ಗುರುವಾರ, ಜುಲೈ 8, 2010

ಪ್ರತಿ ಆರು ಸೆಕೆಂಡ್‌ಗೆ ಒಂದು ಮಗು ಬಲಿ......






-ಇದು ಬಡತನ ನಿರ್ಮೂಲನೆಯೇ?
- ಅಪೌಷ್ಟಿಕತೆಯಿಂದ ಬಳಲುತ್ತಿರುವ ದೇಶದ ಶೇ. ೪೭ ರಷ್ಟು ಮಕ್ಕಳು.
ನೀವು ಇದನ್ನು ನಂಬಲೇಬೇಕು.
ನೀವು ಯಾವತ್ತಾದರೂ ಹೊಟ್ಟೆ ತುಂಬಾ ಊಟ ಮಾಡುವ ಹೊತ್ತಿನಲ್ಲಿ ಜಗತ್ತಿನ ನೂರು ಕೋಟಿ ಮಂದಿ ಹಸಿವಿನಿಂದ ಬಳಲುತ್ತಿದ್ದಾರೆಂಬುದನ್ನು ಯೋಚಿಸಿದ್ದೀರಾ? ಯಾರಿಂದಲೂ ಯೋಚಿಸಲು ಸಾಧ್ಯವಿಲ್ಲದ ಮಾತು. ಇವತ್ತು ನಾವು ಉಣ್ಣುತ್ತಿರುವ ಊಟದ ತಟ್ಟೆಗಳು ನಮ್ಮನ್ನು ನೋಡಿ ನಕ್ಕುತ್ತಿವೆ.ಕಾರಣ ನೆರೆಮನೆಯಾತನನ್ನು ಹಸಿವಿನಿಂದಿರಿಸಿ ಹೊಟ್ಟೆ ತುಂಬಾ ಉಂಡ ಕಾರಣ. ಬಡತನ ಎಂಬ ತುರ್ತುಪರಿಸ್ಥಿತಿಯನ್ನು ಇವತ್ತು ಜಗತ್ತು ಎದುರಿಸುತ್ತಿದೆ. ಆದರೆ ಇದನ್ನು ನಿರ್ಮೂಲನೆ ಮಾಡಬೇಕಾದರ ಬದಲು ಬಡತನ ನಿರ್ಮೂಲನೆ ಮಾಡಬೇಕಾದಂತಹ ಕಾನೂನುಗಳನ್ನು ಜಾರಿಗೆ ತಂದು ಬಡತನವನ್ನು ನಿವಾರಿಸುತ್ತೇವೆ ಎಂಬ ಬಲಾಢ್ಯ ರಾಷ್ಟ್ರಗಳ ಹೇಳಿಕೆಗಳು ಇವತ್ತು ಜಗತ್ತಿನ ನೂರು ಕೋಟಿ ಜನರನ್ನು ಹಸಿವಿನಿಂದಿರಿಸಿವೆ.
೨೦೧೫ರ ಹೊತ್ತಿಗೆ ಜಗತ್ತಿನ ಬಡತನವನ್ನು ಅರ್ಧಕ್ಕೆ ಇಳಿಸುವ ಯೋಚನೆ ಬಲಾಢ್ಯ ರಾಷ್ಟ್ರಗಳದ್ದು. ಆದರೆ ಧಗಧಗಿಸುವ ಹಸಿವಿನ ನಡುವೆ ಆಚರಿಸಿರುವ ವಿಶ್ವ ಆಹಾರ ದಿನದಂದೂ ಈ ನೂರು ಕೋಟಿ ಜನರ ಹಸಿವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ ವಿಶ್ವ ಆರೋಗ್ಯ ಸಂಸ್ಥೆಗೆ. ಈ ನೆಲೆಯಲ್ಲಿ ೨೦೧೫ ರ ಹೊತ್ತಿಗೆ ಸಂಪೂರ್ಣವಾಗಿ ಹಸಿವನ್ನು ತಣಿಸಲು ಸಾಧ್ಯವೇ? ಇದು ಆಗದ ಮಾತು. ಜಗತ್ತಿನ ಬಿಡಿ. ಒಂದು ರಾಷ್ಟ್ರದಲ್ಲಿನ ಹಸಿವಿನಿಂದಿರುವ ಜನರ ಹಸಿವನ್ನು ತಣಿಸಲು ಸಾಧ್ಯವಾದರೆ ಅದುವೇ ದೊಡ್ಡ ಸಾಧನೆಯಾದೀತು ಅಮೆರಿಕದಂತಹ ಬಲಾಢ್ಯ ರಾಷ್ಟ್ರಗಳಿಗೆ. ಪ್ರಸಕ್ತ ಸನ್ನೀವೇಶದಲ್ಲಿ ಏರುತ್ತಿರುವ ಆಹಾರ ಧಾನ್ಯಗಳ ಬೆಲೆಯೇರಿಕೆ ಹಾಗೂ ಅಪೌಷ್ಠಿಕತೆಯ ಕಾರಣದಿಂದ ಇವತ್ತು ಹೆಚ್ಚಿನ ಜನತೆ ಹಸಿವಿನಿಂದ ನರಳಲು ಕಾರಣ.ಹೀಗಾಗಿ ಪ್ರತಿ ಆರು ಸೆಕೆಂಡ್‌ಗೆ ಒಂದು ಮಗು ಸಾವನ್ನಪ್ಪುತ್ತಿದೆ. ಅಂಕಿ ಅಂಶಗಳು ಇದಕ್ಕಾಗಿ ವೈಯಕ್ತಿಕವಾದ ಕಾರಣಗಳನ್ನು ನೀಡಿದರೆ ಇದು ಅಪ್ರಸ್ತುತ.
ಹಸಿವನ್ನು ನಿವಾರಿಸುವ ವಿಶ್ವಸಂಸ್ಥೆಯ ಮಾತು ನಿಜವೆನಿಸಲಾರದು.ಯಾಕೆಂದರೆ ಹಸಿವನ್ನು ತಕ್ಕಮಟ್ಟಿಗೆ ನಿವಾರಿಸಲು ಸಾಧ್ಯವಾಗಬಹುದೇ ಹೊರತು ಸಂಪೂರ್ಣವಾಗಿ ಅಲ್ಲ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಸಿವಿನ ತೀವ್ರತೆ ಜನರ ಜನಜೀವನವನ್ನು ಅಸ್ತವ್ಯಸ್ತಗೊಳಿಸುತ್ತಿದೆ.ಹೀಗಾಗಿ ಹಸಿವಿನ ತೀವ್ರತೆ ಕೇವಲ ಸಾವೇ ಆಗಿರುತ್ತಿದ್ದರೆ ಹೆದರಬೇಕಾಗುತ್ತಿರಲಿಲ್ಲ. ಯಾಕೆಂದರೆ, ಇವತ್ತು ಸಮಾಜ ವಿರೋಧಿ ಚಟುವಟಿಕೆಗಳು ನಡೆಯುತ್ತಿರುವುದು ಇದರಿಂದಲೇ.ನಾವು ನಕ್ಸಲ್‌ರನ್ನು ನೋಡುತ್ತಿರುವುದು ಅವರ ಹಸಿವಿನ ತೀವ್ರತೆಯಿಂದ. ಒಂದು ರೀತಿಯಲ್ಲಿ ಸ್ಫೋಟಗೊಳ್ಳುತ್ತಿರುವ ಹಿಂಸಾಚಾರ, ದಂಗೆಗಳೆಲ್ಲವೂ ಹಸಿವಿನಿಂದಲೇ. ಇದಕ್ಕಾಗಿ ನಾವು ನೇರವಾಗಿ ದೇಶವೊಂದರ ಆಂತರಿಕ ಭದ್ರತೆಯನ್ನು ದೂರಿದರೇ ಸಾಲದು.ಜಾಗತಿಕವಾಗಿ ಹೆಚ್ಚುತ್ತಿರುವ ಹಸಿವಿನಿಂದ ಇವತ್ತು ಅನಕ್ಷರತೆ, ಬಡತನ, ಬಾಲಕಾರ್ಮಿಕರ ಸಂಖ್ಯೆಯ ಹೆಚ್ಚಳ, ಪಲಾಯನವಾದ, ಮುಂತಾದ ಅನೇಕ ತುರ್ತುಪರಿಸ್ಥಿತಿಯನ್ನು ನಾವು ನೋಡಬಹುದು.
ಭಾರತದಲ್ಲಿ ಶೇ.೪೭ ರಷ್ಟು ಮಕ್ಕಳು ಅಂದರೆ ಸುಮಾರು ಐದು ಸಾವಿರದಷ್ಟು ಮಕ್ಕಳು ಪೌಷ್ಟಿಕಾಂಶ, ಹಸಿವಿನ ತೀವ್ರತೆಯಿಂದ ಸಾಯುತ್ತಿದ್ದಾರೆ. ಅಂದರೆ ಹಸಿವಿನ ತೀವ್ರತೆ ಹೇಗಿದೆ ಎಂಬುದನ್ನು ನೀವೇ ಊಹಿಸಿ. ನಮ್ಮ ದೇಶದಲ್ಲಿ ಒಂದು ಕಡೆ ಬಡತನ ಹೆಚ್ಚುತ್ತಿದೆ. ಇನ್ನೊಂದು ಕಡೆ ಬಡತನದ ಕೆಳಗಿರುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಸರಕಾರದ ಅಂಕಿ‌ಅಂಶಿಗಳ ಭ್ರಷ್ಟಾಚಾರದಿಂದ. ಇದು ಭಾರತದ ಬಡತನ ನಿರ್ಮೂಲನೆ.ಹೀಗಾದರೆ ಭಾರತ ಬಡತನ ನಿರ್ಮೂಲನ ದೇಶವಾಗಬಹುದೇ? ಬಾಂಗ್ಲಾದೇಶ, ನೇಪಾಳ ಎಂಬ ಬಡ ರಾಷ್ಟ್ರ ಸಹ ಅಪೌಷ್ಟಿಕತೆಯ ಕೊರತೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆಯಲ್ಲಿ ಕಳಪೆ ಸ್ಥಾನವನ್ನು ಹೊಂದಿದೆ. ಇದಕ್ಕಿಂತಲೂ ಭಾರತ ಕಳಪೆ ಸ್ಥಾನದಲ್ಲಿದೆಯೆಂದರೇ? ದೇಶದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಯನ್ನು ಕೇವಲ ಸಮಸ್ಯೆಯೆಂದು ಬಿಂಬಿಸುವ ಕಾರಣದಿಂದ ಇವತ್ತು ದೇಶ ಹಸಿವಿನ ತೀವ್ರತೆಕ್ಕೊಳಗಾಗಿದೆ. ಇದನ್ನೇ ಸಂಪನ್ಮೂಲ ಎಂದು ಬಗೆದರೆ ಯಾವತ್ತೂ ದೇಶಕ್ಕೆ ಹಸಿವೆಂಬುವುದು ಸಮಸ್ಯೆಯೆನಿಸುತ್ತಿರಲಿಲ್ಲ.
ಅತೀ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವ ಚೀನಾ ಇವತ್ತು ತಮ್ಮಲ್ಲಿನ ಹೆಚ್ಚುತ್ತಿರುವ ಜನಸಂಖ್ಯೆಯನ್ನು ಸಮಸ್ಯೆಯೆಂದು ಪರಿಗಣಿಸದ ಕಾರಣ ಇವತ್ತು ಚೀನಾ ಸಂಪನ್ಮೂಲವನ್ನು ಸರಿಯಾದ ನೆಲೆಯಲ್ಲಿ ಬಳಸುತ್ತಿದೆ. ಆದರೆ ಇದನ್ನು ಸರಿಯಾದ ಕ್ರಮವೆಂದು ಒಪ್ಪಿಕೊಳ್ಳಲು ಮುಂದಾಗದ ಕೇಂದ್ರ ಸರಕಾರ ಬಡತನ ನಿರ್ಮೂಲನೆಯಾಗಿದೆ ಎಂಬುದನ್ನು ಬಿಂಬಿಸಲು ಬಡತನದ ಕೆಳಗಿರುವವರ ಹೆಸರುಗಳನ್ನು ಪಡಿತರ ಚೀಟಿಯಿಂದ ತೆಗೆಯುವ ಘನಂದಾರಿ ಕೆಲಸವನ್ನು ಮಾಡುತ್ತಿದೆ. ಹಸಿದವರು ಒಂದು ಕಡೆ ನರಳುತ್ತಿದ್ದರೆ, ಇದು ಸರಕಾರಕ್ಕೆ ದೊಡ್ಡ ವಿಷಯವಲ್ಲ. ಬಡತನದ ಕೆಳಗಿರುವವರ ಸಂಖ್ಯೆಯ ಬಗ್ಗೆ ನಿಖರವಾದ ಅಂಕಿ‌ಅಂಶಗಳು ದೊರೆಯದಿರುವುದಕ್ಕೆ ಸರಕಾರದ ಭ್ರಷ್ಟಾಚಾರ ಕಾರಣ.
ನೀವು ಇದನ್ನು ನಂಬುತ್ತೀರೋ ಗೊತ್ತಿಲ್ಲ. ಆದರೆ ಇದಂತೂ ನಿಜ.ದೇಶದಲ್ಲಿ ಶೇ.೭೭ ರಷ್ಟು ಜನ ದಿನಕ್ಕೆ ೨೦ ರೂ.ಸಂಬಳಕ್ಕೆ ದುಡಿಯುತ್ತಿದ್ದಾರೆ. ಅಂದ ಮೇಲೆ ಇಂತಹವರ ಜೀವನ ವ್ಯವಸ್ಥೆ ಹೇಗಿರಬಹುದೆಂದು ನೀವೇ ಊಹಿಸಿ. ದೇಶದಲ್ಲಿ ಶೇ.೫೦ ರಷ್ಟು ಜನ ಹಸಿವಿನ ತೀವ್ರತೆಯಿಂದ ಬಳಲುತ್ತಿದ್ದಾರೆ.ಆದರೆ ಪಡಿತರ ಚೀಟಿ ವ್ಯವಸ್ಥೆಯಿರುವುದು ಕೇವಲ ಶೇ.೩೬. ಹೀಗಾದರೆ ಭಾರತದಲ್ಲಿ ಮಾತ್ರ ಅಲ್ಲ, ಜಗತ್ತಿನ ಹಸಿವಿನ ತೀವ್ರತೆಯನ್ನು ಎದುರಿಸುತ್ತಿರುವ ರಾಷ್ಟ್ರಗಳು ಬಡತನ ನಿರ್ಮೂಲನೆ ಮಾಡಲು ಸಾಧ್ಯವೇ? ಮಾತ್ರವಲ್ಲ, ಬಡತನ ರೇಖೆಗಿಂತ ಕೆಳಗಿರುವವರ ಸಂಖ್ಯೆ ಶೇ.ಎಂಟರಷ್ಟಿದೆ. ಬಜತನ ಕಡಿಮೆಯಾಗುವುದರ ಬದಲು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೆ ಹೋಗುತ್ತಿದೆ. ಅಭಿವೃದ್ದಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಭಾರತ ಮೂರನೇ ಸ್ಥಾನವನ್ನು ಹೊಂದಿದೆಯಾದರೂ ಮೂವತ್ತು ದಶಲಕ್ಷ ಭಾರತೀಯರಿಗೆ ಬೇಕಾಗುವ ಅವಶ್ಯಕತೆಗಳನ್ನು ಸರಿಯಾಗಿ ಪೂರೈಸದಿರುವ ಹಿನ್ನೆಲೆಯಲ್ಲಿ ಹಸಿವಿನ ಸ್ಥಾನವನ್ನು ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಸೇರಿ ಬಿಟ್ಟಿರುವುದು ವಿಪರ್ಯಾಸವಲ್ಲವೇ?
ಭಾರತದಲ್ಲಿ ಆದದ್ದೇನು ಎಂದರೆ ಹಸಿವು ಮತ್ತು ಆಹಾರದ ಹಕ್ಕನ್ನು ಕಾನೂನು ರೀತಿಯಲ್ಲಿ ವಿವರಿಸಿದೆಯೇ ಹೊರತು ಇದಕ್ಕೆ ಸಂಬಂಧಿಸಿ ಅಭಿವೃದ್ದಿ ಕಾರ್ಯಗಳನ್ನು ನಡೆಸಲು ಹಿಂದೇಟು ಹಾಕಲಾಗುತ್ತಿದೆ. ಇದು ದೇಶದಲ್ಲಿನ ಕಾರ್ಯಯೋಜನೆಯ ಕರ್ತವ್ಯ ಲೋಪವನ್ನು ಎತ್ತಿ ತೋರಿಸುತ್ತಿದೆ. ರೋಗವಾಗಿ ಪರಿವರ್ತನೆಗೊಳ್ಳುತ್ತಿರುವ ಹಸಿವು ಇವತ್ತು ದೇಶದ ಮುಂದೆ ದೊಡ್ಡ ಸವಲಾನ್ನೇ ಇಟ್ಟಿದೆ. ಇದು ಹೇಗೆ ಸಮಾಜ ವಿರೋಧಿ ಚಟುವಟಿಕಗಳ ಸೃಷ್ಟಿಗೆ ಕಾರಣವಾಗುತ್ತದೋ ಹಾಗೆಯೇ ವಿವಿಧ ರೋಗಗಳ ಸೃಷ್ಟಿಗೆ ಕಾರಣವಾಗುತ್ತಿದೆ. ೧.೯ ಮಿಲಿಯನ್ ಮಂದಿ ಭಾರತೀಯರು ವಿವಿಧ ರೋಗಗಳಿಗೆ ಬಲಿಯಾಗುತ್ತಿದ್ದಾರೆ. ಪ್ರತಿ ೬ ಸೆಕೆಂಡ್‌ಗೆ ಹೇಗೆ ಮಗುವೊಂದು ಸಾವನ್ನಪ್ಪುತ್ತಿದೆಯೋ ಹಾಗೆ ಪ್ರತಿ ಮೂರು ನಿಮಿಷಕ್ಕೆ ಇರ್ವರು ಕ್ಷಯ ರೋಗದಿಂದ ಸಾವನ್ನಪ್ಪುತ್ತಿದ್ದಾರೆ. ದುರಂತವೆಂದರೆ ಭಾರತದಲ್ಲಿ ಸೃಷ್ಟಿಯಾಗಿರುವ ರೋಗಗಳಿಗೆ ಮದ್ದು ಸೃಷ್ಟಿಯಾಗುವುದು ಮಾತ್ರ ಬಲು ನಿಧಾನ. ಆದರೆ ಹಂದಿಜ್ವರದಂತಹ ಮಾರಕ ರೋಗಗಳು ಎರಗಿ ಬಂದರೂ ಅದಕ್ಕೆ ಮದ್ದುಗಳ ಸೃಷ್ಟಿ ಮಾತ್ರ ಬಲು ಬೇಗವಾಗುತ್ತದೆ.
ಪೌಷ್ಟಿಕಾಂಶತೆಯ ಬಗ್ಗೆ ಅಭಿವೃದ್ದಿ ಹೊಂದುತ್ತಿರುವ ರಾಷ್ಟ್ರಗಳ ಪೈಕಿ ಭಾರತ ಉತ್ತಮ ಸಾಮಾಜಿಕ ರಕ್ಷಣಾ ನಿಲುವನ್ನು ಹೊಂದಿದೆ ಯಾದರೂ ಕಾರ್ಯನಿರ್ವಹಣೆಯಲ್ಲಿ ಬಹಳ ಹಿನ್ನೆಡೆ ಹೊಂದಿದೆ. ಶಾಲಾ ವಿದ್ಯಾರ್ಥಿಗಳಿಗೆ ಉಚಿಟ ಬಿಸಿಯೂಟ, ಉದ್ಯೋಗ ಖಾತರಿ ಯೋಜನೆ, ಬಡವರಿಗಾಗಿ ಆಹಾರ ಸಾಮಾಗ್ರಿಗಳ ಬೆಲೆಯಲ್ಲಿ ಕಡಿತ ಮತ್ತು ಹಿರಿಯ ನಾಗರಿಕರಿಗೆ ವೃದ್ದಾಪ್ಯ ವೇತನ ಮುಂತಾದ ಸಾಮಾಜಿಕ ಕಾರ್ಯಕ್ರಮಗಳಿದ್ದರೂ ಸಮರ್ಪಕ ಕಾರ್ಯನಿರ್ವಹಣೆಯಲ್ಲಿ ಬಹಳ ಹಿಂದಿದೆ.ಇದರಿಂದ ದಿನದಿಂದ ದಿನಕ್ಕೆ ಸಾಮಾನ್ಯ ಜನತೆಯ ಸಮಸ್ಯೆಗಳು ಹೆಚ್ಚಾಗುತ್ತಲೇ ಇವೆ. ಈ ಬಗ್ಗೆ ಎನ್‌ಜಿ‌ಓದ ಆಹಾರ ಹಕ್ಕುಗಳ ವಿಭಾಗದ ಮುಖ್ಯಸ್ಥೆ ಜ್ಯೋತಿ ನಾಯಕ್ ಹೇಳುವುದು ಹೀಗೆ- ಯೋಜನೆಗಳು ಹಾಗೂ ಕಾನೂನುಗಳನ್ನು ಜಾರಿಗೊಳಿಸುವಲ್ಲಿ ಭಾರತದ ಪ್ರಯತ್ನ ತೀರಾ ಕಳಪೆಯಾಗಿದೆ. ಹಾಗೆಯೇ ಬಡವರಲ್ಲಿ ತಮ್ಮ ಹಕ್ಕುಗಳನ್ನು ಗುರುತಿಸುವಿಕೆಯ ಕೊರತೆಯಿರುವುದರಿಂದ ಯೋಜನೆಗಳನ್ನು ಜಾರಿಗೊಳಿಸುವುದು ಒಂದು ಸವಾಲಾಗಿ ಉಳಿದಿದೆ ಎನ್ನುತ್ತಾರೆ.
ಕೇಂದ್ರ ಸರಕಾರ ದೇಶದಲ್ಲಿರುವ ಹಸಿವಿನ ವಾಸ್ತವವನ್ನು ಒಪ್ಪಿಕೊಳ್ಳುವವರೆಗೂ ಈ ದೇಶದಲ್ಲಿ ಹಸಿವಿನ ತೀವ್ರತೆ ಹೆಚ್ಚಾಗುತ್ತಲೇ ಹೊಗುತ್ತದೆ.ಹಾಗೆಯೇ ಸಮಸ್ಯೆಯನ್ನು ಪರಿಹರಿಸುವ ಮೂಲಕ ದೇಶದ ಆರ್ಥಿಕ ಮುನ್ನಡೆಯ ಕಡೆಗೆ ಗಮನ ಹರಿಸಬೇಕಾಗಿದೆ. ಮಾತ್ರವಲ್ಲ, ದೇಶದಲ್ಲಿರುವ ಸಂಪೂನ್ಮೂಲಗಳ ಸಮರ್ಪಕ ಬಳಕೆ ಮಾಡುವತ್ತ ಹಾಗೂ ಬಡತನ ನಿರ್ಮೂಲನೆಗಾಗಿ ಯೋಜಿಸಿರುವ ಕಾರ್ಯಯೋಜನೆಗಳನ್ನು ಸಮರ್ಪಕ ನಿಟ್ಟಿನಲ್ಲಿ ಈಡೇರಿಸುವ ಪ್ರಯತ್ನವನ್ನಾದರೂ ಕೇಂದ್ರ ಸರಕಾರ ಮಾಡಬೇಕಾಗಿದೆ.
-ಶಂಶೀರ್, ಬುಡೋಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ