ಶನಿವಾರ, ಅಕ್ಟೋಬರ್ 9, 2010

ಆಸ್ಪತ್ರೆ ಅವ್ಯವಸ್ಥೆ: ‘ಇ-ವ್ಯವಸ್ಥೆ’ಗೆ ದೂರು ನೀಡಿ


ನಿಮ್ಮೂರು ಆಸ್ಪತ್ರೆಯಲ್ಲಿ ವೈದ್ಯರಿಲ್ಲವೇ? ಆ ವೈದ್ಯರ ಸೇವೆ ತೃಪ್ತಿಕರವಾಗಿಲ್ಲವೆ? ಆಸ್ಪತ್ರೆಯಲ್ಲಿ ಯಾರಾದರೂ ಲಂಚ ಕೇಳಿದರೆ? ಶೌಚಾಲಯ ಸರಿಯಾಗಿಲ್ಲವೆ? ಕುಡಿಯುವ ನೀರು ದೊರೆಯುತ್ತಲ್ಲವೆ? ಈ ಸಮಸ್ಯೆಗಳನ್ನು ಯಾರ ಬಳಿ ಹೇಳಿಕೊಳ್ಳುವುದು?
‘ದೊರೆ’ಯ ಬಳಿ ದೂರು ಹೇಳುವುದು, ಅದಕ್ಕೆ ಉತ್ತರ ಪಡೆಯುವುದು ಅಷ್ಟು ಸುಲಭವಲ್ಲ ಎಂಬ ಚಿಂತೆ ನಿಮ್ಮನ್ನು ಕಾಡುತ್ತಿದೆಯೆ? ಈ ಯಾವ ಪ್ರಶ್ನೆಗಳಿಗೂ ಜನಸಾಮಾನ್ಯರು ಇನ್ನು ಚಿಂತೆ ಮಾಡಬೇಕಿಲ್ಲ !
ಹೌದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂತಹ ದೂರು, ಕುಂದುಕೊರತೆಗಳನ್ನು ನೇರವಾಗಿ ಇಲಾಖೆಗೆ ಮಂತ್ರಿಗಳ ಗಮನಕ್ಕೆ ತರಲು ‘ ಇ-ವ್ಯವಸ್ಥಾ’ ಯೋಜನೆ ಜಾರಿಗೆ ತಂದಿದೆ !.
ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನದಡಿ’ ಎಲ್ಲರಿಗೂ ಆರೋಗ್ಯ ಎಲ್ಲೆಡೆಯೂ ಆರೋಗ್ಯ’ ಘೋಷವಾಕ್ಯದೊಂದಿಗೆ ಈ ಯೋಜನೆ ರೂಪಿಸಲಾಗಿದೆ. ಬರೀ ದೂರು ಹೇಳುವುದಕ್ಕಷ್ಟೇ ಈ ಪತ್ರ ಸೀಮಿತವಾಗಿಲ್ಲ. ನಿಮ್ಮೂರು ಆಸ್ಪತ್ರೆಯ ಅಭಿವೃದ್ಧಿಗೆ ನೀವು ಸಲಹೆಗಳನ್ನೂ ನೀಡಬಹುದು.
ಅಂದರೆ ಈ ಪತ್ರ ಬರೆಯುವುದು ಹೇಗೆ? ಆ ಪತ್ರ ಎಲ್ಲಿ ಸಿಗುತ್ತದೆ? ಅದಕ್ಕೆ ತಗುಲುವ ಅಂಚೆ ವೆಚ್ಚ ಭರಿಸುವವರು ಯಾರು? ಉತ್ತರ ನಿರೀಕ್ಷಿಸುವುದು ಹೇಗೆ? ಎಂಬ ಆಲೋಚನೆಯೇ?
ಅದಕ್ಕೆ ನೀವೇನು ಚಿಂತಿಸಬೇಕಾದ್ದಿಲ್ಲ… ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ತಾಲೂಕು ಆಸ್ಪತ್ರೆ, ಜಿಲ್ಲಾ ಆಸ್ಪತ್ರೆಗಳಲ್ಲೂ ಪ್ರಿಪೇಡ್ ಪತ್ರಗಳು ಉಚಿತವಾಗಿ ನಿಮಗೆ ಸಿಗುತ್ತವೆ. ಈ ಪತ್ರ ಭರ್ತಿ ಮಾಡಿ ನೀವು ಆಸ್ಪತ್ರೆ ಮುಖ್ಯಸ್ಥರ ಕೈಗೂ ಕೊಡಬೇಕಿಲ್ಲ. ಅಲ್ಲಿರುವ ದೂರು ಪೆಟ್ಟಿಗೆಯಲ್ಲಿ ಹಾಕಬೇಕಾಗಿಯೂ ಇಲ್ಲ. ನೇರವಾಗಿ ಅಂಚೆ ಪೆಟ್ಟಿಗೆಗೆ ಹಾಕಿದರೆ ನಿಮ್ಮ ಕೆಲಸ ಅಲ್ಲಿಗೆ ಮುಗಿಯಿತು.
ನಿಮ್ಮ ಪತ್ರ ವಿಧಾನಸೌಧದ ಆರೋಗ್ಯ ಸಚಿವರ ಕಚೇರಿ ತಲುಪುತ್ತದೆ. ಆ ಕಚೇರಿಯಿಂದ ನಿಮ್ಮ ದೂರು ನೋಂದಣಿಯಾಗಿರುವ ಕುರಿತು ನಿರ್ದಿಷ್ಟ ಕೋಡ್ ನಂಬರ್ ಹೊಂದಿರುವ ‘ಮೇಘಧೂತ’ ಅಂಚೆ ಕಾರ್ಡ್ ತಕ್ಷಣ ನಿಮಗೆ ಬರುತ್ತದೆ. ಆಗಿಂದ ನಿಮ್ಮ ವ್ಯವಹಾರವೇನಿದ್ದರೂ ಆ ಕೋಡ್ ನಂಬರ್ ಮೂಲಕವೇ ನಡೆಯಬೇಕು.
ಕೇವಲ ಕೋಡ್ ನಂಬರ್ ನೀಡಿ ಇಲಾಖೆ ಕೈತೊಳೆದುಕೊಳ್ಳುವುದಿಲ್ಲ. ನಿಮ್ಮ ದೂರು ಯಾವ ಜಿಲ್ಲೆಗೆ ಸಂಬಂಧಿಸಿರುತ್ತದೆ, ಆ ಜಿಲ್ಲೆಯ ಆರೋಗ್ಯ ಮತುತ ಕುಟುಂಬ ಕಲ್ಯಾಣಾಧಿಕಾರಿಗೆ ಸಮಸ್ಯೆ ಪರಿಹಾರಕ್ಕೆ ಕ್ರಮಕೈಗೊಳ್ಳಲು ಸೂಚನೆ ನೀಡಲಾಗುತ್ತದೆ.
ಆರೋಗ್ಯ ಇಲಾಖೆ ಇಂತಹ ಲಕ್ಷಕ್ಕೂ ಹೆಚ್ಚು ಪತ್ರಗಳನ್ನು ಮುದ್ರಿಸಿ ಈಗಾಗಲೇ ಆರೋಗ್ಯ ಕೇಂದ್ರಗಳಿಗೆ ಸರಬರಾಜು ಮಾಡಿದೆ. ವೈದ್ಯರು ಅಥವಾ ಮುಖ್ಯಸ್ಥರ ಬಳಿ ‘ವ್ಯವಹಾರಿಕ ಮರು ಉತ್ತರ ಪತ್ರ’ ಕೊಡಿ ಎಂದು ಕೇಳಿ ಪಡೆದು ಅದನ್ನು ಭರ್ತಿ ಮಾಡಿ ಕಳುಹಿಸಬೇಕು. ಆಡಳಿತ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ಆರೋಗ್ಯ ಇಲಾಖೆ ಈ ವಿನೂತನ ‘ಇ -ವ್ಯವಸ್ಥಾ’ ಯೋಜನೆ ಜಾರಿಗೊಳಿಸಿದೆ. ಇದಕ್ಕೆ ಸಾರ್ವಜನಿಕರಿಂದ ದೊರೆಯುವ ಪ್ರತಿಕ್ರಿಯೆ ನೋಡಿಕೊಂಡು ಪತ್ರಗಳನ್ನು ವೆಬ್ಸೈಟ್ಗೆ ಹಾಕುವ ಪ್ರಯತ್ನವನ್ನೂ ಮಾಡಲು ಇಲಾಖೆ ಚಿಂತನೆ ನಡೆಸಿದೆ.

1 ಕಾಮೆಂಟ್‌: