ಗುರುವಾರ, ಜುಲೈ 15, 2010

ಕೊನೆಗೂ ಸಿಕ್ಕಿದೆ ಭಾರತೀಯ ರೂಪಾಯಿಗೊಂದು ಲಾಂಛನ

ಭಾರತೀಯರ ಬಹುದಿನಗಳ ಕನಸಿಗೆ ಕೇಂದ್ರ ಸರಕಾರವು ಇಂದು ಅಸ್ತು ಎಂದಿದೆ. ವಿಶ್ವದ ಇತರ ಕರೆನ್ಸಿಗಳಿಗೆ ಇರುವಂತೆ ಭಾರತೀಯ ರೂಪಾಯಿಗೂ ಲಾಂಛನ ಬೇಕೆಂಬ ಬೇಡಿಕೆ ಇಂದು ಈಡೇರಿದೆ. ಸರಕಾರವು ಹಿಂದಿ ‘र’ ಅಕ್ಷರವನ್ನು ಹೋಲುವ ಲಾಂಛನಕ್ಕೆ ಅಂತಿಮ ಮುದ್ರೆಯನ್ನೊತ್ತಿದೆ.
 
ಇದರೊಂದಿಗೆ ಜಾಗತಿಕ ಕರೆನ್ಸಿಗಳಾದ ಅಮೆರಿಕನ್ ಡಾಲರ್ ($), ಬ್ರಿಟೀಷ್ ಪೌಂಡ್ (£), ಐರೋಪ್ಯ ಒಕ್ಕೂಟದ ಯೂರೋ (€) ಮತ್ತು ಜಪಾನ್‌ನ ಯೆನ್ (¥) ಸಾಲಿಗೆ ಭಾರತದ ರೂಪಾಯಿಯೂ ಸೇರ್ಪಡೆಯಾಗಿದೆ.
ರೂಪಾಯಿಯ ಲಾಂಛನಕ್ಕಾಗಿ ಸಾರ್ವಜನಿಕರು ಸೂಕ್ತ ವಿನ್ಯಾಸಗಳನ್ನು ಕಳುಹಿಸಿಕೊಂಡುವಂತೆ ಸರಕಾರವು ಮನವಿ ಮಾಡಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಬಂದಿದ್ದ ಸಾವಿರಾರು ಲಾಂಛನಗಳಲ್ಲಿ ಸುಮಾರು 100ರಷ್ಟು ಗಮನ ಸೆಳೆದಿದ್ದವು. ಅವುಗಳಲ್ಲಿ ಇದೀಗ ಒಂದು ಸಿಂಬಲ್ ಅಂತಿಮಗೊಂಡಿದೆ. ಮುಂದಿನ ದಿನಗಳಲ್ಲಿ ಭಾರತೀಯ ರೂಪಾಯಿಯನ್ನು ಇದೇ ಲಾಂಛನ ಪ್ರತಿನಿಧಿಸಲಿದೆ ಎಂದು ಕೇಂದ್ರ ಸರಕಾರ ಘೋಷಿಸಿದೆ.
ಇದೀಗ ಆಯ್ಕೆಯಾಗಿರುವ ಲಾಂಛನದ ಸೂತ್ರಧಾರಿ ಡಿ. ಉದಯ ಕುಮಾರ್. ಐಐಟಿ ಗುವಾಹತಿಯ ಸ್ನಾತಕೋತ್ತರ ವಿದ್ಯಾರ್ಥಿಯಾಗಿರುವ ಇವರು ‘र’ ಅಕ್ಷರವನ್ನು ಬಳಸಿ ಲಾಂಛನವನ್ನು ವಿನ್ಯಾಸಗೊಳಿಸಿದ್ದರು. ಇವರಿಗೆ 2.5 ಲಕ್ಷ ರೂಪಾಯಿ ಬಹುಮಾನವನ್ನು ನೀಡಲಾಗುತ್ತದೆ ಎಂದು ಸರಕಾರ ತಿಳಿಸಿದೆ.
ಇದು ತಿರಂಗದ ಸಂಕೇತ…
ತನ್ನ ವಿನ್ಯಾಸದ ಲಾಂಛನವನ್ನು ಕೇಂದ್ರ ಸಂಪುಟವು ಆಯ್ಕೆ ನಡೆಸಿದ್ದಕ್ಕೆ ಸಂತೋಷದಿಂದ ಪ್ರತಿಕ್ರಿಯಿಸಿರುವ ಉದಯ್ ಕುಮಾರ್, ಇದು ತಿರಂಗವನ್ನು ಆಧರಿಸಿದ್ದಾಗಿತ್ತು ಎಂದಿದ್ದಾರೆ.
ಈ ಲಾಂಛನ ಮೇಲ್ಭಾಗವು ಭಾರತದ ರಾಷ್ಟ್ರಧ್ವಜವನ್ನು ಹೋಲುತ್ತದೆ. ಮೇಲಿನ ಎರಡು ರೇಖೆಗಳ ನಡುವಿನ ಜಾಗವು ಧ್ವಜದ ಬಿಳಿ ಬಣ್ಣವನ್ನು ಸಂಕೇತಿಸುತ್ತದೆ. ಭಾರತದ ರಾಷ್ಟ್ರಧ್ವಜ ರೂಪಾಯಿಯ ಸಂಕೇತದಲ್ಲಿ ಬರಬೇಕು ಎಂಬುವುದು ನನ್ನ ಆಸೆಯಾಗಿತ್ತು ಎಂದು ವಿವರಣೆ ನೀಡಿದ್ದಾರೆ.
ಅಲ್ಲದೆ ಇದರಲ್ಲಿ ರೋಮನ್ ಅಕ್ಷರ ‘R’ ಮತ್ತು ದೇವನಾಗರಿಯ ‘र’ ಅಕ್ಷರ ಮೇಲ್ನೋಟಕ್ಕೆ ಕಂಡು ಬರುತ್ತದೆ. ಈ ಸಂಕೇತವು ಭಾರತೀಯರಿಗೆ ಮತ್ತು ವಿದೇಶಿಗರಿಗೂ ಇಷ್ಟವಾಗಲಿದೆ ಎಂದು ಉದಯ್ ಅಭಿಪ್ರಾಯಪಟ್ಟಿದ್ದಾರೆ.
ಭಾರತಕ್ಕೆ ಇದರ ಅಗತ್ಯವಿತ್ತು…
ಜಾಗತಿಕ ವಲಯದಲ್ಲಿ ಗಮನ ಸೆಳೆಯುತ್ತಿರುವ ರಾಷ್ಟ್ರಗಳಲ್ಲಿ ಭಾರತವೂ ಒಂದಾಗುತ್ತಿರುವುದು ಇತ್ತೀಚಿನ ವರ್ಷಗಳ ಬೆಳವಣಿಗೆ. ಅದರಂತೆ ಇತರ ಹಲವು ಪ್ರಮುಖ ರಾಷ್ಟ್ರಗಳು ಹೊಂದಿರುವಂತೆ ಭಾರತೀಯ ರೂಪಾಯಿಗೂ ಒಂದು ಲಾಂಛನ ಬೇಕಾಗಿತ್ತು.
ವಿದೇಶಿ ಕರೆನ್ಸಿಗಳು ಸ್ವಂತ ಸಂಕೇತಾಕ್ಷರಗಳ (USD, GDP, JPY, EUR) ಜತೆ ಲಾಂಛನಗಳನ್ನೂ ಹೊಂದಿವೆ. ಆದರೆ ಭಾರತವು ತನ್ನ ರೂಪಾಯಿಗೆ ಇದುವರೆಗೆ ಕೇವಲ ಸಂಕೇತಾಕ್ಷರಗಳನ್ನು ಮಾತ್ರ ಹೊಂದಿತ್ತು.
Rs’, ‘Re’, ‘INR’ ಎನ್ನುವುದೇ ಈ ಸಂಕೇತಾಕ್ಷರಗಳು. ಅದಕ್ಕಿಂತಲೂ ಗೊಂದಲದ ವಿಚಾರವೆಂದರೆ ಇವುಗಳಲ್ಲಿ ಮೊದಲೆರಡನ್ನು ಪಾಕಿಸ್ತಾನ, ನೇಪಾಳ ಮತ್ತು ಶ್ರೀಲಂಕಾಗಳೂ ಬಳಸುತ್ತಿರುವುದು. ಹಾಗಾಗಿ ಭಾರತಕ್ಕೆ ತನ್ನದೇ ಆದ ಲಾಂಛನ ಹೊಂದಿರಬೇಕಾದ ಅಗತ್ಯವಿತ್ತು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ