ಶುಕ್ರವಾರ, ಅಕ್ಟೋಬರ್ 8, 2010

ಇದು ಮೂವತ್ತೆರಡರ ಯುವಕನ ಮಾತು

ಗೂಗಲ್ ಎಂಬ ಅಂತರ್ಜಾಲ ಅಕ್ಷರಗಳನ್ನು ಗೊಂಬೆಯಂತೆ, ಕುಂಬಳಕಾಯಂತೆ, ಧ್ವಜದಂತೆ ಬರೆದು ಎಲ್ಲರ ಮನ ಗೆಲ್ಲುವಾತ ಮೂವತ್ತೆರಡು ವರ್ಷದ ಯುವಕ ಅಂದರೆ ನಂಬುತ್ತೀರಾ ? ಇವನ ಕಲಾಕೃತಿಯನ್ನು ಯಾವ ಆಟರ್್ ಗ್ಯಾಲರಿಯಲ್ಲಾಗಲೀ, ಮ್ಯೂಸಿಯಂನಲ್ಲಾಗಲೀ ತೂಗು ಹಾಕಿಲ್ಲ. ಆದರೂ ಈತ ಬರೆದ ಚಿತ್ರವನ್ನು ಜಗತ್ತಿನಾದ್ಯಂತ ಕೋಟ್ಯಂತರ ಜನ ವೀಕ್ಷಿಸಿ ಖುಷಿ ಪಡುತ್ತಾರೆ !
ಗೂಗಲ್ ಎಂದರೆ ಏನೆಂದು ಗೊತ್ತಿಲ್ಲದವರನ್ನು ಅನಕ್ಷರಸ್ಥ ಅಂತ ಕರೆಯುವ ಕಾಲ ಬಂದಿದೆ. ಗೂಗಲ್ ಇಲ್ಲದ ಅಂತರ್ಜಾಲ ಉಪ್ಪಿಲ್ಲದ ಸಮುದ್ರ ಅಂತಲೇ ಹೇಳಬೇಕು. ಈ `ಹೈಫೈ’ ಯುಗದಲ್ಲಿ ಬದುಕುತ್ತಿರುವ ನಾವು ಅಂತರ್ಜಾಲ ತಾಣಕ್ಕೆ ಹೋದರೆ, ಕೂತರೆ ಒಂದಲ್ಲ ಒಂದು ಸಲ ಗೂಗಲ್ ಪುಟವನ್ನು ಎಡತಾಕಲೇ ಬೇಕು.
ಗೂಗಲ್ ಪುಟ ತೆರೆದೊಡನೆ ನಮಗೆ ಬಣ್ಣ ಬಣ್ಣಗಳಲ್ಲಿ ಬರೆದ ಗೂಗಲ್ ಬರಹ ಕಾಣುತ್ತದೆ. ಕೆಲವೊಮ್ಮೆ ಈ ಆರು ಅಕ್ಷರಗಳು ಕೇವಲ ಅಕ್ಷರಗಳಾಗಿರದೆ ಯಾರದೋ ಮುಖದ ಕಣ್ಣುಗಳೋ, ಕಪ್ಪೆಯ ಕಾಲುಗಳೋ, ಡಿಎನ್ಎ ಸರಪಳಿಯೋ, ಲೈಟುಕಂಬವೋ ಆಗುವುದುಂಟು ! ಇತ್ತೀಚೆಗೆ ಗೂಗಲ್ ಪುಟ ಪಕ್ಮಾನ್ ಎಂಬ ಅತ್ಯಂತ ಜನಪ್ರಿಯ ಆಟದ ಅಂಗಳವಾಗಿ ಮಾರ್ಪಟ್ಟಿತ್ತು !
ಹೀಗೆ, ಇರುವ ಅಕ್ಷರಗಳನ್ನೇ ತಿರುಗಿಸಿ ಹಿಗ್ಗಿಸಿ ಹಿಂಜಿ ಹೊಸಹೊಸ ರೂಪ ಕೊಡುವ ಕಲೆಗೆ `ಡೂಡಲ್’ ಎನ್ನುತ್ತಾರೆ. ಗೂಗಲ್ ತೆರೆದಾಗ ಎಲ್ಲರ ಕಣ್ಣು ಸೆಳೆಯುವ ಈ ಡೂಡಲ್ಗಳು ಎಷ್ಟು ಜನಪ್ರಿಯವಾಗಿವೆಯೆಂದರೆ, ಅದರ ಮೇಲೆ ಬೇರೆ ಬೇರೆ ವೆಬ್ಪುಟಗಳಲ್ಲಿ ಪೇಜುಗಟ್ಟಲೆ ವಾದ ಹೂಡುವ, ಮೆಚ್ಚುಗೆ ಸೂಚಿಸುವ, ಕತೆ- ಪುರಾಣ ಬರೆಯುವ ಜಾಲಿಗರಿದ್ದಾರೆ. ಡೂಡಲ್ಗೇ ನೂರಾರು ಫ್ಯಾನ್ಕ್ಲಬ್ಗಳು ಹುಟ್ಟಿಕೊಂಡಿವೆ. ವಾರಕ್ಕೆ ಕನಿಷ್ಠ ಎರಡಾದರೂ ಇಂತಹ ಚಿತ್ರ `ವಿಚಿತ್ರ’ ಡೂಡಲ್ಗಳನ್ನು ಬರೆದು ಜಗತ್ತಿನ ಜಾಲಿಗರ ಕಣ್ಣು ತಂಪು ಮಾಡುವವನು ಡೆನ್ನಿಸ್ ಹ್ವಾಂಗ್ ಎಂಬ ಮೂವತ್ತೆರಡರ ಹರೆಯದ ಕೊರಿಯನ್ ಕಲಾವಿದ.
ಡೆನ್ನಿಸ್ ಹ್ವಾಂಗ್ ಗೂಗಲ್ಗೆ ಬಣ್ಣ ಮೆತ್ತಲು ಶುರು ಮಾಡಿದ್ದು ಅನಿರೀಕ್ಷಿತವಾಗಿ. ಗೂಗಲ್ ಕಂಪೆನಿಯಲ್ಲಿ ವೆಬ್ಮಾಸ್ಟರ್ ಆಗಿ ಕೆಲಸ ಮಾಡುತ್ತಿದ್ದ ಹ್ವಾಂಗ್ ಬಳಿ ಗೂಗಲ್ ಮಾಲೀಕರಾದ ಲ್ಯಾರಿ ಪೇಜ್ ಮತ್ತು ಸೆಗರ್ಿ ಬ್ರಿನ್ ಬಂದು `ಹೇಗೂ ಕಾಲೇಜಲ್ಲಿ ಕಲೆಯನ್ನು ಕಲಿತವನು ನೀನು, ಯಾಕೆ ನಮ್ಮ ಕಂಪೆನಿಯ ಹೆಸರಿನ ಜೊತೆ ತುಸು ಕಸರತ್ತು ಮಾಡಬಾರದು?’ ಎಂದು ಕೇಳಿದರಂತೆ. ಮಾಲೀಕರ ಈ ಮಾತೇ ಅವನ ಪ್ರಯೋಗಗಳಿಗೆ ಒಂದು ಮುಖ್ಯ ಕಾರಣವಾಯಿತು. 2000ರ ಜುಲೈ 14ರಂದು ಹ್ವಾಂಗ್, ಬ್ಯಾಸ್ತಿಲ್ ದಿನಕ್ಕಾಗಿ ಒಂದು ವಿಶೇಷ ಡೂಡಲ್ ಬರೆದ. ಅದುವರೆಗೆ ಕೇವಲ ಹೆಸರನ್ನಷ್ಟೇ ನೋಡಿ ಒಗ್ಗಿಹೋಗಿದ್ದ ಜಾಲಿಗರಿಗೆ ಹ್ವಾಂಗ್ ಬರೆದ ಡೂಡಲ್ ಖುಷಿ ಕೊಟ್ಟಿತು. ಹೊಸ ಹವೆ ಕಣ್ಣುಗಳಿಗೆ ಮುತ್ತಿಕ್ಕಿ ಹೋದಂತಾಯಿತು. ಜಗತ್ತಿನಾದ್ಯಂತ ಮೆಚ್ಚುಗೆಯ ಮಹಾಪೂರ ಹರಿದು ಬಂತು. ಅಂದಿನಿಂದ ಇಂದಿನವರೆಗೆ ಹ್ವಾಂಗ್, ತನ್ನ ಕಂಪೆನಿಯ ಪುಟ ಕಟ್ಟುವ ಕೆಲಸದಲ್ಲಿ ತನ್ನನ್ನು ಅರ್ಪಿಸಿಕೊಂಡಿದ್ದಾನೆ. ವರ್ಷಕ್ಕೆ ಕನಿಷ್ಠ ಐವತ್ತು ಡೂಡಲ್ ಬರೆದು ಜಾಲಿಗರ ಮನಸ್ಸಿಗೆ ಕಚಗುಳಿಯಿಡುತ್ತಾನೆ.
ಹ್ವಾಂಗ್ ಮೂಲತಃ ಕೊರಿಯದವನು. ಅಪ್ಪ ಫುಲ್ಬ್ರೈಟ್ ಫೆಲೋಶಿಪ್ ಪಡೆದು ಅಧ್ಯಯನಕ್ಕೆಂದು ಅಮೆರಿಕೆಗೆ ಬಂದಾಗ, ಜತೆಯಲ್ಲೇ ತಾನೂ ಬಂದವನು. ಆಗ ಅವನಿಗೆ ಹದಿನಾಲ್ಕು ವರ್ಷ. ಕೊರಿಯನ್ ಬಿಟ್ಟರೆ ಬೇರಾವ ಭಾಷೆಯೂ ಗೊತ್ತಿರಲಿಲ್ಲ. ಸುಮಾರು ಆರೇಳು ತಿಂಗಳು ಶಾಲೆಯಲ್ಲಿ ಓರಗೆಯವರು ಮತ್ತು ಅಧ್ಯಾಪಕರ ಬಾಯಿ ನೋಡುತ್ತ ಕೂರುವುದೇ ಅವನ ಕೆಲಸವಾಗಿತ್ತು !
ಮುಂದಿನ ದಿನಗಳಲ್ಲಿ ಕಷ್ಟಪಟ್ಟು ಇಂಗ್ಲಿಷ್ ಕಲಿತ. ಅಮೆರಿಕದ ಶಾಲೆಯಲ್ಲಿ ಕಲಿತಾದ ಮೇಲೆ ಸ್ಟಾನ್ಫೋಡರ್್ ವಿವಿಯಿಂದ ಕಲೆ ಮತ್ತು ಕಂಪ್ಯೂಟರ್ ವಿಜ್ಞಾನದಲ್ಲಿ  ಪದವಿ ಪಡೆದ. ಗೂಗಲ್ ಕಂಪೆನಿಯಲ್ಲಿ ವೆಬ್ಮಾಸ್ಟರ್ ಆಗಿ ಸೇರಿದ. ತನ್ನ  ಕೌಶಲ ಮತ್ತು ಜಾಣ್ಮೆಯಿಂದ, ಸೇರಿದ ಕೆಲವೇ ದಿನಗಳಲ್ಲಿ ಮುಂಬಡ್ತಿ ಪಡೆಯುತ್ತಾ ಹೋಗಿ, ಗೂಗಲ್ ತಾಂತ್ರಿಕ ವ್ಯವಹಾರಗಳನ್ನು ನೋಡಿಕೊಳ್ಳುವ ಮುಖ್ಯಸ್ಥನ ಹುದ್ದೆಗೇರಿದ. ಬಿಡುವಿನ ಸಮಯದಲ್ಲಿ ಡೂಡಲ್ ಗೆರೆಗಳನ್ನೆಯುವ ಹ್ವಾಂಗ್ನಿಗೆ ಉಳಿದಂತೆ ತಲೆ ತುಂಬ, ಕೈತುಂಬ ಕೆಲಸ ಇದ್ದೇ ಇದೆ.
ಅವನ ಪ್ರಕಾರ ಎಯನ್ನು ಬೇಕಾದಂತೆ ಬಗ್ಗಿಸಲು ತುಂಬ ಕಷ್ಟ. ಹೆಸರಿನಲ್ಲಿ ಎರಡು ಕಡೆ ಬರುವ ಈ ಅಕ್ಷರ `ಕಲಾವಿದನಿಗೆ ತಲೆನೋವು ಮತ್ತು ಸವಾಲು’ ಎನ್ನುತ್ತಾನೆ ಆತ.
ಡೆನ್ನಿಸ್ ಹ್ವಾಂಗ್ ಜಗತ್ತಿನಾದ್ಯಂತ ಅತಿ ಹೆಚ್ಚು ಜನಪ್ರಿಯನಾದ, ಆದರೂ ಅಜ್ಞಾತವಾಗಿಯೇ ಉಳಿದಿರುವ ವಿಶಿಷ್ಟ ಕಲಾವಿದ. ದಿನವೊಂದಕ್ಕೆ ಕೋಟಿಗಟ್ಟಲೆ ಜನ ಡೂಡಲ್ಗಳತ್ತ ಕಣ್ಣು ಹಾಯಿಸಿದರೂ ಅದರ ಹಿಂದಿರುವ ಕೈಗಳ ಬಗ್ಗೆ ಚಿಂತಿಸುವವರು ವಿರಳ. ಸಂಕೋಚದ ಮುದ್ದೆಯಾಗಿರುವ ಹ್ವಾಂಗ್ಗೆ ಕೂಡ ಅನಾಮಿಕನಾಗಿಯೇ ಉಳಿಯುವುದು ಇಷ್ಟ. ವಿಚಿತ್ರವೆಂದರೆ, ಹ್ವಾಂಗ್ ಇಂತಹ ಡೂಡಲ್ಗಳಿಗೆ ಪಡೆಯುವ ಸಂಭಾವನೆ ಎಷ್ಟೆಂದು ಆತ ಮತ್ತು ಆತನ ಬಾಸ್ಗಳನ್ನು ಬಿಟ್ಟರೆ ಬೇರೆ ಯಾರಿಗೂ ಗೊತ್ತಿಲ್ಲ !

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ