ಗುರುವಾರ, ಏಪ್ರಿಲ್ 15, 2010

ವಿದ್ಯುತ್ ಸಂಪರ್ಕದ ಮೂಲಕವೂ ಕಂಪ್ಯೂಟರ್ ಮಾಹಿತಿ ಕದಿಯಬಹುದು

ಬ್ಯಾಂಕ್ ಮತ್ತಿತರ ಖಾತೆಗಳನ್ನು ಆನ್‌ಲೈನಿನಲ್ಲಿ ಸಂಪರ್ಕಿಸಿದಾಗ,ಪಾಸ್‌ವರ್ಡ್ ಕೇಳುವ ಮೂಲಕ,ಭದ್ರತೆ ನೀಡುವುದು ಸಾಮಾನ್ಯ. ಆದರೆ ಬಳಕೆದಾರ ಯಾವ ಕೀಲಿಗಳನ್ನು ಕುಟ್ಟಿದ್ದ ಎಂಬುದನ್ನು ದಾಖಲಿಸುವ ತಂತ್ರಾಂಶಗಳನ್ನು ಕಂಪ್ಯೂಟರಿನಲ್ಲೆ ಹಾಕಿಡುವ ಮೂಲಕ,ಅಂತಹ ಮಾಹಿತಿಯನ್ನು ಕದಿಯುವವರಿದ್ದಾರೆ. ಮಾಹಿತಿ ಕದಿಯಲು ಕಂಪ್ಯೂಟರ್‌ನ ವಿದ್ಯುತ್ ಸಂಪರ್ಕವನ್ನು ಬಳಸಬಹುದೇ ಎಂಬುದನ್ನು ಸಂಶೋಧಕರು ಪ್ರಯತ್ನಿಸಿ,ಯಶ ಕಂಡಿದ್ದಾರೆ.ಕಂಪ್ಯೂಟರಿನ ಕೀಲಿ ಮಣೆಯನ್ನು ಕಂಪ್ಯೂಟರಿಗೆ ಸಂಪರ್ಕಿಸಲು PS/2 ಕೇಬಲ್ ಬಳಸುವುದಿದೆ.ಇದರಲ್ಲಿ ಆರು ತಂತಿಗಳು ಇರುತ್ತವೆ. ಈ ತಂತಿಗಳಿಗೆ ಹೆಚ್ಚು ಸುರಕ್ಷಾ ಕವಚವೂ ಇಲ್ಲ. ಹೀಗಾಗಿ ಒಂದು ತಂತಿಯಲ್ಲಿ ಹರಿಯುವ ವಿದ್ಯುತ್ ಏರುಪೇರಾದರೆ, ಉಳಿದವಲ್ಲೂ ಅದು ಪರಿಣಾಮ ಬೀರುತ್ತದೆ. ಇದರಲ್ಲಿರುವ ಒಂದು ತಂತಿ ಭೂಮಿಗೆ ಸಂಪರ್ಕಿಸುವ ಅರ್ಥ್ ತಂತಿ. ಹೀಗಾಗಿ ಕಂಪ್ಯೂಟರಿನ ವಿದ್ಯುತ್ ಸಾಕೆಟಿನ ತಂತಿಗೆ ಸಂಪರ್ಕ ಹೊಂದುತ್ತದೆ.ಕೀಲಿ ಮಣೆಯನ್ನು ಕುಟ್ಟಿದಾಗ ಉಂಟಾಗುವ ವಿದ್ಯುತ್ ಪ್ರವಾಹದಲ್ಲಿನ ವ್ಯತ್ಯಾಸ, ಅರ್ಥ್ ತಂತಿಯಲ್ಲೂ ಪರಿಣಾಮ ಬೀರುತ್ತದೆ.ಇದನ್ನು ಓಸಿಲೋಸ್ಕೋಪ್ ಸಾಧನದ ಸಹಾಯದಿಂದ ಪರಿಶೀಲಿಸಿ,ಯಾವ ಕೀಲಿಯನ್ನು ಒತ್ತಲಾಯಿತು ಎಂದು ಊಹಿಸಲು ಸಂಶೋಧಕರಿಗೆ ಸಾಧ್ಯವಾಯಿತು. ಇದನ್ನು ಕಂಪ್ಯೂಟರಿನಿಂದ ಹತ್ತು-ಹದಿನೈದು ಮೀಟರ್ ದೂರದಿಂದಲೂ ಮಾಡಬಹುದು. ಖದೀಮರು ಮನಸ್ಸು ಮಾಡಿದರೆ,ಮಾಹಿತಿ ಕದಿಯಲು ಹಲವು ದಾರಿಗಳಿವೆ ಎನ್ನುವುದನ್ನು ಬಳಕೆದಾರರು ಗಮನದಲ್ಲಿಡಬೇಕು.
 
ಆಟದ ಮೂಲಕ ಪಾಠ ಹೇಳುವ ಅರವಿಂದ್ ಗುಪ್ತಾ
ಆಟದ ಮೂಲಕ ಪಾಠ ಹೇಳಿದರೆ, ಮಕ್ಕಳಿಗೆ ಕಲಿಕೆ ಶಿಕ್ಷೆಯಾಗದು ತಾನೇ? ಮಕ್ಕಳು ಸ್ವತ: ಸಣ್ಣ ಸಣ್ಣ ಪ್ರಯೋಗಗಳ ಮೂಲಕ ಕಲಿಯುವಂತಿದ್ದರೆ,ಕಲಿಕೆಯ ಮಜಾವೇ ಬೇರೆ.ಆದರೆ ಈ ಪ್ರಯೋಗಗಳಿಗೆ ದುಬಾರಿ ಪರಿಕರಗಳು ಬೇಕಾದರೆ, ಹೀಗೆ ಕಲಿಯುವುದು ಕನಸಿನ ಮಾತಾದೀತು.ಆದರೆ http://www.arvindguptatoys.com ಅಂತರ್ಜಾಲ ತಾಣವನ್ನು ನೋಡಿದರೆ, ಕಲಿಕೆಗೆ ನೆರವಾಗುವ ಆಟಿಕೆಗಳನ್ನು ತಯಾರಿಸುವುದು ಎಷ್ಟು ಸುಲಭ ಎನ್ನುವುದು ಸ್ಪಷ್ಟವಾದೀತು.
ವಿದ್ಯುತ್,ಮೋಟಾರು-ಜನರೇಟರುಗಳು,ಖಗೋಳ ಶಾಸ್ತ್ರ,ಜೀವಶಾಸ್ತ್ರ,ಗಣಿತ,ಗಾಳಿ ಮತ್ತು ನೀರು,ತಿರುಗುವ ಆಟಿಕೆಗಳು,ಹಾರುವ ಆಟಿಕೆಗಳು,ಕಸದಿಂದ ಆಟಿಕೆಗಳು ಹೀಗೆ ಹಲವಾರು ಗುಂಪಿಗೆ ಸೇರಿದ ಆಟಿಕೆಗಳನ್ನು ಅದು ಹೇಗೆ ಸುಲಭವಾಗಿ ಮತ್ತು ಅಗ್ಗವಾಗಿ ತಯಾರಿಸಬಹುದು ಎನ್ನುವ ವಿವರಗಳನ್ನಿಲ್ಲಿ ಚಿತ್ರ ಸಹಿತವಾಗಿ ನೀಡಲಾಗಿದೆ.ವಿವರಣೆಯೂ ಇದೆ. ಮಕ್ಕಳಿಗೆ ಶಾಲೆಯಲ್ಲಿ ನೀಡುವ ಪ್ರಾಜೆಕ್ಟ್ ಕೆಲಸಗಳನ್ನು ಮಾಡಿಸಲು ಸುಲಭವಾಗಿಸುವ ತಂತ್ರಗಳು ಇಲ್ಲಿವೆ.ಹಿರಿ-ಕಿರಿಯರಿಗೆ ಆಸಕ್ತಿ ಹುಟ್ಟಿಸುವ ಪ್ರಯೋಗಗಳನ್ನು ಮಾಡುವ ಸುಲಭ ವಿಧಾನ ಅರವಿಂದ ಗುಪ್ತರ ತಾಣದಲ್ಲಿ ಲಭ್ಯ.
ಐಐಟಿ ಖರಗ್‌ಪುರದಲ್ಲಿ ಇಂಜಿನಿಯರಿಂಗ್ ಡಿಗ್ರಿ ಮುಗಿಸಿದ ಅರವಿಂದ್‌ಗುಪ್ತಾರು ಪುಣೆಯ ಟೆಲ್ಕೋ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದರು.ಜಯಂತ್ ನಾರ್ಳೀಕರ್ ಅವರ ಪ್ರೋತ್ಸಾಹದೊಂದಿಗೆ ಮಕ್ಕಳಿಗೆ ಕಡಿಮೆ ಖರ್ಚಿನಲ್ಲಿ ಆಟಿಕೆ ತಯಾರಿಸುವುದು ಹೇಗೆನ್ನುವುದರತ್ತ ಚಿಂತಿಸಲು ತೊಡಗಿದ ಅರವಿಂದ್,ಈಗ ಅಂತಹ ನೂರಾರು ಆಟಿಕೆಗಳನ್ನು ಮಾಡುವುದು ಹೇಗೆನ್ನುವುದನ್ನು ಕಂದುಕೊಂಡಿದ್ದಾರೆ.ಹಲವಾರು ಪುಸ್ತಕಗಳನ್ನೂ ಬರೆದಿರುವ ಗುಪ್ತ,ತಮ್ಮ ತಾಣದಲ್ಲಿ ನೂರಾರು ಪುಸ್ತಕಗಳ ಕೊಂಡಿಗಳನ್ನೂ ಹಂಚಿಕೊಂಡಿದ್ದಾರೆ.ಅಗ್ಗದ ಮನೆ ನಿರ್ಮಾಣ ಮಾಡುವ ವಿಧಾನಗಳ ಬಗ್ಗೆ ಲಾರೀ ಬೇಕರ್ ಅವರು ಬರೆದಿರುವ ಪುಸ್ತಕಗಳೂ ಇಲ್ಲಿವೆ.ಇಂಗ್ಲಿಷ್ ಮಾತ್ರವಲ್ಲದೆ,ಮರಾಠಿ ಮತ್ತು ಹಿಂದಿ ಭಾಷೆಯ ಪುಸ್ತಕಗಳ ಕೊಂಡಿಗಳೂ ಇಲ್ಲಿವೆ. ಪುಸ್ತಕಗಳು ಡೌನ್‌ಲೋಡಿಗೂ ಲಭ್ಯ.ಬೇಕೆಂದರೆ ಮನಿ ಆರ್ಡರ್ ಕಳಿಸಿ,ಪುಸ್ತಕಗಳನ್ನು ತರಿಸಿಕೊಳ್ಳಬಹುದು.ಪುಣೆಯಲ್ಲಿ ಆಟಿಕೆ ತಯಾರಿಕಾ ಘಟಕವನ್ನೂ ಗುಪ್ತಾ ಅವರು ನಡೆಸಿಕೊಂಡು ಬರುತ್ತಿದ್ದಾರೆ.
ಈ ತಾಣದಲ್ಲಿ ಹಲವಾರು ವೀಡಿಯೋಗಳ ಕೊಂಡಿಗಳೂ ಇರುವುದು ಇನ್ನೊಂದು ವಿಶೇಷ.ಆಟಿಕೆಗಳನ್ನು ತಯಾರಿಸುವ ವಿಧಾನವನ್ನು ತೋರಿಸುವ ವಿಡಿಯೋ ಕ್ಲಿಪ್ಪಿಂಗ್‌ಗಳಿಲ್ಲಿ ಧಾರಾಳ ಇವೆ. ಜತೆಗೆ ಪರಿಸರ ಮತ್ತು ವಿಜ್ಞಾನದ ಬಗ್ಗೆ ಪ್ರಸಿದ್ಧ ವ್ಯಕ್ತಿಗಳ ಅನಿಸಿಕೆ,ಸಾಕ್ಷ್ಯಚಿತ್ರಗಳೂ ಇಲ್ಲಿವೆ.
-------------------------------------
ಅನಾವರಣಗೊಂಡಿರುವ ಸ್ಪೆಸಿಫೈ
ಅಂತರ್ಜಾಲವನ್ನು ಬಳಸಿಕೊಳ್ಳುವುದನ್ನು ಸುಲಭವಾಗಿಸುವ ಶೋಧ ಸೇವೆಯಲ್ಲಿ ಬಿಂಗ್ ಹೊಸ ಮಜಲನ್ನು ತೆರೆದು,ಗೂಗಲ್‍ಗೆ ಸ್ಪರ್ಧೆ ನೀಡುತ್ತಿದೆ. ಈಗ ಸ್ಪೆಸಿಫೈ ಎನ್ನುವ ತಾಣದ ಸರದಿ. ಹುಡುಕು ಪದಕ್ಕೆ ಅನ್ವಯಿಸುವ ತಾಣಗಳ ದೃಶ್ಯ ಮುನ್ನೋಟವನ್ನು ನೀಡುವುದು ಈ ಶೋಧ ಸೇವೆಯ ಹೊಸತನ. ವಿವಿಧ ತಾಣಗಳ ಪಕ್ಷಿನೋಟ ನೀಡಿ, ಪ್ರತಿ ನೋಟವನ್ನೂ ಕ್ಲಿಕ್ಕಿಸಿದರೆ ಬೇರೆ ಬೇರೆ ತಾಣಗಳಿಗೆ ಸಾಗುವ ಅನುಕೂಲತೆ ಇಲ್ಲಿದೆ.
-----------------------------------------------
ಮನರಂಜನೆಯ ಜತೆ ಮಾರ್ಕೆಟಿಂಗ್
ಸೆಕೆಂಡ್‌ಲೈಫ್,ಸಿಮ್ಸಿಟಿ ಮೊದಲಾದ ಅಂತರ್ಜಾಲ ತಾಣಗಳು ಮಿಥ್ಯಾಪ್ರಪಂಚದ ಅನುಭವ ನೀಡುವ ಮೂಲಕ ವಿಶಿಷ್ಟವಾಗಿವೆ.ಈ ತಾಣಗಳು ಮನರಂಜನೆಗೆಂದೇ ಬಳಸಲ್ಪಡುವುದು ಹೆಚ್ಚು.ಈ ಮೂಲಕವೇ ಜನಪ್ರಿಯವಾಗಿರುವ ಕಾರಣ, ಈ ತಾಣಗಳು ದೊಡ್ದ ದೊಡ್ಡ ಕಂಪೆನಿಗಳನ್ನೂ ಆಕರ್ಷಿಸುತ್ತವೆ. ಮೂರು ಆಯಾಮದಲ್ಲೂ ಅಂತರ್ಜಾಲ ತಾಣವನ್ನು ರಚಿಸಲು ತಂತ್ರಾಂಶ ತಜ್ಞರ ಅವಶ್ಯಕತೆ ಇದೆ. ಹಾಗಾಗಿ ಸೆಕೆಂಡ್‌ಲೈಫ್ ಅಂತಹ ತಾಣಗಳಿಗೆ ಸೂಕ್ತವಾದ ಅಂತರ್ಜಾಲ ತಾಣಗಳನ್ನು ಅಭಿವೃದ್ಧಿ ಪಡಿಸುವ ಸೇವೆ ನೀಡುವ ಕಂಪೆನಿಗಳೂ ಹುಟ್ಟಿಕೊಂಡಿವೆ. ಸೆಕೆಂಡ್‌ಲೈಫ್ ತಾಣದ ಮೂಲಕ ಸಮಾವೇಶ,ಕಾನ್ಫರೆನ್ಸ್,ತರಗತಿಗಳನ್ನು ನಡೆಸುವುದು ಸಾಧ್ಯ.ಐಬಿಎಂ,ವಿಪ್ರೋ,ಇಂಟೆಲ್ ಅಂತಹ ಕಂಪೆನಿಗಳು ಮಾತ್ರವಲ್ಲದೆ ಪಾರ್ಚೂನ್ ಪಟ್ಟಿಯಲ್ಲಿ ಸೇರಿರುವ ಒಂದು ಸಾವಿರ ಪ್ರತಿಷ್ಠಿತ ಕಂಪೆನಿಗಳೂ ಇಲ್ಲಿ ಕಾಣಿಸಿಕೊಂಡಿವೆ.ಅರ್ಕುಟ್,ಫೇಸ್‌ಬುಕ್‌ಗಳಂತೆ ಸೆಕೆಂಡ್‌ಲೈಫಿನಲ್ಲೂ ಜನ ಸಮುದಾಯಗಳು ಇವೆ.
----------------------------------
ಸತ್ತ ಸುದ್ದಿ ನೀಡಿ ಜನಪ್ರಿಯವಾದ ಟಿಎಂಜೆಡ್
ಪಾಪ್ ಸಂಗೀತದ ಮೇರು ವ್ಯಕ್ತಿಯಾದ ಮೈಕೆಲ್ ಜಾಕ್ಸನ್ ಅವರ ನಿಧನದ ಸುದ್ದಿ ನೀಡಿ ಸುದ್ದಿ ಮಾಡಿದ ಟಿಎಮ್‌ಜೆಡ್ www.TMZ.com ಅಂತರ್ಜಾಲ ತಾಣ ಬಹುಪ್ರಚಾರ ಪಡೆದುಕೊಂಡಿತು.ಟೈಮ್-ವಾರ್ನರ್ ಗುಂಪಿನ ಈ ತಾಣವೇ ಮೈಕೆಲ್ ಜಾನ್ಸನ್ ಅವರು ಆಸ್ಪತ್ರೆ ಸೇರಿದ ಮತ್ತು ಬಳಿಕ ನಿಧನರಾದ ಸುದ್ದಿಯನ್ನು ಮೊದಲಿಗೆ ನೀಡಿತು. ಉಳಿದ ತಾಣಗಳು ಮತ್ತು ಮಾಧ್ಯಮಗಳು ಟಿಎಂಜೆಡ್ ನೀಡಿದ ಸುದ್ದಿಯ ಆಧಾರದಲ್ಲೇ ತಮ್ಮ ಸುದ್ದಿಯನ್ನು ಬಿತ್ತರಿಸಿದುವು.ಅದೇ ರೀತಿ ಮೈಕೆಲ್ ಜಾಕ್ಸನ್ ಸುದ್ದಿಯ ಚರ್ಚೆ ಮಾಡಲು ಜನರು ಬಳಸಿಕೊಂಡ ಮಾಧ್ಯಮಗಳಾದ ಟ್ವಿಟರ್ ಮತ್ತು ಫೇಸ್‌ಬುಕ್‌ಗಳೂ ಮಿಲಿಯಗಟ್ಟಲೆ ಜನರನ್ನು ಆಕರ್ಷಿಸಿದುವು. ಯಾಹೂ ತಾಣವು ಹದಿನಾರು ದಶಲಕ್ಷಕ್ಕೂ ಹೆಚ್ಚು ಸಂದರ್ಶಕರನ್ನು ಪಡೆದು ದಾಖಲೆ ನಿರ್ಮಿಸಿತು.ಯುಟ್ಯೂಬ್ ತಾಣವು ಮೈಕೆಲ್ ಜಾಕ್ಸನ್ ಅವರ ಹಾಡಿನ ವಿಡಿಯೋ ಕ್ಲಿಪ್ಪಿಂಗ್‍ಗಳನ್ನು ವೀಕ್ಷಿಸಲು ಬಯಸುವ ಜನರಿಂದಲೆ ಅತ್ಯಂತ ಹೆಚ್ಚು ಹಿಟ್‌ಗಳನ್ನು ಪಡೆಯಿತು.ಗೂಗಲ್ ಶೋಧ ಸೇವೆಯೂ ಮೈಕೆಲ್ ಜಾಕ್ಸನ್ ಬಗ್ಗೆ ಹೆಚ್ಚಿನ ವಿಷಯವನ್ನು ಅರಿಯಲು ಬಯಸುವವರ ಅಂತರ್ಜಾಲಿಗರಿಂದ ತುಂಬಿತು.
-----------------------------------------------
ಒಂದೇ ದೂರವಾಣಿ ಸಂಖ್ಯೆ ನೀಡುವ ಗೂಗಲ್ವಾಯಿಸ್
ನಿಮ್ಮ ಲ್ಯಾಂಡ್‌ಲೈನ್,ಸೆಲ್‌ಫೋನ್,ಎಸೆಮ್ಮೆಸ್ ಹೀಗೆ ಎಲ್ಲಾ ದೂರವಾಣಿ ಯಂತ್ರಗಳ ಸೇವೆಯನ್ನು 415-555-1212 ಅಂತಹ ಒಂದೇ ಸಂಖ್ಯೆಯ ಮೂಲಕ ಪಡೆಯಬೇಕೇ? ಗೂಗಲ್ ವಾಯಿಸ್ ಇಂತಹ ವಿನೂತನ ಸೇವೆ ನೀಡುತ್ತಿದೆ. ನಿಮಗೆ ಕರೆಗಳನ್ನು ಬೇಕಾದಲ್ಲಿ ಪಡೆಯುವ,ಮುದ್ರಿಸಿಕೊಳ್ಳುವ,ಅವುಗಳ ಬಗ್ಗೆ ಎಸೆಮ್ಮೆಸ್ ಮೂಲಕ ಸೂಚನೆ ಪಡೆಯುವ,ಲಭ್ಯವಿಲ್ಲದಾಗ ಕರೆ ಮಾಡಿದವರಿಗೆ ಈ ಬಗ್ಗೆ ತಿಳಿಸುವ ಹಲವರು ವೈವಿಧ್ಯಮಯ ಸೇವೆಯನ್ನು ಗೂಗಲ್ ವಾಯಿಸ್ ಮೂಲಕ ಪಡೆಯಬಹುದು. ಸದ್ಯ ಆಹ್ವಾನಿತರಿಗೆ ಮಾತ್ರಾ ಸೇವೆ ಲಭ್ಯವಿದ್ದು,ಸೇವೆಗೆ ಶುಲ್ಕವಿಲ್ಲ. http://www.google.com/googlevoice/about.htmlನಲ್ಲಿ ಇಚ್ಛಿಸಿದವರು ನೋಂದಾಯಿಸಿಕೊಂಡರೆ, ಸೇವೆಯ ಬಗ್ಗೆ ಆಹ್ವಾನ ದೊರೆಯುತ್ತದೆ.
 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ