಮಕ್ಕಳಂತೆ ಅದು ಬೇಕು, ಇದು ಬೇಕೆಂದು ಹಠ ಮಾಡದೆ, ರಚ್ಚೆ ಹಿಡಿಯದೆ ತನ್ನ ಪಾಡಿಗಿರುತ್ತಿದ್ದ ಬಹದ್ದೂರ್ ಕ್ರಮೇಣ ವಯಸ್ಸಿಗೆ ಮೀರಿದ ಪ್ರೌಢತೆಯನ್ನು ತೋರಿಸುತ್ತಿದ್ದ. ಈ ಹೊತ್ತಿನಲ್ಲಿ ಈತ ತನ್ನ ಗುರುಗಳಿಂದ ಪಂಚಶೀಲ ತತ್ವಗಳನ್ನು (ಯಾರಿಗೂ ತೊಂದರೆ ಮಾಡದೇ ಇರುವುದು, ಕಳ್ಳತನ ಮಾಡದೇ ಇರುವುದು, ಸುಳ್ಳು ಹೇಳದೇ ಇರುವುದು, ಮಾದಕ ವಸ್ತುಗಳಿಗೆ ಮೊರೆ ಹೋಗದಿರುವುದು ಮತ್ತು ವೈವಾಹಿಕ ಜೀವನದಲ್ಲಿ ನಿಷ್ಠೆಯನ್ನು ಪಾಲಿಸುವುದು) ಕಲಿತುಕೊಂಡಿದ್ದ.

ಮಾತು ಬಂಗಾರ, ಏಕಾಗ್ರತೆ ಸಿಂಗಾರ…

ಇದು ಆತನಿಗೆ ರಕ್ತದಿಂದಲೇ ಬಂದಂತೆ ಭಾಸವಾಗುತ್ತಿದೆ. ಯಾವತ್ತೂ ಜನಸಂದಣಿಯನ್ನು ಇಷ್ಟಪಟ್ಟವನಲ್ಲ, ಪ್ರಶಾಂತ ಸ್ಥಳವೊಂದು ಸಿಕ್ಕಿಬಿಟ್ಟರೆ ದಿನಗಟ್ಟಲೆ, ತಿಂಗಳುಗಟ್ಟಲೆ ತಪಸ್ಸನ್ನು ಮಾಡುತ್ತಾ ಕಾಲ ಕಳೆಯಬಲ್ಲ ವ್ಯಕ್ತಿ ಈ ಬಹದ್ದೂರ್ ಬಾಲ ಬುದ್ಧ.
ಆತ ಕುಳಿತಿರುವ ಮುದ್ರೆಯನ್ನು ನೋಡಿದರೆ ಬುದ್ಧನಂತೆಯೇ ಕಾಣುತ್ತಾನೆ. ತಪಸ್ಸು, ಏಕಾಗ್ರತೆಯಲ್ಲೂ ಅದೇ ಭಂಗಿ. ದಟ್ಟಾರಣ್ಯದಲ್ಲಿ ರಾತ್ರಿ-ಹಗಲು ತಪಸ್ಸು ಮಾಡುತ್ತಿದ್ದರೂ ಯಾವುದೇ ಭಯ, ಆತಂಕವಿಲ್ಲದೆ ಏಕಾಗ್ರತೆಯನ್ನು ಉಳಿಸಿಕೊಳ್ಳಬಲ್ಲ ಸಾಧಕ. ಮಳೆ-ಚಳಿ-ಗಾಳಿಗೂ ಈತ ಬೆದರುವುದಿಲ್ಲ ಎಂದು ಅನುಯಾಯಿಗಳು ವಿವರಣೆ ನೀಡುತ್ತಾರೆ.
ಕೆಲ ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಈತ ಕಾಡಿನ ಮಧ್ಯೆ ಏಳು ಅಡಿಗಳ ಕಂದಕದಲ್ಲಿ ಧ್ಯಾನ ಮುದ್ರೆಯಲ್ಲಿರುವುದನ್ನು ಅರಣ್ಯಾಧಿಕಾರಿಗಳು ಪತ್ತೆ ಹಚ್ಚಿದ್ದರು. ತನ್ನ ಅನುಯಾಯಿಗಳಲ್ಲಿ ಸಿಮೆಂಟ್ ಬಂಕರ್ ನಿರ್ಮಿಸಿಕೊಡುವಂತೆ ಸ್ವತಃ ಬಹದ್ದೂರ್ ಸೂಚನೆ ನೀಡಿದ್ದ ಎಂಬುದು ನಂತರ ಬೆಳಕಿಗೆ ಬಂದಿತ್ತು.

ದೇಹದಲ್ಲಿ ಬುದ್ಧನ ಚಿಹ್ನೆಗಳು…

ಮೂಲಗಳ ಪ್ರಕಾರ ಈ ಮರಿ ಬುದ್ಧನ ದೇಹದಲ್ಲಿ ಗೌತಮ ಬುದ್ಧನ ದೇಹದಲ್ಲಿದ್ದ ಹಲವು ಚಿಹ್ನೆಗಳಿವೆ. ನೆತ್ತಿಯ ಮೇಲೆ ಓಂ, ಕುತ್ತಿಗೆಯಲ್ಲಿ ಸ್ವಸ್ತಿಕ್, ನಾಭಿಯಲ್ಲಿ ಸೂರ್ಯನ ಗುರುತಿನ ಜತೆಗೆ ಕೂದಲಿನಿಂದ ವಿಶೇಷ ಪ್ರಕಾಶ ಹೊರ ಬರುತ್ತದೆ.

2006ರಲ್ಲಿ ಬೆಂಕಿ ನಡುವೆ ಕುಳಿತೂ ತಪಸ್ಸು ಮಾಡಿದ್ದನ್ನು ಸಾವಿರಾರು ಮಂದಿ ನೋಡಿದ್ದಾರೆ. ಅನುಯಾಯಿಗಳ ಪ್ರಕಾರ ಈತ ಬೋಧಿಸತ್ವ ಹಂತಕ್ಕೆ ತಲುಪಿದ್ದಾನೆ. ಸ್ವತಃ ಬಾಲಬುದ್ಧನೇ ಹೇಳುವ ಪ್ರಕಾರ ಬುದ್ಧನ ಹಂತ ತಲುಪಲು ಇನ್ನೂ ಆರು ವರ್ಷಗಳ ಅಗತ್ಯವಿದೆ.
ಇಲ್ಲಿರುವ ಮತ್ತೊಂದು ಅಚ್ಚರಿಯೆಂದರೆ ಗೌತಮ ಬುದ್ಧ (ಮಾಯಾದೇವಿ) ಮತ್ತು ಈ ಬಾಲ ಬುದ್ಧನ ತಾಯಿಯ ಹೆಸರು (ಮಾಯಾದೇವಿ ತಮಂಗ್) ಒಂದೇ ಆಗಿರುವುದು. ಇಂತಹ ಹತ್ತು ಹಲವು ವಿಚಾರಗಳು ಈತ ಗೌತಮ ಬುದ್ಧನ ಅಪರಾವತಾರ ಎಂದು ನಂಬಲು ಪುಷ್ಠಿ ನೀಡುತ್ತಿವೆ.
ನಾನು ಬುದ್ಧನಲ್ಲ…
ಹೀಗೆಂದು ಸ್ವತಃ ಬಹದ್ದೂರ್ ಹೇಳುತ್ತಿದ್ದಾನೆ. ನಾನು ಬುದ್ಧನಲ್ಲ, ಹಾಗೆಂದು ಕರೆಯಬೇಡಿ. ನಾನು ಧರ್ಮಗುರು ಹೌದು. ಮುಂದಿನ ದಿನಗಳಲ್ಲಿ ಬುದ್ಧನಾಗುತ್ತೇನೆ, ಆಗ ಕರೆಯುವಿರಂತೆ ಎಂದು ಅನುಯಾಯಿಗಳಿಗೆ ಸಲಹೆ ನೀಡುತ್ತಾನೆ.
ಮೊತ್ತ ಮೊದಲ ಬಾರಿ ಧಾರ್ಮಿಕ ಸಭೆಯೊಂದನ್ನು ಉದ್ದೇಶಿಸಿ ಪ್ರವಚನ ನೀಡುತ್ತಿದ್ದ ಆತ, ಈ ಜಗತ್ತನ್ನು ರಕ್ಷಿಸಲು ಧರ್ಮದಿಂದ ಮಾತ್ರ ಸಾಧ್ಯ. ನಾನು ಅದಕ್ಕಾಗಿಯೇ ಇರುವವನು. ಯಾರೂ ಧರ್ಮಮಾರ್ಗವನ್ನು ಬಿಡಬೇಡಿ, ಖಂಡಿತಾ ಇದರಲ್ಲಿ ಜಯ ಸಿಕ್ಕೇ ಸಿಗುತ್ತದೆ ಎಂದು ಪ್ರವಚನ ನೀಡಿದ್ದ.
ನಾನು ಬುದ್ಧನಾಗಲಿದ್ದೇನೆ. ಆದರೆ ಅದಕ್ಕಾಗಿ ಇನ್ನೂ ಹೆಚ್ಚಿನ ಜ್ಞಾನ ಸಂಪಾದಿಸುವ ಅಗತ್ಯವಿದೆ. ದಯವಿಟ್ಟು ನನ್ನ ಧ್ಯಾನಕ್ಕೆ ತೊಂದರೆ ಮಾಡಬೇಡಿ. ನನ್ನ ಧ್ಯಾನವು ನನ್ನ ದೇಹ, ಆತ್ಮ ಮತ್ತು ಅಸ್ತಿತ್ವಕ್ಕೆ ಸಂಬಂಧಿಸಿದುದಲ್ಲ. ಈ ಹಂತದಲ್ಲಿ ಅಲ್ಲಿ 72 ಕಾಳಿ ದೇವತೆಗಳಿರುತ್ತಾರೆ. ಅದನ್ನೆಲ್ಲ ಮೀರಿ ನಾನು ಜ್ಞಾನವನ್ನು ಸಂಪಾದಿಸಬೇಕಿದೆ. ಅದುವರೆಗೆ ನಾನು ತಪಸ್ಸು ಮಾಡುವ ಜಾಗಕ್ಕೆ ಯಾರೂ ಬರಬೇಡಿ ಎಂದು ಹೇಳಿದ್ದ.

ಇತ್ತೀಚೆಗಷ್ಟೇ ಕಾಣೆಯಾಗಿದ್ದ…

ನೇಪಾಳದ ಗಾಧಿಮಾಯಿ ಎಂಬ ಹಿಂದೂ ಧರ್ಮದ ಮೇಳದಲ್ಲಿ ನಡೆಯುತ್ತಿದ್ದ ಪ್ರಾಣಿ ಬಲಿಯನ್ನು ನಿಲ್ಲಿಸಬೇಕೆಂಬ ಉದ್ದೇಶದಿಂದ ಆರು ತಿಂಗಳ ಹಿಂದೆ ಹಾಲ್ಖೋರಿಯಾ ದಾಹಾ ಅರಣ್ಯ ಪ್ರದೇಶಕ್ಕೆ ಹೋಗುತ್ತಿದ್ದಾಗ ಕಾಣೆಯಾಗಿದ್ದ ಬಹದ್ದೂರ್ ಇದೀಗ ಚೂರಿಯಾ ಬೆಟ್ಟ ಪ್ರದೇಶದಲ್ಲಿ ಮತ್ತೆ ಕಾಣಿಸಿಕೊಂಡಿದ್ದಾನೆ.

ತನ್ನ ಆರು ವರ್ಷಗಳ ಧ್ಯಾನಾವಧಿಯನ್ನು ಪೂರ್ತಿಗೊಳಿಸುವ ಸಲುವಾಗಿ ಹಲ್ಕೋರಿಯಾ ಪ್ರದೇಶದಲ್ಲಿ ಗದ್ದಲವಿದ್ದುದರಿಂದ ಶಾಂತ ಪರಿಸರವನ್ನು ಹುಡುಕಿಕೊಂಡು ಚೂರಿಯಾ ಬೆಟ್ಟಕ್ಕೆ ಹೋಗಿದ್ದೆ ಎಂದು ಆಧುನಿಕ ಬುದ್ಧ ತಿಳಿಸಿದ್ದಾನೆಂದು ಪತ್ರಿಕೆಗಳು ವರದಿ ಮಾಡಿವೆ.
ಅದೇ ಹೊತ್ತಿಗೆ ಈ ಬುದ್ಧನ ದೈಹಿಕ ಅವಸ್ಥೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂದು ಅವರನ್ನು ಭೇಟಿ ಮಾಡಿರುವವರು ತಿಳಿಸಿದ್ದಾರೆ. ತಾನು ಕಂಡುಕೊಂಡ ಜ್ಞಾನವನ್ನು ಮುಂದಿನ ವರ್ಷ ಪ್ರವಚನಗಳ ಮೂಲಕ ಎಲ್ಲರಿಗೂ ತಿಳಿಸುವುದಾಗಿ ಅವರು ಹೇಳಿದ್ದಾರೆ ಎಂದು ಉಲ್ಲೇಖಿಸಲಾಗಿದೆ.
ಈ ಹಿಂದೆಯೂ ಇದ್ದಕ್ಕಿಂದ್ದಂತೆ ಕಾಣೆಯಾಗುತ್ತಿದ್ದ ಬುದ್ಧನಿಗೆ ಸ್ಥಳೀಯ ಭದ್ರತಾ ಸಮಿತಿಯು ಭದ್ರತೆಯನ್ನು ಒದಗಿಸಿತ್ತು. ಆದರೂ ಧ್ಯಾನಸ್ಥನಾಗಿದ್ದ ಬುದ್ಧ ಯಾರಿಗೂ ತಿಳಿಯದಂತೆ ಅಲ್ಲಿಂದ ತಪ್ಪಿಸಿಕೊಂಡಿದ್ದ. ನೇಪಾಳ ಸರಕಾರವೇ ಸ್ವತಃ ಈತನ ಬಗ್ಗೆ ಹೆಚ್ಚು ಆಸ್ಥೆ ವಹಿಸಿತ್ತು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ