ಮಂಗಳವಾರ, ಅಕ್ಟೋಬರ್ 12, 2010

ಕನ್ನಡ ಶುಭಾಶಯಕ್ಕೊಂದು ಅಂತರ್ಜಾಲ ತಾಣ

ಅಂತರ್ಜಾಲದ ಶುಭಾಶಯಗಳು ಕೈಯಿಂದ ಬರೆದ ಸಾಂಪ್ರದಾಯಿಕ ಶುಭಾಶಯಗಳಂತಹ ಭಾವನೆಯನ್ನು ಕೊಡದೇ ಇರಬಹುದು ಆದರೆ ತಾಂತ್ರಿಕ ಮುನ್ನಡೆಯಿಂದ ಆಪ್ತವೆನ್ನಿಸುವ ರೀತಿಯಲ್ಲಿ ಉಪಯೋಗಿಸಬಹುದಾಗಿದೆ. ಆನ್‌ಲೈನ್ ಗ್ರೀಟಿಂಗ್ಸ್ ಮೂಲಕ ಉಚಿತ ಶುಭಾಶಯ ಪತ್ರಗಳನ್ನು, ಕೆಲವೇ ಕ್ಷಣದಲ್ಲಿ ನಿಮ್ಮ ಆತ್ಮೀಯರಿಗೆ ತಲುಪಿಸಬಹುದು. ಇವು ಕಾಗದ ಉಪಯೋಗಿಸದಿರುವುದರಿಂದ (ವಿದ್ಯುನ್ಮಾನ ತಂತ್ರಜ್ಞಾನದಿಂದ ರವಾನಿಸಲಾಗುತ್ತದೆ) ಪರಿಸರ ಪ್ರೇಮಿಗಳಾಗಿವೆ.

ಕನ್ನಡ ಗ್ರೀಟಿಂಗ್ಸ್ ತಾಣ ಕಟ್ಟಿದ ಉವಾಚ :

ಕನ್ನಡದಲ್ಲಿ ಇದು ನನ್ನ ಮೊದಲನೆಯ ಪ್ರಯತ್ನವಾಗಿದೆ. ಕನ್ನಡಿಗನಾಗಿದ್ದು, ಕನ್ನಡಿಗರೊಂದಿಗೆ ಸದಾ ಒಡನಾಟವಿರುವುದರಿಂದ ನನ್ನ ಮಾತೃಭಾಷೆಗಾಗಿ ಏನಾದರೂ ಮಾಡಬೇಕೆಂಬ ಹಲವು ವರ್ಷಗಳ ಕನಸಿತ್ತು. ಕಳೆದ ವರ್ಷ ಹೊಸ ವರ್ಷಕ್ಕಾಗಿ ನನ್ನ ಸ್ನೇಹಿತರೆಲ್ಲರಿಗೂ ಕನ್ನಡದಲ್ಲಿ ಶುಭಾಶಯ ಕಳುಹಿಸಬೆಕೆಂದು ಅಂತರ್ಜಾಲ ಜಾಲಾಡಿದಾಗ ಕೈಗೆ ಸಿಕ್ಕಿದ್ದು ಆಂಗ್ಲ ಭಾಷೆಯ ಶುಭಾಶಯಗಳು ಹಾಗು ಕೆಲವೇ 'ಸಾಮಾನ್ಯ'ವೆನ್ನಬಹುದಾದ ಕನ್ನಡದ ಶುಭಾಶಯಗಳು. ಕೊನೆಗೆ ಒಂದು ಶುಭಾಶಯ ನಾನೇ ತಯಾರಿಸಿಬಿಟ್ಟೆ. ಅಂದಿನಿಂದ ನಾನೆ ಯಾಕೆ ಶುಭಾಶಯಗಳನ್ನು ಮಾಡಿ ಇತರ ಕನ್ನಡಿಗರಿಗರೊಂದಿಗೆ ಹಂಚಿಕೊಳ್ಳಬಾರದು ಎಂಬ ಅಲೋಚನೆ ಬರತೊಡಗಿತು.

ನಾಲ್ಕು ತಿಂಗಳ ನಂತರ ಕೆನಡಾಗೆ ಸ್ಥಳಾಂತರವಾದ ನಂತರ ನನಗೆ ಸಾಕಷ್ಟು ಸಮಯ ಸಿಗತೊಡಗಿತು. ಆನಂತರ ಮಾಡಿದ ಪ್ರಯೋಗಾತ್ಮಕ ಶುಭಾಶಯಗಳು ಹಲವು ಸ್ನೇಹಿತರಿಗೆ ಮೆಚ್ಚುಗೆಯಾದವು. ಸ್ವಲ್ಪ ದಿನಗಳಲ್ಲೇ ಈ ಶುಭಾಶಯ ತಾಣ ಹುಟ್ಟಿಕೊಂಡಿತು. ಸ್ನೇಹಿತ ಸೋಮು(ನವಿಲುಗರಿ) ಈ ಶುಭಾಶಯಗಳಿಗೆ ಹೃದಯ ತಟ್ಟುವ ಕವನ/ಚುಟುಕುಗಳನ್ನು ಬರೆದಿದ್ದಾನೆ. ಸೇರಿದಂತೆ ಸಾಕಷ್ಟು ಬ್ಲಾಗಿಗಳು, ಇನ್ನಿತರ ಸಹೃದಯ ಕನ್ನಡಿಗರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡು ಈ ತಾಣವನ್ನು ಉತ್ತಮ ಪಡಿಸುವಲ್ಲಿ ಸಹಾಯ ಮಾಡಿದ್ದಾರೆ. ಅವರೆಲ್ಲರಿಗೂ ನಾವು ಚಿರಋಣಿ.

ಉದ್ದೇಶ ಹಾಗೂ ಆಶಯ:

ಕನ್ನಡಿಗರಿಗೆ ಅಂತರ್ಜಾಲದಲ್ಲಿ ಕನ್ನಡದಲ್ಲಿ ಶುಭಾಶಯಗಳನ್ನು ಕಳಿಸುವ ಹಾಗೂ ಶುಭಾಶಯ ಕೋರುವ ಎಲ್ಲಾ ವಿಧಾನಗಳ ಸಮ್ಮಿಳನ. ಇದರ ಮುಖ್ಯ ಉದ್ದೇಶ ಕನ್ನಡದಲ್ಲೇ ಕುಶಲ ಶುಭಾಶಯಗಳನ್ನು ಮಾಡಿ ಕನ್ನಡಿಗರೊಂದಿಗೆ ಹಂಚಿಕೊಳ್ಳುವದು. ಉತ್ತಮ ಶುಭಾಶಯಗಳಿಗಾಗಿ ಕನ್ನಡಿಗರು ಆಂಗ್ಲ ಭಾಷೆಯ ತಾಣಗಳ ಮೊರೆ ಹೊಗುವುದನ್ನು ತಡೆಯುವದು ನಮ್ಮ ಒಂದು ಗುರಿಯಾಗಿದೆ. ಈ ಶುಭಾಶಯಗಳನ್ನು ಕೇವಲ ಬೆರೆಯವರಿಗೆ ಕಳಿಸುವದಲ್ಲದೇ ನೀವು ಇತರೆ ಆರ್ಕುಟ್‌ನಂತಹ ಸಾಮಾಜಿಕ ಸಂಪರ್ಕ ತಾಣಗಳಲ್ಲೂ ಉಪಯೋಗಿಸಬಹುದು. ಚರ್ಚಾ ವೇದಿಕೆಯೂ ಕನ್ನಡದ ಶುಭಾಶಯಗಳಿಗೆ ಸಂಬಂಧಿಸಿದ ಚರ್ಚೆಗೆ ಮೀಸಲಾಗಿದೆ.

ನಿಮ್ಮ ಪ್ರೀತಿ ವ್ಯಕ್ತಪಡಿಸುವುದಿರಲಿ, ಜನನ, ಹುಟ್ಟು ಹಬ್ಬ, ಮದುವೆ, ಹಬ್ಬಗಳಿಗಾಗಿ, ರಾಜ್ಯೋತ್ಸವ ಅಥವಾ ಇತರ ಯಾವುದೇ ಸಂದರ್ಭಕ್ಕೆ ನಮ್ಮ ತಾಣದ ಹಲವು ವಿಭಾಗಗಳಿಂದ ಶುಭಾಶಯಗಳನ್ನು ಆರಿಸಿಕೊಳ್ಳಿ. ಪ್ರತಿ ವಾರ ಹಲವಾರು ಹೊಸ ಶುಭಾಶಯಗಳನ್ನು ಸೇರಿಸಲಾಗುತ್ತದೆ. ಆದ್ದರಿಂದ ಆಗಾಗ ನಮ್ಮ ತಾಣದಲ್ಲಿ ಸೇರ್ಪಡೆಯಾದ ಹೊಸ ಶುಭಾಶಯಗಳನ್ನು ನೊಡಿ. ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸುವ ಶುಭಾಶಯಗಳನ್ನು ಆಯ್ದು ಕಳಿಸಿ.

ಈ ತಾಣದ ಕೆಲವು ವೈಶಿಷ್ಟ್ಯಗಳು

* ನಮ್ಮ ಹಲವಾರು ವಿಭಾಗಗಳಿಂದ ಸ್ಥಿರಚಿತ್ರ ಹಾಗೂ ಫ್ಲಾಶ್ ಶುಭಾಶಯಗಳನ್ನು ಆರಿಸಿಕೊಳ್ಳಿ.
* ನೀವು ಕನ್ನಡದಲ್ಲಿ ಸಂದೇಶ ಬರೆದು ಈ ಶುಭಾಶಯಗಳೊಂದಿಗೆ ಲಗತ್ತಿಸಬಹುದು.
* ಈ ಶುಭಾಶಯಗಳನ್ನು ನೀವು ಆರ್ಕುಟ್ ಸ್ಕ್ರ್ಯಾಪ್‌ಗಳಲ್ಲಿ ಉಪಯೋಗಿಸಬಹುದು.
* ಶುಭಾಶಯಕ್ಕನುಗುಣವಾಗಿ ಹಿನ್ನೆಲೆ ಚಿತ್ರವನ್ನು ಆಯ್ದುಕೊಳ್ಳಬಹುದು.
* ನೀವು ಕಳಿಸಿದ ಶುಭಾಶಯವನ್ನು ನಿಮ್ಮವರು ತೆಗೆದು ನೋಡಿದಾಗ ನಿಮಗೆ ಆ ಬಗ್ಗೆ ಇ-ಮೈಲ್ ಮುಖಾಂತರ ತಿಳಿಸಲಾಗುವದು.
* ಶುಭಾಶಯಗಳನ್ನು ಮುಂಚಿತವಾಗಿ ರಚಿಸಿ ಪೂರ್ವ ನಿರ್ಧಾರಿತ ದಿನದಂದು ಕಳುಹಿಸಬಹುದು.
* ಗೂಗಲ್-ಗ್ಯಾಜೆಟ್‌ನಿಂದ ಕನ್ನಡ-ಗ್ರೀಟಿಂಗ್ಸ್.ಕಾಂನಲ್ಲಿ ಸೇರಿಸಲ್ಪಟ್ಟ ಹೊಸ ಶುಭಾಶಯಗಳನ್ನು ನೋಡಬಹುದು.
* ಚರ್ಚಾ ವೇದಿಕೆಯಿಂದ ಲೇಖಕರೊಂದಿಗೆ ಹಾಗೂ ಈ ತಾಣದ ಇತರ ಭೇಟಿಕಾರರೊಂದಿಗೆ ವಿಚಾರ ವಿನಿಮಯ ಮಾಡಬಹುದು.
* ಶುಭಾಶಯಗಳನ್ನು ಮುಂಚಿತವಾಗಿ ರಚಿಸಿ ಪೂರ್ವ ನಿರ್ಧಾರಿತ ದಿನದಂದು ಕಳುಹಿಸಬಹುದು.
* ತಾಣದಲ್ಲಿ ಸರಿಯಾದ ಶುಭಾಶಯ ಸಿಕ್ಕದಿದ್ದಲ್ಲಿ ನಮಗೆ ತಿಳಿಸಿ, ನಿಮಗಾಗಿ ನಾವು ಹೊಸದೊಂದು ಶುಭಾಶಯ ತಯಾರಿಸುವೆವು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ